
ಬಂಗಾರಪೇಟೆ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ವಿಸ್ತರಿಸಿದ್ದ ಕೋಚಿಮುಲ್ ಈಗ ವಿಂಗಡಣೆಯಾಗಿದ್ದು, ಕೋಲಾರಕ್ಕೆ ಸಂಬಂಧಪಟ್ಟ ಕೋಮುಲ್ಗೆ ಇದೇ ಮೊದಲ ಬಾರಿಗೆ ಚುನಾವಣೆ ನಿಗದಿಯಾಗಿದ್ದು, 13 ನಿರ್ದೇಶಕ ಸ್ಥಾನಗಳಿಗೆ ಜೂ.25ರಂದು ಮತದಾನ ನಡೆಯಲಿದೆ.
ಸಹಕಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಈ ಹಿಂದೆ ಅಷ್ಟಾಗಿ ಗಮನ ಸೆಳೆದಿಲ್ಲವಾದರೂ, ಈ ಬಾರಿ ರಾಜಕೀಯ ನಾಯಕರು ಅದರಲ್ಲೂ ಕ್ಯಾಬಿನೆಟ್ ದರ್ಜೆಯ ಮಂಡಳಿಗಳಲ್ಲಿರುವವರೂ ಸ್ಪರ್ಧೆಗಿಳಿದಿದ್ದು, ಕಣದಲ್ಲಿ ಜಿದ್ದಾಜಿದ್ದಿ ಗೋಚರವಾಗುತ್ತಿದೆ.
ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಕ್ಯಾಬಿನೆಟ್ ದರ್ಜೆಯ ನಿಗಮ ಮಂಡಳಿ ಅಧ್ಯಕ್ಷರೂ ಆಗಿರುವ
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವುದು ಸ್ವಪಕ್ಷ ಹಾಗೂ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆ ಹುಟ್ಟಿಹಾಕಿದೆ. ರಾಜಕೀಯ ವಲಯದಲ್ಲಿ ಕತೂಹಲಕ್ಕೂ ಕಾರಣವಾಗಿದೆ.
ಹಿಂದೆ ಕೋಚಿಮುಲ್ ಅಧ್ಯಕ್ಷರಾಗಿದ್ದ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಧ್ಯೆ ರಾಜಕೀಯ ಸಂಬಂಧ ಅಷ್ಟಕಷ್ಟೆ. ಇಬ್ಬರೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಸ್ವಪಕ್ಷೀಯರೇ ಆದರೂ ಕೋಮುಲ್ ವಿಚಾರದಲ್ಲಿ ಆರೋಪ&ಪ್ರತ್ಯಾರೋಪ ಮಾಡಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಶಾಸಕ ನಂಜೇಗೌಡ ಕೋಚಿಮುಲ್ ಅಧ್ಯಕ್ಷರಾದ ನಂತರ ಒಕ್ಕೂಟದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ, ಅವ್ಯವಹಾರಗಳ ಬಗ್ಗೆ ಶಾಸಕ ಎಸ್.ಎನ್.ಎನ್. ಆರೋಪ ಮಾಡಿ ರಾಜಕೀಯದಲ್ಲಿ ಕಂಪನ ಸೃಷ್ಟಿಸಿದ್ದರು. ಜತೆಗೆ ಕ್ಷೇತ್ರ ವ್ಯಾಪ್ತಿಗೆ ಬರುವ ಉತ್ತೂರು ಹೋಬಳಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೆಗಾ ಡೇರಿ ಬಗ್ಗೆ ಶಾಸಕರ ಗಮನಕ್ಕೂ ತರದ ಹಿನ್ನೆಲೆಯಲ್ಲಿ ಕೋಚಿಮುಲ್ ಆಡಳಿತ ಶಾಸಕರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು.
