ಗಗನದೊಳಲೆಯುವ ಚಂದಿರನು…

ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು… ಎಂಬುದು ಕವಿವಾಣಿ. ಅದು ಆ ಕಾಲದ ಮಾತು. ಈಗ ಹಾಗೇನಿಲ್ಲ. ನಾಸಾ, ಇಸ್ರೋ ಚಂದ್ರಲೋಕಕ್ಕೂ ದಾರಿ ಶೋಧಿಸಿವೆ. ಚಂದ್ರಯಾನ 1ಕ್ಕೀಗ ದಶಮಾನೋತ್ಸವ ಸಂಭ್ರಮ (2008ರ ಅಕ್ಟೋಬರ್ 22). ಈ ಸಮಯದಲ್ಲೇ ಚಂದ್ರಯಾನ-2ಕ್ಕೆ ಇಸ್ರೋ ಭರದ ಸಿದ್ಧತೆ ನಡೆಸಿದೆ. ಜುಲೈ 20ರ ಮೂನ್ ಡೇ, ಬಾಹ್ಯಾಕಾಶ ಸಂಶೋಧನಾ ದಿನದ ಹಿನ್ನೆಲೆಯಲ್ಲಿ ಈ ಮೆಲುಕು.

| ಬೆಳಕು

ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ ಎಂದು ಪ್ರಶ್ನಿಸುವ ನೀ.ರೆ. ಹಿರೇಮಠರ ಶಿಶುಪ್ರಾಸ ನೆನಪಾದಾಗಲೆಲ್ಲ ನಿಂತಲ್ಲೇ ನಿಂತಿದ್ದರೂ ನಮ್ಮೊಂದಿಗೇ ಬರುವಂತೆ ಭಾಸವಾಗುವ ಚಂದಿರನ ಬಗ್ಗೆ ಕುತೂಹಲ ಗರಿಗೆದರುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರೆಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಹೊನಲನ್ನೇ ಹರಿಸುತ್ತ ಮುಪ್ಪಿನಲ್ಲಿರುವವರ ಒಂಟಿತನ ನೀಗಿಸುತ್ತಾನೆ.

ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿ ಮತ್ತು ಗಣಪತಿಯಿಂದ ಶಾಪಕ್ಕೊಳಗಾದ ಚಂದ್ರನ ಕತೆಯನ್ನು ಕೇಳಿದಾಗಲೆಲ್ಲ ಅದೇನೋ ರೋಮಾಂಚನ. ಚಂದಿರನೊಡನೆಯ ನಮ್ಮ ನಂಟು ನಿನ್ನೆ ಮೊನ್ನೆಯದಲ್ಲ. ಅಮ್ಮ ನಮ್ಮ ಬಾಯಿಗೆ ಮೊದಲ ತುತ್ತನ್ನು ಇಟ್ಟ ಕ್ಷಣದಿಂದ ಇಂದಿನವರೆಗೂ ಚಂದಿರನೇ ಸಂಗಾತಿ.

ಚಂದ್ರನಲ್ಲೊಂದು ಮೊಲವಿದೆ. ಅದು ಹುಣ್ಣಿಮೆಯಂದು ದೇವರಿಗೆ ಕೈಜೋಡಿಸಿ ನಮಸ್ಕರಿಸುತ್ತದೆ ಎಂಬಂತಹ ಕತೆಗಳನ್ನೆಲ್ಲ ಕೇಳಿ ಬೆಳೆದವರು ನಾವು. ಆಗೆಲ್ಲ ಚಂದ್ರನಲ್ಲಿರುವ ಮೊಲದಾಕೃತಿ ಹುಡುಕುವುದೇ ಮೋಜಿನ ಕಾಯಕವಾಗಿತ್ತು.

