ಚಿಕ್ಕೋಡಿ: ರಾಜ್ಯ ಸರ್ಕಾರವು ಲಕ್ಷ್ಮೀದೇವಿ ಮತ್ತು ಬಸವೇಶ್ವರ ಏತ ನೀರಾವರಿ ಯೋಜನೆಗೆ 6.60 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇದರಿಂದ 50 ರೈತ ಕುಟುಂಬಗಳ 175 ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.
ಚಿಕ್ಕೋಡಿ ಸದಲಗಾ ವಿಧಾನಸಭೆ ಕ್ಷೇತ್ರದ ಚಿಂಚಣಿ ಗ್ರಾಪಂ ವ್ಯಾಪ್ತಿಯ ಪ.ಜಾತಿಯ ರೈತರ ಜಮೀನುಗಳಿಗೆ ಮಂಜೂರಾದ ಏತ ನೀರಾವರಿ ಯೋಜನೆಗಳಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಈ ಯೋಜನೆಗಳಿಗೆ ಮಂಜೂರಾತಿ ನೀಡಿದ್ದಾರೆ. ಹಾಗಾಗಿ ರೈತರು ನೀರಾವರಿ ಯೋಜನೆ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದು ತಿಳಿಸಿದರು.
ಚಿಂಚಣಿ ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಒದಗಿಸುವ ನಿಟ್ಟಿನಲ್ಲಿ ಮಹಾಂತೇಶ ಕವಟಗಿಮಠ ಅವರು ಯೋಜನೆಗಳನ್ನುಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಮುಂದಾಲೋಚನೆ ಮೆಚ್ಚುವಂತಹದ್ದು, ರೈತರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ತಾಲೂಕು ಪಂಚಾಯಿತಿ ಸದಸ್ಯ ಅಭಯ ಪಾಟಿಲ, ಸತೀಶ ಪಾಟಿಲ, ಅಪ್ಪಾಸಾಬ ಚೌಗಲಾ,ಲಕ್ಷ್ಮಣ ಢಂಗೇರ, ಸುಭಾಷ ಚೌಗಲಾ, ಸುಕುಮಾರ ಅಪ್ಪಾಜಿಗೋಳ ಸತೀಶ ಅಪ್ಪಾಜಿಗೋಳ, ಅನೀಲ ಪಾಟೀಲ, ಸುರೇಶ ಹೆಗಡೆ, ನೀರಾವರಿ ನಿಗಮದ ಅಧಿಕಾರಿ ಎಇಇ ಎಸ್.ಪಿ ಸದಾಶಿವ, ಎಸ್.ಓ. ಕಮಲಾಕರ ಹಾಗೂ ಚಿಂಚಣಿ ಗ್ರಾಮದ ರೈತರು ಇದ್ದರು.