ಇಸ್ರೇಲ್ ನೆಲದಲ್ಲಿ ಕನ್ನಡಿಗರ ಪರಾಕ್ರಮ

| ಸದೇಶ್ ಕಾರ್ಮಾಡ್​

ಕೃಷಿ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್ ದೇಶ ಸಾಧಿಸಿದ ಪ್ರಗತಿಯನ್ನು ಇಂದು ವಿಶ್ವದ ಎಲ್ಲ ರಾಷ್ಟ್ರಗಳು ಬೆರಗುಗಣ್ಣಿನಿಂದ ನೋಡುತ್ತಿವೆೆ. ಪ್ರಾಕೃತಿಕ ಹಿನ್ನಡೆಗಳನ್ನು ಮೆಟ್ಟಿನಿಂತು ವಿಶ್ವದಲ್ಲೇ ಅತಿ ಹೆಚ್ಚು ಬೆಳೆ ಬೆಳೆಯುವ ಮೂಲಕ ‘ಇಸ್ರೇಲ್ ಮಾದರಿ’ಯನ್ನೇ ಅದು ಇಂದು ಸೃಷ್ಟಿಸಿದೆ. ಇಸ್ರೇಲಿಗರು ಮಹಾನ್ ಹೋರಾಟಗಾರರು. ಶತ್ರುರಾಷ್ಟ್ರಗಳಿಂದ ಸುತ್ತುವರಿದಿರುವ ಆ ದೇಶದಲ್ಲಿ ಯಹೂದಿಯರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದಾರೆ. ಮಧ್ಯಯುಗದಲ್ಲಿ ಮುಸ್ಲಿಮರು ಹಾಗೂ ನಂತರ ಬರೋಬ್ಬರಿ ನಾಲ್ಕು ಶತಮಾನಗಳ ಕಾಲ ಟರ್ಕರ ವಶದಲ್ಲಿದ್ದ ಇಸ್ರೇಲ್, ದಾಸ್ಯದಿಂದ ಮುಕ್ತವಾಗಲು ಹೋರಾಟ ನಡೆಸುತ್ತಲೇ ಇತ್ತು. ಈ ಹೋರಾಟದಲ್ಲಿ, ಎಲ್ಲಕ್ಕೂ ಮೊದಲು ಇಸ್ರೇಲ್ ರಾಷ್ಟ್ರದ ಹೈಫಾ ನಗರವನ್ನು ಒಟೋಮನ್ ಟರ್ಕರ ವಶದಿಂದ ಬಿಡಿಸಿಕೊಟ್ಟವರು ಭಾರತೀಯ ಸೈನಿಕರು. ಅದರಲ್ಲೂ ವಿಶೇಷವಾಗಿ ಮೈಸೂರು ಲ್ಯಾನ್ಸರ್ಸ್ ಎಂಬ ಸೇನಾಪಡೆ ಈ ಐತಿಹಾಸಿಕ ವಿಜಯಕ್ಕೆ ಕಾರಣೀಭೂತವಾಯಿತು ಎನ್ನುವುದು ಕನ್ನಡಿಗರೆಲ್ಲರಿಗೆ ಹೆಮ್ಮೆಯ ವಿಷಯ.

ಹೈಫಾ ಎಂಬುದು ಇಸ್ರೇಲಿನ ಪ್ರಮುಖ ಬಂದರು ನಗರ. ಅದನ್ನು ಇಸ್ರೇಲಿನ ಸ್ವಾತಂತ್ರ್ಯದ ಹೆಬ್ಬಾಗಿಲು ಎಂದೂ ಪರಿಗಣಿಸಲಾಗುತ್ತದೆ. ಏಕೆಂದರೆ, 1918ರ ಸೆಪ್ಟೆಂಬರ್ 23ರಂದು ಟರ್ಕರ ವಶದಿಂದ ಹೈಫಾ ವಿಮುಕ್ತಿ ಪಡೆಯಿತು. ಅಂದು ಹೈಫಾದಲ್ಲಿ ನಡೆದ ಘನಘೊರ ಯುದ್ಧದಲ್ಲಿ ಹೈದರಾಬಾದ್, ಜೋಧಪುರ ಸಂಸ್ಥಾನದ ಯೋಧರೊಂದಿಗೆ ಮೈಸೂರು ಸಂಸ್ಥಾನದ ಮೈಸೂರ್ ಲ್ಯಾನ್ಸರ್ಸ್ ಪಡೆಯ 2500 ಸೈನಿಕರೂ ಪಾಲ್ಗೊಂಡಿದ್ದರು. ಈ ಪೈಕಿ 500ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು.

