More

  ಇಶಾಂತ್ ಶರ್ಮ ಔಟ್

  ನವದೆಹಲಿ: 41 ದಿನಗಳ ಪೂರ್ಣಪ್ರಮಾಣದ ನ್ಯೂಜಿಲೆಂಡ್ ಪ್ರವಾಸದ ಸವಾಲಿಗೆ ಮುನ್ನ ಭಾರತ ತಂಡಕ್ಕೆ ಗಾಯದ ಹೊಡೆತ ಬಿದ್ದಿದೆ. ಎಡಗೈ ಆರಂಭಿಕ ಶಿಖರ್ ಧವನ್, ನ್ಯೂಜಿಲೆಂಡ್ ಪ್ರವಾಸದ ಟಿ20, ಏಕದಿನ ಸರಣಿಯಿಂದ ಹೊರಬಿದ್ದ ಬೆನ್ನಲ್ಲೇ ಅನುಭವಿ ವೇಗಿ ಇಶಾಂತ್ ಶರ್ಮ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ. ಮೊಣಕಾಲು ಗಾಯಕ್ಕೆ ತುತ್ತಾಗಿರುವ ಇಶಾಂತ್ ಶರ್ಮಗೆ ವೈದ್ಯರು ಆರು ವಾರಗಳ ವಿಶ್ರಾಂತಿಗೆ ಸೂಚಿಸಿದ್ದು, ನ್ಯೂಜಿಲೆಂಡ್​ನಲ್ಲಿ ಫೆ. 21ರಿಂದ ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದಾರೆ ಎಂದು ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ತಿಳಿಸಿದೆ. ದೆಹಲಿ ಪರ ರಣಜಿ ಪಂದ್ಯದಲ್ಲಿ ಆಡುತ್ತಿದ್ದ ಇಶಾಂತ್, ವಿದರ್ಭ ವಿರುದ್ಧದ ಪಂದ್ಯದ 2ನೇ ದಿನದಾಟದ ವೇಳೆ ಮೊಣಕಾಲನ್ನು ಟ್ವಿಸ್ಟ್ ಮಾಡಿಕೊಂಡಿದ್ದರು. ಕುಂಟುತ್ತಲೇ ಮೈದಾನದಿಂದ ಹೊರನಡೆದಿದ್ದ ಅವರಿಗೆ ಎಂಆರ್​ಐ ಸ್ಕಾ್ಯನ್ ಮಾಡಿಸಲಾಗಿತ್ತು. ಅವರಿಗೆ ಮೂಳೆ ಮುರಿತವಾಗಿಲ್ಲ. ಪ್ರಸ್ತುತ ಅವರು ನಡೆಯಬಹುದು. ಎನ್​ಸಿಎಗೆ ಪ್ರಯಾಣ ಮಾಡಿ ಅಲ್ಲಿ ಪುನಶ್ಚೇತನದಲ್ಲಿ ಭಾಗಿಯಾಗಲಿದ್ದಾರೆ ಎಂದು ಡಿಡಿಸಿಎ ಅಧಿಕಾರಿ ತಿಳಿಸಿದ್ದಾರೆ. ಈ ನಡುವೆ ಬಿಸಿಸಿಐ ಇಶಾಂತ್ ಗಾಯದ ಬಗ್ಗೆ ಇನ್ನಷ್ಟೇ ಪ್ರಕಟಣೆ ನೀಡಬೇಕಿದೆ.

  ನವದೀಪ್ ಸೈನಿ ಬದಲಿ ಆಟಗಾರ?

  96 ಟೆಸ್ಟ್ ಪಂದ್ಯಗಳ ಅನುಭವಿ ಇಶಾಂತ್ ಶರ್ಮರ ಬದಲಿಗೆ ನವದೀಪ್ ಸೈನಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಣಜಿ ಟ್ರೋಫಿಯಲ್ಲಿ ಕಳೆದ ತಿಂಗಳು ಇಶಾಂತ್ ಶರ್ಮ ಹೈದರಾಬಾದ್ ವಿರುದ್ಧವೂ ಪಂದ್ಯ ಆಡಿದ್ದರು. 31 ವರ್ಷದ ಇಶಾಂತ್ ಭಾರತ ಟೆಸ್ಟ್ ತಂಡದ ಪ್ರಮುಖ ಭಾಗವಾಗಿದ್ದು, ವಿದೇಶದ ಪ್ರಮುಖ ಗೆಲುವುಗಳಿಗೆ ಕಾರಣರಾಗಿದ್ದಾರೆ. ಅದಲ್ಲದೆ, ಜಸ್​ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ಉಮೇಶ್ ಯಾದವ್ ಇರುವ ವೇಗದ ಬೌಲಿಂಗ್ ವಿಭಾಗದ ಪ್ರಮುಖ ಸದಸ್ಯರಾಗಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts