ನೀರಾವರಿ ಇಲಾಖೆ ಕಚೇರಿಗೆ ಬೀಗ

ಲೋಕಾಪುರ: ಘಟಪ್ರಭಾ ಬಲದಂಡೆ ಕಾಲುವೆ ನೀರನ್ನು ಗ್ರಾಮದ ಹಳ್ಳಕ್ಕೆ ಹರಿಸುವಂತೆ ಒತ್ತಾಯಿಸಿ ಲೋಕಾಪುರ ಹಾಗೂ ಸುತ್ತಲಿನ ಗ್ರಾಮದ ರೈತರು ನೀರಾವರಿ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಮಳೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲಮಟ್ಟ ಕುಸಿದು ಜಮೀನುಗಳಲ್ಲಿನ ಬೋರ್​ವೆಲ್​ಗಳು ಬತ್ತಿವೆ. ದನ ಕರುಗಳಿಗೆ ಕುಡಿಯಲು ನೀರಿಲ್ಲ. ಬರದಿಂದ ರೈತರು ತತ್ತರಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಹಳ್ಳಕ್ಕೆ, ಕಾಲುವೆಗಳಿಗೆ ಸರಿಯಾಗಿ ನೀರು ಹರಿಯುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಯಾದವಾಡ, ಕೌಜಲಗಿ ಭಾಗದಲ್ಲಿ ಹಳ್ಳ, ಕಾಲುವೆಗೆ ನೀರು ಬಿಡುವ ಅವಧಿ ಮುಗಿದರೂ ನೀರು ಹರಿಸಲಾಗುತ್ತಿದೆ. ಕಾಲುವೆಗಳ ದುರಸ್ತಿ ಮಾಡದೇ ನೀರು ಬಿಡುತ್ತಿದ್ದು, ಕಾಲುವೆ ಹೂಳು, ಮುಳ್ಳುಕಂಟಿಗಳಿಂದ ತುಂಬಿದ್ದರಿಂದ ನೀರು ಪೋಲಾಗಿ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪದೆ ಬೆಳೆಗಳು ಬಾಡುತ್ತಿವೆ. ಶೀಘ್ರ ಹಳ್ಳಕ್ಕೆ ನೀರು ಹರಿಸಿ ಈ ಭಾಗದ ರೈತರ ಸಂಕಷ್ಟ ಪರಿಹರಿಸಬೇಕೆಂದು ಆಗ್ರಹಿಸಿದರು.

ಬಸಪ್ಪ ದೊಡಮನಿ, ಶಿವರಾಜ ಪಾಟೀಲ, ಮಹಾದೇವ ಹುಗ್ಗಿ, ಶಿವನಗೌಡ ಕೃಷ್ಣಗೌಡ, ವೆಂಕಪ್ಪ ಗಿಡ್ಡನ್ನವರ, ಮಂಜು ಪಾಟೀಲ, ಶಿವನಿಂಗಯ್ಯ ಜಂಬಗಿ, ಶಿವಪ್ಪ ಗಿಡ್ಡಪ್ಪನ್ನವರ, ರಾಮಣ್ಣ ಮಾಳಿ, ರಮೇಶ ಪಾಟೀಲ, ವೆಂಕಪ್ಪ ಪಾಟೀಲ, ಶಂಕರಗೌಡ ಪಾಟೀಲ, ಪುಂಡಲೀಕ ಪಾಟೀಲ, ಅಪ್ಪಣ್ಣ ಮುದ್ದಾಪುರ, ಶಂಕರ ದುಂಡಪ್ಪಗೋಳ, ಫಕೀರಪ್ಪ ಜುನ್ನಪ್ಪನವರ ಇತರರಿದ್ದರು.