ಪತ್ನಿ ಸಮೇತ ಶ್ರೀಕೃಷ್ಣ ಮಠಕ್ಕೆ ಇಸ್ರೋ ಅಧ್ಯಕ್ಷ: ಚಂದ್ರಯಾನ-2 ಯಶಸ್ಸಿಗೆ ಪ್ರಾರ್ಥನೆ

ಉಡುಪಿ: ಮಹತ್ವಾಕಾಂಕ್ಷಿ ‘ಚಂದ್ರಯಾನ-2’ ಯೋಜನೆ ಯಶಸ್ಸಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ. ಶಿವನ್ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನ ಮತ್ತು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭಾನುವಾರ ಕುಟುಂಬಸಮೇತ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕೊಲ್ಲೂರು ದೇವಳದಲ್ಲಿ ಬೆಳಗ್ಗೆ ಪತ್ನಿ ಮತ್ತು ಪುತ್ರನ ಜತೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದರು. ಮಧ್ಯಾಹ್ನ ಶ್ರೀಕೃಷ್ಣ ಮಠಕ್ಕೆ ಆಗಮಿಸಿ ಇತ್ತೀಚೆಗೆ ಸಮರ್ಪಣೆಯಾದ ಸ್ವರ್ಣಗೋಪುರ ವೀಕ್ಷಿಸಿ ಮಾಹಿತಿ ಪಡೆದರು. ಬಳಿಕ ನವಗ್ರಹ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ದರ್ಶನ ಪಡೆದರು.

‘ಚಂದ್ರಯಾನ ಮೂಲಕ ಭಾರತ ಹೊಸ ಮೈಲಿಗಲ್ಲು ಸಾಧಿಸಲಿದೆ. ಇಸ್ರೋ ವಿಜ್ಞಾನಿಗಳ ತಂಡದ ಹಲವು ದಿನಗಳ ಪರಿಶ್ರಮ ಇದರಲ್ಲಿದೆ. ಯೋಜನೆ ಸಫಲವಾಗಲು ದೈವಾನುಗ್ರಹ ಅಗತ್ಯ’ ಎಂದು ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.

15ರಂದು ಚಂದ್ರಯಾನ-2

ಚಂದ್ರನ ಮೇಲೆ ನೀರು, ಖನಿಜ, ಕಂಪನದ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಇಸ್ರೋ ಐತಿಹಾಸಿಕ ಯೋಜನೆ ‘ಚಂದ್ರಯಾನ-2’ ರೂಪಿಸಿದೆ. ಈ ಬಾಹ್ಯಾಕಾಶ ನೌಕೆ ಜು.15ರಂದು ಉಡಾವಣೆ ಆಗಲಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ 2.51ಕ್ಕೆ ಚಂದ್ರಯಾನ-2 ನೌಕೆಯನ್ನು ಜಿಎಸ್​ಎಲ್​ವಿ ಮಾರ್ಕ್-3 ರಾಕೆಟ್ ಮೂಲಕ ಉಡಾವಣೆಗೊಳ್ಳಲಿದೆ.

Leave a Reply

Your email address will not be published. Required fields are marked *