ಮೊನ್ನೆ ಮೊನ್ನೆಯಷ್ಟೇ 6ನೇ ತರಗತಿಯ ಹುಡುಗನೊಬ್ಬ ಒಂಬತ್ತನೇ ತರಗತಿಯ ಹುಡುಗನಿಗೆ ಚಾಕು ಹಾಕಿ ಹತ್ಯೆ ಮಾಡಿದ ಬಗ್ಗೆ ಮಾಧ್ಯಮದಲ್ಲಿ ನೋಡಿದಾಗ ಮನಸ್ಸು ಬಹಳ ವಿಚಲಿತವಾಯಿತು. ಮಕ್ಕಳು ಆಟವಾಡು ವಾಗ, ಶಾಲೆಗಳಲ್ಲಿ, ತರಗತಿಗಳಲ್ಲಿ ಹೀಗೆ ಅವರಲ್ಲಿಯೇ ಏನೋ ಸಣ್ಣಪುಟ್ಟ ಗೊಂದಲ, ಕೋಪಕ್ಕೆ ಒಳಗಾಗುವುದು ಸಹಜ. ಒಂದಷ್ಟು ಸಮಯ ಕಳೆದು ರಾಜಿಯಾಗಿ ಮತ್ತೆ ಜೊತೆಯಾಗಿ ಆಡುತ್ತಾರೆ. ಆದರೆ ಈ ಘಟನೆಯಲ್ಲಿ ಸಣ್ಣ ಕೋಪವೊಂದು ವಿಕೋಪಕ್ಕೆ ಹೋಗಿ ಬಾಲಕನ ಹತ್ಯೆಯಾಗಿರು ವುದು ದುರದೃಷ್ಟವೇ ಸರಿ. ಆಕಸ್ಮಿಕವಾಗಿ ಇಂತಹದೊಂದು ಪ್ರಕರಣ ನಡೆದು ಹೋಗಿದ್ದು ವಿಷಾದ ವ್ಯಕ್ತಪಡಿಸುವುದರ ಜೊತೆಗೆ ನಾವೆಲ್ಲ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದೆನಿಸುತ್ತದೆ.

ಈ ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿ, ಮಕ್ಕಳ ಪಾಲಕರಿಗೆ ಕಿವಿಮಾತನ್ನು ಹೇಳಿದ್ದಾರೆ. ಮಕ್ಕಳ ಓದು ಮಾತ್ರವಲ್ಲದೆ ಅವರ ನಡವಳಿಕೆ, ವರ್ತನೆ, ಗೆಳೆಯರ ಜೊತೆಗಿನ ಸಹವಾಸಗಳ ಕಡೆಗೂ ಗಮನ ನೀಡಬೇಕು. ಯಾವುದು ತಪ್ಪು, ಯಾವುದು ಸರಿ ಎಂಬ ಅರಿವು ಮೂಡಿಸಿ ಅವರನ್ನು ಸುಶಿಕ್ಷಿತರನ್ನಾಗಿಸಬೇಕು ಎಂದಿದ್ದಾರೆ.
ಇಂದಿನ ದಿನಗಳಲ್ಲಿ ಹೆಚ್ಚಾಗಿ ಗಂಡ-ಹೆಂಡತಿ ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಪುಟ್ಟ ಕುಟುಂಬಗಳೇ ಹೆಚ್ಚಿವೆ. ಗಂಡ-ಹೆಂಡತಿ ಇಬ್ಬರೂ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ರಾತ್ರಿ-ಹಗಲು ದುಡಿಯುತ್ತಾರೆ. ಮಕ್ಕಳಿಗೆ ಏನೂ ಕೊರತೆಯಾಗದಂತೆ ಬೇಕು-ಬೇಕಾದುದನ್ನೆಲ್ಲ ಕೊಡಿಸುತ್ತಾರೆ. ಒಳ್ಳೆಯ ಶಾಲೆಗೆ ಸೇರಿಸುತ್ತಾರೆ, ಟ್ಯೂಶನ್ ಕೊಡಿಸುತ್ತಾರೆ, ನೃತ್ಯ, ಸಂಗೀತ, ಕರಾಟೆಗಳನ್ನು ಕಲಿಸುತ್ತಾರೆ. ಹೀಗೆ ಮಕ್ಕಳ ಅಭಿವೃದ್ಧಿಗಾಗಿ ಎಲ್ಲವನ್ನೂ ಮಾಡಲು ಸಿದ್ಧರಿರುತ್ತಾರೆ.
