ವಾಷಿಂಗ್ಟನ್: ಇಸ್ರೇಲ್-ಇರಾನ್ ಸಂಘರ್ಷದ ವೇಳೆ ಅಮೆರಿಕ ತನ್ನ ಬಿ-2 ಬಾಂಬರ್ ಬಳಸಿ ಇರಾನ್ನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು. ದಾಳಿ ಬಳಿಕ ಎಲ್ಲಾ ಬಾಂಬರ್ಗಳು ತನ್ನ ಮೂಲ ನೆಲೆಗೆ ವಾಪಸಾಗಿವೆ. ಆದರೆ ಒಂದು ಬಾಂಬರ್ ಮಾತ್ರ ವಾಪಸಾಗಿಲ್ಲ ಎಂದು ವರದಿಯಾಗಿದೆ.
ದಾಳಿಯ ದಿನ ಬಿ-2 ಬಾಂಬರ್ ಗಳ 2 ತಂಡ ರಚಿಸಲಾಗಿತ್ತು. ಶತ್ರು ದೇಶಗಳ ದಾರಿ ತಪ್ಪಿಸಲು ಒಂದು ತಂಡದ ವಿಮಾನಗಳು ಫೆಸಿಫಿಕ್ ಸಾಗರದ ಕಡೆ ಹಾರಿದ್ದರೆ, ಮತ್ತೊಂದು ತಂಡದ ವಿಮಾನಗಳು ಅಟ್ಲಾಂಟಿಕ್ ಸಾಗರದ ಕಡೆ ಹಾರಾಟ ನಡೆಸಿ ಇರಾನ್ ಮೇಲೆ ದಾಳಿ ನಡೆಸಿದ್ದವು. ದಾಳಿ ಬಳಿಕ ಎಲ್ಲಾ ವಿಮಾನಗಳು ಮಿಸೌರಿಯ ವೈಟ್ವುನ್ ಏರ್ಫೋರ್ಸ್ ಬೇಸ್ಗೆ ವಾಪಸ್ಸಾಗಿದ್ದವು. ಆದರೆ ಫೆಸಿಫಿಕ್ ಸಾಗರದ ಕಡೆ ತೆರಳಿದ್ದ ವಿಮಾನಗಳಲ್ಲಿ ಒಂದು ವಿಮಾನ ಹವಾಯಿಯ ಹೊನಲುಲುವಿನಲ್ಲಿರುವ ಹಿಕಮ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ. ವಿಮಾನ ಹವಾಯಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ರನ್ ವೇ ಪಕ್ಕದಲ್ಲೇ ನಿಂತಿದೆ. ವಿಮಾನ ಇಲ್ಲಿ ಲ್ಯಾಂಡ್ ಆಗಿದ್ದೇಕೆ ಎಂಬ ಕುರಿತು ಅಮೆರಿಕ ವಾಯುಪಡೆ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.