ರಾಮಮಂದಿರ ಆಗಲಿ ಎಂದಿದ್ದು ತಪ್ಪೇ?: ಬಿ.ಜನಾರ್ದನ ಪೂಜಾರಿ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾಗಬೇಕು ಎಂಬುದು ಎಲ್ಲ ಹಿಂದುಗಳ ಕನಸು. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಇದನ್ನು ನಾನು ಹೇಳಿದ್ದು ತಪ್ಪಾ ?

-ಹೀಗೆಂದವರು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ.

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹುಟ್ಟುಹಬ್ಬ ಅಂಗವಾಗಿ ಜೆಪ್ಪುವಿನ ಆಶ್ರಮಕ್ಕೆ ಹಣ್ಣು ಹಂಪಲು ವಿತರಣೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಹೇಳಿರುವ ಮಾತಿಗೆ ಈಗಲೂ ಬದ್ಧನಾಗಿದ್ದೇನೆ. ನಾನು ಹೀಗೆ ಹೇಳಿದ್ದಕ್ಕೆ ನನ್ನ ವಿರುದ್ಧ ಮಾತನಾಡುವವರಿದ್ದಾರೆ. ಕೊಲ್ಲುವುದಾಗಿ ಹೇಳುವವರೂ ಇದ್ದಾರೆ. ಹಾಗೆ ಕೊಲ್ಲುವವರಿಗೆ ತೃಪ್ತಿಯಾಗುವುದಿದ್ದರೆ ಕೊಲ್ಲಲಿ. ಸಾಯುವವರೆಗೂ ನಾನು ಅದನ್ನೇ ಹೇಳುತ್ತೇನೆ. ಶ್ರೀರಾಮಚಂದ್ರ, ಏಸು, ಪೈಗಂಬರ್ ಅವರನ್ನು ದೇವರೆಂದು ನಂಬಿದವ ನಾನು. ನನ್ನ ದೃಷ್ಟಿಯಲ್ಲಿ ಅವರೆಲ್ಲ ದೇವರ ಹಾಗೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ? ಎಂದರು.

ಟಿಕೆಟ್ ಕೊಟ್ಟರೆ ಸ್ಪರ್ಧೆಗೆ ರೆಡಿ: ಲೋಕಸಭೆ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸಲು ಸಿದ್ಧನಿದ್ದೇನೆ ಎಂದು ಹೈಕಮಾಂಡಿಗೂ ತಿಳಿಸಿದ್ದೇನೆ. ನನಗೆ ಅಥವಾ ಬೇರೆ ಯಾರಿಗೆ ಬೇಕಾದರೂ ಟಿಕೆಟ್ ಸಿಗಲಿ. ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಗೆಲ್ಲಿಸಬೇಕು. ಪರಿಶ್ರಮದಿಂದ ಕೆಲಸ ಮಾಡಿ, ಮತದಾರರಲ್ಲಿ ನಂಬಿಕೆ ಹುಟ್ಟಿಸಬೇಕು. ನಂಬಿಕೆ ಇಲ್ಲದಿದ್ದರೆ ಯಾರಿಗೂ ಗೆಲ್ಲಲು ಸಾಧ್ಯವಿಲ್ಲ. ಈ ಬಾರಿಯೂ ಕಾಂಗ್ರೆಸ್ ಗೆಲ್ಲಲು ಒಟ್ಟಾಗಿ ಕೆಲಸ ಮಾಡಬೇಕು ಎಂದು ಜನಾರ್ದನ ಪೂಜಾರಿ ಹೇಳಿದರು.