ತೃಷೆ ನೀಗಿಸೀತೆ ಹಣದ ಹೊಳೆ?

ಸ್ಥಳೀಯ ಜಲಮೂಲಗಳನ್ನು ರಕ್ಷಿಸಿದಲ್ಲಿ ರಾಜಧಾನಿ ಬೆಂಗಳೂರು ನೀರಿನ ವಿಚಾರದಲ್ಲಿ ಸ್ವಾವಲಂಬಿ ಆಗಬಹುದು ಎಂಬುದನ್ನು ಅರಿತೂ ರಾಜ್ಯ ಸರ್ಕಾರ ದೂರದ ಲಿಂಗನಮಕ್ಕಿಯಿಂದ ನೀರು ತರುವ ದುಬಾರಿ ಯೋಜನೆಗೆ ಕೈ ಹಾಕುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಕೆರೆಗಳನ್ನು ಪೂರ್ಣಪ್ರಮಾಣದಲ್ಲಿ ಅಣಿಗೊಳಿಸಿದ್ದಲ್ಲಿ 35 ಟಿಎಂಸಿವರೆಗೆ ನೀರು ಸಂಗ್ರಹಿಸಬಹುದಾಗಿದೆ ಎಂಬುದನ್ನು ವಿಜ್ಞಾನಿಗಳು ಹೇಳಿದ್ದು, ಕನಿಷ್ಠ ಅಧ್ಯಯನಕ್ಕೂ ಸರ್ಕಾರ ಆಸಕ್ತಿ ತೋರಿಲ್ಲ. ಅದರ ಬದಲಾಗಿ ಸಾವಿರಾರು ಕೋಟಿ ರೂ.ಗಳನ್ನು ಹೊಳೆಯಲ್ಲಿ ಸುರಿಯುವ ಯೋಜನೆಗಳ ಕಡೆಗಷ್ಟೇ ಸರ್ಕಾರ ಆದ್ಯತೆ ನೀಡುತ್ತಿದ್ದು, ಇದೇ ವಿಚಾರವೀಗ ಚರ್ಚೆಗೆ ಗ್ರಾಸವಾಗಿದೆ.

ಕಾವೇರಿ ಕಣಿವೆ ಜಲಾಶಯಗಳಿಂದ ತರುತ್ತಿರುವ ನೀರಿನಲ್ಲಿ ಸರ್ಕಾರದ ಲೆಕ್ಕಕ್ಕೇ ಸಿಗದೇ ಪೋಲಾಗುತ್ತಿರುವ ನೀರಿನಲ್ಲಿ ಶೇ.42ರಲ್ಲಿ ಅರ್ಧದಷ್ಟು ಉಳಿಸಿದರೂ ದೊಡ್ಡ ಪ್ರಮಾಣದ ಲಾಭದ ಲೆಕ್ಕ ಕಣ್ಣ ಮುಂದೆಯೇ ಇದ್ದರೂ ಜಾಣ ಮೌನ ಪ್ರದರ್ಶಿಸಲಾಗುತ್ತಿದೆ.

ದೂರದ ಲಿಂಗನಮಕ್ಕಿ ನೀರು ಬೆಂಗಳೂರಿಗೆ ತರುವುದು ವಾಸ್ತವದಲ್ಲಿ ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಸರ್ಕಾರದ ಏಜೆನ್ಸಿಗಳು, ಸ್ವತಂತ್ರ ವಿಜ್ಞಾನಿಗಳು ಸೇರಿ ಯಾರೇ ಎಚ್ಚರಿಸಿದರೂ ಇಂಥದ್ದೇ ‘ಹಣದ ಹೊಳೆ’ ಯೋಜನೆಗಳನ್ನೇ ಹುಡುಕುವ ಸರ್ಕಾರದ ಮನಸ್ಥಿತಿಗೆ ಟ್ಯಾಂಕರ್ ಮಾಫಿಯಾ ಹಾಗೂ ಕಾಂಟ್ರಾಕ್ಟ್ ಮಾಫಿಯಾಗಳು ಕಾರಣವೇ ಎಂಬ ಬಲವಾದ ಅನುಮಾನ ಮೂಡಿಸಿದೆ.

