ರಾಷ್ಟ್ರಹಿತಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಲಿ: ಸಂದರ್ಶನದಲ್ಲಿ ಅಯೋಧ್ಯೆ ಭೂ ವಿವಾದ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿಕೆ

| ರಾಘವ ಶರ್ಮನಿಡ್ಲೆ

# ಸುಪ್ರೀಂಕೋರ್ಟ್​ನಲ್ಲಿ ಅಯೋಧ್ಯೆ ವಿವಾದ ಪ್ರಕರಣ ವಿಳಂಬವಾಗಿದೆ ಎಂದು ನಿಮಗನಿಸಿಲ್ಲವೇ?

ಪ್ರಕರಣ ಈಗ ಕೊನೆ ಹಂತಕ್ಕೆ ಬಂದು ನಿಂತಿದೆ. ಸಂಧಾನ ಸಮಿತಿ ಮುಂದೆ ನಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದೇವೆ. ದೀರ್ಘಕಾಲದಿಂದ ಬಿಕ್ಕಟ್ಟು ಸೃಷ್ಟಿಸಿರುವ ಈ ಶತಮಾನದ ಸಮಸ್ಯೆ ಶೀಘ್ರದಲ್ಲಿ ಕೊನೆಗೊಳ್ಳಬೇಕು. ಅಯೋಧ್ಯೆ ವಿವಾದಕ್ಕೆ ಬೆಂಕಿ ಹಚ್ಚುತ್ತಾ ಹಿಂದು-ಮುಸಲ್ಮಾನರ ಮಧ್ಯೆ ದ್ವೇಷದ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಮತ್ತು ಇದರಿಂದ ಜನರು ರೋಸಿ ಹೋಗಿದ್ದಾರೆ. ಈ ಕಾದಾಟ, ತಿಕ್ಕಾಟಗಳನ್ನು ಉಭಯ ಧರ್ವಿುಯರೂ ಬಯಸುತ್ತಿಲ್ಲ. ಹಿಂದು-ಮುಸ್ಲಿಮರ ಭಾವನೆಗಳನ್ನು ಗೌರವಿಸುವ ತೀರ್ಪನ್ನು ನ್ಯಾಯಾಲಯ ನೀಡಲಿದೆ ಎಂಬ ಭರವಸೆ ನಮ್ಮದು.

# ಕೋರ್ಟ್ ತೀರ್ಪು ಏನೇ ಇದ್ದರೂ ಒಪ್ಪುತ್ತೀರಾ?

ಖಂಡಿತ, ನ್ಯಾಯಾಲಯದ ಮಾತಿಗೆ ನಾವು ತಲೆಬಾಗುತ್ತೇವೆ. ಅದರಲ್ಲಿ ಅನುಮಾನವೇ ಬೇಡ. ದೇಶದ ಎಲ್ಲ ಮುಸಲ್ಮಾನರು ಕೋರ್ಟ್ ತೀರ್ಪಿಗೆ ಸಮ್ಮತಿಸಲಿದ್ದಾರೆ. ಹಿಂದುಗಳು ಕೂಡ ಅದನ್ನೇ ಹೇಳುತ್ತಿದ್ದಾರೆ. ಮಂದಿರ-ಮಸೀದಿ ವಿವಾದದಿಂದಾಗಿ ಎಷ್ಟೆಲ್ಲ ಕೋಮು ದಂಗೆಗಳು ನಡೆದವು ಎಂಬುದನ್ನು ದೇಶ ನೋಡಿದೆ. ಈ ಹೊಡೆದಾಟ-ಬಡಿದಾಟ ಯಾರಿಗೆ ಬೇಕು ಹೇಳಿ? ಸೋದರರಂತೆ ಬದುಕುವ ಬದಲು ಜಗಳವಾಡಿಕೊಂಡಿದ್ದಲ್ಲಿ ನಷ್ಟವಾಗುವುದು ಭಾರತಕ್ಕಲ್ಲವೇ? ದೇಶಹಿತ ನಮ್ಮ ಆದ್ಯತೆಯಾಗಬೇಕು. ಭಾರತ ಜಗತ್ತಿಗೇ ವಿಶ್ವಗುರು ಆಗಬೇಕು.

