ಭಯೋತ್ಪಾದನೆ ನಿರ್ಮೂಲನೆಗೆ ಇಸ್ರೇಲ್‌ನಿಂದ ಭಾರತಕ್ಕೆ ಬೇಷರತ್‌ ಬೆಂಬಲ ಘೋಷಣೆ

ನವದೆಹಲಿ: ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಯ ಉಗ್ರರು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ದಾಳಿ ನಡೆಸಿದ ಬಳಿಕ ಇಸ್ರೇಲ್‌, ಭಯೋತ್ಪಾದನೆಗೆ ನಿಗ್ರಹಕ್ಕೆ ಭಾರತಕ್ಕೆ ಬೇಷರತ್‌ ಬೆಂಬಲ ನೀಡುವುದಾಗಿ ಹೇಳಿದ್ದು, ಮುಖ್ಯವಾಗಿ ಭಯೋತ್ಪಾದನೆ ನಿಗ್ರಹಕ್ಕೆ ಸಹಾಯಹಸ್ತ ಚಾಚುವುದಾಗಿ ಹೇಳಿದೆ.

ನೂತನವಾಗಿ ನೇಮಕಗೊಂಡಿರುವ ಇಸ್ರೇಲ್‌ ರಾಯಭಾರಿ ಡಾ. ರೋನ್‌ ಮಲ್ಕಾ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿ, ಭಾರತಕ್ಕೆ ಬೆಂಬಲ ನೀಡಲು ನಮ್ಮ ದೇಶಕ್ಕೆ ಯಾವುದೇ ಮಿತಿಗಳಿಲ್ಲ. ಭಯೋತ್ಪಾದಕ ದಾಳಿಗಳಿಗೆ ಪ್ರತಿಕಾರವಾಗಿ ಇಸ್ರೇಲ್ ಮಾದರಿಯನ್ನು ಸರ್ಕಾರ ಪರಿಗಣಿಸಬೇಕು ಎಂಬ ಬೇಡಿಕೆಯ ನಡುವೆ ಭಯೋತ್ಪಾದನೆ ನಿರ್ಮೂಲನೆಗೆ ಇಸ್ರೇಲ್‌ ಸರ್ಕಾರ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದ್ದಾರೆ.

ಕಳೆದ ವಾರವಷ್ಟೇ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನೊಬ್ಬ ಆತ್ಮಾಹುತಿ ದಾಳಿ ನಡೆಸಿ 41 ಸಿಆರ್‌ಪಿಎಫ್‌ ಯೋಧರನ್ನು ಬಲಿತೆಗೆದುಕೊಂಡ ಬಳಿಕ ಭಾರತವು ಇಸ್ರೇಲ್‌ ಮಾದರಿಯ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಬೇಡಿಕೆಯನ್ನು ಮುಂದಿಡುತ್ತಿದೆ.

ಭಯೋತ್ಪಾದನೆ ದಾಳಿಗೆ ತುತ್ತಾಗಿರುವ ಭಾರತಕ್ಕೆ ಜೆರುಸಲೇಂ ಯಾವ ರೀತಿಯ ಸಹಾಯ ಮಾಡಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನನ್ನು ತಾನು ರಕ್ಷಿಸಿಕೊಳ್ಳಲು ಭಾರತಕ್ಕೆ ಸಹಾಯ ಮಾಡಲು ಯಾವುದೇ ಮಿತಿಗಳಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ನಮ್ಮ ಆಪ್ತ ಗೆಳೆಯ ರಾಷ್ಟ್ರಕ್ಕೆ ಸಹಾಯ ಮಾಡಲು ನಾವಿದ್ದೇವೆ. ಏಕೆಂದರೆ ಭಯೋತ್ಪಾದನೆ ಎಂಬುದು ವಿಶ್ವಕ್ಕೆ ಮಾರಕವಾಗಿದೆ ಹೊರತು ಕೇವಲ ಇಸ್ರೇಲ್‌ ಮತ್ತು ಭಾರತಕ್ಕೆ ಮಾತ್ರವಲ್ಲ ಎಂದು ಹೇಳಿದ್ದಾರೆ.

52 ವರ್ಷದ ಮಲ್ಕಾ ಅವರು, ಭಾರತವು ನಮ್ಮ ಪ್ರಮುಖ ಪಾಲುದಾರ, ಅತ್ಯಂತ ಪ್ರಮುಖ ಗೆಳೆಯ ಮತ್ತು ತಮ್ಮ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಅವರು, ನಮ್ಮ ಜ್ಞಾನವನ್ನು ಹಂಚಿಕೊಳ್ಳಲು, ಸಂಬಂಧಗಳನ್ನು ವರ್ಧಿಸಲು ಮತ್ತು ಅವುಗಳನ್ನು ಇನ್ನಷ್ಟು ಗಾಢಗೊಳಿಸಲು ಬಯಸುವುದಾಗಿ ಹೇಳಿದ್ದಾರೆ. ಹಾಗಾಗಿ ಭಾರತವನ್ನು ಬಲಪಡಿಸುವ ಮೂಲಕ ಇಸ್ರೇಲ್ ವಿಶ್ವದ ಸ್ಥಿರತೆ ಮತ್ತು ಸಮರ್ಥನೀಯತೆಗೆ ಕೊಡುಗೆ ನೀಡಿದೆ ಮತ್ತು ವಿಶ್ವ ಸ್ಥಿರತೆಯಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸಿದೆ. ಹಾಗಾಗಿ ನಾವು ವಿಶ್ವವು ಜೀವಿಸಲು ಒಂದು ಉತ್ತಮ ಸ್ಥಳವನ್ನಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು. (ಏಜೆನ್ಸೀಸ್)