ರಾಜಧಾನಿ ಸ್ಥಿತಿ ಕಷ್ಟ, ಕಷ್ಟ: ಬೆಂಗಳೂರಿಗೆ ವಾರ್ಷಿಕ 18 ಟಿಎಂಸಿ ನೀರನ್ನು ಕಾವೇರಿ ಕೊಳವೆ ಜಲಾಶಯಗಳಿಂದ ತಂದು ಪೂರೈಕೆ ಮಾಡಲಾಗುತ್ತಿದೆ. ಕಾವೇರಿಯಿಂದ ನೀರು ತಂದಿರುವ ಯೋಜನೆ ಸವಾಲಿನದಾಗಿದ್ದರೂ ಇದು ಶಾಶ್ವತವಲ್ಲ ಎಂಬ ನಗ್ನ ಸತ್ಯವನ್ನು ಸರ್ಕಾರ ಅರಿಯಬೇಕಿದೆ. ಈಗಾಗಲೇ ಪೂರೈಕೆಯಾಗುತ್ತಿರುವ ನೀರಿನ ಪೈಕಿ ಶೇ. 42 ವ್ಯರ್ಥವಾಗುತ್ತಿದ್ದು, ಸ್ಥಳೀಯ ಜಲಮೂಲಗಳನ್ನು ಬೆಂಗಳೂರು ರಕ್ಷಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಸಂಕಷ್ಟಗಳು ಎದುರಾಗಲಿವೆ.

ಪ್ರತಿದಿನ ಬೆಂಗಳೂರಿನಲ್ಲಿ ಜಲಮಂಡಳಿ 1,450 ಎಂಎಲ್​ಡಿ ನೀರು ಪೂರೈಸುತ್ತಿದ್ದು, 600 ದಶಲಕ್ಷ ಲೀಟರ್ ನೀರನ್ನು ಬೋರ್​ವೆಲ್​ಗಳ ಮೂಲಕ ಪಡೆದು ಬಳಸಲಾಗುತ್ತಿದೆ. ಇತ್ತೀಚೆಗೆ ಜ್ಞಾನ ಆಯೋಗ ಕೂಡ ಬೆಂಗಳೂರು ಜಲಮಂಡಳಿಯನ್ನು ಎಚ್ಚರಿಸಿದ್ದು, 2020ರ ವೇಳೆಗೆ ಬೆಂಗಳೂರಿನ ಅಂತರ್ಜಲ ಸಂಪೂರ್ಣ ಬರಿದಾಗುವ ಎಚ್ಚರಿಕೆಯನ್ನು ಅದು ನೀಡಿದೆ.

ನಗರದಲ್ಲಿ ನೀರು ಬಳಕೆಗೆ ಇದ್ದಷ್ಟು ಒತ್ತು ಸಂರಕ್ಷಣೆಗೆ ಸಿಗುತ್ತಿಲ್ಲ. ಇದಕ್ಕೆ ಸ್ಥಳೀಯ ಪ್ರಾಧಿಕಾರಗಳ ನಿರ್ಲಕ್ಷ್ಯವೇ ಮೂಲ ಕಾರಣವಾಗಿದ್ದು, ಅಂತರ್ಜಲ ಮರುಪೂರಣಕ್ಕೆ ಯಾವುದೇ ಕ್ರಮಗಳು ಜಾರಿ ಆಗುತ್ತಿಲ್ಲ. ಇದೇ ಬಹುಪಾಲು ಸಮಸ್ಯೆಗಳಿಗೆ ಕಾರಣವಾಗುತ್ತಿದೆ.

ಎತ್ತಿನಹೊಳೆಯಲ್ಲೂ ಪ್ರತಿಷ್ಠೆ?: ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ಪೈಕಿ ಬೆಂಗಳೂರಿಗೆ 2.5 ಟಿಎಂಸಿ ನೀರು ತರುವುದಾಗಿ ಸರ್ಕಾರ ಹೇಳಿದೆ. ಆದರೆ ಈ ಯೋಜನೆಯಿಂದ 9.6 ಟಿಎಂಸಿ ನೀರು ಮಾತ್ರವೇ ಲಭ್ಯವಾಗಲಿದೆ ಎಂದು ಐಐಎಸ್​ಸಿ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅಧ್ಯಯನ ನಡೆಸಿ ಹೇಳಿದ್ದರು. ಈ ವಿಚಾರದಲ್ಲಿ ವಿಜ್ಞಾನಿಗಳನ್ನು ವಿಶ್ವಾಸಕ್ಕೆ ಪಡೆದು ಯೋಜನೆಯನ್ನು ಮರು ಪರಿಶೀಲಿಸಬೇಕಿದ್ದ ಸಿದ್ದರಾಮಯ್ಯ ಸರ್ಕಾರ ವಿಜ್ಞಾನಿಗಳನ್ನು ಟೀಕಿಸಿ ಯೋಜನೆಯನ್ನು ಪ್ರತಿಷ್ಠೆಯಾಗಿ ಪಡೆಯಿತು.

13 ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆಯನ್ನು ಕೈಗೊಳ್ಳಲಾಗಿದ್ದು, ಬೆಂಗಳೂರಿನ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ 1.5 ಟಿಎಂಸಿ ಹಾಗೂ ಹೆಸರಘಟ್ಟ ಕೆರೆಯಲ್ಲಿ 1 ಟಿಎಂಸಿ ನೀರು ಸಂಗ್ರಹಕ್ಕೆ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ವಿಜ್ಞಾನಿಗಳ ಹೇಳುವಂತೆ 24 ಟಿಎಂಸಿ ನೀರು ದೊರೆಯುವುದು ಅನುಮಾನವಾಗಿದೆ.