ಇಷ್ಟೆಲ್ಲ ಮಾಡುವಾಗ ಮಕ್ಕಳು ನಮ್ಮ ನಡವಳಿಕೆಗಳನ್ನು ಗಮನಿಸುತ್ತಾರೆ, ಅನುಸರಿಸುತ್ತಾರೆ. ಆದರೆ ಒಳಿತು-ಕೆಡುಕನ್ನು ವಿವೇಚಿಸುವಷ್ಟು, ತಪ್ಪು-ಸರಿಗಳನ್ನು ತಿಳಿಯುವಷ್ಟು ಪ್ರಬುದ್ಧರಾಗಿರುವುದಿಲ್ಲ, ಯೋಚಿಸಿ ಕಾರ್ಯಪ್ರವೃತ್ತರಾಗುವುದಿಲ್ಲ. ಕೆಲವು ವಿಚಾರಗಳ ಬಗ್ಗೆ ಹೆತ್ತವರು ಅಷ್ಟೇನೂ ಗಮನ ವಹಿಸುವುದಿಲ್ಲ. ಹಾಗಾದಾಗ ಮಕ್ಕಳಿಂದ ಅಚಾತುರ್ಯಗಳು ಘಟಿಸುವುದುಂಟು.
ಮಕ್ಕಳ ಮನಸ್ಸು ಅತಿ ಸೂಕ್ಷ್ಮವಾದುದು. ಎಲ್ಲವನ್ನೂ ನೋಡುತ್ತ ಅವನ್ನು ಅನುಕರಣೆ, ಅನುಸರಣೆ ಮಾಡಲು ಪ್ರೇರಣೆ ಪಡೆಯುತ್ತವೆ. ಹೇಗೆಂದರೆ, ಹಸಿ ಮಣ್ಣಿನ ಗೋಡೆಗೆ ಏನು ಎಸೆದರೂ ಅದು ತನ್ನಲ್ಲಿ ಹಿಡಿದಿಟ್ಟುಕೊಳ್ಳುವಂತೆ ಬಾಲ್ಯಾವಸ್ಥೆಯಲ್ಲಿ ಮಕ್ಕಳ ಮನಸ್ಸು ತನ್ನ ಸುತ್ತಮುತ್ತಲಿನ ಪರಿಸರ, ತಂದೆ-ತಾಯಿ, ನೆರೆ ಹೊರೆಯವರು ಮಾತ್ರವಲ್ಲದೆ ಟಿ.ವಿ. ಕಾರ್ಯಕ್ರಮ, ಪುಸ್ತಕ, ಕಾರ್ಟೂನು ಹೀಗೆ ಎಲ್ಲವುಗಳಿಂದ ಪ್ರಭಾವಿತಗೊಳ್ಳುತ್ತಾರೆ. ಜೊತೆಗೆ ಅದನ್ನೇ ಪುನರಾವರ್ತಿಸಲು ತೊಡಗುತ್ತಾರೆ.
ಇತ್ತೀಚಿನ ದಿನಗಳಲ್ಲಿ ಟಿ.ವಿ. ಮೊಬೈಲ್ ಫೋನ್ಗಳು ಕೂಡ ಮಕ್ಕಳ ಮನಸ್ಸಿನಲ್ಲಿ ಬಹಳಷ್ಟು ಪ್ರಭಾವ ಬೀರುತ್ತವೆ ಎಂಬುದರ ಬಗ್ಗೆ ನಮಗೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ಇನ್ನೂ ಮೀಸೆ ಚಿಗುರದ ಹುಡುಗರು ಬೈಕ್ಗಳಲ್ಲಿ ವೀಲಿಂಗ್ ಮಾಡುವುದು, ಮನೆಯವರ ವಾಹನಗಳನ್ನು ಮನಸೋ ಇಚ್ಛೆ ಚಾಲನೆ ಮಾಡಿ ಅಪಘಾತ ಮಾಡುವುದು, ಪಾದಚಾರಿಗಳ ಸಾವಿಗೆ ಕಾರಣವಾಗುವುದು, ಧಾರಾವಾಹಿ, ಚಲನಚಿತ್ರಗಳಿಂದ ಪ್ರೇರಣೆಗೊಂಡು ಕಳ್ಳತನಕ್ಕೆ, ಆತ್ಮಹತ್ಯೆಗೆ ಮುಂದಾಗುವುದು ಹೀಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಮೊಬೈಲ್ ಫೋನ್ ಬಳಕೆಯಿಂದ ಸಾಕಷ್ಟು ಅವಾಂತರಗಳಾಗುತ್ತಿರುವ ಸುದ್ದಿಗಳನ್ನು ನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆನ್ಲೈನ್ ಗೇಮ್ ಹುಚ್ಚಿಗೆ ಅದೆಷ್ಟೋ ಮಕ್ಕಳು, ಯುವ ಜನತೆ ಹಣವನ್ನು ಮಾತ್ರವಲ್ಲದೆ ಜೀವವನ್ನೂ ಕಳೆದುಕೊಂಡಿದ್ದಾರೆ.
ತಂದೆ-ತಾಯಿಯ ಬಳಿ ಕಾಡಿ ಬೇಡಿ ಮೊಬೈಲ್ ಫೋನ್ ಕೊಳ್ಳುವ ಮಕ್ಕಳು ಓದುವ ನೆಪದಲ್ಲಿ ಕೋಣೆಯೊಳಗೆ ಸೇರಿಕೊಂಡು ಮೊಬೈಲ್ನಲ್ಲಿ ಹರಟೆ, ಪ್ರೀತಿ-ಪ್ರೇಮ, ಆನ್ಲೈನ್ ಗೇಮ್ಳಲ್ಲಿ ಮಗ್ನರಾದರೆ ಇತ್ತ ಮಗ/ಮಗಳು ಓದುತ್ತಿದ್ದಾರೆ ಎಂದು ಹೆತ್ತವರು ಭಾವಿಸಿ ಅವರಷ್ಟಕ್ಕೇ ಇರಲು ಬಿಡುತ್ತಾರೆ. ಒಂದೊಮ್ಮೆ ಮಕ್ಕಳ ಕಳ್ಳಾಟಗಳು ಗೊತ್ತಾದಾಗ ಕೆಲವರು ಅವರ ಕಿವಿ ಹಿಂಡಿ ತಿದ್ದಿ ಬುದ್ಧಿ ಹೇಳುತ್ತಾರೆ. ಇನ್ನು ಕೆಲವರು ಅವೆಲ್ಲ ಈಗ ಸಾಮಾನ್ಯ ಎಂದು ಭಾವಿಸುತ್ತಾರೆ. ಹೀಗೆ ಮಕ್ಕಳ ನಡವಳಿಕೆಗಳ ಬಗ್ಗೆ ಅಸಡ್ಡೆ ತೋರಿದರೆ ಮಕ್ಕಳು ಕೈ ತಪ್ಪಿ ಹೋದಂತೆಯೇ ಸರಿ. ಮಕ್ಕಳು ಮನೆಯಲ್ಲಿ ನೀಡುವ ಪಾಕೆಟ್ ಮನಿ ಸಾಕಾಗದೇ ಇದ್ದಾಗ ಪರ್ಸ್ನಿಂದ ಹಣ ಎಗರಿಸುವುದು, ಗೆಳೆಯರೊಂದಿಗೆ ಸೇರಿ ಬೀಡಿ, ಸಿಗರೇಟು ಮಾತ್ರವಲ್ಲದೆ ಗಾಂಜಾ, ಮದ್ಯ ಸೇವನೆ ಮಾಡುವ ಅಭ್ಯಾಸಗಳು ಮನೆಯವರ ಗಮನಕ್ಕೆ ಬಾರದಂತೆ ನಡೆಯುತ್ತಿರುತ್ತವೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಮಕ್ಕಳು ನಡೆಸುವ ಕಳ್ಳಾಟಗಳ ಬಗ್ಗೆ ಹೆತ್ತವರು ಆದಷ್ಟು ಜಾಗರೂಕರಾಗಿ ಇರಬೇಕಾದ ಅವಶ್ಯಕತೆ ಇದೆ. ಈಗ ಮಕ್ಕಳು ಶಾಲಾ-ಕಾಲೇಜಿಗೆ ಹೋಗದೇ ಇದ್ದರೆ ಹೆತ್ತವರ ಮೊಬೈಲ್ಗೆ ಮಕ್ಕಳ ಗೈರುಹಾಜರಿ ಸಂದೇಶ ರವಾನೆಯಾಗುತ್ತದೆ. ಅದರೂ ಕೆಲವು ಮಕ್ಕಳು ಹೆತ್ತವರ ಕಣ್ತಪ್ಪಿಸುತ್ತಾರೆ. ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ಎಲ್ಲೆಲ್ಲೋ ಸುತ್ತಾಡುತ್ತಾರೆ, ಅವಾಂತರಗಳನ್ನು ಮಾಡಿಕೊಳ್ಳುತ್ತಾರೆ.
ಮಕ್ಕಳಿಗೂ ಸ್ವಾತಂತ್ರ್ಯ ಬೇಕು. ಅವರಿಗೂ ಅವರದೇ ಆದ ಕನಸು, ಆಸೆ-ಆಕಾಂಕ್ಷೆಗಳಿರುತ್ತವೆ. ಹೆತ್ತವರಾಗಲಿ, ಪೋಷಕರಾಗಲಿ ಮಕ್ಕಳಿಗೆ ಕಠಿಣ ನಿಯಮಗಳನ್ನು ರೂಪಿಸಿ, ನಾವು ಹೇಳಿದ ಹಾಗೆ ಕೇಳಬೇಕು, ನಾವು ಹೇಳಿದ್ದು ಮಾಡಬೇಕು, ನಿಲ್ಲು ಅಂದರೆ ನಿಲ್ಲಬೇಕು, ಕೂರು ಎಂದರೆ ಕೂರಬೇಕು ಎಂಬ ರೀತಿಯಲ್ಲಿ ಮಕ್ಕಳನ್ನು ಅತಿಯಾದ ಹದ್ದುಬಸ್ತಿನಲ್ಲಿಟ್ಟು ಅವರ ಬಾಲ್ಯವನ್ನು ಚಿವುಟುವುದು ಖಂಡಿತ ತಪ್ಪು.
ಮಕ್ಕಳಿಗೂ ಒಂದಷ್ಟು ಸ್ವಾತಂತ್ರ್ಯ ನೀಡಬೇಕು. ಕನಸು, ಆಕಾಂಕ್ಷೆಗಳನ್ನು ತಿಳಿಸಲು, ತಮ್ಮ ಮಾತುಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಮಕ್ಕಳಿಗಾಗಿ ರೂಪಿಸುವ ನಿಯಮಗಳು ಅವರಿಗೆ ಉಸಿರುಗಟ್ಟುವಂತಿರಬಾರದು. ಹೆತ್ತವರ ಕಾಳಜಿ, ಆರೈಕೆಯಲ್ಲಿ ಮಕ್ಕಳು ತಮ್ಮ ಕಾಲ ಮೇಲೆ ತಾವೇ ನಿಲ್ಲುವಂತಹ ಛಲ, ಆತ್ಮವಿಶ್ವಾಸವನ್ನು ಹೊಂದಬೇಕು. ಅಂತಹ ವಾತಾವರಣ ನಿರ್ವಿುಸಿಕೊಡಲು ನಾವೆಲ್ಲ ಮುಂದಾಗಬೇಕು.
