ಆಪರೇಷನ್ ಪಿಒಕೆ ಶುರು?

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನ ಮಾನ ರದ್ದುಗೊಳಿಸಿದ ಬಳಿಕ ಕೇಂದ್ರ ಸರ್ಕಾರ ಈಗ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಮೇಲೆ ಗಮನ ಹರಿಸಿದೆ.

ಈ ಬಗ್ಗೆ ಪರೋಕ್ಷವಾಗಿ ಹೇಳಿಕೆ ನೀಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು ಕೇವಲ ಪಿಒಕೆ ಬಗ್ಗೆ ಮಾತ್ರ ಎಂದು ಸ್ಪಷ್ಟ ಪಡಿಸಿದ್ದಾರೆ. ಹರಿಯಾಣದ ಕಾಲ್ಕಾದಲ್ಲಿ ‘ಜನಾಶೀರ್ವಾದ’ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಜಮ್ಮು-ಕಾಶ್ಮೀರವನ್ನು ಅಭಿವೃದ್ಧಿಗೊಳಿಸಲು ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದೇವೆ. ಆದರೆ ನಮ್ಮ ನೆರೆಯವರು ಅಂತಾರಾಷ್ಟ್ರೀಯ ವೇದಿಕೆಗಳ ಬಾಗಿಲು ಬಡಿದು ಭಾರತ ತಪು್ಪ ಮಾಡಿದೆ ಎಂದು ಹೇಳುತ್ತಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆ ಸಮರ್ಥನೆ ಮಾಡಿಕೊಳ್ಳುವುದನ್ನು ನಿಲ್ಲಿಸಿದಾಗ ಮಾತ್ರ ಭಾರತ ಪಾಕ್​ನೊಂದಿಗೆ ಮಾತುಕತೆಗೆ ಮುಂದಾಗುತ್ತದೆ. ಆದರೆ ಪಾಕ್ ಜತೆ ಭಾರತದ ಮಾತುಕತೆ ನಡೆಯುವುದಾದರೆ ಕೇವಲ ಪಾಕ್ ಆಕ್ರಮಿತ ಕಾಶ್ಮೀರ ವಿಷಯದ ಬಗ್ಗೆ ಮಾತ್ರ ಎಂದು ಹೇಳಿದ್ದಾರೆ.

ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಸಾಕ್ಷಿ ಕೇಳಿದವರ ವಿರುದ್ಧವೂ ರಾಜನಾಥ್ ಸಿಂಗ್ ಹರಿಹಾಯ್ದಿದ್ದಾರೆ. ಕೆಲ ದಿನಗಳ ಹಿಂದೆ ಇಮ್ರಾನ್ ಖಾನ್, ಭಾರತ ಬಾಲಾಕೋಟ್​ಗಿಂತಲೂ ದೊಡ್ಡ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ ಎಂದು ಆರೋಪಿಸಿದ್ದರು. ಇದರ ಅರ್ಥ ಭಾರತ ಬಾಲಾಕೋಟ್ ಏರ್​ಸ್ಟ್ರೇಕ್ ನಡೆಸಿದ್ದನ್ನು ಸ್ವತಃ ಪಾಕ್ ಪ್ರಧಾನಿಯೇ ಒಪ್ಪಿಕೊಂಡಂತೆ ಎಂದಿದ್ದಾರೆ. ಇಷ್ಟೇ ಅಲ್ಲದೇ ಕಳೆದ ಶುಕ್ರವಾರ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದ ರಾಜನಾಥ್ ಸಿಂಗ್, ಅಣ್ವಸ್ತ್ರ ‘ಮೊದಲ ಬಳಕೆ ಇಲ್ಲ’ ಎಂಬ ನಿಲುವಿಗೆ ನಾವು ಈಗಲೂ ಬದ್ಧರಾಗಿದ್ದೇವೆ, ಆದರೆ ಭವಿಷ್ಯದ ಪರಿಸ್ಥಿತಿಗಳನ್ನು ಆಧರಿಸಿ ಈ ನಿರ್ಧಾರ ಬದಲಾಗಬಹುದು ಎಂದು ಪಾಕ್​ಗೆ ನಡುಕ ಹುಟ್ಟಿಸಿದ್ದರು.

ಕಣಿವೆಯಲ್ಲಿ ಮತ್ತೆ ನಿರ್ಬಂಧ

ಗುಂಪು ಘರ್ಷಣೆ, ಪ್ರತಿಭಟನೆಯಂಥ ಘಟನೆ ಮರುಕಳಿಸಿದ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದ ಕೆಲ ಜಿಲ್ಲೆಗಳಲ್ಲಿ ನಿರ್ಬಂಧಗಳನ್ನು ಭಾನುವಾರ ಮತ್ತೆ ಜಾರಿಗೊಳಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ ಸಂಭವದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇಂಟರ್​ನೆಟ್ ಸ್ಥಗಿತಗೊಳಿಸಲಾಗಿದ್ದು, ಶುಕ್ರವಾರದಿಂದ ನೀಡಿದ್ದ ದೂರವಾಣಿ ಸಂಪರ್ಕವನ್ನೂ ಸಹ ಪುನಃ ಕಡಿತಗೊಳಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಸುಮಾರು 6 ರಿಂದ 8 ಪ್ರದೇಶಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದು, ಅನೇಕ ಪ್ರತಿಭಟನಾಕಾರರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಹಜ್ ಯಾತ್ರೆಗೆ ತೆರಳಿದ್ದ ಸುಮಾರು 300 ಯಾತ್ರಾರ್ಥಿಗಳಿದ್ದ ವಿಮಾನ ಭಾನುವಾರ ಬೆಳಗ್ಗೆ ಶ್ರೀನಗರ ವಿಮಾನ ನಿಲ್ದಾಣ ತಲುಪಿದ್ದರಿಂದ ಭದ್ರತೆ ಬಿಗಿ ಗೊಳಿಸಲಾಗಿದೆ.

14-1 ಅಂತರದಲ್ಲಿ ಪಾಕ್​ಗೆ ಸೋಲು!

ವಾಷಿಂಗ್ಟನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಕುರಿತು ಶುಕ್ರವಾರ ನಡೆದಿದ್ದ ಅನೌಪಚಾರಿಕ ಸಭೆಯಲ್ಲಿ ಭಾರತಕ್ಕೆ ರಾಜತಾಂತ್ರಿಕ ಜಯ ಸಿಕ್ಕಿದ್ದು, ಈ ಮೂ ಲಕ ಅಂತರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಬೆಂಬಲ ಕುಗ್ಗಿದೆ. ಯುಎನ್​ಎಸ್​ಸಿ ಸಭೆಯಲ್ಲಿ 15 ಸದಸ್ಯ ರಾಷ್ಟ್ರಗಳ ಪೈಕಿ ಕೇವಲ ಚೀನಾ ಮಾತ್ರ ಪಾಕ್ ಬೆಂಬಲಿಸಿದ್ದು, ಉಳಿದ 14 ರಾಷ್ಟ್ರಗಳು ಭಾರತದ ಪರವಾಗಿದ್ದವು. ಈ ಮೂಲಕ ಪಾಕಿಸ್ತಾನವನ್ನು ಭಾರತ 14-1 ಅಂತರದಲ್ಲಿ ಹೀನಾಯವಾಗಿ ಸೋಲಿಸಿದೆ. ಕಾಶ್ಮೀರ ವಿವಾದದ ಬಗ್ಗೆ ಈಗಾಗಲೇ ಬಹಿರಂಗವಾಗಿ ಭಾರತಕ್ಕೆ ಬೆಂಬಲ ಸೂಚಿಸಿದ್ದ, ಇಸ್ರೇಲ್, ಮ್ಯಾನ್ಮಾರ್, ರಷ್ಯಾ ಇನ್ನಿತರ ರಾಷ್ಟ್ರಗಳು ಇದು ಭಾರತದ ಆಂತರಿಕ ವಿಷಯ. ಸಮಸ್ಯೆಯನ್ನು ಕೇವಲ ದ್ವಿಪಕ್ಷೀಯ ಮಾತುಕತೆ ಮೂಲಕ ಪರಿಹರಿಸಿಕೊಳ್ಳಬೇಕು ಎಂದಿದ್ದವು.

ಸಂಸತ್​ನಲ್ಲಿ ಸುಳಿವು ನೀಡಿದ್ದ ಷಾ

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಪಿಒಕೆ ಬಗ್ಗೆ ಸಂಸತ್​ನಲ್ಲಿ ಮಾತನಾಡಿದ್ದರು. ಜಮ್ಮು-ಕಾಶ್ಮೀರ ಭಾರತದ ಆಂತರಿಕ ಸಮಸ್ಯೆ ಅಲ್ಲ ಎಂಬ ಕಾಂಗ್ರೆಸ್ ವಾದಕ್ಕೆ ತಿರುಗೇಟು ನೀಡಿದ್ದ ಷಾ, ಪಾಕ್ ಆಕ್ರಮಿತ ಕಾಶ್ಮೀರ ಕೂಡ ಭಾರತಕ್ಕೆ ಸೇರಿದ್ದು. ಪಿಒಕೆಗಾಗಿ ನಾವು ಪ್ರಾಣ ನೀಡಲೂ ಸಿದ್ಧ ಎಂದಿದ್ದರು.

ಉಗ್ರರ ವಿರುದ್ಧ ಪಾಕಿಸ್ತಾನ ನಕಲಿ ಪ್ರಕರಣ

ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಂಡಿದ್ದೇವೆ ಎಂದು ಜಾಗತಿಕ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ನಕಲಿ ಪ್ರಕರಣಗಳನ್ನು ದಾಖಲಿಸುತ್ತಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಜುಲೈ 1ರಂದು ಗುಜ್ರಾನ್ವಾಲಾ ಠಾಣೆ ಪೊಲೀಸರು ನಿಷೇಧಿತ ಉಗ್ರ ಸಂಘಟನೆ ದಾವತ್-ವಾಲ್-ಇರ್ಷಾದ್ ವಿರುದ್ಧ ಅಕ್ರಮ ಭೂಮಿ ಬಳಕೆ ಪ್ರಕರಣ ದಾಖಲಿಸಿದ್ದರು. ಅಸಲಿಗೆ ದಾವತ್-ವಾಲ್-ಇರ್ಷಾದ್ ಸಂಘಟನೆ ಹಫೀಜ್ ಸಯೀದ್​ನ ಲಷ್ಕರ್ ಜಾಲದ ಅಂಗ. ಜಾಗವೊಂದನ್ನು ಲಷ್ಕರ್ ಮತ್ತು ಅದರ ಅಂಗ ಸಂಸ್ಥೆ ದಾವತ್-ವಾಲ್-ಇರ್ಷಾದ್ ದುರ್ಬಳಕೆ ಮಾಡಿಕೊಂಡು ಹಣ ಸಂಗ್ರಹಿಸಿ ಭಯೋತ್ಪಾದನೆಗೆ ಬಳಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಆದರೆ ದೂರಿನಲ್ಲಿ ದಾವತ್- ವಾಲ್-ಇರ್ಷಾದ್ ಸಂಘಟನೆ ಹೆಸರನ್ನು ಮಾತ್ರ ಬರೆಯಲಾಗಿದೆ. ಇದು ಜಮಾತ್-ಉದ್-ದಾವಾ ಸಂಘಟನೆಯ ಹಳೆಯ ಹೆಸರಾಗಿದೆ. ಜತೆಗೆ ಈ ಸಂಘಟನೆಯ ವ್ಯಕ್ತಿಗಳ ಹೆಸರನ್ನೂ ಸಹ ಎಫ್​ಐಆರ್​ನಲ್ಲಿ ನಮೂದಿಸಲಾಗಿಲ್ಲ. ಈ ಎಫ್​ಐಆರ್ ನಕಲಿಯಾಗಿದ್ದು, ಅನೇಕ ದೋಷಗಳಿವೆ. ಅಕ್ಟೋಬರ್​ನಲ್ಲಿ ನಡೆಯಲಿರುವ ಇಂಟರ್​ನ್ಯಾಷನಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್​ಎಟಿಎಫ್) ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸುವುದನ್ನು ತಪ್ಪಿಸಲು ಪಾಕ್ ನಕಲಿ ಎಫ್​ಐಆರ್​ಗಳನ್ನು ದಾಖಲಿಸಿದೆ ಎನ್ನಲಾಗುತ್ತಿದೆ.

ಯುದ್ಧವೇ ಪರಿಹಾರ ಎಂದ ಪಾಕಿಸ್ತಾನದ ಅಧಿಕಾರಿ

ಕಾಶ್ಮೀರದ ಸಮಸ್ಯೆಯನ್ನು ರಾಜತಾಂತ್ರಿಕವಾಗಿ ಪರಿಹರಿಸಿಕೊಳ್ಳುವುದು ಸಾಧ್ಯವಿಲ್ಲ. ಯುದ್ಧ ಅಥವಾ ಪರೋಕ್ಷ ಯುದ್ಧ (ಪ್ರಾಕ್ಸಿ ವಾರ್) ಮೂಲಕ ಸಮಸ್ಯೆ ಕೊನೆಯಾಗಬಹುದು ಎಂದು ಪಾಕ್​ನ ರಾಜತಾಂತ್ರರಿಕ ಅಧಿಕಾರಿ ಜಾಫರ್ ಹಿಲಾಲಿ ವಿವಾದಿತ ಹೇಳಿಕೆ ನೀಡಿದ್ದಾರೆ. ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರು ಭಾರತದ ಮೇಲೆ ಒತ್ತಡ ಹೇರಿದರೂ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವವರಲ್ಲ. ಹೀಗಾಗಿ ನಾವು ರಾಜತಾಂತ್ರಿಕ ದಾರಿ ಬಿಟ್ಟು ಬೇರೆ ಏನನ್ನಾದರೂ ಮಾಡಲೇಬೇಕು. ಭಾರತದ ವಿರುದ್ಧ ಯುದ್ಧ ಅಥವಾ ಪರೋಕ್ಷ ಯುದ್ಧ ಇದಕ್ಕೆ ಪರಿಹಾರ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *