ಅಮೆರಿಕದಲ್ಲಿ ಇನ್ನೂ ಕೆಲವು ಎಲೆಕ್ಟರ್ಸ್ ಫಲಿತಾಂಶ ಬರಬೇಕಿದ್ದು, ನೆವಾಡಾದಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹೆಚ್ಚು ಮತಗಳು ದಕ್ಕಿವೆ. ಹೀಗಾಗಿ ಅಲ್ಲಿನ ಆರೂ ಸ್ಥಾನಗಳು ಟ್ರಂಪ್ ಪಾಲಾಗಿದ್ದು, ಅವರ ಒಟ್ಟು ಗಳಿಕೆ 301 ಕ್ಕೆ ಏರಿದೆ.
ವಾಷಿಂಗ್ಟನ್: ಅಮೆರಿಕ ನ್ಯಾಯ ಇಲಾಖೆಯು ಇರಾನಿನ ವ್ಯಕ್ತಿಯೊಬ್ಬನ ಮೇಲೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯಾಯತ್ನದ ಆರೋಪ ಹೊರಿಸಿದೆ. ಇರಾನಿನ ರೆವಲೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ಈ ಕೊಲೆಯತ್ನದ ಸಂಚುಹೂಡಿದೆ ಎಂದು ಅಮೆರಿಕ ಆಪಾದಿಸಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಟ್ರಂಪ್ ಎರಡು ಬಾರಿ ಕೊಲೆಯತ್ನದಿಂದ ಪಾರಾಗಿದ್ದರು. ಇದು ಮೂರನೇ ಯತ್ನ ಎಂದು ಅಮೆರಿಕ ಆಡಳಿತ ಹೇಳಿದೆ. ಆದರೆ ಇರಾನ್ ಈ ಆರೋಪವನ್ನು ನಿರಾಕರಿಸಿದೆ.
ಫರ್ಹಾದ್ ಶಕೇರಿ ಎನ್ನುವವನಿಗೆ ಇರಾನ್ ಆಡಳಿತವು ಅಕ್ಟೋಬರ್ 7ರಂದು ಟ್ರಂಪ್ ಹತ್ಯೆಯ ಕೆಲಸ ವಹಿಸಿತ್ತು. ಐಆರ್ಜಿಸಿ ನೀಡಿದ ಗಡುವಿನೊಳಗೆ ಟ್ರಂಪ್ ಅವರನ್ನು ಕೊಲೆಮಾಡುವ ಯೋಜನೆ ರೂಪಿಸಲು ತಾನು ಬಯಸಿರಲಿಲ್ಲ ಎಂದು ಫರ್ಹಾದ್ ಶಕೇರಿ ನ್ಯಾಯ ಇಲಾಖೆಯ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಸೇರಿ ತನ್ನ ಯಾದಿಯಲ್ಲಿರುವ ಗಣ್ಯರ ಹತ್ಯೆಗೆ ಕ್ರಿಮಿನಲ್ಗಳ ಕೂಟವನ್ನು ಮುನ್ನಡೆಸಲು ಇರಾನ್ ಆಡಳಿತ ಈತನಿಗೆ ಸೂಚಿಸಿತ್ತು ಎಂದು ಅಮೆರಿಕ ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಹೇಳಿದ್ದಾರೆ. ಇರಾನಿನ ರೆವಲೂಷನರಿ ಗಾರ್ಡ್ಸ್ ಕೋರ್ ಭಯೋ ತ್ಪಾದಕ ಸಂಘಟನೆ ಎಂದು ಅಮೆರಿಕ ಗುರುತಿಸಿದೆ. ಫರ್ಹಾದ್ ಶಕೇರಿ ಚಿಕ್ಕವ ನಿರುವಾಗಲೇ ಅಮೆರಿಕಕ್ಕೆ ವಲಸೆ ಬಂದಿದ್ದು, ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆತನನ್ನು 2008ರಲ್ಲಿ ಗಡೀಪಾರು ಮಾಡಲಾಗಿತ್ತು. ಆತ ಈಗ ಇರಾನಿನಲ್ಲಿ ನೆಲೆಸಿದ್ದಾನೆಂದು ಅಮೆರಿಕ ಊಹಿಸಿದೆ.