ಯುದ್ಧ ಗೆಲ್ಲುವುದಷ್ಟೇ ಮುಖ್ಯವಾಗಿತ್ತು

ಈ ಯುದ್ಧಕ್ಕೆ ಮೈಸೂರು ಮಹಾರಾಜರು, ಜೋಧಪುರದ ಅರಸ ಮತ್ತು ಹೈದರಾಬಾದ್ ನಿಜಾಮ ತಮ್ಮ ಸೈನಿಕರನ್ನು ಕಳುಹಿಸಿದ್ದರು. 15ನೇ ಇಂಪೀರಿಯಲ್ ಸರ್ವಿಸ್ ಎಂಬ ಆ ತುಕಡಿಯು ಭಾರತೀಯ ಸೈನಿಕರನ್ನು ಒಳಗೊಂಡಿತ್ತು. 1918ರ ಸೆಪ್ಟೆಂಬರ್ 22ರ ರಾತ್ರಿ ಇಂಗ್ಲೆಂಡ್ ನೇತೃತ್ವದ ಸೇನೆ ಹೈಫಾ ನಗರವನ್ನು ವಶಪಡಿಸಿಕೊಳ್ಳಲು ದಾಳಿ ನಡೆಸಿತು. ಆದರೆ, ಮೌಂಟ್ ಕಾರ್ವೆಲ್ ಎಂಬ ಶಿಖರವನ್ನೇರಿ ಕುಳಿತಿದ್ದ ಒಟೋಮನ್ ಟರ್ಕರ ಸೈನ್ಯ ಅಲ್ಲಿಂದಲೇ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸತೊಡಗಿದ್ದರಿಂದ ಇಂಗ್ಲೆಂಡ್ ನೇತೃತ್ವದ ಸೇನೆ ಪ್ರತ್ಯುತ್ತರ ನೀಡಲು ಸಾಧ್ಯವಾಗದೆ ಸುರಕ್ಷಿತ ಸ್ಥಳಕ್ಕೆ ಮರಳಬೇಕಾಯಿತು. ಆದರೆ, ಯುದ್ಧಭೂಮಿಯಿಂದ ಹಿಂದೆ ಸರಿದದ್ದು ಭಾರತೀಯ ಯೋಧರ ಅಸಮಾಧಾನಕ್ಕೆ ಕಾರಣವಾಯಿತು. ಅಶ್ವದಳದ ಮೇಜರ್ ದಳಪತ್ ಸಿಂಗ್ ಶೆಖಾವತ್ ಅವರಂತೂ ಇದು ಹೇಡಿತನದ ನಿರ್ಧಾರ ಎಂದರು. ಅಷ್ಟೇ ಅಲ್ಲ, ಜೋಧಪುರ ಹಾಗೂ ಮೈಸೂರಿನ ಸೈನಿಕರೊಡನೆ ರ್ಚಚಿಸಿದರು. ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದಾಗ, ‘ಎಷ್ಟೇ ಕಷ್ಟ ಎದುರಾದರೂ ಟರ್ಕರ ಸೇನೆಯನ್ನು ಬಗ್ಗು ಬಡಿಯುತ್ತೇವೆ, ಯುದ್ಧ ಮುಂದುವರಿಸಲು ಅನುಮತಿ ನೀಡಿ’ ಎಂದು ಶೆಖಾವತ್ ಬ್ರಿಟಿಷ್ ಅಧಿಕಾರಿಗಳಿಗೆ ಮನವಿ ಮಾಡಿದರು. ಬ್ರಿಟಿಷ್ ಸೈನಿಕರಿಗೆ ತಮ್ಮ ಜೀವ ಉಳಿಸಿಕೊಳ್ಳುವುದು ಮುಖ್ಯವಾದರೆ ಭಾರತೀಯ ಸೈನಿಕರಿಗೆ ಯುದ್ಧ ಗೆಲ್ಲುವುದಷ್ಟೇ ಮುಖ್ಯವಾಗಿತ್ತು. ಪ್ರಾರಂಭದಲ್ಲಿ ಇವರ ಕೋರಿಕೆಯನ್ನು ಬ್ರಿಟಿಷ್ ಸೇನಾಧಿಕಾರಿಗಳು ತಿರಸ್ಕರಿಸಿದರೂ ನಂತರ ಒತ್ತಡಕ್ಕೆ ಮಣಿದು ಯುದ್ಧ ಮುಂದುವರಿಸಲು ಅನುಮತಿ ನೀಡಿದರು. ಹೈಫಾ ನಗರದ ಶಿಖರವೇರಿ ಕುಳಿತಿದ್ದ ಟರ್ಕರ ಸೇನೆಯನ್ನು ಬಗ್ಗುಬಡಿಯಲು ಭಾರತೀಯ ಯೋಧರು 1918ರ ಸೆಪ್ಟೆಂಬರ್ 23ರ ನಸುಕಿನಲ್ಲಿ ಅಶ್ವದಳದೊಂದಿಗೆ ಬೆಟ್ಟ ಏರಲು ಪ್ರಾರಂಭಿಸಿದರು. ಟರ್ಕರಿಗೆ ಆಸ್ಟ್ರಿಯಾ ಹಾಗೂ ಜರ್ಮನಿಯ ಬೆಂಬಲವೂ ಇತ್ತು. ಆ ಸೈನಿಕರ ಬಳಿ ಬಂದೂಕು, ತೋಪುಗಳಿದ್ದರೆ ಅವರ ಗುಂಡುಗಳಿಗೆ ಉತ್ತರ ನೀಡಲು ಭಾರತೀಯ ಅಶ್ವದಳದ ಬಳಿ ಇದ್ದದ್ದು ಖಡ್ಗಗಳು ಮತ್ತು ಈಟಿಗಳು ಮಾತ್ರ. ಅತ್ಯಂತ ವೇಗವಾಗಿ ಧಾವಿಸಬಲ್ಲ ಕುದುರೆಗಳ ಸಹಕಾರ ಮತ್ತು ಆತ್ಮಬಲದಿಂದ ಭಾರತೀಯ ಯೋಧರು ಕಡಿದಾದ ಪರ್ವತ ಏರತೊಡಗಿದರು. ಮೌಂಟ್​ಕಾರ್ವೆಲ್ ಶ್ರೇಣಿಗೆ ತೆರಳಲು ಕಿಶೊನ್ ನದಿಯ ಜೌಗು ನೆಲದ ಮೂಲಕ ಸಾಗಬೇಕಾದ ಅನಿವಾರ್ಯತೆ ಭಾರತೀಯ ಯೋಧರಿಗಿತ್ತು. ಮೇಲಿನಿಂದ ಬೀಳುತ್ತಿದ್ದ ಗುಂಡಿನ ಮಳೆಯನ್ನೂ ಲೆಕ್ಕಿಸದೆ ಮೈಸೂರು ಲ್ಯಾನ್ಸರ್ಸ್ ಯೋಧರು ಪರ್ವತವನ್ನು ವ್ಯೂಹಾತ್ಮಕವಾಗಿ ಮೇಲೇರಿ, ಟರ್ಕರ ಸೇನೆಯನ್ನು ಸಂಹರಿಸಿದರೆ, ಜೋಧಪುರ ಸೈನಿಕರು ಶರವೇಗದ ಕುದುರೆಗಳೊಡನೆ ಹೈಫಾ ನಗರಕ್ಕೆ ಲಗ್ಗೆಯಿಟ್ಟು, ಟರ್ಕ್ ಸೈನಿಕರನ್ನು ಮಟ್ಟಹಾಕಿದರು.

