ನಾವೇ ಇಸ್ರೇಲ್ ಆಗೋಣ…!

Latest News

ಕೆಳ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸಿ

ಸಿರವಾರ ನೀರಾವರಿ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆಸಿರವಾರ: 92ನೇ ವಿತರಣಾ ಕಾಲುವೆಯ ಕೆಳ ಭಾಗಕ್ಕೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ನೀರಾವರಿ ಇಲಾಖೆಯ...

ಬಾಬರಿ ಮಸೀದಿ ಹೆಸರಿನಲ್ಲಿ ನಕಲಿ ಪೋಟೋಗಳು ವೈರಲ್: ಫ್ಯಾಕ್ಟ್​ಚೆಕ್​ನಲ್ಲಿ ಸತ್ಯ ಬಹಿರಂಗ

ನವದೆಹಲಿ: ಅಯೋಧ್ಯೆ-ಬಾಬರಿ ಮಸೀದಿ ಪ್ರಕರಣದ ಸುಪ್ರೀಂಕೋರ್ಟ್​ ತೀರ್ಪು ಹೊರಬೀಳುತ್ತಿದ್ದಂತೆ ಬಾಬರಿ ಮಸೀದಿಯ ಫೋಟೋಗಳು ಇಂಟರ್ನೆಟ್​ನಲ್ಲಿ ಸಾಕಷ್ಟು ಹರಿದಾಡುತ್ತಿವೆ. ಮುಸ್ಲಿಂ ಮಿರರ್ ಇಂಗ್ಲಿಷ್​ ಫೇಸ್​​ಬುಕ್​ ಪೇಜ್​ನಲ್ಲಿ...

ಫೋಟೋ ಗೀಳಿಗೆ ಕಲಾಕೃತಿಗಳು ಹಾಳು

ಶಿವಮೊಗ್ಗ: ನಗರ ಹೊರವಲಯದ ಮುದ್ದಿನಕೊಪ್ಪ ಟ್ರೀ ಪಾರ್ಕ್ ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಪ್ರತಿದಿನ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ....

ಪಕ್ಷ ಸಂಘಟನೆಗೆ ಕಾಗೋಡು ನಾಯಕತ್ವ ಅಗತ್ಯ

ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಕಾಗೋಡು ತಿಮ್ಮಪ್ಪ ಅವರ ನಾಯಕತ್ವ ಅಗತ್ಯ. ಈ ನಿಟ್ಟಿನಲ್ಲಿ 2ನೇ ಹಂತದ ನಾಯಕರೂ ಸೇರಿ ಪಕ್ಷದ...

ವಿಜಯನಗರ ಜಿಲ್ಲೆ ರಚನೆ ವಿಚಾರ ಚುನಾವಣಾ ಸ್ಟಂಟ್, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪ

ಬಳ್ಳಾರಿ: ವಿಜಯನಗರ ಜಿಲ್ಲೆ ರಚನೆ ವಿಚಾರ ಚುನಾವಣೆಯ ಸ್ಟಂಟ್ ಆಗಿದೆ ಎಂದು ಮಾಜಿ ಸಂಸದ, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಅಭಿಪ್ರಾಯಪಟ್ಟರು....

ಚೀನಾ, ಇಸ್ರೇಲ್ ಎಂದು ನಿರೀಕ್ಷಿಸುವ ಬದಲು ಭಾರತದ ಪಾರಂಪರಿಕ ಕೃಷಿಯಲ್ಲಿನ ಜ್ಞಾನವನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ರೈತ ಸ್ವತಃ ಇಸ್ರೇಲ್ ಆಗಿ ಇತರರಿಗೆ ಮಾದರಿ ಆಗಬಹುದು. ಹೊಸತನದ ಯೋಚನೆಗಳು ನಮ್ಮಲ್ಲಿ ಇರಬೇಕಷ್ಟೇ…!

ಸರ್ಕಾರಿ ಉದ್ಯೋಗವನ್ನು ತ್ಯಜಿಸಿ ಕೃಷಿಯಲ್ಲಿ ಯಶಸ್ಸು ಕಂಡಿರುವ ಕೋಲಾರ ತಾಲೂಕಿನ ಹೋಳೂರು ಹೋಬಳಿಗೆ ಸೇರಿದ ಅಶೋಕ್ ಕುಮಾರ್ ರಾಂಪುರ ಅವರ ಮಾತುಗಳಿವು.

ತನ್ನಲ್ಲಿ ಹಳೆಯ (ಔಟ್​ಡೇಟೆಡ್) ಹನಿ ನೀರಾವರಿ ಪದ್ಧತಿಯನ್ನು ಮಾತ್ರವೇ ಇಸ್ರೇಲ್ ಬಿಟ್ಟುಕೊಟ್ಟಿದೆ. ಇಸ್ರೆಲ್​ಗಿಂತ ಉತ್ತಮ ತಂತ್ರಜ್ಞಾನ ನಮ್ಮ ರೈತರಲ್ಲಿದೆ. ಆದರೆ ರೈತರ ತಂತ್ರಜ್ಞಾನವನ್ನು ಕೃಷಿ ವಿಜ್ಞಾನಿಗಳು, ಸರ್ಕಾರ ಒಪ್ಪಲು ತಯಾರಿಲ್ಲ. ಇದೇ ಪ್ರಮುಖ ಸಮಸ್ಯೆ. ನಾನು ಸರ್ಕಾರಿ ಉಪನ್ಯಾಸಕನಾಗಿದ್ದೆ. ವರ್ಗಾವಣೆ ಆದ ಸಂದರ್ಭದಲ್ಲಿ ನಮ್ಮ ಪೂರ್ವಿಕರ 70 ಎಕರೆ ಭೂಮಿಯಲ್ಲಿ ಕೃಷಿ ಮಾಡಲು ಮುಂದಾದೆ. ಹಲವು ಪ್ರಯೋಗಗಳನ್ನು ಮಾಡಿ ಯಶಸ್ಸು ಸಾಧಿಸಿದೆ ಎಂದು ತಾವು ನಡೆದು ಬಂದ ಹಾದಿಯನ್ನು ವಿವರಿಸಿದರು.

ಕೃಷಿಯಲ್ಲಿ ಒಂದೇ ಬೆಳೆಗೆ ಅವಲಂಬಿತರಾಗಬಾರದು. ನನ್ನ ಜಮೀನು ಮಳೆಯಾಶ್ರಿತ ಪ್ರದೇಶವಾಗಿರುವ ಕೋಲಾರ ಜಿಲ್ಲೆಯಲ್ಲಿದ್ದು, ಮಳೆ ಬರದಿದ್ದರೂ ಬೆಳೆಯಬಹುದಾದ ನೇರಳೆಯನ್ನು ನಾನು ಬೆಳೆದಿದ್ದೇನೆ. ಎರಡು ವರ್ಷ ಮಳೆ ಕೈಕೊಟ್ಟರೂ ಬೆಳೆಯಬಹುದಾದ ಮಾವು ನೆಟ್ಟಿದ್ದೇನೆ. ಇದಲ್ಲದೇ ಉಪಕಸುಬುಗಳಾಗಿ ಕೋಳಿ, ಮೇಕೆ ಸಾಕಾಣಿಕೆ ಮಾಡಿದ್ದೇನೆ. ರೇಷ್ಮೆ ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವುದರಿಂದ ವರ್ಷವಿಡೀ ಆದಾಯ ನನಗಿದೆ. ನನ್ನ 60ನೇ ವಯಸ್ಸಿನಲ್ಲಿ ಯಾರೂ ನನ್ನ ಕೈಹಿಡಿಯದಿದ್ದರೂ 10 ರಿಂದ 20 ಕೋಟಿ ರೂ.ಗಳ ಆದಾಯ ಬರುವಷ್ಟು ಮಟ್ಟಿಗೆ ನಾನು ಕೃಷಿಯಲ್ಲಿ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತಿದ್ದೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡಿದರು. ಕುಬ್ಜಮರಗಳನ್ನು ಬೆಳೆಸುವುದರಿಂದ ಕೃಷಿಕಾರ್ವಿುಕರು ಲಭ್ಯವಾಗದಿದ್ದರೂ ಸ್ವಾವಲಂಬಿಗಳಾಗಿ ನಿರ್ವಹಿಸಬಹುದು. ನಮ್ಮ ತೋಟದಲ್ಲಿ ನೇರಳೆ ಮರಗಳು 10 ಅಡಿಗಳಷ್ಟಿದ್ದು, ದಿನವೊಂದಕ್ಕೆ 1 ಟನ್ ನೇರಳೆಯನ್ನು ಏಕಾಂಗಿಯಾಗಿ ಕೀಳಬಹುದಾಗಿದೆ. ಹನಿ ನೀರಾವರಿ ಪದ್ಧತಿಯನ್ನು ನಾವು ಮೊದಲಿನಿಂದಲೇ ಅಳವಡಿಸಿಕೊಂಡು ಬಂದಿದ್ದೇವೆ. ಭೂಮಿಗೆ ನೀರುಣಿಸುವ ಬದಲು ಬೇರಿಗೆ ನೀರುಣಿಸುತ್ತಿದ್ದೇವೆ. ಇಂಥ ಅನೇಕ ಸಂಗತಿಗಳು ರೈತರಿಗೆ ಅನುಕೂಲವಾಗುತ್ತವೆ. ಅವುಗಳನ್ನು ಅಳವಡಿಸಿಕೊಳ್ಳಲು ಸಲಹೆ ಮಾಡಿದರು.

ಕೃಷ್ಣ ಮಾತನಾಡಿ, ನಮ್ಮದು ಶೂನ್ಯ ಬಂಡವಾಳ ಕೃಷಿ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಂತ್ರಜ್ಞಾನ ಅಳವಡಿಸಿಕೊಳ್ಳುವಷ್ಟರ ಮಟ್ಟಿಗೆ ಎಲ್ಲ ರೈತರು ಬೆಳೆದಿಲ್ಲ. ನಾಟಿ ಕೃಷಿಯೇ ತಾಂತ್ರಿಕ ಕೃಷಿಗಿಂತ ಮೇಲು ಎಂದರು. ಪ್ರಕಾಶ್ ಕಮ್ಮರಡಿ, ನೀರಿನ ಅತಿಯಾದ ಬಳಕೆಯೂ ಅಪರಾಧ. ರೈತರು ನೀರಿನ ಸದ್ಬಳಕೆ ಮಾಡಿಕೊಳ್ಳಬೇಕು. ಸರ್ಕಾರ ಇಸ್ರೆಲ್ ಕೃಷಿ ಪದ್ಧತಿ ಅಳವಡಿಕೆಗೆ ಉತ್ಸುಕವಾಗಿದ್ದು, ಫಲಿತಾಂಶ ಕಾದುನೋಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹುಳ ತಿಂದ ಆಹಾರ ನಾವೂ ತಿನ್ನಬಹುದು

ಆರ್ಗ್ಯಾನಿಕ್ ಮಳಿಗೆಗಳಲ್ಲಿ ಸಿಗುವ ಎಲ್ಲ ಆಹಾರಕ್ಕೂ ಗ್ರಾಹಕರು ಅನುಮಾನ ಪಡಬೇಕಿಲ್ಲ. ಅಷ್ಟೂ ಮೀರಿ ಅನುಮಾನವಿದ್ದಲ್ಲಿ ನೇರವಾಗಿ ರೈತರ ಜಮೀನಿಗೆ ತೆರಳಿ ಖರೀದಿಸುವ ಪ್ರವೃತ್ತಿ ಬೆಳೆಸಿಕೊಳ್ಳಿ. ಮಹಾನಗರಗಳಲ್ಲಿ ಕಂಡುಬರುವ ಆರ್ಗ್ಯಾನಿಕ್ ಶಾಪ್​ಗಳಲ್ಲಿ ವಸ್ತುಗಳನ್ನು ಖರೀದಿಸಿಯೂ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಹೊಂದುವ ಜನರ ಚಿಂತೆಯನ್ನು ದೂರಗೊಳಿಸುವ ಸರಳ ವಿಧಾನಗಳನ್ನು ತಿಳಿಸಿಕೊಟ್ಟರು ಅಶೋಕ ಕುಮಾರ್.