# ಹಿಂದು ಸಂಘಟನೆಗಳು ವಿವಾದಿತ ಸ್ಥಳದಲ್ಲಿ ಮಂದಿರವಷ್ಟೇ ನಿರ್ವಣವಾಗಬೇಕು ಎನ್ನುತ್ತಿದ್ದಾರೆ…?

ಕೋರ್ಟ್ ಮುಂದೆ ನಾವು ದಾಖಲೆ, ಸಾಕ್ಷ್ಯಳನ್ನು ಇಟ್ಟಿದ್ದೇವೆ. ಮಸೀದಿ ಕೆಡವಿದ್ದನ್ನು ಇಡೀ ಜಗತ್ತೇ ನೋಡಿದೆ. 10 ಲಕ್ಷ ಕರಸೇವಕರು ಇಲ್ಲಿ ಬಂದಿದ್ದರು. ಮಸೀದಿ ನಾಶ ಮಾಡಿದರು. ಕೋರ್ಟ್ ಇದನ್ನು ಬೇಗ ಇತ್ಯರ್ಥಪಡಿಸಲಿ.

# ಪ್ರಕರಣದ ವಿಳಂಬ ರಾಜಕೀಯ ಪಕ್ಷಗಳಿಗೆ ಲಾಭವಾಯ್ತೆಂದು ಅನಿಸುವುದಿಲ್ಲವೇ?

ಹೌದು. ರಾಜಕೀಯ ಪಕ್ಷಗಳು ತಮ್ಮ ಲಾಭಕ್ಕಾಗಿ ಅಯೋಧ್ಯೆ ವಿವಾದ ಜೀವಂತವಾಗಿಟ್ಟು ಚುನಾವಣೆ ಬಂದು ಅಧಿಕಾರ ಅನುಭವಿಸಿದವು. ಹಿಂದು-ಮುಸಲ್ಮಾನರನ್ನು ಮೂರ್ಖರನ್ನಾಗಿಸಲಾಯಿತು. ಅಯೋಧ್ಯೆ ವಿಷಯದಲ್ಲಿ ಕೋರ್ಟು, ಸರ್ಕಾರ ಮಾಡುವ ಕಾನೂನಿಗೆ ನಾವು ಬದ್ಧ. ಕಾಂಗ್ರೆಸ್ ಪಕ್ಷ 60 ವರ್ಷಗಳಿಂದ ಹಿಂದು-ಮುಸ್ಲಿಮರಿಗೆ ಚಳ್ಳೆಹಣ್ಣು ತಿನ್ನಿಸಿತು. ಅಭಿವೃದಿಯ ಬದಲು ತುಷ್ಟೀಕರಣದ ರಾಜಕಾರಣ ಮಾಡಿತು. ಹಿಂದು-ಮುಸಲ್ಮಾನರ ಮಧ್ಯೆ ದ್ವೇಷದ ಬೀಜ ಬಿತ್ತಲಾಯಿತು. ದೇಶವನ್ನು ದುರ್ಬಲಗೊಳಿಸುವುದೇ ಕಾಂಗ್ರೆಸ್​ನ ಕೆಲಸವಾಗಿತ್ತು.

# ನೀವು ರಾಮ ಮಂದಿರ ನಿರ್ವಣದ ವಿರುದ್ಧವೇ?

ಅಯೋಧ್ಯೆಯಲ್ಲಿ ಸಾವಿರಾರು ಹಿಂದು ಮಂದಿರಗಳಿವೆ. ಸ್ಥಳೀಯ ಮುಸಲ್ಮಾನರು ಈ ಮಂದಿರಗಳ ವಿರುದ್ಧ ಮಾತನಾಡಿರುವುದನ್ನು ನೀವು ಕೇಳಿದ್ದೀರಾ? ಶ್ರೀರಾಮ್ೕ, ಸೀತಾ ಮಾತಾಜೀ, ಹನುಮಾನ್ ಜೀ ಮಂದಿರಗಳು ಇಲ್ಲಿವೆ. ಅವ್ಯಾವುದಕ್ಕೂ ನಾವು ತಕರಾರು ತೆಗೆದಿಲ್ಲ.

