ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ

ನವದೆಹಲಿ: ಭಾರತೀಯ ವಾಯುಪಡೆಯ ಧೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ಗೆ ಪಾಕಿಸ್ತಾನದ ಬೇಹುಗಾರಿಕಾ ದಳ ಐಎಸ್​ಐ ಸತತ 40 ಗಂಟೆ ಚಿತ್ರಹಿಂಸೆ ನೀಡಿತ್ತೆಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಭಾರತ ಬಾಲಾಕೋಟ್​ನಲ್ಲಿ ಏರ್​ಸ್ಟ್ರೈಕ್ ನಡೆಸಿ ಪುಲ್ವಾಮಾ ಉಗ್ರದಾಳಿಗೆ ಪ್ರತೀಕಾರ ತೀರಿಸಿಕೊಂಡ ಬೆನ್ನಲ್ಲೇ ಭಾರತೀಯ ನೆಲದೊಳಕ್ಕೆ ನುಗ್ಗುವ ದುಸ್ಸಾಹಸ ನಡೆಸಿದ್ದ ಪಾಕಿಸ್ತಾನದ ಯುದ್ಧವಿಮಾನಗಳನ್ನು ಹೊಡೆದೋಡಿಸುವ ಸಂದರ್ಭದಲ್ಲಿ ಅಭಿನಂದನ್ ಅಚಾನಕ್ಕಾಗಿ ಪಾಕ್ ನೆಲದಲ್ಲಿ ಇಳಿದು ಬಂಧಿಯಾಗಿದ್ದರು.

ಪಾಕಿಸ್ತಾನದಲ್ಲಿ 2 ದಿನ ಬಂಧಿಯಾಗಿದ್ದ ಅಭಿನಂದನ್​ರನ್ನು ಐಎಸ್​ಐ ವಶದಲ್ಲಿ ಇರಿಸಿಕೊಂಡಿತ್ತು. ಈ ಸಂದರ್ಭದಲ್ಲಿ 40 ತಾಸು ಚಿತ್ರಹಿಂಸೆ ನೀಡಲಾಗಿತ್ತೆಂದು ಅಭಿನಂದನ್ ವಿಚಾರಣೆಯಲ್ಲಿ ಹೇಳಿರುವುದಾಗಿ ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಭಾರತ ಸರ್ಜಿಕಲ್ ದಾಳಿ ನಡೆಸಿದ ಬಳಿಕ ಪಾಕಿಸ್ತಾನದ ಯುದ್ಧ ವಿಮಾನಗಳು ಭಾರತದ ಗಡಿ ಉಲ್ಲಂಘಿಸಿದ್ದವು. ಈ ವೇಳೆ ಪಾಕ್ ವಿಮಾನಗಳ ಬೆನ್ನತ್ತಿದ್ದ ಅಭಿನಂದನ್​ರಿದ್ದ ವಿಮಾನ ಒಂದು ವಿಮಾನವನ್ನು ಹೊಡೆದುರುಳಿಸಿ ಪಾಕ್ ನೆಲದಲ್ಲಿ ಪತನವಾಗಿತ್ತು. ಪ್ಯಾರಾಚೂಟ್ ಮೂಲಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಜಿಗಿದಿದ್ದ ಅವರನ್ನು ಹಿಡಿದ ಸ್ಥಳೀಯರು ಹಲ್ಲೆ ನಡೆಸಿ ಪಾಕ್ ಸೇನೆಯ ವಶಕ್ಕೆ ಒಪ್ಪಿಸಿದ್ದರು. ಅಭಿನಂದನ್​ರನ್ನು ಇಸ್ಲಾಮಾಬಾದ್​ನ ಸೇನಾಧಿಕಾರಿಗಳ ಮೆಸ್​ಗೆ ಕರೆದೊಯ್ದ ನಾಲ್ಕೈದು ತಾಸಿನ ನಂತರ ರಾವಲ್ಪಿಂಡಿಗೆ ಸ್ಥಳಾಂತರಿಸಿದ್ದರು. ಅಲ್ಲಿ ಐಎಸ್​ಐ ಅಧಿಕಾರಿಗಳು ದೈಹಿಕ ಚಿತ್ರಹಿಂಸೆ ಮತ್ತು ಮುಜುಗರದ ಪ್ರಶ್ನೆಗಳನ್ನು ಕೇಳುವ ಮೂಲಕ ಮಾನಸಿಕವಾಗಿ ಕಿರುಕುಳ ನೀಡಿದ್ದರೆಂದು ಹೇಳಲಾಗಿದೆ.

ಹಿನ್ನೆಲೆ: ಪುಲ್ವಾಮಾದಲ್ಲಿ ಸಿಆರ್​ಪಿಎಫ್​ನ 49 ಯೋಧರ ಹತ್ಯೆ ನಡೆದ ಬಳಿಕ ಇದಕ್ಕೆ ಪ್ರತೀಕಾರವಾಗಿ ಭಾರತದ ವಾಯುಪಡೆ ಫೆ. 26ರಂದು ಪಾಕಿಸ್ತಾನದ ಬಾಲಾಕೋಟ್ ಸೇರಿ ಮೂರು ಕಡೆ ಉಗ್ರರ ನೆಲೆಗಳ ಮೇಲೆ ಏರ್​ಸ್ಟ್ರೈಕ್ ನಡೆಸಿತು. ಕೆರಳಿದ ಪಾಕಿಸ್ತಾನ ಫೆ. 27ರಂದು ತನ್ನ ಯುದ್ಧ ವಿಮಾನಗಳನ್ನು ಭಾರತದ ವಾಯುಗಡಿಗೆ ನುಗ್ಗಿಸಿತ್ತು. ಆದರೆ ಅಭಿನಂದನ್ ಸೇರಿ ಭಾರತದ ವಾಯುಪಡೆ ಪೈಲಟ್​ಗಳು ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಿದ್ದರು.

ನಕಲಿ ವಿಡಿಯೋ

‘ಪಾಕ್ ಜೈಲಿನಲ್ಲಿ ನನ್ನನ್ನು ಒಂದು ಕೋಣೆಯಲ್ಲಿ ಕೂರಿಸಿದ್ದರು. ಅಧಿಕ ಪ್ರಕಾಶದ ದೀಪ ಮತ್ತು ಕಿವಿಗಡಚಿಕ್ಕುವ ಸಂಗೀತ ಹಾಕಲಾಗಿತ್ತು. ಪ್ರತಿ ಅರ್ಧ ತಾಸಿಗೆ ಒಬ್ಬ ವ್ಯಕ್ತಿ ರೂಂಗೆ ಬಂದು ಹಿಂಸೆ ನೀಡುತ್ತಿದ್ದ. ಇಸ್ಲಾಮಾಬಾದ್ ಮೆಸ್​ನಲ್ಲಿ ಟೀ ಕೊಟ್ಟು ವಿಡಿಯೋ ಮಾಡಲಾಯಿತು. ಆದರೆ, ಪಾಕ್ ಸೇನೆಯನ್ನು ನಾನು ಹೊಗಳಿರುವ ವಿಡಿಯೋ ನಕಲಿ. ಆ ವಿಡಿಯೋದಲ್ಲಿರುವುದು ನನ್ನ ಧ್ವನಿಯಲ್ಲ. ಬೇಕಿದ್ದರೆ ಧ್ವನಿಪರೀಕ್ಷೆ ನಡೆಸಲಿ’ ಎಂದು ಅಭಿನಂದನ್ ಹೇಳಿದ್ದಾರೆ. ಪಾಕ್​ನಿಂದ ವಾಪಸು ಬಂದ ಅಭಿನಂದನ್​ರನ್ನು ನಿಯಮದನ್ವಯ ಸೇನೆ ಮತ್ತು ಬೇಹುಗಾರಿಕಾ ದಳ ವಿಸõತ ವಿಚಾರಣೆಗೆ ಒಳಪಡಿಸಿದವು. ಕೂಲಂಕಷವಾಗಿ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಯಿತು.

One Reply to “ಅಭಿನಂದನ್​ಗೆ 40 ತಾಸು ಹಿಂಸೆ: ಕಳಚಿತು ಕಪಟಿ ಪಾಕಿಸ್ತಾನದ ಮುಖವಾಡ”

  1. Abhi a Son of a Tiger cannot bow in front of family of cat rat and rabits. When this video of praising pak Army broadcasted I told my family and friends that it is fabricated. Abi is abi Son of tiger

Comments are closed.