More

  ಇಸ್ರೇಲ್-ಹಮಾಸ್ ನಡುವೆ ಕದನ ವಿರಾಮ ಆರಂಭ; ಕತಾರ್, ಈಜಿಪ್ಟ್ ಮಧ್ಯಸ್ಥಿಕೆ

  ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ 49 ದಿನಗಳ ಯುದ್ಧದ ನಂತರ ಶುಕ್ರವಾರದಿಂದ 4 ದಿನಗಳ ಕಾಲ ಕದನ ವಿರಾಮ ಪ್ರಾರಂಭವಾಗಿದೆ. ಗಾಜಾದಲ್ಲಿ 14 ಸಾವಿರಕ್ಕೂ ಹೆಚ್ಚು ಜನರ ಸಾವಿನ ನಂತರ ಈಗ ಇಸ್ರೇಲ್ ದಾಳಿಯನ್ನು ನಿಲ್ಲಿಸಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 7 ಗಂಟೆಯಿಂದ ಕದನ ವಿರಾಮ ಪ್ರಾರಂಭವಾಗಿದೆ.

  ಕತಾರ್ ಮತ್ತು ಈಜಿಪ್ಟ್ ಮಧ್ಯಸ್ಥಿಕೆಯ ನಂತರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎನ್ನಲಾಗಿದೆ. ಒಪ್ಪಂದದ ಪ್ರಕಾರ ಮೊದಲ ದಿನ 39 ಪ್ಯಾಲೆಸ್ತೀನಿ ಕೈದಿಗಳ ಬದಲಾಗಿ 13 ಇಸ್ರೇಲ್​ನ ಒತ್ತೆಯಾಳು ಗಳನ್ನು ಹಮಾಸ್ ಬಿಡುಗಡೆ ಮಾಡಿದೆ. ಹಮಾಸ್ ಬಿಡುಗಡೆ ಮಾಡಿರುವ ಒತ್ತೆಯಾಳುಗಳ ಪೈಕಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಕಳೆದ ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ನಡೆಸಿ, ಸಾವಿರಾರು ಜನರನ್ನು ಹತ್ಯೆ ಮಾಡಿದ್ದಲ್ಲದೇ, 240 ಜನರನ್ನು ಅಪಹರಣ ಮಾಡಿ ಗಾಜಾಕ್ಕೆ ಕರೆದೊಯ್ದು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. 4 ದಿನಗಳ ಕದನ ವಿರಾಮದ ಸಮಯದಲ್ಲಿ 150 ಪ್ಯಾಲೆಸ್ತೀನ್ ಕೈದಿಗಳನ್ನು ಇಸ್ರೇಲ್ ಬಿಡುಗಡೆ ಮಾಡಲಿದೆ. ಇದರ ಬದಲು ಹಮಾಸ್ 50 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿದೆ. ಅಲ್-ಶಿಫಾ ಆಸ್ಪತ್ರೆಯನ್ನು ತೆರವು ಮಾಡಲು ಒಪ್ಪಂದದಲ್ಲಿ ಹಮಾಸ್ ಷರತ್ತು ವಿಧಿಸಿತ್ತು. ಆದರೆ ಅದನ್ನು ಇಸ್ರೇಲ್ ನಿರಾಕರಿಸಿದೆ. ಪ್ರತಿ 3 ಪ್ಯಾಲೆಸ್ತೀನ್ ಕೈದಿಗಳಿಗೆ ಪ್ರತಿಯಾಗಿ ಇಸ್ರೇಲ್​ನ ಒಬ್ಬ ಒತ್ತೆಯಾಳನ್ನು ಬಿಡುಗಡೆ ಮಾಡುವುದಾಗಿ ಹಮಾಸ್ ಹೇಳಿಕೊಂಡಿದೆ.

  ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲಿ ಸೇನೆಯು ಹಮಾಸ್ ನೌಕಾಪಡೆಯ ಕಮಾಂಡರ್ ಅಮ್ರ್ ಅಬು ಜಲಾಲಾ ಸೇರಿ ಹಲವು ಉಗ್ರರನ್ನು ಗುರುವಾರ ಹತ್ಯೆ ಮಾಡಿದೆ. ಕದನ ವಿರಾಮಕ್ಕೂ ಮುನ್ನ ಸೇನೆ ಈ ಕಾರ್ಯಾಚರಣೆ ನಡೆಸಿದೆ.

  ಎರಡು ತಿಂಗಳು ನಡೆಯಲಿದೆ ಯುದ್ಧ: ಇಸ್ರೇಲ್ ರಕ್ಷಣಾ ಸಚಿವ ಯೋವ್ ಗಲಾಂಟ್ ಅವರು ಸೈನಿಕರನ್ನು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ. ಕದನ ವಿರಾಮ ನಂತರ ಯುದ್ಧವು ಮತ್ತೆ ಪ್ರಾರಂಭವಾದಾಗ ನಾವು ಪೂರ್ಣ ಬಲದಿಂದ ಹೋರಾಡಬೇಕು. ಈ ಯುದ್ಧವು ಇನ್ನೂ 2 ತಿಂಗಳು ಮುಂದುವರಿಯು ತ್ತದೆ. ಹಮಾಸ್ ಸಂಪೂರ್ಣವಾಗಿ ನಾಶಪಡಿಸುವುದು ನಮ್ಮ ಗುರಿಯಾಗಿದೆ. ಕದನ ವಿರಾಮದ ಸಮಯದಲ್ಲಿ ಹಮಾಸ್​ನ ಅಡಗುತಾಣಗಳನ್ನು ಪತ್ತೆಹಚ್ಚಿ, ಮತ್ತಷ್ಟು ದಾಳಿಗೆ ಸಿದ್ಧರಾಗುವಂತೆ ಯೋಧರಿಗೆ ಸೂಚನೆ ನೀಡಿದ್ದಾರೆ.

  ಗಾಜಾಕ್ಕೆ ಪರಿಹಾರ ಸಾಮಗ್ರಿ: ಕದನ ವಿರಾಮ ಹಿನ್ನೆಲೆಯಲ್ಲಿ ಪರಿಹಾರ ಸಾಮಗ್ರಿಗಳನ್ನು ಗಾಜಾಕ್ಕೆ ಸಾಗಿಸಲು ನೆರವಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ಪ್ರತಿದಿನ ಇಂಧನ ತುಂಬಿದ 4 ಟ್ರಕ್​ಗಳು ಮತ್ತು ಅಗತ್ಯ ವಸ್ತುಗಳನ್ನು ಗಾಜಾಕ್ಕೆ ಸಾಗಿಸಲಾಗುತ್ತದೆ. 200 ಟ್ರಕ್​ಗಳು ಗಾಜಾವನ್ನು ಪ್ರವೇಶಿಸಲು ಸಜ್ಜಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಸ್ರೇಲಿ ಪಡೆಗಳು ಶಾಲೆಗಳು ಮತ್ತು ಮಸೀದಿಗಳ ಮೇಲೆ ದಾಳಿ ಮಾಡಿವೆ ಎಂದು ಗಾಜಾ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲ್ಲಿ ಸುರಕ್ಷಿತ ಸ್ಥಳವೇ ಇಲ್ಲ. ಪಡಿತರ ಹಾಗೂ ಅಗತ್ಯ ವಸ್ತುಗಳನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್, ನೀರು ಕೊರತೆಯಿಂದ ಗಾಜಾದಲ್ಲಿ ಭೀಕರ ಬರಗಾಲ ತಲೆದೋರಿದೆ ಎಂದು ಅವರು ವಿವರಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts