ಚುನಾವಣೆ ಅಕ್ರಮದಲ್ಲಿ ಸುಪ್ರೀಂಕೋರ್ಟ್​ ಕೂಡ ಭಾಗಿಯಾಗಿದೆಯೇ ಎಂದು ಕಾಂಗ್ರೆಸ್ ನಾಯಕನ ಪ್ರಶ್ನೆ

ಬೆಂಗಳೂರು: ಇವಿಎಂಗಳಿಗೆ ಸಮನಾಗಿ ವಿವಿಪ್ಯಾಟ್​ ಸ್ಲಿಪ್‌ಗಳನ್ನು ಎಣಿಕೆ ಮಾಡಬೇಕು ಎಂದು ವಿಪಕ್ಷಗಳು ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್​ ಕೂಡ ಚುನಾವಣೆ ಅಕ್ರಮದಲ್ಲಿ ಭಾಗಿಯಾಗಿದೆಯೇ ಎಂದು ಪ್ರಶ್ನಿಸುವ ಮೂಲಕ ಕೇರಳದ ಕಾಂಗ್ರೆಸ್‌ ನಾಯಕ ಉದಿತ್‌ ರಾಜ್‌ ಅವರು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆಯ ಮತ ಎಣಿಕೆಯ ದಿನದಂದು ವಿವಿಪ್ಯಾಟ್‌ಗಳ ಪರಿಶೀಲನೆ ವೇಳೆ ವ್ಯತ್ಯಾಸ ಕಂಡುಬಂದಿದ್ದೇ ಆದರೆ ಅಂತಹ ವಿಧಾನಸಭಾ ಕ್ಷೇತ್ರದ ಶೇ. 100ರಷ್ಟು ಎಲ್ಲ ವಿವಿಪ್ಯಾಟ್‌ಗಳನ್ನು ಚೀಟಿಗಳನ್ನು ಎಣಿಕೆ ಮಾಡಿದ ಬಳಿಕ ಇವಿಎಂನ ಫಲಿತಾಂಶದೊಂದಿಗೆ ತಾಳೆ ಮಾಡಿ ನೋಡಬೇಕು. ಇದಕ್ಕೆ ಚುನಾವಣೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ 21 ವಿಪಕ್ಷಗಳು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದವು. ಆದರೆ, ಸುಪ್ರೀಂ ಕೋರ್ಟ್‌ ಈ ಅರ್ಜಿಯನ್ನು ತಿರಸ್ಕರಿಸಿತ್ತು.

ಈ ಕುರಿತು ಟ್ವೀಟ್‌ ಮಾಡಿರುವ ಉದಿತ್‌ ರಾಜ್‌, ವಿವಿಪ್ಯಾಟ್‌ನ ಚೀಟಿಗಳನ್ನು ಎಣಿಕೆ ಮಾಡುವುದು ಸುಪ್ರೀಂ ಕೋರ್ಟ್‌ಗೆ ಯಾಕೆ ಬೇಡವಾಗಿದೆ? ಅದು ಕೂಡ ಚುನಾವಣೆ ಅಕ್ರಮದಲ್ಲಿ ಬಾಗಿಯಾಗಿದೆಯೇ? ಆಯ್ಕೆ ಪ್ರಕ್ರಿಯೆಯಲ್ಲಿ ಯಾವಾಗ ಸರ್ಕಾರಿ ಕೆಲಸ ಸುಮಾರು ಮೂರು ತಿಂಗಳಿಂದ ನಿಧಾನವಾಗಿದ್ದರೆ, ಎಣಿಕೆ ಮಾಡಲು ಕೂಡ ಎರಡು ಅಥವಾ ಮೂರು ದಿನಗಳು ತೆಗೆದುಕೊಳ್ಳುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚುನಾವಣೆ ಆಯೋಗದೊಂದಿಗೆ ನಡೆಸಿದ ಸಭೆ ಬಳಿಕ ಕಾಂಗ್ರೆಸ್‌ನ​ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿ, ವಿವಿಪ್ಯಾಟ್‌ ಯಂತ್ರದ ಚೀಟಿಗಳನ್ನು ಮೊದಲು ಎಣಿಕೆ ಮಾಡಿದ ನಂತರ ಅದರಲ್ಲಿ ಏನಾದರೂ ವ್ಯತ್ಯಾಸ ಕಂಡು ಬಂದಲ್ಲಿ ಮತ್ತೆ ಮರುಎಣಿಕೆ ಮಾಡಬೇಕು ಎಂದು ನಾವು ಚುನಾವಣಾ ಆಯೋಗಕ್ಕೆ ಹೇಳಿದ್ದೇವೆ ಎಂದು ತಿಳಿಸಿದರು. (ಏಜೆನ್ಸೀಸ್)