ನೀರಾ‘ವರಿ’ ನಿವಾರಣೆಗೆ ಶಾಸಕರ ಸಭೆ ಕರೆಯಿರಿ

ಬೆಳಗಾವಿ: ಜಿಲ್ಲೆಯಲ್ಲಿ ನೀರಾವರಿ ಪ್ರದೇಶ ಅಭಿವೃದ್ಧಿ ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು ಸರಬರಾಜು ಕುರಿತು ಚರ್ಚಿಸಲು 18 ವಿಧಾನಸಭೆ ಕ್ಷೇತ್ರಗಳ ಶಾಸಕರ ಸಭೆ ಕರೆಯುವಂತೆ ನೀರಾವರಿ ಇಲಾಖೆ ಇಂಜಿನಿಯರ್‌ಗಳಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಚಿವರಾದ ಬಳಿಕ ಮೊದಲ ಬಾರಿಗೆ ಆಯೋಜಿಸಿದ್ದ ವಿವಿಧ ಇಲಾಖೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಡಕಲ್, ಮಲಪ್ರಭಾ ಜಲಾಶಯ ವ್ಯಾಪ್ತಿಯ ನೀರಾವರಿ ಯೋಜನೆಗಳು ಯಾವ ಹಂತದಲ್ಲಿವೆ ಎಂಬುದರ ಸಮಗ್ರ ಮಾಹಿತಿ ಸಿದ್ಧಪಡಿಸಿಕೊಂಡು ಸಭೆಗೆ ಬರಬೇಕು ಎಂದು ತಿಳಿಸಿದರು.

ಹಿಡಕಲ್ ಜಲಾಶಯದಲ್ಲಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ನಗರ ಮತ್ತು ಹಳ್ಳಿಗಳಿಗೆ ಕುಡಿಯುವ ನೀರಿಗಾಗಿ 11 ಟಿಎಂಸಿ ನೀರು ಸಂಗ್ರಹಿಸಲಾಗಿದೆ. ಅದರಲ್ಲಿ ಬೆಳಗಾವಿಗೆ ನಗರಕ್ಕೆ 1 ಟಿಎಂಸಿ, ಬಾಗಲಕೋಟೆ ನಗರಕ್ಕೆ 2 ಟಿಎಂಸಿ ನೀರು ಲಭ್ಯವಿದೆ. ಕಳೆದ ವರ್ಷ 10 ಟಿಎಂಸಿ ನೀರು ಸಂಗ್ರಹಿಸಲಾಗಿತ್ತು. ಆದರೆ, ತೀವ್ರ ಬರ ಉದ್ಭವಿಸಿದ್ದರಿಂದ ನೀರಿನ ಕೊರತೆ ಉಂಟಾಯಿತು. ಹಾಗಾಗಿ ಈ ವರ್ಷ 11 ಟಿಎಂಸಿ ನೀರು ಸಂಗ್ರಹ ಮಾಡಲಾಗಿದೆ ಎಂದು ನೀರಾವರಿ ಇಲಾಖೆ ಇಂಜಿನಿಯರ್‌ಗಳು ಮಾಹಿತಿ ನೀಡಿದರು.

ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಜಿಲ್ಲೆಯಲ್ಲಿನ ಕಾಲುವೆಗಳಿಗೆ ಮೇಲಿಂದ ನೀರು ಹರಿಸಬೇಕು. ಜಾತ್ರೆ ಸಮಯದಲ್ಲಿ ಕನಿಷ್ಠ 4 ದಿನ ನಿರಂತರವಾಗಿ ನೀರು ಬಿಡಬೇಕು. ಬೇಸಿಗೆ ಸಮಯದಲ್ಲಿಯೇ ಜಾತ್ರೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ವಹಿಸಬೇಕು.

ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲಿಸಬೇಕು ಎಂದು ಹೇಳಿದರು. ನೀರಾವರಿ, ಲೋಕೋಪಯೋಗಿ, ಕಾರ್ಮಿಕರ, ಭೂ ವಿಜ್ಞಾನ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಗಳನ್ನು ಪ್ರತ್ಯೇಕವಾಗಿ ಆಯೋಜನೆ ಮಾಡಿ. ಕಾರ್ಮಿಕ ಇಲಾಖೆಯವರು ಸಭೆಗೆ ಬರುವ ಮುನ್ನ 3 ವರ್ಷದ ಮಾಹಿತಿ ತೆಗದುಕೊಂಡು ಬರಬೇಕು. ಕೂಡಲೇ ಜಿಲ್ಲಾಧಿಕಾರಿಗಳು ಸಭೆ ಕರೆಯಬೇಕು ಎಂದು ಸೂಚಿಸಿದರು.