ದಾಖಲೆಯಾಗಿ ಉಳಿದ ಯುದ್ಧ

ಶಸ್ತ್ರಸಜ್ಜಿತ ಸೈನ್ಯವೊಂದನ್ನು ಅಶ್ವದಳವೊಂದು ಮಣಿಸಿದ ಏಕೈಕ ದಾಖಲೆಯಾಗಿ ಪ್ರಪಂಚದ ಇತಿಹಾಸದಲ್ಲಿ ಈ ಘಟನೆ ಉಳಿದಿದೆ. ಬರಿಯ ಅಶ್ವದಳದ ತುಕಡಿಗಳು 1,000 ಯೋಧರ ಶಸ್ತ್ರಸಜ್ಜಿತ ಸೈನ್ಯವನ್ನು ಒಂದೇ ದಿನದಲ್ಲಿ ಮಣಿಸಿದ್ದು ಧೀರತೆಯ ಪ್ರತೀಕವೂ ಹೌದು. ಹೆಸರಿನಂತೆ ದಳಪತಿಯೇ ಆಗಿದ್ದ ಕರ್ನಲ್ ದಳಪತ್ ಸಿಂಗ್ ಯುದ್ಧದಲ್ಲಿ ವೀರಮರಣವನ್ನಪ್ಪಿದರು. ಈ ಯುದ್ಧದಲ್ಲಿ ತೋರಿದ ಶೌರ್ಯಕ್ಕೆ ಅವರನ್ನು ‘ಹೀರೊ ಆಫ್ ಹೈಫಾ’ ಎಂದು ಬ್ರಿಟಿಷ್ ಸೈನ್ಯ ಮತ್ತು ಸರ್ಕಾರಗಳು ಹೊಗಳಿವೆ. ಶೌರ್ಯದ ನೆನಪಿಗೆ ದಳಪತ್ ಹಾಗೂ ಅವರೊಡನೆ ಬಲಿದಾನಗೈದ ಇನ್ನಿಬ್ಬರು ಸೈನಿಕರ ಪುತ್ಥಳಿಗಳನ್ನು ದೆಹಲಿಯಲ್ಲಿ ಸ್ಥಾಪಿಸಿದೆ. ಇಂದು ಅದು ತೀನ್ ಮೂರ್ತಿ ಚೌಕ ಎಂದು ಪ್ರಸಿದ್ಧವಾಗಿದೆ.

ಭಾರತ-ಇಸ್ರೇಲ್ ಬಂಧ

ಇಸ್ರೇಲ್ ಪ್ರತಿವರ್ಷವೂ ಹೈಫಾ ದಿನಾಚರಣೆ ಆಚರಿಸಿ ಭಾರತೀಯ ಸೈನಿಕರಿಗೆ ಧನ್ಯವಾದ ಅರ್ಪಿಸುತ್ತದೆ. ಅಷ್ಟೇ ಅಲ್ಲ, ತಮ್ಮ ರಾಷ್ಟ್ರ ಸ್ಥಾಪನೆಗೆ ಅಡಿಗಲ್ಲು ಹಾಕಿದ ಭಾರತೀಯ ಸೈನಿಕರಿಗಾಗಿ ಸ್ಮಾರಕವನ್ನೂ ನಿರ್ವಿುಸಿದೆ. ಇದೇ ಕಾರಣಕ್ಕೆ, ವಿವಿಧ ಸಮಯಗಳಲ್ಲಿ ಇಸ್ರೇಲ್ ಭಾರತವನ್ನು ಬೆಂಬಲಿಸುತ್ತಲೇ ಬಂದಿದೆ. 1999ರಲ್ಲಿ ಅಮೆರಿಕ ಹಾಗೂ ವಿಶ್ವ ಸಮುದಾಯ ವಿರೋಧ ವ್ಯಕ್ತಪಡಿಸಿದರೂ, ಕಾರ್ಗಿಲ್ ಯುದ್ಧದ ವೇಳೆ ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸಿತ್ತು. 1998ರ ಅಣ್ವಸ್ತ್ರ ಪರೀಕ್ಷೆಯನ್ನು ಅಂತಾರಾಷ್ಟ್ರೀಯ ಸಮುದಾಯ ವಿರೋಧಿಸಿದಾಗಲೂ ಭಾರತದ ಬೆಂಬಲಕ್ಕೆ ನಿಂತಿತ್ತು. ಇದೀಗ, ಭಾರತದ ವಿದೇಶಾಂಗ ನಿಲುವಿನಲ್ಲಿಯೂ ಸಾಕಷ್ಟು ಬದಲಾವಣೆಗಳಾಗಿವೆ, ಕೇಂದ್ರ ಸರ್ಕಾರ ಇಸ್ರೇಲ್​ನತ್ತ ಸ್ನೇಹಹಸ್ತವನ್ನು ಚಾಚಿದೆ. ಈ ಮೂಲಕ, ಭಾರತ-ಇಸ್ರೇಲ್ ಬಂಧ ಮತ್ತೊಮ್ಮೆ ವಿಸ್ತಾರ ಪಡೆಯುತ್ತಿದೆ.

ಯಹೂದಿಗಳಿಗೆ ಆಶ್ರಯ

ಭಾರತಕ್ಕೆ ಬಂದ ಮೊದಲ ವಿದೇಶಿ ಧರ್ಮ ಯಹೂದಿ. ಕ್ರಿಸ್ತಶಕ 72ರಲ್ಲಿ ಅಸಿರಿಯಾ ಮತ್ತು ಬ್ಯಾಬಿಲೊನಿಯಾ ಆಕ್ರಮಣಕ್ಕೆ ತುತ್ತಾಗಿ ತಮ್ಮದೆಲ್ಲವನ್ನೂ ಕಳೆದುಕೊಂಡು ಭಾರತಕ್ಕೆ ಬಂದವರು ಯಹೂದಿಗಳು. ಅವರು ಭಾರತಕ್ಕೆ ಬಂದಾಗ ಇಲ್ಲಿನ ರಾಜ ನಮ್ಮಲ್ಲೇ ಜನಸಂಖ್ಯೆ ಹೆಚ್ಚಾಗಿದೆ ಎಂಬುದನ್ನು ಬಿಂಬಿಸುವಂತೆ ಹಾಲು ತುಂಬಿದ ಪಾತ್ರೆಯನ್ನು ಅವರ ಮುಂದೆ ಇಟ್ಟಾಗ ವಲಸಿಗ ಇಸ್ರೇಲಿಗಳ ನಾಯಕ ಆ ಪಾತ್ರೆಯೊಳಗೆ ಸಕ್ಕರೆ ಬೆರೆಸಿದನಂತೆ. ನಿಜಕ್ಕೂ ಯಹೂದಿಯರು ಭಾರತವೆಂಬ ಹಾಲಿನ ಪಾತ್ರೆಯಲ್ಲಿ ಸಕ್ಕರೆಯಂತೆ ಬೆರೆತವರು. ಭಾರತದಲ್ಲಿದ್ದ ಯಹೂದಿಗಳನ್ನು ಪೋರ್ಚುಗೀಸರ ಆಕ್ರಮಣ, ಟಿಪ್ಪು ಸುಲ್ತಾನನ ಮತಾಂತರ ಯತ್ನಗಳಿಂದ ಭಾರತೀಯರೇ ರಕ್ಷಿಸಿದ್ದುದನ್ನು ಯಹೂದಿಗಳು ಇಂದಿಗೂ ನೆನೆಯುತ್ತಾರೆ. ವಿಪರ್ಯಾಸವೆಂದರೆ, ನಮ್ಮ ಪಠ್ಯಪುಸ್ತಕಗಳಲ್ಲಿ ಗಜನಿ ಮೊಹಮದನ ದಾಳಿ, ಮೊಘಲರ ಆಕ್ರಮಣ, ಔರಂಗಜೇಬನ ಆಡಳಿತಕ್ಕೆ ಮಹತ್ವ ನೀಡಲಾಗಿದೆಯೇ ಹೊರತು, ಭಾರತಿಯ ರಾಜರು ಹಾಗೂ ಸೇನೆಯ ಕ್ಷಾತ್ರ ಪ್ರದರ್ಶನಗಳ ಬಗ್ಗೆ ಯಾವುದೇ ಮನ್ನಣೆ ನೀಡಿಲ್ಲ.

ಮೊದಲ ವಿಶ್ವ ಮಹಾಯುದ್ಧದ ವೇಳೆ ಇಸ್ರೇಲ್​ನ ಹೈಫಾ ನಗರದಲ್ಲಿ ಒಟೋಮನ್ ಟರ್ಕರ ವಿರುದ್ಧ 1918ರ ಸೆ. 23ರಂದು ನಡೆದ ಸಮರದಲ್ಲಿ ಮೈಸೂರು, ಜೋಧಪುರ ಮತ್ತು ಹೈದರಾಬಾದ್ ಸಂಸ್ಥಾನದ ಸೈನಿಕರು ಭಾಗಿಯಾಗಿದ್ದರು. ಈ ಯುದ್ಧದಲ್ಲಿ ವಿಜಯ ಕಹಳೆ ಮೊಳಗಿಸಿ, ಹೈಫಾ ನಗರವನ್ನು ವಶಪಡಿಸಿಕೊಂಡಿದ್ದು ಹೆಮ್ಮೆಯ ಸಂಗತಿ. ಈ ಐತಿಹಾಸಿಕ ಜಯವನ್ನು ಮತ್ತು ಹುತಾತ್ಮರಾದವರ ತ್ಯಾಗವನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

| ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು ರಾಜವಂಶಸ್ಥ

ಯುದ್ಧಕ್ಕೆ ಕಾರಣವೇನು?

ಯಹೂದಿಗಳ ಮೂಲನೆಲೆಯಾದ ಇಸ್ರೇಲ್ ಸಾವಿರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ಒಳಪಟ್ಟಿತ್ತು. ಮಧ್ಯಯುಗದಲ್ಲಿ ಒಟೋಮನ್ ಟರ್ಕರು ಇಸ್ರೇಲನ್ನು ಆಳುತ್ತಿದ್ದರು. ಕ್ರಿ.ಶ. 1516ರಿಂದ ನಾಲ್ಕು ಶತಮಾನಗಳ ಕಾಲ ಇಸ್ರೇಲ್ ಪರಕೀಯರ ಆಡಳಿತಕ್ಕೆ ಒಳಪಟ್ಟಿತ್ತು. ಅದಕ್ಕೆ ಮುಕ್ತಿ ದೊರಕಿಸಲು ನಡೆದ ಹಲವು ಯುದ್ಧಗಳ ಪೈಕಿ 1918ರಲ್ಲಿ ನಡೆದ ಹೈಫಾ ಕದನ ಮಹತ್ವದ್ದು. ಮೊದಲನೇ ಮಹಾಯುದ್ಧ ನಡೆಯುತ್ತಿದ್ದ ಸಮಯದಲ್ಲೇ ಈ ಯುದ್ಧವೂ ನಡೆಯಿತು. ಬ್ರಿಟಿಷರ ವಸಾಹತಾಗಿದ್ದ ಭಾರತವೂ ಅನಿವಾರ್ಯವಾಗಿ ಮಿತ್ರಪಡೆಗಳ ಪರವಾಗಿ ಅಂದರೆ ಇಸ್ರೇಲ್ ಪರವಾಗಿ ರಣರಂಗಕ್ಕೆ ಇಳಿಯಬೇಕಾಯಿತು.

ಹೈಫಾ ಯೋಧರ ಕುಟುಂಬಕ್ಕೆ ಸನ್ಮಾನ

ಹೈಫಾ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ಹೈಫಾ ಯುದ್ಧದ ಶತಮಾನೋತ್ಸವ ಕಾರ್ಯಕ್ರಮವನ್ನು ಸೆ. 23 ರಂದು ಸಂಜೆ 6ಕ್ಕೆ ಮೈಸೂರಿನ ರಾಜೇಂದ್ರ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಯುದ್ಧದಲ್ಲಿ ಭಾಗಿಯಾದ ಯೋಧರ ಕುಟುಂಬ ವರ್ಗದವರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು. ಹೈಫಾ ಶತಮಾನೋತ್ಸವ ಆಚರಣೆ ಸಮಿತಿಗೆ ಮೈಸೂರು ರಾಜಮನೆತದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಗೌರವ ಅಧ್ಯಕ್ಷರಾಗಿದ್ದು, ವಿಶ್ವಪ್ರಸಾದ್ ಆಳ್ವ ಅಧ್ಯಕ್ಷ, ಹರೀಶ್ ಶೆಣೈ ಕಾರ್ಯದರ್ಶಿಯಾಗಿದ್ದಾರೆ.

ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ವಿುಸಿ

ಹೈಫಾ ಯುದ್ಧದಲ್ಲಿ ಹುತಾತ್ಮರಾದ ಯೋಧರ ಸ್ಮರಣೆಗೆ ನವದೆಹಲಿಯಲ್ಲಿ ಸ್ಮಾಕರಕ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ರಾಜ್ಯ ಸರ್ಕಾರ ಮೈಸೂರಿನಲ್ಲೂ ಸ್ಮಾರಕ ನಿರ್ಮಾಣ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ಹೈಫಾ ಶತಮಾನೋತ್ಸವ ಸಮಿತಿ ನಿರ್ಧರಿಸಿದೆ.

ಯೋಧರ ಪರಾಕ್ರಮ ತಿಳಿಸುವ ಪ್ರಯತ್ನ

ಮೈಸೂರು ಯೋಧರ ಪರಾಕ್ರಮವನ್ನು ಶಾಲಾ ಮಕ್ಕಳಿಗೆ ತಿಳಿಸಿಕೊಡುವ ಪ್ರಯತ್ನ ಇದೀಗ ಪ್ರಾರಂಭವಾಗಿದೆ. ಯೂತ್ ಫಾರ್ ಸೇವಾ ಸರ್ಕಾರೇತರ ಸಂಸ್ಥೆಯ ಸದಸ್ಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದು, ಜಿಲ್ಲೆಯ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಹೈಫಾ ಯುದ್ಧದ ಕುರಿತು ಮಾಹಿತಿ ನೀಡುತ್ತಿದ್ದಾರೆ. ಇದು ಪೂರ್ಣಗೊಂಡ ನಂತರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಹೈಫಾ ಯುದ್ಧದ ಕುರಿತು ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲು ಉದ್ದೇಶಿಸಲಾಗಿದೆ.