ಎತ್ತಿನಗಾಡಿ ಮೇಲೆ ಬಂದವರು ಕೋಟ್ಯಾಧೀಶರಾಗಿದ್ದು ಹೇಗೆ?

ಚಿಕ್ಕಮಗಳೂರು: ನಾಲ್ಕು ಎಕರೆ ಜಮೀನಿಟ್ಟುಕೊಂಡು ಎತ್ತಿನ ಗಾಡಿ ಮೇಲೆ ಬಂದೆ ಎನ್ನುವವರು ಸಾವಿರಾರು ಕೋಟಿ ರೂ. ಒಡೆಯರಾಗಿದ್ದು ಯಾವ ವ್ಯವಹಾರದಿಂದ ಎಂಬುದು ರಾಜ್ಯ ಜನತೆಗೆ ಗೊತ್ತಾಗಬೇಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಶಾಸಕ ಸಿ.ಟಿ.ರವಿ ಪರೋಕ್ಷ ವಾಗ್ದಾಳಿ ನಡೆಸಿದರು.

ಐಟಿ ದಾಳಿ ಆದರೆ ಇವರಿಗೇಕೆ ಭಯ? ಐಟಿ ದಾಳಿಗೊಳಗಾದವನು ಪ್ರಾಮಾಣಿಕನಾಗಿದ್ದರೆ ಪುಟಕ್ಕಿಟ್ಟ ಚಿನ್ನದಂತೆ ಹೊರ ಬರುತ್ತಾನೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲ ಮುಟ್ಟಿಕೊಂಡು ನೋಡಿಕೊಂಡರೆ ಜನರಿಗೆ ಅನುಮಾನ ಶುರುವಾಗುತ್ತದೆ. ಐಟಿ ಸರ್ಕಾರದ ಸಂಸ್ಥೆಯಾಗಿದ್ದು, ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದರು.

ನಾಲ್ಕು ಎಕರೆ ಜಮೀನು, ಎತ್ತಿನಗಾಡಿ ಇಟ್ಟುಕೊಂಡು ಸಾವಿರಾರು ಕೋಟಿ ರೂ. ಸಂಪಾದನೆ ಮಾಡುವುದು ಹೇಗೆಂದು ರಾಜ್ಯದ ಜನತೆಗೆ ಅವರು ತಿಳಿಸಬೇಕು. ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಹತ್ತಾರು ಮನೆ ಕಟ್ಟಿ, ಮಕ್ಕಳು, ಮೊಮ್ಮಕಳ ಹೆಸರಲ್ಲಿ ನೂರಾರು ಕೊಟಿ ರೂ. ಇರುವಂತ ವ್ಯವಹಾರ ಎಂಥದ್ದು. ಅಂಥ ಒಳ್ಳೆ ವ್ಯವಹಾರ ಇದ್ದರೆ ಅದು ರೋಲ್ ಮಾಡಲ್ ಆಗುತ್ತದೆ. ಅದನ್ನು ಸಾವಿರಾರು ಕೋಟಿ ರೂ. ಮಾಡಿರುವವರು ಜನತೆಗೆ ತಿಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಐಟಿ ಸ್ವಾಯುತ್ತ ಸಂಸ್ಥೆ, ಅವರ ದಾಳಿಗೆ ರಾಜಕಾರಣ ಕಲ್ಪಿಸುವುದೇ ಸಣ್ಣತನ. 2012ರಲ್ಲಿ ನನ್ನ ಸಂಬಂಧಿಕರ ಮನೆ ದಾಳಿ ನಡೆಯಿತು. ಆಗ ನಾನು ಏನಾದರೂ ಇದ್ದರೆ ತೆಗೆದುಕೊಂಡು ಹೋಗಲಿ ಎಂದೆ. ರಾಜಕಾರಣಕ್ಕೆ ನಾನು ಬಣ್ಣ ಕಟ್ಟಲಿಲ್ಲ. ತೆರಿಗೆ ವಂಚನೆ ಮಾಡಿದ್ದರೆ ತೆರಿಗೆ ಕಟ್ಟಬೇಕಾಗುತ್ತದೆ ಎಂದರು.

ಸಂಸದ ಜಿ.ಎಂ.ಸಿದ್ದೇಶ್ವರ ಅವರ ಎಲ್ಲ ಕಂಪನಿಗಳ ಮೇಲೆ, ಕೆಜಿಎಫ್ ಸಿನಿಮಾ ಮಾಡಿದ ಡಾ. ಅಶ್ವಥ್ ನಾರಾಯಣ ಮನೆ ಮೇಲೆ ದಾಳಿ ನಡೆಯಿತು. ಎಸ್.ಎಂ. ಕೃಷ್ಣ ಪಕ್ಷಕ್ಕೆ ಬಂದು ಮೂರೇ ತಿಂಗಳಲ್ಲಿ ಕಾಫಿ ಡೇ ಮೇಲೂ ದಾಳಿ ಆಯಿತು. ಇದನ್ನು ಬಿಜೆಪಿ ತನ್ನ ಪಕ್ಷದ ಮುಖಂಡರ ಮೇಲೆ ದಾಳಿ ಮಾಡಿದೆ ಎನ್ನಲಾಗುತ್ತದೆಯೇ? ಎಂದು ಪ್ರಶ್ನಿಸಿದ ಅವರು, ಐಟಿ ಇಲಾಖೆ ತನ್ನ ಕೆಲಸ ನಿತ್ಯ ಮಾಡುತ್ತದೆ. ಪ್ರಾಮಾಣಿಕರಾಗಿದ್ದರೆ ಭಯಪಡುವ ಅಗತ್ಯವೇ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *