ಅಮೇಠಿಯಲ್ಲಿ ರಾಹುಲ್​ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರಿಯಾಂಕಾ ಗಾಂಧಿ ಕೊಟ್ಟ ಉತ್ತರ..

ಅಮೇಠಿ: ಅಮೇಠಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರಿಗೆ ಅಭದ್ರತೆ ಕಾಡಲು ಸಾಧ್ಯವೇ?… ನೀವೇನಾದರೂ ತಮಾಷೆ ಮಾಡುತ್ತಿದ್ದೀರಾ ಎಂದು ಉತ್ತರ ಪ್ರದೇಶ ಪೂರ್ವ ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

ತಮ್ಮ ಸೋದರ ಹಾಗೂ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಪರ ಪ್ರಿಯಾಂಕಾ ಗಾಂಧಿ ಮಂಗಳವಾರ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪ್ರಶ್ನೆಯೊಂದು ತೂರಿಬಂದಿತು. ರಾಹುಲ್​ ಗಾಂಧಿ ಅವರಿಗೆ ಅಮೇಠಿಯಲ್ಲಿ ಅಭದ್ರತೆ ಕಾಡುತ್ತಿದೆಯೇ? ಮತ್ತೇಕೆ ಅವರು ಕೇರಳದ ವಯನಾಡ್​ನಿಂದಲೂ ಸ್ಪರ್ಧಿಸುತ್ತಿದ್ದಾರೆ ಎಂದು ಕಾರ್ಯಕರ್ತರು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಇಲ್ಲಿ ಅವರಿಗೆ ಲವಲೇಶದ ಅಭದ್ರತೆಯೂ ಕಾಡುತ್ತಿಲ್ಲ. ದಕ್ಷಿಣ ಭಾರತದಿಂದ ಅದರಲ್ಲೂ ವಿಶೇಷವಾಗಿ ಕೇರಳದಿಂದ ಒತ್ತಡ ಬಂದಿತು. ಇದಕ್ಕೆ ನಾವು ಕೂಡ ಬೆಂಬಲಿಸಿದೆವು. ಇದಕ್ಕೆ ಅಮೇಠಿ ಜಿಲ್ಲಾ ಕಾಂಗ್ರೆಸ್​ ಕೂಡ ಬೆಂಬಲಿಸಿತು. ಇದೀಗ ಅವರು ಸಂಸತ್​ನಲ್ಲಿ ಉತ್ತರ ಮತ್ತು ದಕ್ಷಿಣ ಭಾರತಗಳೆರಡನ್ನೂ ಪ್ರತಿನಿಧಿಸಲು ಸಜ್ಜಾಗುತ್ತಿದ್ದಾರೆ ಎಂದು ಹೇಳಿದರು.

ಹ್ಯಾಟ್ರಿಕ್​ ಸಾಧನೆ
ಉತ್ತರ ಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರ ಗಾಂಧಿ ಕುಟುಂಬದವರ ಹಿಡಿತದಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ ಗಾಂಧಿ ಕುಟುಂಬದ ಪ್ರತಿಯೊಬ್ಬರೂ ಗೆಲುವಿನ ಸವಿ ಉಂಡಿದ್ದಾರೆ. 2004, 2009 ಮತ್ತು 2014ರಲ್ಲಿ ಗೆದ್ದು ಹ್ಯಾಟ್ರಿಕ್​ ಸಾಧನೆ ಮಾಡಿರುವ ರಾಹುಲ್​ ಗಾಂಧಿ ಈ ಬಾರಿಯೂ ಗೆಲ್ಲಲು ಸಿದ್ಧತೆ ನಡೆಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *