ಧೋನಿ ನಿವೃತ್ತಿಗೆ ಸಾಕ್ಷಿಯಾಗುತ್ತಿದೆಯೇ ಆ ವಿಡಿಯೋ?

ನವದೆಹಲಿ: ಭಾರತೀಯ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಏಕದಿನ ಕ್ರಿಕೆಟ್​ನಿಂದ ನಿವೃತ್ತರಾಗುವ ಮಾತು, ಅದಕ್ಕೆ ಸಂಬಂಧಿಸಿದ ಊಹಾಪೋಹಗಳು ಇಂದು ನಿನ್ನೆಯದಲ್ಲ. ಹಾಗಾಗಿ ಅಂಥ ವಿಚಾರ ಚರ್ಚೆಗೆ ಬಂದರೆ ಅದೇನು ಹೊಸದೂ ಎನಿಸುವುದಿಲ್ಲ. ಆದರೆ, ಈ ಬಾರಿ ನಿವೃತ್ತಿಗೆ ಪೂರಕವಾದ ಸಂಗತಿಯೊಂದು ನಡೆದಿದೆ. ಆ ಪ್ರಸಂಗ ಧೋನಿ ನಿವೃತ್ತಿಯ ಮುನ್ಸೂಚನೆಯೇ ಎಂಬ ಚರ್ಚೆಗಳು ಕ್ರಿಕೆಟ್​ ರಂಗದಲ್ಲಿ ನಡೆಯುತ್ತಿದೆ.

ನಿನ್ನೆ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತದ ಎದುರು ಇಂಗ್ಲೆಂಡ್​ ಎಂಟು ವಿಕೆಟ್​ಗಳ ಭಾರಿ ಜಯ ಸಾಧಿಸುವ ಮೂಲಕ 2-1ರ ಅಂತರದಲ್ಲಿ ಸರಣಿ ಗೆದ್ದುಕೊಂಡಿತ್ತು. ಭಾರತ ಸರಣಿ ಕೈ ಚೆಲ್ಲಿತ್ತು. ಪಂದ್ಯ ಮುಗಿದ ಬಳಿಗೆ ಧೋನಿ ಅಂಪೈರ್​ ಬಳಿಗೆ ಹೋಗಿ ಪಂದ್ಯಕ್ಕೆ ಬಳಸಿದ ಚೆಂಡನ್ನು ಕೇಳಿ ಪಡೆದರು.

ಪಂದ್ಯ ಮುಗಿದ ಬಳಿಕ ಆಟಗಾರರೆಲ್ಲರೂ ಡ್ರೆಸ್ಸಿಂಗ್​ ರೂಂಗೆ ಮರಳುವಾಗ ಹಿಂದೆ ಅಂಪೈರ್​ಗಳ ಜತೆ ಹೆಜ್ಜೆ ಹಾಕುತ್ತಾ ಬರುವ ಧೋನಿ ಅವರಿಂದ ಚೆಂಡನ್ನು ಕೇಳಿ ಪಡೆದುಕೊಳ್ಳುತ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

https://twitter.com/KSKishore537/status/1019298145447174146

ಧೋನಿ ಅವರ ಈ ನಡೆ ಸದ್ಯ ಕ್ರಿಕೆಟ್ ರಂಗದಲ್ಲಿ ಭಾರಿ ಊಹಾಪೋಹಗಳಿಗೆ ಕಾರಣವಾಗಿದೆ. ನಿವೃತ್ತರಾಗುವ ಕಾರಣಕ್ಕೇ ಅವರು ಅಂತಿಮ ಪಂದ್ಯದ ಚೆಂಡ್​ ಅನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಇಂಗ್ಲೆಂಡ್​ ವಿರುದ್ಧದ ಈ ಸರಣಿಯಲ್ಲಿ ಮಹೇಂದ್ರ ಸಿಂಗ್​ ಧೋನಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಅಂತಿಮ ಎರಡು ಪಂದ್ಯಗಳಲ್ಲಿ ಧೋನಿ ಅವರು ಅತ್ಯಂತ ನಿಧಾನಗತಿಯ ಬ್ಯಾಟಿಂಗ್​ ಮಾಡುವ ಮೂಲಕ ಕ್ರಿಕೆಟ್​ ಪ್ರೇಮಿಗಳ, ವಿಶ್ಲೇಷಕರ ಕಟು ಮಾತಿಗೂ ಗುರಿಯಾಗಿದ್ದಾರೆ.
ಈ ಎಲ್ಲದರ ಹಿನ್ನೆಲೆಯಲ್ಲಿ ಅವರು ನಿವೃತ್ತಿಯತ್ತ ಚಿಂತನೆ ನಡೆಸುತ್ತಿದ್ದಾರೆ ಎಂಬ ಅನುಮಾನಗಳು ಮನೆ ಮಾಡಿವೆ.