ಕಬ್ಬಿಣಾಂಶ ಒದಗಿಸುವ ಆಹಾರ ಪದಾರ್ಥಗಳು ಯಾವುವು?

ಕಬ್ಬಿಣಾಂಶದ ಕಾರ್ಯಗಳು ಹಾಗೂ ಅದರ ಪ್ರಾಮುಖ್ಯತೆಯ ಬಗೆಗೆ ತಿಳಿದುಕೊಳ್ಳುತ್ತಿದ್ದೆವು. ಕಬ್ಬಿಣಾಂಶವನ್ನು ದೇಹಕ್ಕೆ ಒದಗಿಸಲು ಸೇವಿಸಬಹುದಾದ ಆಹಾರಪದಾರ್ಥಗಳು ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಮಾಂಸಖಂಡಗಳಲ್ಲಿ ಮಯೋಗ್ಲೋಬಿನ್ ರೂಪದಲ್ಲಿ ಹಾಗೂ ಹೀಮ್ ಎಂಝೈಮ್ಳ ಭಾಗಗಳಲ್ಲಿ ಕಬ್ಬಿಣಾಂಶ ಇರುತ್ತದೆ. ಮಾಂಸಖಂಡಗಳು ಸಂಕುಚಿತ, ವಿಕಸಿತವಾಗಲು ಅವುಗಳಲ್ಲಿ ಆಮ್ಲಜನಕ ಸಂಗ್ರಹವಾಗಬೇಕು. ಈ ಆಮ್ಲಜನಕವನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯವನ್ನು ಮಯೋಗ್ಲೋಬಿನ್ ಹೊಂದಿರುತ್ತದೆ. ನಾವು ಸೇವಿಸಿದ ಆಹಾರವು ಶಕ್ತಿಯಾಗಿ ಪರಿವರ್ತನೆಯಾಗಲು ಕಬ್ಬಿಣಾಂಶ ಅಗತ್ಯವಾಗಿರುತ್ತದೆ. ಪೋಷಕಾಂಶಗಳಿಂದ ಬಯೋಕೆಮಿಕಲ್ (ಜೀವರಾಸಾಯನಿಕ) ಶಕ್ತಿಯನ್ನು ಎಟಿ.ಪಿ. (ಎಡಿನೋಸೈನ್ ಟ್ರೈಪಾಸ್ಪೇಟ್) ರೂಪಕ್ಕೆ ಪರಿವರ್ತಿಸಲು ಕಬ್ಬಿಣಾಂಶ ಬೇಕಾಗುತ್ತದೆ. ಎಟಿ.ಪಿ. ಎನ್ನುವುದು ಮೂಲಶಕ್ತಿಯ ಆಕರ. ಕಬ್ಬಿಣಾಂಶದ ಕೊರತೆಯಾದಲ್ಲಿ ಎ.ಟಿ.ಪಿ. ಉತ್ಪತ್ತಿ ಕಡಿಮೆಯಾಗುತ್ತದೆ. ಅದು ಸುಸ್ತು, ಬಳಲಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕಬ್ಬಿಣಾಂಶದ ಕೊರತೆಯು ಆಯಾಸಕ್ಕೆ ಮೂಲ ಕಾರಣ. ದೇಹದ ರೋಗನಿರೋಧಕಶಕ್ತಿಯನ್ನು ಸಮತೋಲನದಲ್ಲಿಟ್ಟುಕೊಳ್ಳಲು ಕಬ್ಬಿಣಾಂಶವು ಪೂರಕ.

ಅರಿವಿನ ಕೆಲಸಕಾರ್ಯಗಳಿಗೆ ಕಬ್ಬಿಣಾಂಶ ಅಗತ್ಯವಾಗಿರುತ್ತದೆ. ಮಿದುಳಿನ ಪ್ರಕ್ರಿಯೆಗಳು, ಏಕಾಗ್ರತೆ, ಯಾವಾಗಲೂ ಜಾಗೃತರಾಗಿರುವುದು, ಬುದ್ಧಿವಂತಿಕೆ, ಭಾಷಾ ನೈಪುಣ್ಯ, ಕಲಿಕೆ, ಕ್ರಿಯಾಶೀಲತೆ, ಸಂವೇದನಾಶೀಲತೆ – ಇವೆಲ್ಲವೂ ಅರಿವಿನ ಪ್ರಕ್ರಿಯೆಗಳು ಎಂದು ಕರೆಸಿಕೊಳ್ಳಲ್ಪಡುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಸರಿಯಾಗಿ ಆಗಲು ಕಬ್ಬಿಣಾಂಶದ ಅವಶ್ಯಕತೆಯಿದೆ. ನಮ್ಮ ಆಹಾರದ ಮೂಲಕ ಇದನ್ನು ಪೂರೈಸಿಕೊಳ್ಳಬೇಕು. ಒಣಹಣ್ಣುಗಳಾದ ದ್ರಾಕ್ಷಿ, ಅಂಜೂರ, ಖರ್ಜೂರ ಅಥವಾ ಉತ್ತುತ್ತೆಗಳು, ಬೀನ್ಸ್, ಹಸಿರು ಸೊಪ್ಪು, ಅದರಲ್ಲಿಯೂ ಮುಖ್ಯವಾಗಿ ಪಾಲಕ್, ಡಾರ್ಕ್ ಚಾಕಲೇಟ್, ಅಣಬೆ, ಕೆಲವೊಂದು ಬೀಜಗಳು, ಬೆಲ್ಲ, ಜೇನುತುಪ್ಪ ಇಂತಹ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶವನ್ನು ಹೊಂದಿರುತ್ತದೆ.