ಚಂದ್ರನಿಗೂ, ಅಮೃತಕ್ಕೂ ಅವಿನಾಭಾವ ಸಂಬಂಧ. ಅವನೊಳಗಿರುವ ಹದಿನಾರು ಕಲೆಗಳಿಂದೊಡಗೂಡಿದ ಅಮೃತವನ್ನು ದೇವದೇವತೆಗಳು ಬೇಡಿ ಪಡೆಯುತ್ತಾರಂತೆ. ಹುಣ್ಣಿಮೆಯಂದು ನಳನಳಿಸುವ ಚಂದ್ರ ಎಲ್ಲರಿಗೂ ಅಮೃತ ಹಂಚುತ್ತ ಕೊನೆಗೆ ತಾನೇ ಇಲ್ಲವಾಗುತ್ತಾನೆ. ಅಮಾವಾಸ್ಯೆಯ ಕಾರ್ಗತ್ತಲೆಯಲ್ಲಿ ಹೊಸ ಜ್ಞಾನ ಸಂಪಾದಿಸಿ, ಮತ್ತೆ ಅಮೃತ ಸಂಚಯನಕ್ಕೆ ತೊಡಗುವ ಚಂದ್ರ ‘ಹಂಚಿ ಬದುಕುವ’ ಪಾಠ ಹೇಳುತ್ತಾನೆ.

ವಿಷ್ಣು ಪುರಾಣದ ಪ್ರಸ್ತಾಪವಿದು. ಅಮೃತಕ್ಕಾಗಿ ದೇವತೆಗಳು, ಅಸುರರು ಸೇರಿ ಸಮುದ್ರಮಥನ ಮಾಡಿದಾಗ ಚಂದಿರ ಹೊರಬಂದ. ಪುರುಷ ಸೂಕ್ತದಲ್ಲೂ ಈ ಬಗ್ಗೆ ಉಲ್ಲೇಖವಿದೆ. ಚಂದ್ರಮಾ ಮನಸೋ ಜಾತಃ. ಅಂದರೆ, ಚಂದ್ರ ಹುಟ್ಟಿದ್ದು ಭಗವಂತನ ಅನುಕಂಪ ತುಂಬಿದ ಹೃದಯದಿಂದ. ಸ್ಮೃತಿಗಳ ಪ್ರಕಾರ, ಪ್ರತಿ ಹೊಸ ಸೃಷ್ಟಿಯಲ್ಲೂ ಹೊಸ ಚಂದ್ರನ ಆಗಮನವಾಗುತ್ತದೆ. ಶ್ರೀಕೃಷ್ಣ ‘ಚಂದ್ರಕಲಾ’ ಎಂಬ 16 ಕಲೆಗಳ ಬಗ್ಗೆ ಹೇಳಿದ್ದಾನೆ.

ಮನೋಕಾರಕ ಚಂದ್ರ ಮಾತೃಕಾರಕನೂ ಹೌದು. ನಮ್ಮ ಸ್ವಭಾವ ನಿರ್ಣಯದಲ್ಲಿ ಚಂದ್ರನೇ ಪ್ರಧಾನ. ಆದ್ದರಿಂದಲೇ ಪ್ರತಿ ಕಾರ್ಯಕ್ಕೂ ಮೊದಲು ‘ತಾರಾಬಲಂ ಚಂದ್ರ ಬಲಂ ತದೇವ’ ಎನ್ನಲಾಗುತ್ತದೆ. ಜ್ಞಾನೇಂದ್ರಿಯ, ಕಮೇಂದ್ರಿಯಗಳಿಗೆ ಒಡೆಯ ಮನಸ್ಸು. ಎಲ್ಲ ಹನ್ನೊಂದೂ ಇಂದ್ರಿಯಗಳ ಸಮೂಹವನ್ನೇ ಏಕಾದಶ ರುದ್ರನೆಂದರು. ಆತನೇ ಚಂದ್ರಶೇಖರ. ಸಂತತಿ ಸಮೃದ್ಧಿಯಾಗಲು ದಕ್ಷ ಪ್ರಜಾಪತಿ 27 ನಕ್ಷತ್ರಗಳನ್ನು ಚಂದ್ರನ ಪತ್ನಿಯರನ್ನಾಗಿಸಿದ. ಚಂದ್ರನೋ ರೋಹಿಣಿ ತಾರೆಯತ್ತ ಒಲವು ತೋರಿದ. ಇದರಿಂದ ಸಿಟ್ಟಾದ ದಕ್ಷ ಪ್ರಜಾಪತಿ ಕ್ಷಯವಾಗೆಂದು ಚಂದ್ರನಿಗೆ ಶಾಪವಿತ್ತ. ಚಂದ್ರ ಶಿವನಲ್ಲಿ ಮೊರೆಯಿಟ್ಟ. ಶಿವ ತನ್ನ ತಲೆಯಲ್ಲೇ ಚಂದ್ರನಿಗೆ ಆಶ್ರಯ ನೀಡಿ ಚಂದ್ರಶೇಖರನಾಗಿ, ಶುಕ್ಲಪಕ್ಷದಲ್ಲಿ ವೃದ್ಧಿಯಾಗೆಂದೂ, ಕೃಷ್ಣಪಕ್ಷದಲ್ಲಿ ಕ್ಷಯವಾಗೆಂದೂ ಶಾಪದ ಪ್ರಭಾವ ತಗ್ಗಿಸಿದ.