ನೌಕರಿ ಸೇರುವವರಿಗೆ ಸಿಂಧುತ್ವ ಸಮಸ್ಯೆ ಆಗದಿರಲಿ

ಜಿಲ್ಲೆಗಳಲ್ಲಿ ಸಿಂಧುತ್ವ ಸಮಸ್ಯೆ ಕುರಿತು ಮೇಲಿಂದ ಮೇಲೆ ದೂರುಗಳು ಬರುತ್ತಿವೆ. 5 ರಿಂದ 6 ತಿಂಗಳು ಕಳೆದರು ಸಿಂಧುತ್ವ ಸಿಗದಿರುವುದಕ್ಕೆ ಸರ್ಕಾರಿ ನೌಕರಿ ಸೇರುವವರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವಿಷಯದಲ್ಲಿ ಜಿಲ್ಲಾಧಿಕಾರಿಗಳು ನಿರ್ಲಕ್ಷಿಸುವುದು ಸರಿ ಅಲ್ಲ. ದಾಖಲೆಗಳು ಸರಿ ಇದ್ದರೆ ಸುಖಾಸುಮ್ಮನೆ ವಿಳಂಬ ಮಾಡಬೇಡಿ. ಮುಂದಿನ ದಿನಗಳಲ್ಲಿ ದೂರು ಬಾರದಂತೆ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲೆಯಲ್ಲಿ 4 ರಿಂದ 5 ಸಿಂಧುತ್ವ ಕೇಸ್‌ಗಳು ಮಾತ್ರ ಬಾಕಿ ಉಳಿದಿದ್ದು, ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಸಾಧ್ಯವಾಗಿಲ್ಲ. ಸಿಂಧುತ್ವದ ಎಲ್ಲ ಅರ್ಜಿಗಳನ್ನು ಶೀಘ್ರ ಪರಿಶೀಲಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಜಿಲ್ಲೆಯಲ್ಲಿ 40 ಸಾವಿರ ಟನ್ ಎಂ-ಸ್ಯಾಂಡ್ ಮರಳು ಉತ್ಪಾದನೆ ಆಗುತ್ತಿದೆ. ಆದರೆ, ಬೇಡಿಕೆ ಇಲ್ಲ. ನದಿ, ಹಳ್ಳ-ಕೊಳ್ಳದ ಮರಳಿಗೆ ಬೇಡಿಕೆ ಇದೆ. ಆ ಮರಳು ಲಭ್ಯವಿಲ್ಲ ಎಂದರು.

ಬೇರೆ ರಾಜ್ಯಕ್ಕೆ ಮರಳು ಸರಬರಾಜು ನಿಲ್ಲಿಸಿ: ಜಿಲ್ಲೆಯಲ್ಲಿ ಮರಳು ಅಭಾವದಿಂದ ಎಲ್ಲ ಕಾಮಗಾರಿಗಳು ಅರ್ಧದಲ್ಲಿಯೇ ಮೊಟಕುಗೊಳ್ಳುತ್ತಿರುವ ಸಂದರ್ಭದಲ್ಲಿ ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಬೇರೆ ರಾಜ್ಯಕ್ಕೆ ಮರಳು ಸರಬರಾಜು ಮಾಡುವುದನ್ನು ತಕ್ಷಣ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಜನರಿಗೆ ಮರಳಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಿ. ಅವಶ್ಯಬಿದ್ದರೆ ಹೊಸದಾಗಿ ಮರಳು ಬ್ಲಾಕ್‌ಗಳನ್ನು ಆರಂಭಿಸಿ ಎಂದು ಸಚಿವ ಜಾರಕಿಹೊಳಿ ಸೂಚಿಸಿದರು.

ಅಹವಾಲು ಸ್ವೀಕಾರ

ಸವದತ್ತಿ ತಾಲೂಕಿನ ಇಟ್ನಾಳ್ ಗ್ರಾಮದಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬ ಪರಿಹಾರ, ಸಿಂಧುತ್ವ, ಭೂ ಸ್ವಾಧೀನಕ್ಕೆ ಪರಿಹಾರ ಸೇರಿ ವಿವಿಧ ಸಮಸ್ಯೆಗಳ ಅರ್ಜಿ ಸ್ವೀಕರಿಸಿದ ಸಚಿವ ಸತೀಶ ಜಾರಕಿಹೊಳಿ ಸ್ಥಳದಲ್ಲಿದ್ದ ಜಿಲ್ಲಾಧಿಕಾರಿಗೆ ತಕ್ಷಣ ಪರಿಹರಿಸಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು.