ಬೆಂಗಳೂರಿನ ಗಲ್ಲಿಗಳಲ್ಲಿ ಓಡಾಡುವ ಬೈಕ್​ ಸವಾರರೇ ಎಚ್ಚರ!

ಬೆಂಗಳೂರು: ನಗರದ ಗಲ್ಲಿ ರಸ್ತೆಗಳಲ್ಲಿ ಓಡಾಡುವ ಬೈಕ್​​ ಸವಾರರೇ ಎಚ್ಚರ… ಎಚ್ಚರ!

ಟ್ರಾಫಿಕ್​ನಿಂದ ತಪ್ಪಿಸಿಕೊಳ್ಳಲು ನಗರವಾಸಿಗರು ಗಲ್ಲಿ ರಸ್ತೆಗಳನ್ನು ಹುಡುಕುವುದು ಸಾಮಾನ್ಯ. ಆದರೆ ಆ ಗಲ್ಲಿಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳಿದ್ದರೆ ಇನ್ನು ಮುಂದೆ ಆ ರಸ್ತೆಗಳಲ್ಲಿ ಓಡಾಡಬೇಡಿ. ಇಲ್ಲವಾದರೆ ಯಾರದ್ದೋ ತಪ್ಪಿಗೆ ನೀವು ಬಲಿಯಾಗೋದು ಗ್ಯಾರಂಟಿ..!

ಹೌದು, ಆ.31ರಂದು ಹಲಸೂರು ಗೇಟ್ ಬಳಿಯ ಸುಣಕಲ್ ಪೇಟೆ ಕ್ರಾಸ್​ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡದ 4ನೇ ಅಂತಸ್ತಿನಿಂದ ಕಬ್ಬಿಣದ ರಾಡ್ ಬೈಕ್​ ಸವಾರ ಚಂದನ್ ಎಂಬವರ ತಲೆ ಮೇಲೆ​ ಬಿದ್ದ ಪರಿಣಾಮ ಬೈಕ್​ ಸವಾರ ಸಾವಿನ ಬಾಗಿಲು ತಟ್ಟಿ ಬಂದಿದ್ದಾನೆ. ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಕೂದಲೆಳೆಯ ಅಂತರದಲ್ಲಿ ಪ್ರಾಣ ಉಳಿಸಲಾಗಿದೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಇದೇ ಘಟನೆಯಲ್ಲಿ ವೃದ್ಧ ದಂಪತಿ ಕೇವಲ ಸೆಕೆಂಡುಗಳ ಅಂತರದಲ್ಲಿ ಪಾರಾಗಿದ್ದಾರೆ.

ಕಟ್ಟಡದ ಕಾಂಟ್ರಾಕ್ಟರ್​ ಜೈರಾಮ್​ ಎಂಬವರ ವಿರುದ್ಧ ಬೇಜವಾಬ್ದಾರಿತನ ಆರೋಪ ಮಾಡಲಾಗಿದ್ದು, ಹಲಸೂರು ಗೇಟ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ದಿಗ್ವಿಜಯ ನ್ಯೂಸ್​)