ನವಣೆ, ರಾಗಿ, ಅರ್ಕ ಸೇರಿ ಸಿರಿಧಾನ್ಯಗಳನ್ನು ರಾಸಾಯನಿಕ ಸಿಂಪಡಿಸಿ ಬೆಳೆಯಲು ಸಾಧ್ಯವೇ ಇಲ್ಲ. ಅವುಗಳಿಗೆ ರಾಸಾಯನಿಕ ಬಳಸಿದರೆ ಅವುಗಳು ಬೆಳೆಯುವುದೂ ಇಲ್ಲ. ಹೀಗಾಗಿ ಸಿರಿಧಾನ್ಯಗಳನ್ನು ಖರೀದಿಸುವ ವೇಳೆ ಗ್ರಾಹಕರು ಯಾವುದೇ ಅನುಮಾನ ಪಡಬೇಕಿಲ್ಲ. ಆದರೆ ತರಕಾರಿ ವಿಚಾರದಲ್ಲಿ ಸಾವಯವ ಎಂಬುದನ್ನು ನಿರ್ಧರಿಸಬೇಕಾದರೆ ಗ್ರಾಹಕರಿಗೆ ಬೆಳೆಗಳ ಕುರಿತಾಗಿ ಜ್ಞಾನವಿರಬೇಕು. ಆರ್ಗ್ಯಾನಿಕ್ ಪರೀಕ್ಷೆಗೆ ಸುಲಭ ತಂತ್ರಜ್ಞಾನ ಲಭ್ಯವಿಲ್ಲ. ಹೀಗಾಗಿ ರೈತರ ಬಳಿ ತೆರಳಿ ಖರೀದಿಸುವುದನ್ನು ರೂಢಿಸಿಕೊಂಡರೆ ತಪ್ಪಿಲ್ಲ ಎಂದು ಹೇಳಿದರು. ಹುಳುತಿಂದ ತರಕಾರಿಯನ್ನು ಕಂಡರೆ ನಗರದ ಜನ ಹಿಂಜರಿಯುತ್ತಾರೆ. ಆದರೆ ರಾಸಾಯನಿಕ ಬಳಸಿದ ತರಕಾರಿಯನ್ನು ಹುಳು ತಿನ್ನುವುದಿಲ್ಲ. ಸಾಮಾನ್ಯವಾಗಿ ಬಣ್ಣ ಕಡಿಮೆಯಿರುವ, ಸೊಟ್ಟಸೊಟ್ಟಗಿರುವ, ಕೆಲವು ಹುಳಗಳಿರುವ ತರಕಾರಿಗಳು ಸಾವಯವ ಎನ್ನಬಹುದು. ರಾಸಾಯನಿಕ ಇಲ್ಲದೆ ಬೆಳೆಯಲು ಸಾಧ್ಯವೇ ಇಲ್ಲದ ಕ್ಯಾಬೇಜ್, ಕಾಲಿಫ್ಲವರ್ ಮತ್ತು ಕ್ಯಾಪ್ಸಿಕಮ್ಳನ್ನು ತಿನ್ನದೇ ಇರುವುದೇ ಉತ್ತಮ ಎಂಬ ಸಲಹೆ ಸಂವಾದದಲ್ಲಿ ವ್ಯಕ್ತವಾಯಿತು.

ಕೃಷ್ಣ ಮಾತನಾಡಿ, ನಮ್ಮ ಭೂಮಿಯಲ್ಲಿ ಜೀವಾಮೃತವನ್ನು ಸಿಂಪಡಿಸಿ ಕೃಷಿ ಮಾಡಲಾಗುತ್ತಿದೆ. ಯಾವುದಕ್ಕೂ ನಾವು ಹೊರಗಿನದನ್ನು ಅವಲಂಬಿಸುವುದಿಲ್ಲ. ಪೂರ್ಣ ಪ್ರಮಾಣದಲ್ಲಿ ಶ್ರಮವಹಿಸಿ ಸ್ವಾವಲಂಬಿಯಾದಲ್ಲಿ ಸಾವಯವ ಕೃಷಿಯಲ್ಲಿ ಯಶಸ್ಸು ಕಾಣಬಹುದು. ಸಾವಯವ ಕೃಷಿ ಪದ್ಧತಿಯನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ನಿಟ್ಟಿನಲ್ಲಿ ವರ್ಷದಲ್ಲಿ ಒಂದು ಬಾರಿ ಕೃಷಿ ಮೇಳವನ್ನು ಸಹ ನಮ್ಮ ಭೂಮಿಯಲ್ಲಿ ಆಯೋಜಿಸಿ ತಜ್ಞರ ಮೂಲಕ ಆರೋಗ್ಯಯುತ ಆಹಾರದ ಬಗ್ಗೆ ವಿವರಿಸಲಾಗುತ್ತಿದೆ ಎಂದರು.

ಸಾವಯವ ಇದ್ದರೆ ಮಣ್ಣು ಪರೀಕ್ಷೆಯ ಚಿಂತೆ ಬೇಡ

ದುಶ್ಚಟಗಳನ್ನು ಹೊಂದಿದ ದೇಹಕ್ಕೆ ಮಾತ್ರವೇ ಆಹಾರದ ತೊಂದರೆ ಕಾಡಲು ಸಾಧ್ಯ. ಆದರೆ ಆರೋಗ್ಯಪೂರ್ಣ ಜೀವನಶೈಲಿ ರೂಢಿಸಿಕೊಂಡವರಿಗೆ ಯಾವುದರ ಭಯ…? ಹಾಗೆಯೇ ಮಣ್ಣು ಕೂಡ. ವಿಷಮುಕ್ತ ಕೃಷಿಯನ್ನು ಅಳವಡಿಸಿಕೊಂಡವರು ಮಣ್ಣಿನ ಫಲವತ್ತತೆಯ ಬಗ್ಗೆ ಚಿಂತಿಸುವುದು ಬೇಕಾಗಿಲ್ಲ, ಹಾಗಂತ ಮಣ್ಣು ಪರೀಕ್ಷೆ ತಪ್ಪೂ ಅಲ್ಲ….! ಮಣ್ಣು ಪರೀಕ್ಷೆ ಕುರಿತು ತಜ್ಞರು, ಪ್ರಗತಿಪರ ಕೃಷಿಕರಿಂದ ವ್ಯಕ್ತವಾದ ಸಲಹೆಗಳಿವು. ಮಣ್ಣಿನ ಫಲವತ್ತತೆಯನ್ನು ತಿಳಿದು, ಅದಕ್ಕೆ ಹೊಂದುವ ಬೆಳೆ ಯಾವುದು ಎಂಬುದನ್ನು ಅರಿಯುವುದಕ್ಕೆ ಮಣ್ಣಿನ ಪರೀಕ್ಷೆ ಉತ್ತಮ. ಹಾಗಂತ ಅದು ಅನಿವಾರ್ಯವೂ ಅಲ್ಲ ಎಂಬ ಸಲಹೆಗಳು ವ್ಯಕ್ತವಾದವು.

ಪ್ರಕಾಶ ಕಮ್ಮರಡಿ, ಮಣ್ಣಿನ ಗುಣಮಟ್ಟವನ್ನು ತಿಳಿದುಕೊಳ್ಳಲು ಮಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು. ಅದರಿಂದ ನಷ್ಟವಂತೂ ಇಲ್ಲ ಎಂದರೆ, ಸಿ.ಪಿ. ಕೃಷ್ಣ, ರಾಸಾಯನಿಕ ಬಳಸಿದ್ದ ಮಣ್ಣು ಎಷ್ಟು ಫಲವತ್ತತೆಯನ್ನು ಹೊಂದಿದೆ ಎಂಬುದನ್ನು ಅರಿಯಲು ಮಣ್ಣು ಪರೀಕ್ಷೆ ಅಗತ್ಯವಾಗಿದೆ ಎಂದರು.

ಸಾಲಮನ್ನಾ ಜೀವರಕ್ಷಕವೇ ಹೊರತು ಜೀವನ ಪದ್ಧತಿಯಲ್ಲ

ರೈತರು ಬ್ಯಾಂಕ್​ಗಳಿಂದ ಪಡೆದ ಕೃಷಿ ಸಾಲಮನ್ನಾ ಅಗತ್ಯಕ್ಕಿಂತಲೂ ಹೆಚ್ಚು ಪ್ರಚಾರ ಪಡೆದು ರಾಜಕೀಯ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ. ಸಂಕಷ್ಟದಲ್ಲಿರುವ ರೈತರನ್ನು ಕಾಪಾಡಲು ಸಾಲಮನ್ನಾ ಮಾಡುವುದು ಅಪರಾಧವಲ್ಲ, ಇದು ರೈತರ ಹಕ್ಕು ಎಂದು ಕೆಲವರು ವಾದಿಸಿದರೆ, ಇದರಿಂದ ಆರ್ಥಿಕತೆಗೆ ಹೊಡೆತ ಬೀಳುವ ಜತೆಗೆ ರೈತರನ್ನು ಸೋಮಾರಿಗಳಾಗಿ ಮಾಡಿದಂತಾಗುತ್ತದೆ ಎಂಬುದು ಪ್ರತಿವಾದ. ಈ ಕುರಿತು ಮೂವರೂ ತಮ್ಮ ಅನಿಸಿಕೆ ಹಂಚಿಕೊಂಡಿದ್ದು ಹೀಗೆ:

ಸಿ.ಪಿ. ಕೃಷ್ಣ: ರೈತ ಬೆಳೆದ ಬೆಲೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೆ ಕೈಸುಟ್ಟುಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸಾಲಮನ್ನಾ ಮಾಡುವುದು ಅನಿವಾರ್ಯ ಎಂಬಂತಾಗಿಬಿಟ್ಟಿದೆ. ಸಾಲ ಪಡೆಯುವುದು, ಸಾಲಮನ್ನಾಕ್ಕಾಗಿ ಕಾಯುತ್ತ ಕೂರುವುದು ನಡೆದಿದೆ. ಬೇರೆ ಬೆಳೆ ಬೆಳೆಯಲೂ ಅವನ ಕೈಯಲ್ಲಿ ಹಣ ಇರುವುದಿಲ್ಲ. ಇದೇ ಕಾರಣಕ್ಕೆ ಎಲ್ಲ ಕಾಲಕ್ಕೂ ಸಾಲಮನ್ನಾ ಅಂಟಿಕೊಂಡೇ ಬರುತ್ತಿದೆ. ಬೇರೆ ವ್ಯವಸ್ಥೆ ರೂಪಿಸಲು ಯಾರೂ ಚಿಂತನೆ ನಡೆಸುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳಲು ಸಾಲಮನ್ನಾ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಯಾರಾದರೂ ಸಾಲಮನ್ನಾ ಮಾಡದಿದ್ದರೆ ಬೇರೆಯವರು ಅವನ ಹೆಸರಿನಲ್ಲಿ ಸಾಲ ಪಡೆದು ಮನ್ನಾ ಆಗುತ್ತದೆ ಎಂದು ಕಾಯುತ್ತ ಕೂರುವುದು ಮಾಮೂಲಾಗಿದೆ. ಮೊದಲು ಇಂತಹ ಮನಸ್ಥಿತಿ ಬಿಡಿ. ಬೇರೆ ಪದ್ಧತಿಯತ್ತ ಹೊರಳಿದರೆ ರೈತ ಉದ್ಧಾರವಾಗಲು ಸಾಧ್ಯ. ರೈತನ ದುಡಿಮೆಗೆ ತಕ್ಕ ಪ್ರತಿಫಲ ನೀಡಿದರೆ ಸಾಲ, ಸಬ್ಸಿಡಿ ಯಾವುದೂ ಬೇಕಾಗಿಲ್ಲ. ಎಲ್ಲರನ್ನೂ ಸಾಕಿ, ಅವನೂ ಆರಾಮಾಗಿದ್ದು, ಅವನೇ ಸಾಲ ನೀಡುವಂತಾಗುತ್ತಾನೆ.

ಅಶೋಕ್ ಕುಮಾರ್: ರೈತರ ಸಾಲಮನ್ನಾ ಕುರಿತು ಮಾತನಾಡುವಾಗ, ಸಾಲದ ಅವಶ್ಯಕತೆ, ಆರ್ಥಿಕ ಸಂಕಷ್ಟವನ್ನು ನಾನೂ ಒಬ್ಬ ರೈತನಾಗಿ ಹೇಗೆ ಹೇಳುವುದು ತಿಳಿಯುತ್ತಿಲ್ಲ. ರೈತರಿಗೆ ಆರ್ಥಿಕ ಸಂಕಷ್ಟ ಬಂದಿರುವ ಕಾರಣಗಳನ್ನು ಹುಡುಕುತ್ತ ಹೋದರೆ ಸ್ವಲ್ಪ ಮಾಹಿತಿ ಲಭಿಸುತ್ತದೆ. ಕೃಷಿಯಿಂದಲೇ ಆರ್ಥಿಕ ಸಂಕಷ್ಟ ಬರುತ್ತದೆ ಎಂಬುದನ್ನು ಎಲ್ಲ ಪ್ರಕರಣದಲ್ಲೂ ಒಪ್ಪಲು ಸಾಧ್ಯವಿಲ್ಲ. ಕೃಷಿಗೆಂದು ತೆಗೆದುಕೊಂಡ ಸಾಲವನ್ನು ಅದೇ ಕಾರ್ಯಕ್ಕೆ ವಿನಿಯೋಗಿಸಲಾಗಿದೆಯೇ ಎಂಬುದು ಮುಖ್ಯ. ಅದೇ ಕಾರ್ಯಕ್ಕೆ ಖರ್ಚು ಮಾಡಿ, ಪ್ರಾಮಾಣಿಕವಾಗಿ ದುಡಿದರೆ, ಸಾಲ ತೀರಿಸಲಾಗದಂತಹ ಪರಿಸ್ಥಿತಿ ಬರುವುದಿಲ್ಲ. ಈ ನಿಟ್ಟಿನಲ್ಲಿ ಯೋಚನೆ ಮಾಡಬೇಕಿದೆ. ಈ ವ್ಯವಸ್ಥೆ ಬದಲಾವಣೆ ಮಾಡಿಕೊಂಡರೆ, ಸಾಲ ಪಡೆಯುವುದು, ಮನ್ನಾ ಮಾಡುವುದು, ಮನ್ನಾ ಮಾಡಿ ಎಂದು ಅವರಿವರ ದುಂಬಾಲು ಬೀಳುವುದು ನಿಲ್ಲುತ್ತದೆ.

ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ: ಸಾಲದಿಂದ ಯಾವುದೇ ವ್ಯಕ್ತಿ, ದೇಶ ಹೊರತಾಗಿಲ್ಲ. ರೈತರು ಇಂದು ತೀರಿಸಲು ಅಸಾಧ್ಯವಾದ ಋಣದಲ್ಲಿ ಸಿಲುಕಿದ್ದಾರೆ. ಕೇವಲ ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲದ ಪ್ರಮಾಣ, ಒಟ್ಟೂ ಸಾಲದ ಶೇ.50 ಮಾತ್ರ. ಉಳಿದ ಶೇ.50ರಲ್ಲಿ ಖಾಸಗಿ ಸಾಲಗಳು, ಕೈ ಸಾಲಗಳು, ಚಿನ್ನದ ಮೇಲಿನ ಸಾಲಗಳು ಇವೆ. ಐಸಿಯುನಲ್ಲಿರುವ ರೋಗಿಯನ್ನು ಉಳಿಸಲು ಇಂಥದ್ದೇ ಔಷಧಿ ನೀಡು ಎಂದು ಹೇಳುವಷ್ಟು ಸಮಯ ಇರುವುದಿಲ್ಲ. ಮೊದಲಿಗೆ ರೋಗಿ ಉಳಿಯುವುದು ಮುಖ್ಯ. ಅಂತಹ ಅನೇಕ ಕ್ರಮಗಳಲ್ಲಿ ಸಾಲಮನ್ನಾ ಸಹ ಒಂದು.

ಒಂದು ಕಡೆ ಕೃಷಿ ಸಾಲ ಪಡೆಯುವ ರೈತ ಮತ್ತೊಂದೆಡೆ ಯಂತ್ರದ ಸಾಲ ಮಾಡಿರುತ್ತಾನೆ. ಎರಡನ್ನೂ ತೀರಿಸಲು ಖಾಸಗಿ ಸಾಲ, ಅಲ್ಲಿಂದ ಮುಂದೆ ಹೋಗಿ ಚಿನ್ನದ ಮೇಲೆ ಸಾಲ ಪಡೆಯುತ್ತಾನೆ. ಮನೆಯಲ್ಲಿ ಮದುವೆ, ಸಾವಿನ ಸಮಯದಲ್ಲಿ ಲೇವಾದೇವಿಗಾರರಿಂದ ಸಾಲ ಪಡೆದಿರುತ್ತಾನೆ. ಹೀಗೆ ಒಬ್ಬ ರೈತ 7-8 ರೀತಿಯ ಸಾಲ ಮಾಡುತ್ತಾನೆ. ಕೃಷಿ ವ್ಯವಸ್ಥೆಯಲ್ಲಿ ಸಮಸ್ಯೆ ಒಂದೆಡೆಯಾದರೆ, ಹಣಕಾಸು ವ್ಯವಸ್ಥೆಗಳು ಸಾಲದ ಕುರಿತು ರೈತರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿಲ್ಲ. ಆದರೆ ಸಾಲಮನ್ನಾದಿಂದ ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗದಂತೆ ನೋಡಿಕೊಳ್ಳಬೇಕು. ಸಾಲ ಪಡೆದವರು ಕಟ್ಟಬೇಕೊ ಬೇಡವೋ ಎಂದು ಯೋಚಿಸಿದರೆ ಬ್ಯಾಂಕ್​ಗಳು ಏನು ಮಾಡಬೇಕು? ನಮ್ಮದೇ ಸಹಕಾರ ಸಾಲ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಬೇಕು.

ಬೀಜ ಸಂರಕ್ಷಣೆ ಅತಿ ಜರೂರು

ಕೃಷಿ ಲಾಭದಾಯಕವಾಗಬೇಕಾದರೆ ಮೊದಲು ಪ್ರತಿ ರೈತರು ಬೀಜ ಸಂರಕ್ಷಣೆಯತ್ತ ತಮ್ಮ ಗಮನ ಹರಿಸಬೇಕು ಎಂದು ಸಂವಾದದಲ್ಲಿ ಪಾಲ್ಗೊಂಡಿದ್ದ ಮೂವರೂ ತಜ್ಞರು ಅಭಿಪ್ರಾಯಪಟ್ಟರು. ಬೀಜ ಸಂರಕ್ಷಣೆ ಮಾಡಿದರೆ ಕೃಷಿಯ ಮೊದಲ ಹಂತ ಯಶಸ್ವಿಯಾಗುತ್ತದೆ. ಪ್ರತಿ ಗ್ರಾಮಗಳಲ್ಲಿ ಬೀಜಬ್ಯಾಂಕುಗಳು ಸ್ಥಾಪನೆಯಾಗಬೇಕು. ಇಲ್ಲಿ ಸಮುದಾಯ ಬೀಜ, ನಾಟಿ ಬೀಜಗಳನ್ನು ಸಂರಕ್ಷಣೆ ಮಾಡಬೇಕು. ಇದರಿಂದ ಕೃಷಿ ಉತ್ಪನ್ನದ ಗುಣಮಟ್ಟ ಹೆಚ್ಚುತ್ತದೆ ಎಂದು ವಿಜ್ಞಾನಿ ಡಾ. ಪ್ರಕಾಶ್ ಕಮ್ಮರಡಿ ಹೇಳಿದರು.

ಶ್ರೀಗಂಧದ ಆಧಾರ

ಪ್ರಸ್ತುತ ಶ್ರೀಗಂಧಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಅಧಿಕವಾಗಿದೆ. ಸುವಾಸನೆ ಬೀರುವ ಈ ಮರದ ತುಂಡಿಗೆ ಅಧಿಕ ದರ ಇದೆ. ಹೀಗಾಗಿ ರಾಜ್ಯ ಅರಣ್ಯ ಇಲಾಖೆ ರೈತರಿಗೆ ಶ್ರೀಗಂಧದ ಗಿಡಗಳನ್ನು ಬೆಳೆಸಿ ಮಾರಾಟ ಮಾಡಲು ಹೇಳುತ್ತಿದೆ. ರೈತರು ತಮ್ಮ ಜಮೀನಿನ ಬದಿಯಲ್ಲಿ ಶ್ರೀಗಂಧದ ಗಿಡಗಳನ್ನು ಬೆಳೆಸಿದರೆ ದುಡಿಯುವ ವಯಸ್ಸು ಮುಗಿದ ನಂತರ ಮಾರಾಟ ಮಾಡಿ ನೆಮ್ಮದಿಯ ಜೀವನ ಸಾಗಿಸಬಹುದು ಎನ್ನುತ್ತಾರೆ ಅಶೋಕ್ ಕುಮಾರ್. ಹೀಗಾಗಿ ಅವರು ತಮ್ಮ ಜಮೀನಿನಲ್ಲಿ ಶ್ರೀಗಂಧ, ತೇಗ, ಸಿಲ್ವರ್ ಸೇರಿದಂತೆ ವಿವಿಧ ಮರಗಳನ್ನು ಬೆಳೆದಿದ್ದಾರೆ. ತಮಗೆ ದುಡಿಯುವ ವಯಸ್ಸು ಮುಗಿಯುತ್ತಿದ್ದಂತೆ ಬೃಹತ್ ಆಗಿ ಬೆಳೆದಿರುವ ಮರಗಳನ್ನು ಮಾರಾಟ ಮಾಡಿ ಆ ಹಣದಿಂದ ಮಕ್ಕಳನ್ನು ಅವಲಂಬಿಸದೆ ಸ್ವಾವಲಂಬಿ ಬದುಕು ಸಾಗಿಸಬಹುದು ಎಂಬುದು ಅವರ ಚಿಂತನೆ.

ಈರುಳ್ಳಿ ಬೆಳೆಗಾರರ ನೆರವಿಗೆ ಸರ್ಕಾರ

ರಾಜ್ಯದಲ್ಲಿ ಈರುಳ್ಳಿ ಬೆಲೆ ಕುಸಿತವಾದ ಕೂಡಲೇ ಸರ್ಕಾರ ಬೆಳೆಗಾರರ ನೆರವಿಗೆ ಧಾವಿಸಿದೆ. ಸಚಿವ ಸಂಪುಟ ಪ್ರತಿ ಕ್ವಿಂಟಾಲ್ ಈರುಳ್ಳಿಗೆ 700 ರೂಪಾಯಿ ಮೂಲ ಬೆಲೆ ನಿಗದಿ ಮಾಡಿ ಆದೇಶ ಹೊರಡಿಸಿದೆ. ಇದರಂತೆ ರಾಜ್ಯದ ಎಲ್ಲ ಮಾರುಕಟ್ಟೆಯಲ್ಲಿ ಈರುಳ್ಳಿ ಮಾರಾಟವಾಗುತ್ತಿದೆ ಎಂದು ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಮಾಹಿತಿ ನೀಡಿದರು. ರೈತರ ನೆರವಿಗೆ ಸರ್ಕಾರ ಇದೆ. ಆದರೆ ರೈತರು ದಿಢೀರ್ ಎಂದು ಬೆಳೆ ಬೆಳೆದು ಮಾರುಕಟ್ಟೆಗೆ ಸಾಗಿಸುತ್ತಾರೆ. ಹೀಗಾಗಿ ಪೂರೈಕೆ ಅಧಿಕವಾಗಿ ಬೆಲೆ ಕುಸಿಯುತ್ತದೆ. ಇದನ್ನು ತಪ್ಪಿಸಲು ಸರ್ಕಾರ ಯಾವ ಜಿಲ್ಲೆಯಲ್ಲಿ ಯಾವ ಬೆಳೆ ಬೆಳೆಯಬೇಕು ಎಂಬುದನ್ನು ನಿರ್ಧರಿಸುವಂತೆ ವರದಿ ತಯಾರಿಸಲಾಗುತ್ತಿದೆ ಎಂದರು.

ಪಾದರಕ್ಷೆ ಕಥೆ

ಕಡಿಮೆ ಕೋಟ್ ಮಾಡುವ ಕಂಪನಿಯನ್ನು ಆಯ್ದುಕೊಳ್ಳಬೇಕೆಂಬ ಮಾನದಂಡ ಸಾಮಾನ್ಯವಾಗಿ ಟೆಂಡರ್​ನಲ್ಲಿ ಇರುತ್ತದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾರದರ್ಶಕತೆಯ ಕಾಯ್ದೆಯಿದ್ದರೂ ಅಧಿಕಾರಿಗಳು ತೋರುವ ನಿರ್ಲಕ್ಷ್ಯ ಮತ್ತು ಸಬ್ಸಿಡಿ ಹೆಸರಿನಲ್ಲಿ ನಡೆಯುವ ಗೋಲ್ಮಾಲ್​ಗಳ ಕುರಿತಾಗಿಯೂ ಸಂವಾದ ಬೆಳಕು ಚೆಲ್ಲಿತು. ಇದಕ್ಕೆ ಉದಾಹರಣೆಯಾಗಿ ಪ್ರಕಾಶ ಕಮ್ಮರಡಿ ಹೇಳಿದ ಕಥೆಯೊಂದು ಗಮನಸೆಳೆಯಿತು.

ದೇವಸ್ಥಾನದ ಒಳಹೋಗುವ ಮುನ್ನ ನಿಗದಿತ ಸ್ಥಳದಲ್ಲಿ ಪಾದರಕ್ಷೆಗಳನ್ನು ಬಿಟ್ಟು ಜನ ಒಳಕ್ಕೆ ಬರಬೇಕು, ಆಗ ಮಾತ್ರ ದೇವರ ದರ್ಶನ ಎಂಬ ಆದೇಶವನ್ನೇನಾದರೂ ಸರ್ಕಾರ ಹೊರಡಿಸಿದರೆ ಜಾಣ ಅಧಿಕಾರಿಗಳು ಹೊರಭಾಗದ ನಿಗದಿತ ಸ್ಥಳದಲ್ಲಿ ಪಾದರಕ್ಷೆ ಬಿಟ್ಟವರನ್ನು ಮಾತ್ರವೇ ದರ್ಶನಕ್ಕೆ ಬಿಡುತ್ತಾರೆ. ಆಕಸ್ಮಾತಾಗಿ ಬರಿಗಾಲಲ್ಲಿ ಬಂದೆ ಎಂದು ಭಕ್ತ ಹೇಳಿದರೆ ಆದೇಶದಲ್ಲಿ ಅದಕ್ಕೆ ಅವಕಾಶವಿಲ್ಲ. ಹಾಗಾಗಿ ಮನೆಗೆ ಹೋಗಿ ಪಾದರಕ್ಷೆಗಳನ್ನು ತಂದು ನಿಗದಿತ ಸ್ಥಳದಲ್ಲಿ ಬಿಟ್ಟರೆ ಮಾತ್ರವೇ ಪ್ರವೇಶ ಎನ್ನುತ್ತಾರೆ. ಇದು ಸಂದರ್ಭಕ್ಕೆ ಉದಾಹರಣೆಯಾಗಿದ್ದರೂ, ಇಂಥ ಸ್ಥಿತಿ ಸಾಕಷ್ಟು ಕಡೆಯಿದೆ. ಕೆಲವು ವಿಚಾರಗಳಲ್ಲಿ ಇನ್ನೂ ಪ್ರಬುದ್ಧತೆ ಸಾಧಿಸಬೇಕಿದೆ ಎಂದು ಹೇಳಿದರು.

ಒಂದೂವರೆ ಎಕರೆಗೂ 5 ಲಕ್ಷ ಆದಾಯ…!

ಕೃಷಿಯೊಂದಿಗೆ ಉಪಕಸಬು ರೂಢಿಸಿಕೊಂಡವರು ನಿತ್ಯವೂ ಆದಾಯಗಳಿಸಬಹುದು. ಅದಕ್ಕಾಗಿ ಯಾರನ್ನೂ ಅವಲಂಬಿಸುವ ಅಗತ್ಯವಿಲ್ಲ ಎಂಬುದನ್ನು ಸಂವಾದದಲ್ಲಿ ಪಾಲ್ಗೊಂಡ ಇಬ್ಬರೂ ಪ್ರಗತಿಪರ ಕೃಷಿಕರು ಕಂಡುಕೊಂಡಿದ್ದಾರೆ. ಅತೀ ಕಡಿಮೆ ಭೂಮಿ ಎಂದರೆ ಎರಡು ಎಕರೆ ಅಥವಾ ಒಂದು ಎಕರೆ ಭೂಮಿಯಿದ್ದರೆ ಕಾಲುಭಾಗದಷ್ಟು ತಮಗೆ ಬೇಕಾದ ಆಹಾರಗಳನ್ನು ಬೆಳೆದು ಇನ್ನುಳಿದ ಜಾಗವನ್ನು ಉಪಕಸುಬಿಗೆ ಅಂದರೆ, ಕುರಿ, ಕೋಳಿ ಸಾಕಣೆ, ಹಸು ಸಾಕಣೆ, ರೇಷೆ್ಮ, ಜೇನು ಕೃಷಿಗೆ ಬಳಸಿಕೊಳ್ಳಬಹುದು ಎಂದರು.

