ಭಾರಿ ಉಗ್ರ ಸಂಚು ವಿಫಲ

ನವದೆಹಲಿ: ಗಣರಾಜ್ಯೋತ್ಸವ ವೇಳೆ ದೇಶದ ವಿವಿಧೆಡೆ ರಕ್ತಪಾತ ನಡೆಸಲು ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ ಉಗ್ರ ಸಂಘಟನೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿರುವ ಎನ್​ಐಎ, 10 ಶಂಕಿತ ಉಗ್ರರನ್ನು ಬಲೆಗೆ ಕೆಡವಿದೆ. ಆ ಮೂಲಕ ಹೊಸ ವರ್ಷದ ಸಂದರ್ಭದಲ್ಲಿ ಭಾರತ ಸಂಭಾವ್ಯ ಅನಾಹುತದಿಂದ ಪಾರಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದ ವಿವಿಧ ನಗರಗಳ 17 ಕಡೆ ದಾಳಿ ನಡೆಸಿದ ಬಳಿಕ ಉಗ್ರರನ್ನು ಬಂಧಿಸಲಾಯಿತೆಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮತ್ತು ಉತ್ತರ ಪ್ರದೇಶದ ಮೀರತ್, ಲಖನೌ, ಹಾಪೂರ್, ಅಮ್ರೋಹಾ, ಸೀಲಂಪುರದಲ್ಲಿನ ಉಗ್ರರ ಸ್ಲೀಪರ್ ಸೆಲ್​ಗಳ ಮೇಲೆ ಉತ್ತರ ಪ್ರದೇಶದ ಉಗ್ರ ನಿಗ್ರಹ ದಳದ ನೆರವಿನೊಂದಿಗೆ ಎನ್​ಐಎ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 17 ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, 10 ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಎನ್​ಐಎ ಅಧಿಕಾರಿಗಳ ಪ್ರಕಾರ ಬಂಧಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಮೌಲ್ವಿ ಮುಖ್ಯಸ್ಥ: ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಹಾಗೂ ರಾಸಾಯನಿಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಸಿಸ್ ಸಂಘಟನೆಯಿಂದ ಪ್ರಭಾವಿತವಾಗಿರುವ ಹರ್ಕತ್-ಉಲ್-ಹರ್ಬ್-ಎ-ಇಸ್ಲಾಂ ಸಂಘಟನೆ ಹೆಸರಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಲಾಗಿತ್ತು. ಅಮ್ರೋಹಾದ ಮಸೀದಿ ಮೌಲ್ವಿ ಮುಫ್ತಿ ಸೋಹೆಲ್ ಈ ತಂಡದ ಮುಖ್ಯಸ್ಥ. ಎಲ್ಲ ಶಂಕಿತ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದ ಈತನಿಗೆ ವಿದೇಶಿ ಉಗ್ರ ಸಂಘಟನೆಗಳ ಜತೆಗೂ ನಂಟಿದೆ. ಹಾಗೆಯೇ ಐಸಿಸ್ ಉಗ್ರರ ಜತೆಗೂ ಸಂಬಂಧ ಹೊಂದಿರುವ ಸಾಧ್ಯತೆಗಳಿವೆ. ವಿದೇಶದಲ್ಲಿರುವ ಜಫ್ರಿ ಸೋಹೆಲ್ ಎಂಬಾತ ಇವರಿಗೆ ದಾಳಿ ನಡೆಸುವ ಕುರಿತು ಮಾಹಿತಿ ನೀಡುತ್ತಿದ್ದ ಎಂದು ಎನ್​ಐಎ ಐಜಿ ಅಲೋಕ್ ಮಿತ್ತಲ್ ತಿಳಿಸಿದ್ದಾರೆ

 • ದೆಹಲಿ, ಉ.ಪ್ರದೇಶದ 17 ಕಡೆ ಕಾರ್ಯಚರಣೆ
 • ಗಣರಾಜ್ಯೋತವಕ್ಕೆ ಮುನ್ನ ದೇಶಾದ್ಯಂತ ದಾಳಿಗೆ ಸ್ಕೆಚ್
 • ರಾಕೆಟ್ ಲಾಂಚರ್ ಸೇರಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಬಲೆಗೆ ಬಿದ್ದಿದ್ಹೇಗೆ?

ಕಳೆದ ಮಾರ್ಚ್​ನಲ್ಲಿ ಉಜ್ಜಯಿನಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಐಸಿಸ್ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಬಳಿಕ ಹರ್ಕತ್-ಉಲ್-ಹರ್ಬ್-ಎ- ಇಸ್ಲಾಂ ತಂಡದ ಮೇಲೆ ಎನ್​ಐಎ ಕಣ್ಣಿಟ್ಟಿತ್ತು. ಇವರು ಶೀಘ್ರದಲ್ಲೇ ಬೃಹತ್ ದಾಳಿಗೆ ಸಜ್ಜಾಗುತ್ತಿರುವ ಕುರಿತು ಗುಪ್ತಚರ ದಳ ಸುಳಿವು ನೀಡಿದ ಬಳಿಕ ಎನ್​ಐಎ ಈ ಜಾಲವನ್ನು ಭೇದಿಸಿದೆ.