ಜತೆಗೆ, ಬಂಗಾರಪೇಟೆ ವಿಧಾನಸಭೆ ಕ್ಷೇತ್ರಕ್ಕೆ ಕೋಲಾರ ತಾಲೂಕಿನ ಉತ್ತೂರು ಹೋಬಳಿ ಸೇರಿದೆ. ಹೀಗಾಗಿ ಶಾಸಕರ ಕ್ಷೇತ್ರಕ್ಕೆ ಎರಡು ಸ್ಥಾನಗಳನ್ನು ಮೀಸಲಿಡಬೇಕು ಎಂದು ಎಸ್ಎನ್ ಎನ್ ಕೋಚಿಮುಲ್ ಆಡಳಿತದ ಮೇಲೆ ಒತ್ತಡ ಹೇರಿದ್ದರು. ಆದರೆ, ನಂಜೇಗೌಡರ ಅಡ್ಡಗಾಲಿನಿಂದ ಯಶಸ್ಸು ಸಿಕ್ಕಿರಲಿಲ್ಲ. ಇದು ಕೂಡ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಈ ಬೆಳವಣಿಗೆಗಳಿಂದ ಅಸಮಧಾನಗೊಂಡ ಎಸ್.ಎನ್.ಎನ್., ಕೋಚಿಮುಲ್ ಭ್ರಷ್ಟಾಚಾರ, ಸರ್ವಾಧಿಕಾರ ತೊಳೆದು ಹಾಕಲು ನಾನೇ ಏಕೆ ಸ್ಪರ್ಧೆ ಮಾಡಬಾರದು ಎಂದು ತಾಲೂಕಿನ ಕಾಂಗ್ರೆಸ್ ಮುಖಂಡರ ಜತೆ ಚರ್ಚಿಸಿ ಕೋಚಿಮುಲ್ ಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸಿ, ತಾಲೂಕಿನ ನತ್ತಿಬೆಲೆ ಡೇರಿಯಿಂದ ಡೆಲಿಗೇಟ್ ಆಗಿ ಆಯ್ಕೆಗೊಂಡರು. ಆದರೆ ಡೆಲಿಗೇಟ್ ಆಯ್ಕೆ ಅಕ್ರಮವಾಗಿದೆ ಎಂದು ಆರೋಪಿಸಿ ಸಹಕಾರ ಇಲಾಖೆ ಡಿಆರ್ ಅವರಿಗೆ ಹುನುಕುಂದ ವೆಂಕಟೇಶ್ ತಕರಾರು ಸಲ್ಲಿಸಿದ್ದರು. ಡೆಲಿಗೇಟ್ ಪರಿಶೀಲನೆಯಲ್ಲಿ ಶಾಸಕರ ಡೆಲಿಗೇಟ್ಅನ್ನು ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ್ದರು.
ಹುನುಕುಂದ ವೆಂಕಟೇಶ್ ಅವರ ತಕರಾರು ಅರ್ಜಿ ಬಗ್ಗೆ ಹೈಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಶಾಸಕರಿಗೆ ಜಯ ಸಿಕ್ಕಿದ್ದು, ಅದರಂತೆಯೇ ಈಗ ಬಂಗಾರಪೇಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಶಾಸಕರಿಗೆ ಜಯ?
ಈಗಾಗಲೇ ಹುನುಕುಂದ ವೆಂಕಟೇಶ್ ಎನ್ಡಿಎ ಅಭ್ಯರ್ಥಿಯಾಗಿ ಆಯ್ಕೆಗೊಂಡಿದ್ದಾರೆ. ಮೇಲ್ನೋಟಕ್ಕೆ ನೇರ ಸ್ಪರ್ಧೆ ಏರ್ಪಟ್ಟಿದ್ದರೂ ಒಳ ನೋಟದಲ್ಲಿ ಶಾಸಕರಿಗೆ ಪ್ಲಸ್ ಇದೆ. ಒಟ್ಟು 56 ಮತದಾರರು ಮತ ಚಲಾಯಿಸಬೇಕಾಗಿದೆ. ಹುನುಕುಂದ ವೆಂಕಟೇಶ್ಗೆ ಜೆಡಿಎಸ್ ಸಂಸದ ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಬಿಜೆಪಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರು ಈಗಾಗಲೇ ಬೆಂಬಲ ವ್ಯಕ್ತಪಡಿಸಿ ಗೆಲುವಿಗೆ ಪ್ಲ್ಯಾನ್ ರೂಪಿಸಿದ್ದಾರೆ. ಆದರೆ ಶಾಸಕರ ವರ್ಕೌಟ್ ಸಹ ಅಷ್ಟೇ ಜೋರಾಗಿದೆ. ಬಂಗಾರಪೇಟೆ ಕ್ಷೇತ್ರದಿಂದ ಶಾಸಕರು ನಾಮಪತ್ರ ಸಲ್ಲಿಸಿದ ನಂತರ ತಾಲೂಕಿನಲ್ಲಿ ರಾಜಕೀಯ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.