ಲೆಕ್ಕಕ್ಕೆ ಸಿಗದ ಸಂಸ್ಕರಣೆ ಪ್ರಮಾಣ

ನಗರದಲ್ಲಿ ಪ್ರಸ್ತತ 1080 ದಶಲಕ್ಷ ಲೀಟರ್ ತ್ಯಾಜ್ಯ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯವನ್ನು ನಗರದ ತ್ಯಾಜ್ಯ ನೀರು ಸಂಸ್ಕರಣಾ ಘಟಕ(ಎಸ್​ಟಪಿ)ಗಳು ಹೊಂದಿವೆ. ಆದರೆ ನಗರದಲ್ಲಿ ಬಹುಪಾಲು ಹಳೇ ಪ್ರದೇಶಗಳಿದ್ದು, ಅಲ್ಲಿಂದ ಹೊರಹೊಮ್ಮುವ ತ್ಯಾಜ್ಯ ನೀರು ಎಸ್​ಟಿಪಿಗೆ ಹರಿಯುತ್ತಿಲ್ಲ. ನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯವನ್ನಷ್ಟೇ ಜಲಮಂಡಳಿ ಘೋಷಿಸಿದೆ ಹೊರತು ಎಷ್ಟು ಪ್ರಮಾಣದಲ್ಲಿ ನೀರನ್ನು ಸಂಸ್ಕರಿಸಲಾಗುತ್ತಿದೆ. ಎಷ್ಟು ಪ್ರಮಾಣದ ನೀರನ್ನು ಮರುಬಳಕೆ ಮಾಡುತ್ತಿದೆ ಎಂಬುದನ್ನು ಗೌಪ್ಯವಾಗಿಟ್ಟಿದೆ. ಈ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.

ಸ್ಥಳೀಯ ಮಟ್ಟದಲ್ಲಿ ಜಲಸಂರಕ್ಷಣೆ ಮಾಡುವುದನ್ನು ಬಿಟ್ಟು ಸರ್ಕಾರ ಅವೈಜ್ಞಾನಿಕ ಯೋಜನೆಗಳನ್ನು ಏಕೆ ರೂಪಿಸುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ಪೈಪ್​ಲೈನ್ ಮೂಲಕ ನೀರು ತರುವ ಯಾವ ಯೋಜನೆಯೂ ಯಶಸ್ವಿ ಯಾಗಿಲ್ಲ. ಬೆಂಗಳೂರನಲ್ಲೇ 15 ಟಿಎಂಸಿ ನೀರು ಸಂಗ್ರಹ ಸಾಧ್ಯವಿದ್ದು, ಆತ್ತ ಸರ್ಕಾರ ಗಮನ ಹರಿಸಲಿ.

| ಡಾ.ಟಿ.ವಿ. ರಾಮಚಂದ್ರ ವಿಜ್ಞಾನಿ

ನೀರಿಗಾಗಿ ದುಬಾರಿ ಮೊತ್ತ ತೆರುವ ದುಸ್ಥಿತಿ

ಬೆಂಗಳೂರಿನಲ್ಲಿ ಅವ್ಯಾಹತವಾಗಿರುವ ಟ್ಯಾಂಕರ್ ಮಾಫಿಯಾ ವಿರುದ್ಧ ಸಮರ ಸಾಧಿಸುವ ಮುನ್ನವೇ ಬಿಬಿಎಂಪಿ ಹಾಗೂ ಜಲಮಂಡಳಿಗಳು ಶಸ್ತ್ರತ್ಯಾಗ ಮಾಡಿದನ್ನು ಸ್ಮರಿಸಬಹುದಾಗಿದೆ. ಟ್ಯಾಂಕರ್​ಗಳಿಗೆ ದರ ನಿಗದಿ ಮಾಡುವುದಾಗಿ ಘೋಷಿಸಿತ್ತಾದರೂ ಜಾರಿಗೆ ಬಂದಿಲ್ಲ. ರಾಜಧಾನಿಯಲ್ಲಿ ಟ್ಯಾಂಕರ್ ಅವಲಂಬಿತ ಪ್ರದೇಶಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ದುಬಾರಿ ಮೊತ್ತವನ್ನು ತೆತ್ತು ನೀರು ಪಡೆಯಬೇಕಾದ ದುಸ್ಥಿತಿ ಇದೆ.

|ಅಭಯ್ ಮನಗೂಳಿ ಬೆಂಗಳೂರು

Leave a Reply

Your email address will not be published. Required fields are marked *