ಟ್ರಂಪ್ ಆಯ್ಕೆ ವಿರೋಧಿಸಿ ಮಹಿಳೆಯರಿಂದ ಪ್ರತಿಭಟನೆ
ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆದ್ದಿರುವುದಕ್ಕೆ ಅವರ ಬೆಂಬಲಿಗರು ಖುಷಿಯಲ್ಲಿದ್ದಾರೆ. ಆದರೆ ಅಮೆರಿಕದ ಸಾವಿರಾರು ಮಹಿಳೆಯರು ಅಸಮಾಧಾನಗೊಂಡಿದ್ದು ವಿಶಿಷ್ಟ ಪ್ರತಿಭಟನೆ ಆರಂಭಿಸಿದ್ದಾರೆ. ಟ್ರಂಪ್ ಗೆಲುವಿಗೆ ಪುರುಷರು ಕಾರಣ ಎಂದು ಇವರು ದೂರಿದ್ದು, 4ಆ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. 4ಆ ಆಂದೋಲನ ಎಂದರೆ- ಲೈಂಗಿಕತೆ, ಸಂಬಂಧ, ಮದುವೆ ಹಾಗೂ ಮಕ್ಕಳನ್ನು ಹೆರುವುದಕ್ಕೆ ನಿರಾಕರಿಸುವುದು. ಚುನಾವಣೆಯಲ್ಲಿ ಮಹಿಳೆಯರನ್ನು ಮತ್ತು ಅವರ ಸಮಸ್ಯೆಗಳನ್ನು ತೀವ್ರವಾಗಿ ಕಡೆಗಣಿಸಲಾಗಿದೆ ಎಂಬುದು ಸಹ ಇವರ ಆಕ್ಷೇಪ. ದಕ್ಷಿಣ ಕೊರಿಯಾ ಈ ಅಭಿಯಾನದ ಮೂಲ. ಕೊರಿಯನ್ ಭಾಷೆಯಲ್ಲಿ ಆ ಎಂದರೆ ‘ಇಲ್ಲ’ ಎಂದು ಅರ್ಥ. ಮೀಟೂ ಅಭಿಯಾನದ ಬಳಿಕ ಅಲ್ಲಿ ಈ ಚಳವಳಿ ಚಾಲನೆ ಪಡೆದಿತ್ತು. ಟ್ರಂಪ್ ಮಹಿಳಾವಿರೋಧಿ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಕಮಲಾ ಹ್ಯಾರಿಸ್ ಬಣ ಚುನಾವಣಾ ಪ್ರಚಾರದಲ್ಲಿ ಬಿಂಬಿಸಿತ್ತು.
ಮಸ್ಕ್ ಆದಾಯ ಮಸ್ತ್ ಏರಿಕೆ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿಜಯಿಯಾದ ತರುವಾಯ, ಉದ್ಯಮಿ ಎಲಾನ್ ಮಸ್ಕ್ ನಿವ್ವಳ ಆಸ್ತಿ ಮೌಲ್ಯದಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಒಂದೇ ದಿನ 26 ಬಿಲಿಯನ್ ಡಾಲರ್ ಹೆಚ್ಚಿತ್ತು. ಟೆಸ್ಲಾ ಹಾಗೂ ಇತರ ಕಂಪನಿಗಳ ಷೇರುಗಳಲ್ಲಿ ಹೆಚ್ಚಳವಾಗಿದ್ದು ಇದಕ್ಕೆ ಕಾರಣ. ಅವರ ಒಟ್ಟು ಆಸ್ತಿ ಮೌಲ್ಯ ಈಗ 313. 7 ಬಿಲಿಯನ್ ಡಾಲರ್ಗೇರಿದ್ದು, ಮೂರು ವರ್ಷದಲ್ಲಿ ಮೊದಲ ಬಾರಿಗೆ 300 ಬಿಲಿಯನ್ ದಾಟಿದೆ ಎಂದು ಬ್ಲೂಮ್ಗ್ ವರದಿ ಮಾಡಿದೆ. ಇದೊಂದೇ ವರ್ಷದಲ್ಲಿ ಮಸ್ಕ್ ಆದಾಯ 60 ಬಿಲಿಯನ್ ಡಾಲರ್ನಷ್ಟು ಹೆಚ್ಚಿದೆ. ಟ್ರಂಪ್ ಆಡಳಿತ ಮಸ್ಕ್ ಒಡೆತನದ ಕಂಪನಿಗಳಿಗೆ ಪೂರಕವಾದ ನೀತಿನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿ ಆ ಕಂಪನಿಗಳ ಷೇರು ಬೆಲೆ ಏರಿಕೆಯಾಗುತ್ತಿದೆ.
ಟ್ರಂಪ್ ಭದ್ರತೆಗೆ ರೋಬೋ ಶ್ವಾನ!: ಡೊನಾಲ್ಡ್ ಟ್ರಂಪ್ ಅವರಿಗೆ ಜೀವಬೆದರಿಕೆ ಇರುವ ಹಿನ್ನೆಲೆಯಲ್ಲಿ, ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ಫ್ಲೋರಿಡಾದಲ್ಲಿ ಟ್ರಂಪ್ ಭವ್ಯ ಬಂಗ್ಲೆಯನ್ನು ಹೊಂದಿದ್ದು, ಅದನ್ನು ಕಾಯುವುದಕ್ಕೆ ಅಮೆರಿಕದ ಸೀಕ್ರೆಟ್ ಸರ್ವಿಸ್ ಸಂಸ್ಥೆಯು ರೋಬಾಟ್ ಶ್ವಾನಗಳನ್ನು ನಿಯೋಜಿಸಿದೆ. ಇವಕ್ಕೆ ಅತ್ಯಾಧುನಿಕ ಸಾಧನಗಳನ್ನು ಅಳವಡಿಸಲಾಗಿದ್ದು, ಭದ್ರತೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಸ್ಕ್ಗೆ ಟ್ರಂಪ್ ಮಣೆ: ಉದ್ಯಮಿ ಎಲಾನ್ ಮಸ್ಕ್ ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಚಾರಾಭಿಯಾನದಲ್ಲಿ ತನುಮನಧನದಿಂದ ಸಹಕರಿಸಿದ್ದು ಗೊತ್ತೇ ಇದೆ. ಹೀಗಾಗಿ ಟ್ರಂಪ್ ಆಡಳಿತದಲ್ಲಿ ಮಸ್ಕ್ ಅವರಿಗೆ ಮಹತ್ವದ ಹೊಣೆಗಾರಿಕೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಟ್ರಂಪ್ ಶನಿವಾರ ಯೂಕ್ರೇನ್ ಅಧ್ಯಕ್ಷ ವೊಲೆದಿಮಿರ್ ಝೆಲೆನ್ಸ್ಕಿ ಜತೆ ದೂರವಾಣಿ ಸಂಭಾಷಣೆ ನಡೆಸಿದ ವೇಳೆ ಝೆಲೆನ್ಸ್ಕಿ ಜೊತೆ ಮಾತಾಡಲು ಮಸ್ಕ್ಗೂ ಅವಕಾಶ ನೀಡಿದರು. ಸಾಮಾನ್ಯವಾಗಿ ದೇಶಗಳ ಮುಖ್ಯಸ್ಥರು ಪರಸ್ಪರ ಮಾತನಾಡುವಾಗ ಹೀಗೆ ಮೂರನೆಯವರಿಗೆ ಅವಕಾಶ ಇರುವುದಿಲ್ಲ.