ಮನಃಶಕ್ತಿಯು ಮಧ್ಯ ಮಿದುಳಿನಲ್ಲಿ ಪ್ರಮುಖ ಹಾರ್ವೇನ್​ಗಳು ಸ್ರವಿಸುವ ಫೈನಿಯಲ್ ಗ್ರಂಥಿಯ ಭಾಗದಲ್ಲಿ ಕೇಂದ್ರಿತವಾಗುತ್ತದೆ. ಚಂದ್ರ ಈ ಗ್ರಂಥಿಯಲ್ಲಿ ಸೇರಿ ರಾತ್ರಿ ವೇಳೆ ಮಾನವ ಕ್ರಿಯೆಗಳನ್ನು ನಿಯಂತ್ರಿಸುತ್ತಾನೆ. ನಾವು ನಿದ್ದೆಯಲ್ಲಿದ್ದಾಗ ಚಂದ್ರ ತನ್ನೆಲ್ಲ ತೇಜಸ್ಸು, ಪ್ರಭಾವದಿಂದ ನಮಗೆ ವಿಶ್ರಾಂತಿ ಹಾಗೂ ಮನಃಶಾಂತಿ ಕರುಣಿಸುತ್ತಾನಂತೆ. ವಿಷ್ಣು ಪುರಾಣದಲ್ಲಿ ಈ ಪ್ರಸ್ತಾಪವಿದೆ. ಚಂದ್ರ ಉಪಗ್ರಹವಾದರೂ ಜಗತ್ತಿನೆಲ್ಲೆಡೆ ಬಹು ಜನಪ್ರಿಯ. ಚಂದ್ರನ ಪ್ರಭಾವದಿಂದಲೇ ಕೋಗಿಲೆಗಳು ಹಾಡುತ್ತವೆ. ಸಮುದ್ರದ ಉಬ್ಬರವಿಳಿತಕ್ಕೂ ಚಂದ್ರ ಕಾರಣ.