# ಹಾಗಾದರೆ ಮಸೀದಿ ಎಲ್ಲಿ ನಿರ್ವಣವಾಗಬೇಕು ಎನ್ನುತ್ತೀರಿ?

ವಿವಾದಿತ ಜಮೀನಿನ ಸುತ್ತಮುತ್ತಲಿರುವ ಖಾಲಿ ಸ್ಥಳದಲ್ಲಿ ಮಸೀದಿಯನ್ನು ಕಟ್ಟಿಕೊಟ್ಟರೂ ನಾವು ತೃಪ್ತರು.

# ಮೋದಿ ಸರ್ಕಾರ ಸಮರ್ಪಕ ಆಡಳಿತ ನಡೆಸುತ್ತಿದೆಯೇ?

ಇದನ್ನು ನಾನು ಒಂದಲ್ಲ ಎರಡಲ್ಲ. ಹಲವು ಬಾರಿ ಹೇಳಿದ್ದೇನೆ. ಆ ಹೇಳಿಕೆಗೆ ಬದ್ಧನಾಗಿದ್ದೇನೆ ಕೂಡ. ನರೇಂದ್ರ ಮೋದಿ ಅವರಂತಹ ನಾಯಕ ಈ ದೇಶಕ್ಕೆ ಬೇಕಿದೆ ಮತ್ತು ಅವರು ಮತ್ತೆ ಪ್ರಧಾನಿಯಾಗಬೇಕು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸಿಎಂ ಆದ ಮೇಲೆ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತಿವೆ. ಗೂಂಡಾ, ಬದ್ಮಾಷ್, ಕಿಡಿಗೇಡಿಗಳು ಯೋಗಿಯವರನ್ನು ಕಂಡು ಹೆದರಿ ಮಲಗಿದ್ದಾರೆ.

# ಅಯೋಧ್ಯೆ ವಿವಾದ ಹಿನ್ನೆಲೆಯಲ್ಲಿ ನೋಡುವುದಾ ದರೆ, ಹಿಂದು ಮುಸ್ಲಿಂ ಜಗಳಕ್ಕೆ ಕಾರಣರು ಯಾರು?

ಕಾಂಗ್ರೆಸ್ ಷಡ್ಯಂತ್ರದಿಂದಲೇ ಅಯೋಧ್ಯೆ ವಿವಾದ ಪ್ರಕರಣದಲ್ಲಿ ಇಷ್ಟು ವಿಳಂಬವಾಯಿತು. ಹಿಂದುಗಳು ಮತ್ತು ಮುಸಲ್ಮಾನರು ಕಿತ್ತಾಡಿಕೊಂಡಿರಲಿ ಎನ್ನುವುದೇ ಕಾಂಗ್ರೆಸ್ ಉದ್ದೇಶವಾಗಿತ್ತು. 1949ರ ರಾತ್ರಿಯಲ್ಲಿ ಕೆಡವಿದ ವಿವಾದಿತ ಕಟ್ಟಡದ ಮಧ್ಯದಲ್ಲಿ ರಾಮನ ಮೂರ್ತಿಯನ್ನು ಇರಿಸಿದ್ದಾಗ, ಮಂದಿರ ನಿರ್ವಣಕ್ಕೆ ಶಿಲಾನ್ಯಾಸ ಮಾಡಿದ್ದಾಗ ಹಾಗೂ ಬಾಬರಿ ಮಸೀದಿಯನ್ನು ಕೆಡವಿದಾಗ ಕಾಂಗ್ರೆಸ್ ಸರ್ಕಾರವಿತ್ತು. ಹೀಗಾಗಿ, ಇಂದಿನ ಬಿಕ್ಕಟ್ಟಿಗೆ ಕಾಂಗ್ರೆಸ್ಸೇ ಮೂಲ ಕಾರಣ. ಕಾಂಗ್ರೆಸ್ ಮುಸ್ಲಿಮರ ಪರ ಇಲ್ಲ. ಆ ರೀತಿಯ ಅಭಿಪ್ರಾಯ ರೂಪಿಸಲಾಗಿದೆಯಷ್ಟೇ. ಅಯೋಧ್ಯೆ ವಿಷಯದಲ್ಲಿ ಎಲ್ಲರೂ ಬಿಜೆಪಿಯನ್ನು ದೂರುತ್ತಾರೆ. ಆದರೆ ನಾನು ಬಿಜೆಪಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ.

# ನೀವು ಬಿಜೆಪಿ ಬೆಂಬಲಿಸುತ್ತೀರಾ?

ಬಿಜೆಪಿ ತಪ್ಪು ