ಟಾರ್ಗೆಟ್ ಅಯೋಧ್ಯೆ!

ನವದೆಹಲಿ: ಎನ್​ಐಎ ಬಲೆಗೆ ಬಿದ್ದಿರುವ 10 ಹರ್ಕತ್ ಉಗ್ರರು ಗಣರಾಜ್ಯೋತ್ಸವ ಕಾರ್ಯಕ್ರಮ ಗುರಿಯಾಗಿಸಿಕೊಳ್ಳುವ ಮೊದಲೇ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೆಣೆದಿದ್ದರೆಂಬ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

ಬಂಧಿತ ಉಗ್ರರಲ್ಲಿ ಪ್ರಮುಖನಾದ ಅನಾಸ್ ಎಂಬಾತ ತನ್ನ ಸಹಚರರ ಜತೆ ವಾಟ್ಸ್​ಆಪ್​ನಲ್ಲಿ ನಡೆಸಿರುವ ಚಾಟ್​ನ ಮಾಹಿತಿ ಶೋಧಿಸಿದಾಗ ಈ ವಿಧ್ವಂಸಕ ಸಂಚು ಬಯಲಾಗಿದೆ.

12 ದಿನ ವಶಕ್ಕೆ: ಬಂಧಿತ 10 ಉಗ್ರರನ್ನು ಗುರುವಾರ ಎನ್​ಐಎ ಅಧಿಕಾರಿಗಳು ದೆಹಲಿ ಕೋರ್ಟ್​ಗೆ ಹಾಜರುಪಡಿಸಿದರು. ಕ್ಯಾಮೆರಾ ಮುದ್ರಣ ಸಹಿತ ಪ್ರಕರಣದ ವಿಚಾರಣೆಗೆ ಆದೇಶಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಜಯ್ ಪಾಂಡೆ, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 12 ದಿನ ಎನ್​ಐಎ ವಶಕ್ಕೆ ಒಪ್ಪಿಸಿದರು. ರಾಷ್ಟ್ರರಾಜಧಾನಿಯ 6 ಹಾಗೂ ಉತ್ತರಪ್ರದೇಶದ 11 ಸ್ಥಳಗಳ ಮೇಲೆ ಬುಧವಾರ ದೆಹಲಿ ಪೊಲೀಸರ ವಿಶೇಷ ವಿಭಾಗ ಹಾಗೂ ಉಗ್ರ ನಿಗ್ರಹ ಪಡೆ (ಎಟಿಎಸ್)ಸಹಯೋಗದೊಂದಿಗೆ ಎನ್​ಐಎ ತಂಡ ದಾಳಿ ನಡೆಸಿ ಹರ್ಕತ್ ಉಲ್ ಹಾರ್ಬ್ ಇ ಇಸ್ಲಾಂ ಸಂಘಟನೆಯ 16 ಮಂದಿಯನ್ನು ವಶಕ್ಕೆ ಪಡೆದಿತ್ತು. ಬಳಿಕ 10 ಮಂದಿಯನ್ನು ಬಂಧಿಸಲಾಗಿತ್ತು.

ಕಾಂಗ್ರೆಸ್​ಗೆ ಅರುಣ್ ಜೇಟ್ಲಿ ಪ್ರಶ್ನೆ

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಕೇಂದ್ರೀಯ ತನಿಖಾ ಸಂಸ್ಥೆಗಳು ದೇಶದ ಯಾವುದೇ ಕಂಪ್ಯೂಟರ್ ಮೇಲೆ ನಿಗಾ ಇರಿಸಲು ಅನುಮತಿ ನೀಡಿ ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ ಆದೇಶಕ್ಕೆ ಮತ್ತು ಹರ್ಕತ್ ಉಗ್ರರ ಬಂಧನಕ್ಕೆ ಸಂಬಂಧ ಕಲ್ಪಿಸಿ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಮಾಧ್ಯಮದ ಸಂವಹನಗಳನ್ನು ನಿಗಾ ಇರಿಸದೆಯೇ ಎನ್​ಐಎ ಇಂಥ ಉಗ್ರರ ಪಡೆಯ ಬಂಧನ ಸಾಧ್ಯವಾಗುತ್ತಿತ್ತೆ? ಎಂದು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರದ ಆದೇಶವನ್ನು ಟೀಕಿಸಿ ಮಾಜಿ ಸಚಿವ ಪಿ.ಚಿದಂಬರಂ, ಯಾರು ಬೇಕಾದರೂ ನಿಮ್ಮ ಕಂಪ್ಯೂಟರ್ ಮೇಲೆ ನಿಗಾ ಇರಿಸುವುದು ಖಂಡನೀಯ. ಇದು ಮುಕ್ತ ಸಮಾಜದ ನಾಶಕ್ಕೆ ನಾಂದಿ ಎಂದಿದ್ದರು. ಇದಕ್ಕೆ ತಿರುಗೇಟು ಕೊಟ್ಟಿರುವ ಜೇಟ್ಲಿ, ಯುಪಿಎ ಅವಧಿಯಲ್ಲಿ ಹೆಚ್ಚು ಮಂದಿಯ ಕಂಪ್ಯೂಟರ್ ಹಾಗೂ ಫೋನ್ ಕದ್ದಾಲಿಕೆ ನಡೆದಿತ್ತೇ ಎಂದು ವರದಿಯೊಂದನ್ನು ಆಧರಿಸಿ ಪ್ರಶ್ನಿಸಿದ್ದಾರೆ.

ರಾಜ್ಯಕ್ಕೂ ಅಲರ್ಟ್

ಬೆಂಗಳೂರು: ಹೊಸ ವರ್ಷಾಚರಣೆ ಮತ್ತು ಗಣರಾಜ್ಯೋತ್ಸವದ ವೇಳೆ ಉಗ್ರ ಚಟುವಟಿಕೆಗಳು ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸುವಂತೆ ಕರ್ನಾಟಕ ಸೇರಿ ದೇಶದ ಎಲ್ಲ ರಾಜ್ಯಗಳಿಗೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಅಧಿಕಾರಿಗಳು ಬುಧವಾರ ಮತ್ತು ಗುರುವಾರ ದೆಹಲಿ, ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಹಲವು ಶಂಕಿತ ಉಗ್ರರನ್ನು ಬಂಧಿಸಿ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತರ ವಿಚಾರಣೆ ವೇಳೆ ಗಣರಾಜ್ಯೋತ್ಸವ ಸಮಯದಲ್ಲಿ ಜನನಿಬಿಡ ಸ್ಥಳ, ಆರ್​ಎಸ್​ಎಸ್ ಕಚೇರಿ, ಪೊಲೀಸ್ ಕಚೇರಿಗಳನ್ನು ಸ್ಪೋಟಿಸುವ ಸಂಚು ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದು ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ ಎಂದು ಗೊತ್ತಾಗಿದೆ.

ವರ್ಷಾಚರಣೆಯಲ್ಲಿ ವಿದೇಶಿಗರೂ ಭಾಗವಹಿಸುವ ಹಿನ್ನೆಲೆಯಲ್ಲಿ ಉಗ್ರರು ಕೃತ್ಯ ಎಸಗಿ ಆತಂಕ ಸೃಷ್ಟಿಸುವ ಸಾಧ್ಯತೆ ಇದೆ. ಇಲ್ಲವೇ ಗಣರಾಜ್ಯೋತ್ಸವದ ದಿನದಂದು ಕೃತ್ಯ ಎಸಗಲು ಸಂಚುರೂಪಿಸಿರುವುದು ತನಿಖೆಯಲ್ಲಿ ಬಯಲಾಗಿದೆ. ಹಾಗಾಗಿ ಎಲ್ಲ ರಾಜ್ಯಗಳಲ್ಲಿ ಐತಿಹಾಸಿಕ ಕಟ್ಟಡ, ಮಂದಿರ, ಸರ್ಕಾರಿ ಕಚೇರಿಗಳು, ಆಣೆಕಟ್ಟುಗಳು ಸೇರಿ ಪ್ರಮುಖ ಸ್ಥಳಗಳಲ್ಲಿ ಬಿಗಿ ಭದ್ರತೆ ವಹಿಸುವಂತೆ ಕೇಂದ್ರ ಗುಪ್ತಚರ ಇಲಾಖೆ ಸೂಚಿಸಿರುವುದಾಗಿ ಗೃಹ ಇಲಾಖೆ ಮೂಲಗಳು ತಿಳಿಸಿವೆ.