More

    ಮನಿಮಾತು|ಉಳಿತಾಯಕ್ಕೆ ದುಡ್ಡಿಲ್ಲ ಎನ್ನುವುದು ಸತ್ಯವೇ?

    ನಾನು ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರೀಷಿಯನ್. ತಿಂಗಳಿಗೆ 15 ಸಾವಿರ ಸಂಬಳ. ಮನೆಗೆ 4 ಸಾವಿರ ಕಳುಹಿಸುತ್ತಿದ್ದೇನೆ. ಈವರೆಗೆ ಯಾವುದೇ ಹಣ ಉಳಿತಾಯ ಮಾಡಿಲ್ಲ. ನಾನು ಆದಾಯ ಹೆಚ್ಚಿಸಿಕೊಂಡು ಉಳಿತಾಯ ಮಾಡಲು ಮಾರ್ಗದರ್ಶನ ಮಾಡಿ.

    ಮನಿಮಾತು|ಉಳಿತಾಯಕ್ಕೆ ದುಡ್ಡಿಲ್ಲ ಎನ್ನುವುದು ಸತ್ಯವೇ?| ಹನುಮಂತಪ್ಪ ಹುಬ್ಬಳ್ಳಿ

    ನಾನು ಗ್ರಾಮೀಣ ಪ್ರದೇಶವೊಂದರಲ್ಲಿ ಹಣಕಾಸು ನಿರ್ವಹಣೆ ಬಗ್ಗೆ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದೆ. ಹೀಗೆ ಮಾತನಾಡುವಾಗ ಹೇಗೆ ಹಣ ಉಳಿತಾಯ ಮಾಡಬಹುದು ಎನ್ನುವ ಬಗ್ಗೆ ವಿವರಿಸುತ್ತಿದ್ದೆ. ಆಗ ಎದ್ದು ನಿಂತ ವ್ಯಕ್ತಿಯೊಬ್ಬರು ಸರ್ ನಮಗೆ ಊಟ ಬಟ್ಟೆಗೆ ಹಣ ಇಲ್ಲ, ಇನ್ನು ಉಳಿತಾಯ ಎಲ್ಲಿಂದ ಸರ್ ಅಂತ ಪ್ರಶ್ನೆ ಮಾಡಿದ್ರು. ನಾನು ಒಂದು ಕ್ಷಣ ಸುಮ್ಮನಾಗಿ, ಅಣ್ಣಾ ತಪ್ಪು ತಿಳಿಯಬೇಡಿ ಒಂದು ಪ್ರಶ್ನೆ ಕೇಳ್ತೀನಿ, ಅದಕ್ಕೆ ನೀವು ಪ್ರಾಮಾಣಿಕವಾದ ಉತ್ತರ ನೀಡಬೇಕೆಂದೆ. ಅದಕ್ಕೆ ಅವರು ಖಂಡಿತ ಅಂದ್ರು. ಈ ಪ್ರಶ್ನೆ ಕೇಳಿದ್ರೆ ನಿಮಗೆ ಮುಜುಗರವಾಗಬಹುದು, ಆದರೆ ನಿಮ್ಮನ್ನು ಅವಮಾನಿಸುವುದು ನನ್ನ ಉದ್ದೇಶವಲ್ಲ. ನೀವು ಕಾರ್ಯಕ್ರಮಕ್ಕೂ ಮುಂಚೆ ಸಿಗರೇಟ್ ಸೇದುವುದನ್ನು ನೋಡಿದೆ, ನಿಜ ಹೇಳಿ ನೀವು ಸಿಗರೇಟ್ ಸೇದುತ್ತೀರಾ ಎಂದು ಪ್ರಶ್ನಿಸಿದೆ. ಕಾರ್ಯಕ್ರಮದಲ್ಲಿದ್ದ ವ್ಯಕ್ತಿ ಸರ್ ಹೌದು ದಿನಕ್ಕೆ 5 ಸಿಗರೇಟ್ ಸೇದುತ್ತೇನೆ ಅಂದ್ರು. ಪ್ರತಿ ಸಿಗರೇಟ್​ನ ಬೆಲೆ ಎಷ್ಟು ಅಂದೆ. ಅದಕ್ಕೆ ಸರ್ ಒಂದಕ್ಕೆ 15 ರೂ. ಅಂದ್ರು. ಅಲ್ಲ ಉಳಿತಾಯಕ್ಕೆ ಹಣ ಇಲ್ಲ ಅಂತೀರಿ, ದಿನಕ್ಕೆ ಸಿಗರೇಟ್ ಗೆ 75 ರೂಪಾಯಿ ಎಲ್ಲಿಂದ ಬರುತ್ತೆ ಅಂತ ಪ್ರಶ್ನೆ ಮಾಡಿದೆ. ಅದಕ್ಕೆ ಅವರು ಪ್ರತಿಕ್ರಿಯಿಸದೆ ಸುಮ್ಮನಾದರು. ನೋಡುವುದಕ್ಕೆ ಇದೊಂದು ಸಣ್ಣ ನಿದರ್ಶನ ಎನಿಸಿದರೂ ಮನಸ್ಸು ಇದರಲ್ಲೊಂದು ಕಲಿಕೆ ಇದೆ. ದಿನಕ್ಕೆ ಸಿಗರೇಟ್ ಗೆ 75 ರೂಪಾಯಿ ಖರ್ಚು ಮಾಡಿದ್ರೆ ಒಂದು ತಿಂಗಳಿಗೆ ರೂ. 2250 ಬೇಕು, ಅಂದರೆ ವರ್ಷಕ್ಕೆ ಆ ವ್ಯಕ್ತಿ ಸಿಗರೇಟ್ ಗಾಗೇ ರೂ. 27 ಸಾವಿರ ಖರ್ಚು ಮಾಡುತ್ತಾನೆ. ಆರೋಗ್ಯ ಕೆಡಿಸುವ ಸಿಗರೇಟ್ ಗೆ ಖರ್ಚು ಮಾಡಲು ವ್ಯಕ್ತಿಯೊಬ್ಬರ ಬಳಿರೂ. 27 ಸಾವಿರ ಇದೆ ಎಂದರೆ ಉಳಿತಾಯಕ್ಕೆ ಯಾಕಿಲ್ಲ?