ರಾಜ್ಯದ ಮೇಲೂ ಕಣ್ಣು

ಎನ್​ಐಎಅಧಿಕಾರಿಗಳ ಪ್ರಕಾರ ಕಾಶ್ಮೀರ ಹಾಗೂ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲೂ ಐಸಿಸ್ ಕುರುಹು ಗೋಚರಿಸಿದೆ. ಈ ರಾಜ್ಯಗಳಿಂದ ಹಲವರು ಐಸಿಸ್​ಗೆ ಸೇರುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಮಹಾರಾಷ್ಟ್ರಗಳ ಮೇಲೆ ತನಿಖಾದಳ ಹದ್ದಿನ ಕಣ್ಣಿಟ್ಟಿದೆ. 2017ರ ಫೆ.25ರಂದು ಕರ್ನಾಟಕದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದಾಗ ಐಸಿಸ್​ಗೆ ಹೇಗೆ ಜನರನ್ನು ಸೆಳೆಯಲಾಗುತ್ತಿದೆ, ಆರ್ಥಿಕ ವಹಿವಾಟು ಸೇರಿ ಮತ್ತಿತರ ಮಾಹಿತಿಗಳು ಎನ್​ಐಎಗೆ ಲಭ್ಯವಾಗಿತ್ತು.

ಹಿಟ್​ಲಿಸ್ಟ್​ನಲ್ಲಿ ಯಾರ್ಯಾರು?

 1. ದೇಶದ ಪ್ರಭಾವಿ ರಾಜಕಾರಣಿಗಳು
 2. ಪ್ರಮುಖ ಸಂಸ್ಥೆಗಳು
 3. ಆರ್​ಎಸ್​ಎಸ್ ಕಚೇರಿ
 4. ದೆಹಲಿ ಮುಖ್ಯ ಪೊಲೀಸ್ ಕಚೇರಿ
 5. ಜನನಿಬಿಡ ಪ್ರದೇಶಗಳು

ಏನೇನು ವಶ?

 • ಅಪಾರ ಪ್ರಮಾಣದ ದೇಶಿ ರಿವಾಲ್ವರ್, ಅತ್ಯಾಧುನಿಕ ಗನ್
 • ದೇಶಿ ನಿರ್ವಿುತ ರಾಕೆಟ್ ಲಾಂಚರ್, ಬಾಂಬ್​ಗಳು
 • ಬಾಂಬ್ ನಿರ್ವಣಕ್ಕೆ ಬಳಸುವ 25 ಕೆ.ಜಿ ರಾಸಾಯನಿಕ
 • 100 ಮೊಬೈಲ್, 135 ಸಿಮ್ಾರ್ಡ್, ಲ್ಯಾಪ್​ಟಾಪ್, ಮೆಮೋರಿ ಕಾರ್ಡ್​ಗಳು, 100 ಅಲಾರಾಂ ಗಡಿಯಾರ
 • 7.5 ಲಕ್ಷ ರೂ. ನಗದು ಹಣ

ಆತ್ಮಾಹುತಿ ತಂಡ

ಮೂಲಭೂತವಾದಿಗಳಾಗಿ ಪರಿವರ್ತನೆಯಾಗಿದ್ದ ಬಂಧಿತ ಉಗ್ರರು ಆತ್ಮಾಹುತಿ ದಾಳಿಗೆ ಸಜ್ಜಾಗಿದ್ದರು. ಐಸಿಸ್ ಉಗ್ರ ಚಟುವಟಿಕೆಯ ಮಾದರಿಯಲ್ಲೇ 10 ಜನರಿಗೂ ತರಬೇತಿ ನೀಡಲಾಗಿತ್ತು. ರಿಮೋಟ್ ಕಂಟ್ರೋಲ್ ಮೂಲಕ ಸ್ಪೋಟಿಸಬಹುದಾದ ಬಾಂಬ್​ಗಳ ತಯಾರಿಯನ್ನೂ ಇವರು ಕಲಿತಿದ್ದರು. ಶೋಧ ಕಾರ್ಯದ ಸಂದರ್ಭದಲ್ಲಿ ರಿಮೋಟ್ ಕಂಟ್ರೋಲ್​ಗಳೂ ಪತ್ತೆಯಾಗಿವೆ.

ಝಾಕೀರ್ ನಾಯ್್ಕ ಪ್ರಭಾವ!

ಉಗ್ರ ಚಟುವಟಿಕೆಗೆ ಪ್ರೇರಣೆ ನೀಡುತ್ತಿರುವ ಆರೋಪದ ಮೇಲೆ ಎನ್​ಐಎ ವಾಂಟೆಡ್ ಪಟ್ಟಿಯಲ್ಲಿರುವ ವಿವಾದಿತ ಧರ್ಮ ಪ್ರಚಾರಕ ಝಾಕೀರ್ ನಾಯ್್ಕ ಭಾಷಣದಿಂದ ಈಗ ಬಂಧಿತರಾದವರೂ ಪ್ರಭಾವಿತರಾಗಿದ್ದರೆಂದು ತಿಳಿದುಬಂದಿದೆ.

ಪ್ರಭಾವಿಗಳು ಟಾರ್ಗೆಟ್

ಎನ್​ಐಎ ಐಜಿ ಅಲೋಕ್ ಮಿತ್ತಲ್ ಪ್ರಕಾರ, ದೇಶದ ಪ್ರಮುಖ ಸ್ಥಳಗಳ ಜತೆಗೆ ಪ್ರಭಾವಿ ರಾಜಕಾರಣಿಗಳು ಈ ಉಗ್ರರ ಹಿಟ್​ಲಿಸ್ಟ್​ನಲ್ಲಿದ್ದರು. ಅಲ್ಲದೆ, ಜನನಿಬಿಡ ಸ್ಥಳಗಳಲ್ಲಿ ಆತ್ಮಾಹುತಿ ದಾಳಿ ನಡೆಸಲೂ ಸಜ್ಜಾಗಿದ್ದರು.