ಸಿಪಿಎಲ್​ಗೆ ಆಯ್ಕೆಗೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದ ಇರ್ಫಾನ್ ಪಠಾಣ್

ನವದೆಹಲಿ: ಕೆರಿಬಿಯನ್​ ಪ್ರೀಮಿಯರ್​ ಲೀಗ್​ (ಸಿಪಿಎಲ್​)ಗೆ ಮೊದಲ ಭಾರತೀಯ ಕ್ರಿಕೆಟ್​ ಆಟಗಾರನಾಗಿ ಆಯ್ಕೆಗೊಳ್ಳುವ ಮೂಲಕ ವೇಗದ ಬೌಲರ್​ ಇರ್ಫಾಣ್​ ಪಠಾಣ್​ ಇತಿಹಾಸ ನಿರ್ಮಿಸಿದ್ದಾರೆ.

ಸಿಪಿಎಲ್​ 2019ರ ಆಟಗಾರರ ತಂಡವನ್ನು ಗುರುವಾರ ಪ್ರಕಟಿಸಿದ್ದು, ಇರ್ಫಾನ್​ ಪಠಾಣ್​ ಆಯ್ಕೆಗೊಂಡ ಒಬ್ಬರೇ ಒಬ್ಬ ಭಾರತೀಯ ಆಟಗಾರರಾಗಿದ್ದಾರೆ.

ಬಿಸಿಸಿಐ ಭಾರತೀಯ ಕ್ರಿಕೆಟ್​ ಆಟಗಾರರಿಗೆ ಬಿಬಿಎಲ್​, ಸಿಪಿಎಲ್​, ಬಿಪಿಎಲ್​, ರಾಮ್​ಸ್ಲ್ಯಾಮ್​ ಟಿ 20 ಸೇರಿ ಮುಂತಾದ ಕ್ರಿಕೆಟ್​ ಪಂದ್ಯಗಳಲ್ಲಿ ಆಡಲು ಅವಕಾಶ ನೀಡದೆ ತನ್ನದೇ ಆದ ಕಠಿಣ ನಿಲುವನ್ನು ಹೊಂದಿದೆ. ಆದರೆ ಹರಾಜಿನಲ್ಲಿ ಖರೀದಿದಾರರು ಇರ್ಫಾನ್​ ಪಠಾಣ್​ ಅವರನ್ನು ಖರೀದಿಸಿದ್ದು, ಈ ಮೂಲಕ ವಿದೇಶಿ ಆಯೋಜಿತ ಟಿ 20 ಕ್ರಿಕೆಟ್​ನಲ್ಲಿ ಆಯ್ಕೆಯಾಗುವ ಮೂಲಕ ಇದು ಬದಲಾಗಿದೆ.

ಇರ್ಫಾನ್​ ಪಠಾಣ್​ ಎರಡು ವರ್ಷದಿಂದ ಐಪಿಎಲ್​ನಲ್ಲಿ ಭಾಗವಹಿಸಿಲ್ಲ. 2017ರಲ್ಲಿ ಗುಜರಾತ್​ ಲಯನ್ಸ್​ ತಂಡದಲ್ಲಿ ಆಟವಾಡಿದ್ದೇ ಕೊನೆ ಪ್ರದರ್ಶನವಾಗಿತ್ತು. ಆನಂತರ ಕಳೆದ ಬಾರಿ ಬರೋಡ ತಂಡದಿಂದ ಜಮ್ಮು ಕಾಶ್ಮೀರ ತಂಡಕ್ಕೆ ಆಟಗಾರರಾಗಿ, ಸಹಮಾರ್ಗದರ್ಶಿಯಾಗಿ ಸೇರ್ಪಡೆಗೊಂಡಿದ್ದರು.

ಇರ್ಫಾನ್ ಪಠಾಣ್​ 29 ಟೆಸ್ಟ್, 120 ಏಕದಿನ ಮತ್ತು 24 ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಎಲ್ಲ ವಿಭಾಗಗಳಿಂದ ಒಟ್ಟು 301 ವಿಕೆಟ್​ ಮತ್ತು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,800 ರನ್​ಗಳನ್ನು ಗಳಿಸಿದ್ದಾರೆ.