    ಹನುಮಂತಪ್ಪ ಅವರೆ ಉಳಿತಾಯ ಎನ್ನುವುದು ಒಂದು ಮನಸ್ಥಿತಿ. ಯಾರು ಉಳಿತಾಯ ಮಾಡಲು ನಿರ್ಧಾರಿಸುತ್ತಾರೋ ಅವರಿಗೆ ದುಡಿಯಲು, ಗಳಿಕೆ ಮಾಡಿ ಹೂಡಲು ನೂರಾರು ದಾರಿಗಳು ಕಾಣುತ್ತವೆ. ಸಂಬಳ ಬಂದ ನಂತರದಲ್ಲಿ, ಖರ್ಚು ಮಾಡಿ ಉಳಿದದ್ದನ್ನು ನಾವು ಉಳಿತಾಯ ಎಂದುಕೊಳ್ಳುತ್ತೇವೆ. ಆದರೆ ಸಂಬಳ ಬಂದ ತಕ್ಷಣ ಒಂದಷ್ಟು ಉಳಿತಾಯ ಮಾಡಿ, ನಂತರದಲ್ಲಿ ತಿಂಗಳ ಖರ್ಚು ಮಾಡಿದರೆ ಕ್ರೋಡಿಕರಣ ಸುಲಭ. ಲೆಕ್ಕವಿಲ್ಲದೆ ಖರ್ಚು ಮಾಡಿದರೆ ಎಷ್ಟೇ ಗಳಿಸಿದರೂ ಉಳಿಸಲು ಸಾಧ್ಯವಿಲ್ಲ. ನೀವು ಉಳಿತಾಯ ಮಾಡುವ ಜತೆಗೆ ಬಿಡುವಿನ ಸಮಯದಲ್ಲಿ ಪಾರ್ಟ್ ಟೈಂ ಇಲೆಕ್ಟ್ರೀಷಿನ್ ಕೆಲಸ ಮಾಡಿ. ಕೆಲಸದ ಅವಧಿ ಮುಗಿದ ಮೇಲೆ ಮತ್ತು ವಾರಾಂತ್ಯದಲ್ಲಿ ಕೆಲಸ ಮಾಡಿದ್ರೂ ತಿಂಗಳಿಗೆ ಹೆಚ್ಚುವರಿಯಾಗಿ 7 ರಿಂದ 8 ಸಾವಿರ ಗಳಿಕೆ ಸಾಧ್ಯ. ದುಡ್ಡಿಲ್ಲ ಎಂದು ಕೂರಬೇಡಿ. ನ್ಯಾಯಯುತವಾಗಿ ಹಣಗಳಿಕೆಗೆ ಪರಿಶ್ರಮ ಹಾಕಿ. ಭಗವಂತ ನಿಮ್ಮ ಕುಟುಂಬಕ್ಕೆ ಒಳಿತು ಮಾಡಲಿ.

