ವಿಂಡೀಸ್ ದಾಖಲೆ ಚೇಸಿಂಗ್

ಡಬ್ಲಿನ್: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಘಾತಕಾರಿ ಫಲಿತಾಂಶಗಳನ್ನು ನೀಡಬಲ್ಲ ತಂಡ ಎನಿಸಿಕೊಂಡಿರುವ ವೆಸ್ಟ್​ಇಂಡೀಸ್, ಏಕದಿನ ಕ್ರಿಕೆಟ್​ನಲ್ಲಿ ತನ್ನ ಅತ್ಯಧಿಕ ಮೊತ್ತದ ಚೇಸಿಂಗ್ ದಾಖಲೆ ಬರೆದಿದೆ.

ಬಾಂಗ್ಲಾದೇಶ ತಂಡವನ್ನು ಒಳಗೊಂಡ ತ್ರಿಕೋನ ಸರಣಿಯ ತನ್ನ 2ನೇ ಲೀಗ್ ಪಂದ್ಯದಲ್ಲಿ ವಿಂಡೀಸ್ ತಂಡ ಐರ್ಲೆಂಡ್ ನೀಡಿದ 328 ರನ್ ಸವಾಲಿಗೆ ಪ್ರತಿಯಾಗಿ, 47.5 ಓವರ್​ಗಳಲ್ಲಿ 5 ವಿಕೆಟ್​ಗೆ 331 ರನ್ ಪೇರಿಸಿ ಜಯಿಸಿತು. ಸುನಿಲ್ ಆಂಬ್ರಿಸ್ ಅಮೋಘ 148 ರನ್ ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಇದರೊಂದಿಗೆ ವಿಂಡೀಸ್ ತ್ರಿಕೋನ ಸರಣಿಯಲ್ಲಿ ಆಡಿದ 3 ಪಂದ್ಯಗಳಲ್ಲಿ 2 ಜಯದೊಂದಿಗೆ ಫೈನಲ್ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಬಾಂಗ್ಲಾ ಮುಂದಿನ ಪಂದ್ಯದಲ್ಲಿ ಸೋಮವಾರ ವಿಂಡೀಸ್ ತಂಡವನ್ನು ಸೋಲಿಸಿದರೆ ಫೈನಲ್​ಗೇರಲಿದೆ. ಅಕಸ್ಮಾತ್ ಸೋತರೆ ಐರ್ಲೆಂಡ್ ವಿರುದ್ಧ ಕೊನೇ ಪಂದ್ಯವನ್ನು ಗರಿಷ್ಠ ಅಂತರಗಳಿಂದ ಗೆಲ್ಲಲೇಬೇಕು.

ಐರ್ಲೆಂಡ್: 5 ವಿಕೆಟ್​ಗೆ 327 (ಆಂಡಿ ಬಲ್ಬಿರ್ನಿ 135, ಪೌಲ್ ಸ್ಟರ್ಲಿಂಗ್‌ 77, ಕೆವಿನ್ ಓ ಬ್ರಿಯಾನ್ 63, ಶನನ್ ಗ್ಯಾಬ್ರಿಯೆಲ್ 47ಕ್ಕೆ 2), ವೆಸ್ಟ್ ಇಂಡೀಸ್: 47.5 ಓವರ್​ಗಳಲ್ಲಿ 5 ವಿಕೆಟ್​ಗೆ 331 (ಆಂಬ್ರಿಸ್ 148, ರೋಸ್ಟನ್ ಚೇಸ್46, ಜೊನಾಥನ್ ಕಾರ್ಟರ್ 43, ಬಾಯ್ಡ್‌ ರ‍್ಯಾಂಕಿಂಗ್ 65ಕ್ಕೆ 3).

01. 2017ರಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಬೆನ್ನಟ್ಟಿದ 309ರನ್ ಸವಾಲು ವಿಂಡೀಸ್​ನ ಹಿಂದಿನ ಗರಿಷ್ಠ ಚೇಸಿಂಗ್ ದಾಖಲೆಯಾಗಿತ್ತು. 2008ರಲ್ಲಿ ಆಸ್ಟ್ರೇಲಿಯಾ ತಂಡದ ಎದುರು ದಕ್ಷಿಣ ಆಫ್ರಿಕಾ ತಂಡ 435 ರನ್ ಬೆನ್ನಟ್ಟಿ ಗೆದ್ದಿರುವುದು ಈಗಲೂ ಚೇಸಿಂಗ್ ವಿಶ್ವದಾಖಲೆಯಾಗಿ ಉಳಿದಿದೆ.

Leave a Reply

Your email address will not be published. Required fields are marked *