ಪ್ರತಿಕ್ಷಣವೂ ಪ್ರತಿದಿನವೂ ಚಂದ್ರ ಚಲನಶೀಲ. ದ್ವಾದಶ ರಾಶಿಗಳ ಸಂಚಾರಿ. ಈ ಗತಿಯ ಚಲನೆಯ ಮೇಲೆಯೇ ದಿನ ಭವಿಷ್ಯ ನಿರ್ಣಯ. ಯಾವ ರಾಶಿಯಲ್ಲಿ ಯಾವ ಯಾವ ಗ್ರಹಗಳ ಸ್ಪರ್ಶದೊಂದಿಗೆ ಸಹಚರನಾಗುತ್ತಾನೋ ಅದರ ಮೇಲಿಂದ ಭವಿಷ್ಯ ನಿರ್ಧಾರವಾಗುತ್ತದೆ. ಚಂದ್ರನಿರುವ ರಾಶಿಯನ್ನೇ ಜೀವಿಯ ಜನ್ಮರಾಶಿಯಾಗಿ ಪರಿಗಣಿಸಲಾಗುತ್ತದೆ. ಶರೀರಕ್ಕೆ ಮುಪ್ಪಡರಬಹುದು. ಆದರೆ ಮನಸ್ಸಿಗಿಲ್ಲ. ಚಂದ್ರಬಲವಿದ್ದರೆ ಮನುಷ್ಯ ಸದಾ ಚಿರಂಜೀವಿ. ಚಂದ್ರ ಚೆಲುವ ರಸಿಕ. ಮನಸ್ಸಿಗೆ ಜಾತಿಮತವಿಲ್ಲ. ಕಾಲದಂತೆ ಅದು ಸದಾ ಕ್ರಿಯಾಶೀಲ.

ಚಂದಿರನನ್ನೂ ಬಿಡೆವು ನಾವು

ವಿಜ್ಞಾನದ ಮೂಲಕ ಚಂದ್ರನನ್ನು ಕಾಣುವಾಗಲೂ ಮತ್ತದೇ ಬೆಳದಿಂಗಳು. ಗುರುತ್ವಾಕರ್ಷಣೆಯ ತತ್ವದ ನಮ್ಮ ಸೌರಮಂಡಲದ ಗ್ರಹಗಳಿಗೆ ಚಂದ್ರರು ಅವರವರನ್ನು ಸುತ್ತುತ್ತಿದ್ದಾರೆ. ನಮ್ಮ ಭೂಮಿಗೋ ಈ ಚಂದ್ರನೊಬ್ಬನೇ ದಿಕ್ಕು. ನೀಲಾಕಾಶದಲ್ಲಿ ಹೊಳೆವ ಅಸಂಖ್ಯ ನಕ್ಷತ್ರಗಳು ತಿಂಗಳ ಬೆಳಕಲ್ಲಿ ಚಂದ್ರನ ಮನೆಯ ಮಿಣುಕುದೀಪಗಳಂತೆ ಗೋಚರಿಸುತ್ತವೆ. ಭೂಮಿಯ ಪ್ರದಕ್ಷಿಣೆಯಲ್ಲೇ ಆಯಸ್ಸು ಕಳೆಯುತ್ತಿರುವ ಚಂದ್ರ, ಸೂರ್ಯನ ಬೆಳಕನ್ನೇ ಎರವಲು ಪಡೆದವ. ಅಂತಹ ಚಂದ್ರನ ಮೇಲೂ ಹತ್ತಿಳಿದು ಬಂದು ಕವಿ ಕಲ್ಪನೆಗಳನ್ನೆಲ್ಲ ಸುಳ್ಳು ಮಾಡಿದ್ದೇವೆ. ಆದರೆ, ನಿಯಾನ್ ಬೆಳಕಿನಲ್ಲಿ, ಝುಗಮಗಿಸುವ ಸೋಡಿಯಂ ದೀಪಗಳಡಿಯಲ್ಲಿ ಚಂದ್ರನ ಇರುವಿಕೆಯೇ ಮರೆತುಹೋಗುತ್ತಿದೆ. ಹಗಲಿರುಳೂ ಉರಿವ ಬೀದಿದೀಪಗಳು ಅಮಾವಾಸ್ಯೆ, ಹುಣ್ಣಿಮೆಗಳ ವ್ಯತ್ಯಾಸ ತಿಳಿಯದಂತೆ ಮಾಡಿಬಿಟ್ಟಿವೆ. ಚಂದಿರನೇತಕ್ಕೆ ಓಡುವನಮ್ಮಮೋಡಕೆ ಹೆದರಿಹನೇ… ಎಂದು ಹಾಡುತ್ತಿದ್ದ ಮಕ್ಕಳ ಮನಸ್ಸು ವಿಹ್ವಲಗೊಂಡದ್ದು ಚಂದ್ರನ ಮೇಲೆ ಮನುಷ್ಯ ಹೆಜ್ಜೆಯಿಟ್ಟಾಗ. ಚಂದ್ರಲೋಕದಲ್ಲೂ ಮನೆಯ ಕಟ್ಟುವರಂತೆ. ಇರುವೊಬ್ಬ ಚಂದ್ರನನ್ನೂ ಅಂದಗೆಡಿಸುವರಂತೆ, ಹೌದೇನಮ್ಮ ಎಂದು ಚಂದಮಾಮನ ಬಗ್ಗೆ ಪ್ರೀತಿಯಿಂದ ಕೇಳುವುದಿದೆ. ಹೀಗೆ ಚಂದಿರನ ಸೊಬಗನ್ನು ಸಹಸ್ರಮಾನಗಳಿಂದ ಆಸ್ವಾದಿಸುತ್ತಿರುವ ನಾವು ಅವನ ಬಗ್ಗೆ ಹೆಚ್ಚಿನದನ್ನು ಅರಿಯಲು ದಶಕಗಳಿಂದ ಗಗನನೌಕೆಗಳ ಸಹಾಯ ಪಡೆದು ಕೊಂಡಿದ್ದೇವೆ.

1959ರಲ್ಲಿ ರಷ್ಯಾದ ಲೂನಾ ನೌಕೆಗಳು ಚಂದ್ರನ ಮೇಲೆ ಇಳಿದು ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿದವು. 1969ದಲ್ಲಿ ಅಪೋಲೊ ಯಾನದಲ್ಲಿ ಚಂದ್ರನ ಮೇಲೆ ಗಗನಯಾತ್ರಿಗಳು ಇಳಿದರು. ಇದು ಮನುಕುಲದ ದೊಡ್ಡ ಸೀಮೋಲ್ಲಂಘನಕ್ಕೆ ಸಾಕ್ಷಿಯಾಯ್ತು. ದಶಕದ ಹಿಂದೆ (2008 ಅಕ್ಟೋಬರ್) ಚಂದ್ರನಲ್ಲಿಗೆ ಉಪಗ್ರಹ ಕಳಿಸಿದ ದೇಶದ ಮೊದಲ ಪ್ರಯತ್ನ ಚಂದ್ರಯಾನ್ 1 ಕೂಡ ಯಶಸ್ವಿಯಾಯಿತು. ಚಂದ್ರಯಾನ್ 1 ಗಗನನೌಕೆ ಚಂದ್ರನಲ್ಲಿ ನೀರಿರುವ ವಿಚಾರವನ್ನು ಜಗಜ್ಜಾಹೀರುಗೊಳಿಸಿತು. ಯಶಸ್ಸಿನ ಹುಮ್ಮಸ್ಸಿನಲ್ಲೇ ನಾವೀಗ ಚಂದ್ರಯಾನ್ 2ಗೆ ಸಿದ್ಧರಾಗಿದ್ದೇವೆ. ಈ ವರ್ಷದ ಅಕ್ಟೋಬರ್​ನಲ್ಲಿ ಚಂದ್ರಯಾನ್-2 ಚಂದಮಾಮನನ್ನು ಅರಿಯಲು, ಅಳೆಯಲು ತೆರಳಲಿದೆ. ಹಲವು ಹೊಸತುಗಳನ್ನು ವಿನ್ಯಾಸ ಮತ್ತು ಅಣಕು ಪರೀಕ್ಷೆಗಳ ಸಹಾಯದಿಂದ ಅರಗಿಸಿಕೊಂಡು ಚಂದ್ರಯಾನ-1 ಗಗನನೌಕೆಯನ್ನು ನಿರ್ವಿುಸಲಾಯಿತು. ಇದರಲ್ಲಿ 1380 ಕಿಲೋಗ್ರಾಮ್ ತೂಕದ ಗಗನನೌಕೆಯನ್ನು ಪಿಎಸ್​ಎಲ್​ವಿ ರಾಕೆಟ್ ಸಹಾಯದಿಂದ ಚಂದ್ರನತ್ತ ವರ್ಗಾಯಿಸಬಹುದಾದ ಕಕ್ಷೆಗೆ (225 ಕಿ.ಮೀ. 22,860 ಕಿ.ಮೀ ಇರುವ ಅಂಡಾಕಾರದ ಕಕ್ಷೆ) ಉಡಾಯಿಸಿದ್ದೇ ವಿಶೇಷ. ಅಲ್ಲಿಯವರೆಗೂ ಪಿಎಸ್​ಎಲ್​ವಿಯನ್ನು ಸಾಮಾನ್ಯವಾಗಿ ಧ್ರುವದಿಂದ ಧ್ರುವಕ್ಕೆ ಸುತ್ತುವ 600-900 ಕಿಲೋಮೀಟರ್ ಎತ್ತರದ ಕಕ್ಷೆಗೆ ಉಪಗ್ರಹ ರವಾನಿಸಲು ಬಳಸಲಾಗುತ್ತಿತ್ತು. ಸುಮಾರು 4 ಲಕ್ಷ ಕಿ.ಮೀ. ದೂರದ ಚಂದ್ರನ ಸುತ್ತಲಿನ ಕಕ್ಷೆಗೆ ತಲುಪಿದ ಚಂದ್ರಯಾನ-1ರಲ್ಲಿ 0.7ಮೀ ವ್ಯಾಸದ ಆಂಟೆನಾ ಕೂಡ ಇತ್ತು. ಇದು ಸಂಭಾಷಣೆಯ ಸಾಧನವಾಗಿತ್ತು.

ಅಧ್ಯಯನ, ಮಾಪನ

ಚಂದ್ರಯಾನ 1ರ ಬಳಿಕ ಹೆಚ್ಚು ತೂಕದ, ಮಹತ್ತರ ಉದ್ದೇಶಗಳನ್ನೊಳಗೊಂಡ ಗಗನನೌಕೆಯನ್ನು ಚಂದ್ರಯಾನ 2 ಪರಿಯೋಜನೆಯಡಿ ಕಳಿಸಲು ಇಸ್ರೋ ಸಿದ್ಧವಾಗಿದೆ. ಈ ಯೋಜನೆಯು ಮೂರು ಗಗನನೌಕೆಗಳನ್ನು ಕಕ್ಷಾನೌಕೆ (ಆರ್ಬಿಟರ್), ಗ್ರಹನೌಕೆ (ಲ್ಯಾಂಡರ್), ಗ್ರಹ ಸಂಚಾರಿ (ರೋವರ್) ಒಳಗೊಂಡಿದೆ. ಇವುಗಳನ್ನು ಜಿಎಸ್​ಎಲ್​ವಿ ಮಾರ್ಕ್-2 ಎಫ್ 04 ರಾಕೆಟ್ ಕಕ್ಷೆಗೆ ತಲುಪಿಸಲಿದೆ. ಚಂದ್ರಯಾನ-2ರ ಅತಿ ಹಿರಿಯ ಭಾಗ ಚಂದ್ರನಿಗೇ ಉಪಗ್ರಹವಾಗಲಿರುವ ಕಕ್ಷಾನೌಕೆ. ಇದರ ತೂಕ ಸುಮಾರು 1400 ಕಿಲೋಗ್ರಾಮ್ ಇದು ಚಂದಿರನ ಸುತ್ತ 100 ಕಿ.ಮೀ. ಎತ್ತರದಲ್ಲಿ ವೃತ್ತಾಕಾರದ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕಲಿದೆ. 5 ವೈಜ್ಞಾನಿಕ ಉಪಕರಣಗಳು ನೀರು, ಖನಿಜಗಳು, ವಿರಳ ವಾತಾವರಣದ ಅಧ್ಯಯನ ಹಾಗೂ ಮಾಪನ ಮಾಡಲಿವೆ.

ಮೊದಲ ಯತ್ನ

ಸುಮಾರು 1250 ಕಿಲೋಗ್ರಾಂ ತೂಕದ ಗೃಹ ನೌಕೆಯನ್ನು (ಲ್ಯಾಂಡರ್) ಸುರಕ್ಷಿತವಾಗಿ ಇಳಿಸುವುದೇ ನಮಗಿರುವ ಸವಾಲು. ದಕ್ಷಿಣ ಧ್ರುವದ ಸಮೀಪದ ಕುಳಿಗಳ ನಡುವೆ ಇಳಿಸುವ ಈ ಪ್ರಯತ್ನ ವಿಶ್ವ ಪ್ರಥಮವಾಗಲಿದೆ. ಇಲ್ಲಿ 14 ಭೂ ದಿನಗಳಷ್ಟು ದೀರ್ಘ ಹಗಲು ಮತ್ತು ಅಷ್ಟೇ ಸಮಯದ ರಾತ್ರಿ ಇರುತ್ತದೆ. ಕೇವಲ ಸೌರಫಲಕದಿಂದ ವಿದ್ಯುಚ್ಛಕ್ತಿಯನ್ನು ಪಡೆಯುವ ಲ್ಯಾಂಡರ್ ಈ ದೀರ್ಘ ರಾತ್ರಿಯಲ್ಲಿ ದೀರ್ಘ ನಿದ್ದೆ ಮಾಡಿ ನಂತರ ಲೀಥಿಯಂ ಅಯಾನ್ ಬ್ಯಾಟರಿ ಸಹಾಯದಿಂದ ಎಚ್ಚೆತ್ತು ಮತ್ತೆ ಎಲ್ಲ ಉಪಕರಣಗಳನ್ನು ಆನ್ ಮಾಡಲು ಪ್ರಯತ್ನಿಸಲಿದೆ.

ಲ್ಯಾಂಡರಿನಿಂದ ಚಂದಿರನ ಮೇಲಿಳಿದು ಸವಾರಿ ಮಾಡುವ ರೋವರ್ ಒಂದು ಚಂದ್ರರಥ. 20 ಕೆಜಿ ತೂಕದ ಈ ಗಗನನೌಕೆಯು 6 ಚಕ್ರದ ವಾಹನ. ಲ್ಯಾಂಡರ್-ರೋವರ್ ಯುಗಳ ನೌಕೆಗಳನ್ನು ಚಂದ್ರನ ಮೇಲೆ ಇಳಿಸುವ ಕಾರ್ಯ ಇಸ್ರೋ ವಿಜ್ಞಾನಿಗಳಿಗೆ ಮೊದಲ ಯತ್ನ.

ಚಂದ್ರನಿಗೆರಡು ಮುಖ

ಭೂಮಿಯ ಉಪಗ್ರಹವಾದ ಚಂದ್ರ ಕೂಡ 24 ಗಂಟೆಗಳಲ್ಲಿ ತನ್ನನ್ನು ತಾನು ಒಂದು ಸುತ್ತು ಹಾಕುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ, ಪ್ರತಿ ಹುಣ್ಣಿಮೆಯಲ್ಲೂ ಚಂದ್ರನ ಪರಿಭ್ರಮಣ ಕಾಣಬಹುದು. ಚಂದಿರನು ಪ್ರತಿ ಗಂಟೆಗೆ ಸರಾಸರಿ 2286 ಮೈಲಿ ವೇಗದಲ್ಲಿ ಕಕ್ಷೆಯನ್ನು ಸುತ್ತುತ್ತಾನೆ. ಚಂದ್ರನು ಭೂಮಿಯ ಸುತ್ತ 27.3 ದಿನಗಳಿಗೊಮ್ಮೆ ಪರಿಭ್ರಮಿಸುತ್ತಾನೆ. ಚಂದ್ರನಿಗೆ ಎರಡು ಮುಖಗಳಿದ್ದು, ಕಲೆಗಳಿರುವ ಎದುರಿನ ಮುಖವಷ್ಟೇ ನಮಗೆ ಕಾಣುತ್ತದೆ.