    ನಾನು ಖಾಸಗಿ ಕಂಪನಿಯ ಉದ್ಯೊಗಿ. ಇರುವ ಕೆಲಸ ಬಿಟ್ಟು ಸ್ವಂತ ಊರಿನಲ್ಲಿ ವ್ಯಾಪಾರ ಮಾಡುವ ಉದ್ದೇಶವಿದೆ. ನಾನು ಮಾಡಲು ಹೊರಟಿರುವ ಬಿಸಿನೆಸ್ ಮಿನಿ ಸೂಪರ್ ಮಾರ್ಕೆಟ್. ಇದನ್ನು ಹೇಗೆ ಅಭಿವೃದ್ಧಿ ಪಡಿಸಬಹುದು, ಮುದ್ರಾ ಲೋನ್ ಹೇಗೆ ಪಡೆಯುವುದು ತಿಳಿಸಿ.

    | ಪವನ್ ಕುಮಾರ್ ಬೆಂಗಳೂರು

    ಸಣ್ಣ ಬಿಸಿನೆಸ್ ಆದರೂ ಸರಿ ಅದಕ್ಕೆ ಸರಿಯಾದ ಒಂದು ಬಿಸಿನೆಸ್ ಪ್ಲಾನ್ ಇರಬೇಕು. ನೀವು ಯಾವ ಊರಿನಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಬೇಕು ಎನ್ನುತ್ತಿದ್ದೀರಿ? ಲೊಕೇಷನ್ ಏನು? ಸಾಕಷ್ಟು ಗ್ರಾಹಕರು ಬರುವ ಅಂದಾಜಿದೆಯಾ? ಸೂಪರ್ ಮಾರ್ಕೆಟ್ ಮಾಡಿದಾಗ ಅಂಗಡಿ ಬಾಡಿಗೆ ಮತ್ತು ಅಂಗಡಿಯ ಕೆಲಸಗಾರರ ಸಂಬಳ ಕಳೆದು ನೀವು ಗಳಿಸಬಹುದಾದ ಲಾಭ ಎಷ್ಟು? ಆರಂಭಿಕ ಹೂಡಿಕೆ ಎಷ್ಟು? ಹೀಗೆ ಹತ್ತಾರು ವಿಷಯಗಳನ್ನು ಚರ್ಚೆ ಮಾಡಿ ಮುಂದುವರಿಯಬೇಕಾಗುತ್ತದೆ. ಹೊಳೆಗೆ ಸುರಿದರೂ ಅಳೆದು ಸುರಿ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಇದರ ಅರ್ಥ, ಅಳತೆ ಅಂದಾಜು ಮಾಡದೆ ಯಾವುದೇ ಕೆಲಸ ಮಾಡಬಾರದು ಎಂದು. ನಿಮ್ಮ ಅಂಗಡಿ ಆರಂಭಿಸುವ ವಿಚಾರವೂ ಅಷ್ಟೇ, ಎಲ್ಲಾ ದಿಕ್ಕಿನಲ್ಲೂ ಯೋಚನೆ ಮಾಡಿದ ಬಳಿಕವಷ್ಟೇ ನೀವು ಅಂತಿಮ ತೀರ್ವನಕ್ಕೆ ಬರಬೇಕು. ಕೆಲಸ ಬಿಟ್ಟು ಅಂಗಡಿ ಆರಂಭಿಸಿದರೆ ನಿಮ್ಮ ಸಂಬಳದ ಹಣವನ್ನು ಅಂಗಡಿಯಿಂದ ಗಳಿಸಿಕೊಳ್ಳಬಹುದಾ ಎನ್ನುವ ಬಗ್ಗೆ ನಿಮಗೆ ಒಂದು ಅಂದಾಜಿರಬೇಕು. ಕೆಲಸ ಬಿಟ್ಟು ಅಂಗಡಿ ಆರಂಭಿಸೋಣ ಮುಂದೇನಾಗುತ್ತೋ ನೋಡೋಣ ಎಂದು ಮುನ್ನಡೆದರೆ ನಿಮ್ಮ ಮನೆಯ ಹಣಕಾಸಿನ ಪರಿಸ್ಥಿತಿ ಹದಗೆಡುತ್ತದೆ. ಹಾಗಾಗಿ ಅಳೆದು ತೂಗಿ ನಿರ್ಧಾರಕ್ಕೆ ಬನ್ನಿ. ಇನ್ನು ಮುದ್ರಾ ಲೋನ್ ಮೂರು ಮಾದರಿಯಲ್ಲಿ ಸಿಗುತ್ತದೆ. ಅಂಗಡಿ ನಿರ್ವಣಕ್ಕೂ ಈ ಲೋನ್ ಕೊಡಲಾಗುತ್ತದೆ. ಆದರೆ ಎಷ್ಟು ಲೋನ್ ಸಿಗುತ್ತದೆ ಎನ್ನುವುದು ನಿಮ್ಮ ಬಿಸಿನೆಸ್ ಪ್ಲಾನ್ ಮೇಲೆ ಅವಲಂಬಿತವಾಗಿರುತ್ತದೆ. ಮುದ್ರಾ ಯೋಜನೆಯಲ್ಲಿ ಶಿಶು, ಕಿಶೋರ್, ತರುಣ್ ಎಂಬ 3 ಮಾದರಿಯ ಸಾಲಗಳಿವೆ. ರೂ. 50 ಸಾವಿರದಿಂದ 10 ಲಕ್ಷದ ವರೆಗೆ ಸಾಲ ಸಿಗುತ್ತದೆ. ಈ ಬಗ್ಗೆ ಹತ್ತಿರದ ಬ್ಯಾಂಕ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ.

    ನಾನು ಪೋಸ್ಟ್ ಅಫೀಸ್ ಹಿರಿಯನಾಗರಿಕರ ಫಿಕ್ಸೆಡ್ ಡೆಪಾಸಿಟ್ ಯೋಜನೆ ಅಡಿ ಹೂಡಿಕೆ ಮಾಡಿದ್ದೇನೆ. ಈ ಉಳಿತಾಯಕ್ಕೆ ಆದಾಯ ತೆರಿಗೆಯ ಸೆಕ್ಷನ್ 80 ಸಿ ಅಡಿ ತೆರಿಗೆ ವಿನಾಯಿತಿ ಸಿಗುವುದೇ ಅಥವಾ 80 ಟಿಟಿಬಿ ಅಡಿಯಲ್ಲಿ ವಿನಾಯಿತಿ ಪಡೆಯಬೇಕೋ?

    | ವೆಂಕಟೇಶ್

    ನೀವು ಹಿರಿಯನಾಗರಿಕರ ಉಳಿತಾಯ ಯೋಜನೆ (ಎಸ್ ಸಿಎಸ್ ಎಸ್) ಅಡಿಯಲ್ಲಿ ಹಣ ತೊಡಗಿಸಿದ್ದೀರಿ ಎಂದು ಭಾವಿಸಿದ್ದೇನೆ. ಇದರಲ್ಲಿ ನೀವು ಸೆಕ್ಷನ್ 80 ಸಿ ಅಡಿಯಲ್ಲಿ ರೂ. 1.5 ಲಕ್ಷದ ವರೆಗಿನ ಹೂಡಿಕೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಹೂಡಿಕೆ ಮೇಲಿನ ಬಡ್ಡಿ ಗಳಿಕೆಗೆ ರೂ. 50 ಸಾವಿರ ವರೆಗೆ ಗೆ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ ವಿನಾಯಿತಿ ಲಭ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts