ನಿರ್ಲಕ್ಷೃದ ಚಾಲನೆ ಅಪರಾಧಿಗೆ 2 ವರ್ಷ ಜೈಲು

ಮಂಗಳೂರು: ನಿರ್ಲಕ್ಷೃದಿಂದ ಲಾರಿ ಚಲಾಯಿಸಿ ಅಪಘಾತ ಎಸಗಿ ಓರ್ವರ ಸಾವಿಗೆ ಕಾರಣವಾದ ಅಪರಾಧಿಗೆ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಧ್ಯಪ್ರದೇಶದ ಮುಕೇಶ್ ಯಾದವ್(33) ಶಿಕ್ಷೆಗೊಳಗಾದ ಅಪರಾಧಿ. ಈತ ಮದ್ಯ ಸೇವನೆ ಮಾಡಿ ನಿರ್ಲಕ್ಷೃದಿಂದ ಲಾರಿ ಚಲಾಯಿಸಿ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್‌ನಲ್ಲಿದ್ದ ರಾಮಚಂದ್ರ ಠಾಕೂರ್(41) ಎಂಬುವರು ಮೃತಪಟ್ಟಿದ್ದರು.

ಘಟನೆ ಹಿನ್ನೆಲೆ: 2015 ಜೂನ್ 19ರಂದು ಸಾಯಂಕಾಲ 5ಕ್ಕೆ ಮುಕೇಶ್ ಯಾದವ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳೂರು ಕಡೆಯಿಂದ ಲಾರಿ ಚಲಾಯಿಸಿಕೊಂಡು ಬಂದಿದ್ದು, ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ. ಲಾರಿ ನಿಲ್ಲಿಸುವಂತೆ ಪೊಲೀಸರು ಸೂಚಿಸಿದರೂ ಮುಂದಕ್ಕೆ ಚಲಾಯಿಸಿ ಬೈಕಂಪಾಡಿ ಕೈಗಾರಿಕಾ ಪ್ರದೇಶದ ಮುಂಗಾರು ವೃತ್ತದಲ್ಲಿ ಎದುರಿನಿಂದ ಬಂದ ಪಿಕಪ್‌ಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಪಿಕಪ್ ಪಲ್ಟಿಯಾಗಿದೆ. ಅದರಡಿಗೆ ಸಿಲುಕಿದ ರಾಮಚಂದ್ರ ಠಾಕೂರ್ ಗಂಭೀರ ಗಾಯಗೊಂಡು ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪೊಲೀಸರು ಹಾಗೂ ಸಾರ್ವಜನಿಕರು ಆರೋಪಿ, ಲಾರಿ ಚಾಲಕ ಮುಕೇಶ್ ಯಾದವ್‌ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಪರೀಕ್ಷಿಸಿದಾಗ ಆತ ಅಮಲು ಪದಾರ್ಥ ಸೇವಿಸಿರುವುದು ದೃಢಪಟ್ಟಿತ್ತು. ಈ ಬಗ್ಗೆ ಸುರತ್ಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ಮಂಜುನಾಥ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಮೃತಪಟ್ಟ ರಾಮಚಂದ್ರ ಠಾಕೂರ್ ಅವರ ಅವಲಂಬಿತ ಕುಟುಂಬಕ್ಕೆ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರು ಎಂದು ನ್ಯಾಯಾಧೀಶ ಮಲ್ಲನಗೌಡ ಶಿಫಾರಸು ಮಾಡಿದ್ದಾರೆ. ಪ್ರಕರಣದಲ್ಲಿ ಒಟ್ಟು 20 ಸಾಕ್ಷಿ ವಿಚಾರಣೆ ನಡೆಸಲಾಗಿತ್ತು. ಸರ್ಕಾರದ ಪರವಾಗಿ ಹರಿಶ್ಚಂದ್ರ ಉದ್ಯಾವರ ವಾದಿಸಿದ್ದರು.