ಆದಾಯಕ್ಕಾಗಿ ಕುರಿ ಸಾಕಣೆ

ಮಾರುಕಟ್ಟೆಯಲ್ಲಿ ಮಾಂಸಕ್ಕೆ ಬೇಡಿಕೆ ಇದೆ. ಸ್ಪಲ್ಪ ಎಚ್ಚರಿಕೆಯಿಂದ ಹೆಜ್ಜೆ ಇರಿಸಿದರೆ ಮಾಂಸ ಮಾರಾಟ, ತಳಿ ವೃದ್ಧಿಯಿಂದ ಅಧಿಕ ಲಾಭ ಗಳಿಸಬಹುದು ಎಂದು ರೈತ ಅಶೋಕ್ ಕುಮಾರ್ ರಾಂಪುರ ಹಾಗೂ ಕೃಷ್ಣಪ್ಪ. ಸಂವಾದದಲ್ಲಿ ತಮ್ಮ ವಿಚಾರ ಬಿಚ್ಚಿಟ್ಟರು. ಮೊದಲು ರೈತರು ಮೇಕೆ ಹಾಗೂ ಕುರಿ ಯಾವುದನ್ನು ಸಾಕಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಮೇಕೆ ಸಾಕುವುದರಿಂದ ಸುತ್ತಲಿನ ಪರಿಸರಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಕುರಿ ಉತ್ತಮವಾದುದು ಎಂದು ಅಶೋಕ್ ಕುಮಾರ್ ಹೇಳಿದರು. ಕುರಿ ಸಾಕಣೆ ಮಾಡುವವರು ಮೂಲತಃ ತಮ್ಮ ಪ್ರದೇಶದಲ್ಲಿ ಇರುವ ಸ್ಥಳೀಯ ತಳಿಗಳನ್ನೇ ಸಾಕಬೇಕು. ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಬೇರೆ ತಳಿ ತಂದರೆ ವೆಚ್ಚ ಅಧಿಕವಾಗುತ್ತದೆ. ಜಮೀನಿನಲ್ಲಿ ಮೇವು ಬಿತ್ತನೆ ಮಾಡಬೇಕು. ಕಟಾವಿಗೆ ಬಂದ ಮೇವನ್ನು ಕತ್ತರಿಸಿ ಅದಕ್ಕೆ ಉಪ್ಪು ಸೇರಿಸಿ ಬಾಕ್ಸ್​ಗಳಲ್ಲಿ ಸಂಗ್ರಹಿಸಬೇಕು.

ಈ ರೀತಿಯ ಮೇವನ್ನು ಮಳೆಗಾಲದಲ್ಲಿ ಬಳಸಿಕೊಳ್ಳಬಹುದು. ಕುರಿ 15ರಿಂದ 20 ಕೆ.ಜಿ ತೂಕ ಬರುತ್ತಿದ್ದಂತೆ ಮಾರಾಟ ಮಾಡಿದರೆ ಒಳ್ಳೆ ಲಾಭ ದೊರೆಯುತ್ತದೆ ಇದರ ಜೊತೆಗೆ ಕುರಿಯನ್ನು ಮಾಂಸಕ್ಕಿಂತ ತಳಿ ಅಭಿವೃದ್ಧಿಗೆ ಮಾರಾಟ ಮಾಡಿದರೆ ಅಧಿಕ ಲಾಭ ದೊರೆಯುತ್ತದೆ ಎಂದರು.

ಬೆಂಬಲ ಬೆಲೆ ಅಗತ್ಯ

ಸಂವಾದದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡಿರುವ ವಿವಿಧ ಬೆಳೆಗಳ ಬೆಂಬಲ ಬೆಲೆ ಬಗ್ಗೆ ಚರ್ಚೆ ನಡೆಯಿತು. ರೈತ ಅಶೋಕ್ ಕುಮಾರ್ ಹಾಗೂ ಕೃಷ್ಣ ರೈತರ ಬೆಳೆಗೆ ಬೆಂಬಲ ಬೆಲೆ ಬೇಕಿಲ್ಲ. ಅವರಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕರೆ ಸಾಕು ಎಂದರೆ, ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಸಂಕಷ್ಟಕ್ಕೆ ಒಳಗಾಗಿ ನೆಲಕಚ್ಚಿದ ರೈತರನ್ನು ಮೇಲೆತ್ತಲು ಬೆಂಬಲ ಬೆಲೆ ಅಗತ್ಯ ಎಂದು ಪ್ರತಿಪಾದಿಸಿದರು.

ಎಲ್ಲ ಉತ್ಪಾದಕರು ತಾವು ತಯಾರಿಸಿದ ವಸ್ತುಗಳ ಬೆಲೆಯನ್ನು ತಾವೆ ನಿಗದಿಪಡಿಸಿದರೆ ಕೃಷಿ ಉತ್ಪನ್ನಗಳಿಗೆ ಮಾತ್ರ ಕೊಳ್ಳುವವರು ಬೆಲೆ ನಿಗದಿಪಡಿಸುತ್ತಾರೆ. ಇದರಿಂದಲೇ ರೈತರಿಗೆ ಸಮಸ್ಯೆಯಾಗಿರುವುದು. ರೈತ ತನ್ನ ಉತ್ಪನ್ನಕ್ಕೆ ತಾನೇ ಬೆಲೆ ನಿಗದಿ ಮಾಡಿದಾಗ ಮಾತ್ರ ಆತನ ಸಮಸ್ಯೆ ಬಗೆ ಹರಿಯುತ್ತದೆ. ಅಡಿಕೆ ಬೆಲೆ ಕುಸಿದಾಗ ಸರ್ಕಾರ ಕ್ವಿಂಟಾಲ್​ಗೆ 27 ಸಾವಿರ ರೂಪಾಯಿ ಬೆಲೆ ನಿಗದಿಪಡಿಸಿತು. ನಂತರ ಮಾರುಕಟ್ಟೆಯಲ್ಲಿ ಈವರೆಗೂ ಈ ದರಕ್ಕಿಂತ ಅಡಿಕೆ ಬೆಲೆ ಕುಸಿದಿಲ್ಲ. ಆದರೆ ತೊಗರಿಗೆ ನಿಗದಿಪಡಿಸಿದ ಬೆಲೆಯಲ್ಲಿ ಏರಿಳಿತ ಆಗುತ್ತಿದೆ. ಮಾರುಕಟ್ಟೆಯಲ್ಲಿ ಸ್ಥಿರಬೆಲೆ ಬಂದಿಲ್ಲ. ಈ ಬಗ್ಗೆ ಆಯೋಗ ಗಮನಹರಿಸಲಿದೆ ಎಂದರು.

ಕೃಷಿ ಹೊಂಡ ಬೇಕು

ರೈತ ಕೃಷಿಯಲ್ಲಿ ಲಾಭಗಳಿಸಬೇಕಾದರೆ ನೀರಾವರಿ ಕೂಡ ಪ್ರಮುಖವಾದುದು ಎಂದು ತಜ್ಞರು ಒತ್ತಿ ಹೇಳಿದರು. ನೀರನ್ನು ಅತಿಯಾಗಿ ಬಳಕೆ ಮಾಡಿದರೆ ನಷ್ಟ ಅಧಿಕ. ನೀರು ಕಡಿಮೆ ಬಳಸಿ ಕೃಷಿ ಉತ್ಪನ್ನ ತೆಗೆಯುವ ವಿಧಾನವನ್ನು ರೂಢಿಸಿಕೊಳ್ಳಬೇಕು. ಅಧಿಕ ನೀರು ಬಯಸುವ ಆಹಾರ ಧಾನ್ಯಗಳಿಂದ ರೋಗ ಬರುತ್ತದೆ. ಮಳೆಯಾಶ್ರಿತ ಬೆಳೆಗಳ ಬಳಕೆ ದೇಹದ ಆರೋಗ್ಯಕ್ಕೆ ಉತ್ತಮ. ಭತ್ತವನ್ನು ಮಳೆ ನೀರಲ್ಲಿ ಬೆಳೆದರೆ ಚೆನ್ನಾಗಿರುತ್ತದೆ. ನೀರನ್ನು ಇಡೀ ಭೂಮಿಗೆ ಉಣಿಸಬಾರದು ಕೇವಲ ಬೇರುಗಳಿಗೆ ಮಾತ್ರ ಸಿಗುವಂತೆ ನೋಡಿಕೊಳ್ಳಬೇಕು. ಹೀಗಾದಾಗ ಅತ್ಯಮೂಲ್ಯವಾದ ನೀರು ಉಳಿತಾಯವಾಗುತ್ತದೆ. ಕೊಳವೆ ಬಾವಿ ಕೊರೆಸಿ ನೀರು ಮೇಲೆತ್ತುವುದು ಪ್ರಸ್ತುತ ದುಬಾರಿ. ಅಥವಾ ಹೊರಗಡೆಯಿಂದ ನೀರು ತಂದು ಕೃಷಿ ಮಾಡುವುದು ಲಾಭ ಅಲ್ಲ. ಹೀಗಾಗಿ ಕೃಷಿ ಜಮೀನಿನಲ್ಲಿ ರೈತರು ನೀರಿನ ಹೊಂಡ ನಿರ್ವಿುಸಿಕೊಳ್ಳಬೇಕು. ಈ ನೀರಿನಿಂದಲೇ ಇಡೀ ಜಮೀನಿಗೆ ಮಿತವಾಗಿ ಹಾಗೂ ಆಯಾ ಕಾಲಕ್ಕೆ ತಕ್ಕಂತೆ ನೀರು ನೀಡಬೇಕು. ಈ ವರ್ಷ ಕೋಲಾರ ಜಿಲ್ಲೆಯಲ್ಲಿ ಮಳೆ ಪ್ರಮಾಣ ತುಂಬಾ ಕಡಿಮೆ. ಕಳೆದ ವರ್ಷ ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ್ದ ನೀರನ್ನೇ ಅಶೋಕ್ ಕುಮಾರ್ ಅವರು ತಮ್ಮ ಜಮೀನಿಗೆ ಬಳಕೆ ಮಾಡುತ್ತಿದ್ದಾರೆ. ಮಾವು ಬೆಳೆಗೆ ಎಲ್ಲ ಕಾಲದಲ್ಲೂ ನೀರು ಬಿಡಬಾರದು. ಹೂ ಈಚು ಕಾಯಿಯಾಗಿ ಪರಿವರ್ತನೆಯಾಗುವ ವೇಳೆ ಕೇವಲ ಬೇರಿಗೆ ನೀರು ಕೊಟ್ಟರೆ ಸಾಕು. ಇದರಿಂದ ಒಳ್ಳೆ ಫಸಲು ಪಡೆಯಬಹುದು ಎಂದು ತಮ್ಮ ಅನುಭವ ಹಂಚಿಕೊಂಡರು.

ಹೊರಗಿನಿಂದ ನೀರು ತರಬಾರದು ಎಂಬುದು ಕೃಷಿಕರ ಮೂಲಮಂತ್ರವಾಗಬೇಕು. ‘ಹೊರಗಿನಿಂದ’ ಎಂದರೆ ದೂರದ ನದಿಯಿಂದ, ಕೆರೆಯಿಂದ ಎಂಬುದರಿಂದ ಮೊದಲುಗೊಂಡು, ಸ್ವಂತ ಹೊಲದಲ್ಲೆ 2,000 ಅಡಿ ಆಳದಿಂದ ನೀರೆತ್ತುವುದೂ ಸೇರುತ್ತದೆ. ಸಣ್ಣ ಹಿಡುವಳಿದಾರರು ಒಟ್ಟಾಗಿ ಒಂದು ಕೃಷಿ ಹೊಂಡ ಹೊಂದಿ ನೀರು ಪಡೆಯಬಹುದು.

| ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ

- Advertisement -

Stay connected

278,584FansLike
571FollowersFollow
609,000SubscribersSubscribe

ವಿಡಿಯೋ ನ್ಯೂಸ್

ಕೇಂದ್ರ ಪರಿಸರ ಸಚಿವ...

ಬೆಂಗಳೂರು: ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ನಿಯಂತ್ರಣಕ್ಕೆ ನಾನಾ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಆದರೂ, ವೈಯಕ್ತಿಕವಾಗಿ ಏನು ಮಾಡಬಹುದು ಎಂಬುದನ್ನು ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ ಜಾವಡೇಕರ್ ತೋರಿಸಿದ್ದಾರೆ. ಅವರು...

ಜಗತ್ತಿನ ಮೊದಲ ಫೋಲ್ಡೆಬಲ್​...

ಬೀಜಿಂಗ್​: ಕಂಪ್ಯೂಟರ್ ಜಗತ್ತಿನಲ್ಲಿ ನಿತ್ಯವೂ ಹೊಸ ಹೊಸ ಉತ್ಪನ್ನಗಳು ಗ್ರಾಹಕರಿಗೆ ಪರಿಚಯಿಸಲ್ಪಡುತ್ತಲೇ ಇವೆ. ವರ್ಷದ ಹಿಂದೆ ಖರೀದಿಸಿದ ಉತ್ಪನ್ನ ಇಂದಿಗೆ ಔಟ್​ಡೇಟೆಡ್​ ಎನ್ನುವ ಮಟ್ಟಿಗೆ ಇದೆ ಈ ಬದಲಾವಣೆಯ ವೇಗ....

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...