‘ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ’ ಎಂಬ ಮಾತನ್ನು ಸಾಕಷ್ಟು ಕಡೆಗಳಲ್ಲಿ ನಾನು ಉಲ್ಲೇಖ ಮಾಡುತ್ತಿರುತ್ತೇನೆ. ಮಕ್ಕಳು ತಪ್ಪು ಮಾಡಿದಾಗ, ಹಠ, ಕೋಪಗಳನ್ನು ಕಡಿಮೆಗೊಳಿಸದಿದ್ದಾಗ ಹೆತ್ತವರು ದಂಡಿಸಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಮುದ್ದಿನ ಮಗ/ಮಗಳು ಎಂದು ದಂಡಿಸದೇ ಇದ್ದರೆ ಮಕ್ಕಳ ತಪ್ಪನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಆದರೆ ಅದಕ್ಕಾಗಿ ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾದ ಸಂದರ್ಭವೂ ಒದಗಬಹುದು.
ತಂದೆ ಇಲ್ಲದ ಒಬ್ಬ ಹುಡುಗ ತನ್ನ ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ. ಶಾಲೆಗೆ ಹೋಗುತ್ತಿದ್ದ ಆತ ಶಾಲೆಯಲ್ಲಿ ತನ್ನ ತರಗತಿಯ ಮಕ್ಕಳ ಬ್ಯಾಗಿನಿಂದ ಪೆನ್ನು-ಪೆನ್ಸಿಲು, ಪುಸ್ತಕವನ್ನು ಕದ್ದು ತರುತ್ತಿದ್ದ. ಒಮ್ಮೆ ಆತನ ತಾಯಿಯು ಮಗನ ಬ್ಯಾಗಿನಲ್ಲಿ ಸಾಕಷ್ಟು ಬಗೆಯ ಪೆನ್ನು ಪುಸ್ತಕಗಳಿರುವುದನ್ನು ಕಂಡು ‘ಇವೆಲ್ಲ ಎಲ್ಲಿಂದ ಬಂದವು’ ಎಂದು ಕೇಳಿದಳು. ಆಗ ಮಗ, ‘ಅವು.. ಅವು.. ತರಗತಿಯ ಮಕ್ಕಳು ಕೊಟ್ಟಿದ್ದು’ ಎಂದು ಹೇಳಿದ. ‘ಹೌದಾ… ಒಳ್ಳೆದಾಯಿತು’ ಎಂದು ತಾಯಿ ಸುಮ್ಮನಾದಳು. ಈ ರೀತಿಯ ಘಟನೆ ಹಲವು ಬಾರಿ ಪುನರಾವರ್ತನೆಯಾದರೂ ತಾಯಿ ಸುಮ್ಮನೇ ಇರುತ್ತಾಳೆ. ಇದು ಮಗನ ಕಾರ್ಯವನ್ನು ಹುರಿದುಂಬಿಸಿದಂತಾಯಿತು. ಪರಿಣಾಮವಾಗಿ, ಹಲವು ವರ್ಷಗಳ ಬಳಿಕ ಆತ ದೊಡ್ಡ ಕಳ್ಳನಾದ. ಹೀಗೆಯೇ ಒಮ್ಮೆ ಕಳ್ಳತನ ಮಾಡುವಾಗ ಆತ ಪೊಲೀಸರ ಕೈಗೆ ಸಿಕ್ಕಿ ಬಿದ್ದ. ಜೊತೆಗೆ ಕಳ್ಳತನ ಮಾಡಿರುವುದು ಸಾಬೀತಾಗಿ ಆತನಿಗೆ ಶಿಕ್ಷೆ ವಿಧಿಸಲಾಯಿತು. ಆ ಸಂದರ್ಭದಲ್ಲಿ ಆತ ತಾಯಿಯ ಜೊತೆ ಮಾತನಾಡುವ ಇಚ್ಛೆ ವ್ಯಕ್ತಪಡಿಸಿದ. ಹಾಗೆ ತಾಯಿಯನ್ನು ಮಗನಿದ್ದ ಕೋಣೆಯ ಬಳಿ ಕರೆದುಕೊಂಡು ಬಂದಾಗ ‘ಅಮ್ಮಾ ನಿನ್ನ ಕಿವಿಯಲ್ಲಿ ಏನೋ ಹೇಳಬೇಕಿದೆ. ಇಲ್ಲಿ ಬಾ’ ಎಂದು ಕರೆದ. ಆಗ ಆತನ ಬಳಿಗೆ ಬಂದು ಕಿವಿಗೊಟ್ಟು ಕೇಳತೊಡಗಿದಾಗ ಗಟ್ಟಿಯಾಗಿ ತಾಯಿಯ ಕಿವಿಯನ್ನು ಕಚ್ಚಿದ. ಅಲ್ಲಿದ್ದ ಪೊಲೀಸರೆಲ್ಲರೂ ಆಕೆಯನ್ನು ರಕ್ಷಿಸಿದರು. ‘ಯಾಕೆ ಹೀಗೆ ಕಿವಿ ಕಚ್ಚಿದೆ’ ಎಂದು ತಾಯಿಯು ಮಗನನ್ನು ಕೇಳಿದಾಗ ಮಗ ಹೇಳಿದ. ‘ಅಂದು ನಾನು ಸಣ್ಣವನಿದ್ದಾಗಲೇ ಕದಿಯುವುದು ತಪ್ಪು ಎಂದು ತಿದ್ದಿ ಬುದ್ಧಿ ಹೇಳಿದ್ದರೆ ನಾನಿಂದು ದೊಡ್ಡ ಕಳ್ಳನಾಗುತ್ತಿರಲಿಲ್ಲ. ನೀನೇ ನನಗೆ ಪ್ರೋತ್ಸಾಹ ನೀಡಿ ದೊಡ್ಡ ಕಳ್ಳನಾಗಲು ಕಾರಣವಾದೆ’.
ಮಕ್ಕಳು ಮಾಡುವ ತಪ್ಪುಗಳನ್ನು ನೋಡುತ್ತ ಸುಮ್ಮನಿದ್ದರೆ, ನಾವೇ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ. ಬದಲಾಗಿ ತಪ್ಪನ್ನು ತಿದ್ದಿಕೊಳ್ಳಲು ಹೇಳಬೇಕು. ಮುಂದೆ ಇಂತಹ ತಪ್ಪನ್ನು ಮಾಡದಂತೆ ಎಚ್ಚರ ವಹಿಸಬೇಕು. ಮಕ್ಕಳನ್ನು ತಿದ್ದುವುದರ ಜೊತೆಗೆ ಹೆತ್ತವರೂ ಮಕ್ಕಳ ಎದುರಿನಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಗಂಡ-ಹೆಂಡತಿ ಜಗಳವಾಡುವುದು, ಕೆಟ್ಟದಾಗಿ ಬೈಯ್ದಾಡುವುದು, ಅಶ್ಲೀಲ ಪದ ಬಳಸುವುದು, ಹೊಡೆದಾಡುವುದು, ಇತರರ ಬಗ್ಗೆ ತಿರಸ್ಕಾರ ಭಾವನೆ ವ್ಯಕ್ತಪಡಿಸುವುದು ಇತ್ಯಾದಿಗಳೆಲ್ಲ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಜೊತೆಗೆ ಮಕ್ಕಳನ್ನು ದಡ್ಡ, ಕೋಣ ಎಂದೆಲ್ಲ ಮೂದಲಿಸುವುದು, ತರಗತಿಯ ಇತರ ಮಕ್ಕಳ ಜೊತೆ ಹೋಲಿಸುವುದರಿಂದ ಮಕ್ಕಳು ನೊಂದುಕೊಳ್ಳುತ್ತಾರೆ.
ನಮ್ಮ ಮಕ್ಕಳೇ ಆಗಿರಲಿ, ಬೇರೆಯವರ ಮಕ್ಕಳೇ ಆಗಿರಲಿ ಅವರನ್ನು ಯಾವಾಗಲೂ ಗೌರವಯುತವಾಗಿ ನಡೆಸಿಕೊಳ್ಳಬೇಕು. ಆಗ ಅವರೂ ಇತರರನ್ನು ಗೌರವದಿಂದ ಕಾಣುತ್ತಾರೆ. ಸಾರ್ವಜನಿಕವಾಗಿ ವಯಸ್ಕರನ್ನು ಮಕ್ಕಳು ಏಕವಚನದಿಂದ ಕರೆದಾಗ ಇರಿಸು-ಮುರಿಸಾಗುವುದು ಸಹಜ. ಗೌರವದಿಂದ ನಡೆಸಿಕೊಳ್ಳುವುದರ ಬಗ್ಗೆ ತಿಳಿಹೇಳಿದರೆ ಮಕ್ಕಳಿಗೆ ಮಾತ್ರವಲ್ಲದೆ ಹೆತ್ತವರಿಗೂ ಒಳ್ಳೆಯ ಹೆಸರು ಬರುತ್ತದೆ.
ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಅಥವಾ ಏನಾದರೂ ಕೆಟ್ಟ ಕೆಲಸ ಮಾಡಿದಾಗ ಮೊದಲು ನೋಡುವುದು ಯಾರು? ಅವರನ್ನು ಹೆತ್ತವರು. ಮಕ್ಕಳು ಸಾಧನೆ ಮಾಡಿದಾಗ, ಹೆತ್ತವರಿಗೆ ‘ಇಂತಹ ಮಗ/ಮಗಳನ್ನು ಪಡೆಯಲು ಪುಣ್ಯ ಮಾಡಿದ್ದೀರಿ, ನೀವು ಅದೃಷ್ಟವಂತರು’ ಎಂದು ಜನರು ಹೇಳುತ್ತಾರೆ. ಅದೇ, ಮಕ್ಕಳು ಕೆಟ್ಟ ಕೆಲಸ ಮಾಡಿದಾಗ ಹೆತ್ತವರ ಬಳಿ ‘ಎಂಥ ಮಕ್ಕಳಿಗೆ ಜನ್ಮ ನೀಡಿದ್ದೀರಿ? ಮಕ್ಕಳಿಂದಾಗಿ ನೀವೂ ತಲೆ ಎತ್ತದ ಹಾಗೆ ಆಯಿತಲ್ಲ’ ಎಂದು ಜನರು ಬೇಸರ ವ್ಯಕ್ತಪಡಿಸುತ್ತಾರೆ. ಹೀಗೆ ಮಕ್ಕಳು ಮಾಡುವ ಕೆಲಸದಲ್ಲಿ ಹೆತ್ತವರಿಗೂ ಪಾಲು ಇದೆ ಎಂಬುದನ್ನು ಮರೆಯಬಾರದು.
ತಪ್ಪು ಮಾಡುವುದು ಸಹಜ ಗುಣ ಅದನ್ನು ತಿದ್ದಿಕೊಳ್ಳುವುದು ಮಹೋನ್ನತವಾದ ಗುಣ. ಎಲ್ಲರೂ ಒಂದಲ್ಲ ಒಂದು ತಪ್ಪು ಮಾಡುತ್ತಾರೆ. ಆದರೆ ತಪ್ಪು ಮಾಡುವುದೇ ಜೀವನವಾಗಬಾರದು. ಮಕ್ಕಳಿಗೆ ಬಾಲ್ಯದಲ್ಲೇ ಸರಿ-ತಪ್ಪುಗಳ ಬಗ್ಗೆ ತಿಳಿಸಿಕೊಟ್ಟು ಉತ್ತಮ ಪ್ರಜೆಯಾಗಿಸುವ ನಿಟ್ಟಿನಲ್ಲಿ ಸದ್ಗುಣಗಳ ನೀರೆರೆದು ಪೋಷಿಸಬೇಕು. ಹಾಗೆಯೇ ಮಕ್ಕಳು ಟಿ.ವಿ., ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳಿಗೆ ಬಲಿಯಾಗದಿರುವಂತೆ, ಅವುಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳಿಂದ ಪ್ರೇರಿತರಾಗಿ ಕೆಟ್ಟ ಕೆಲಸಗಳನ್ನು ಮಾಡದಿರುವಂತೆ ಮಕ್ಕಳನ್ನು ಬೆಳೆಸೋಣ. ಮಕ್ಕಳನ್ನು ಆಸ್ತಿಯನ್ನಾಗಿ ಮಾಡೋಣ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)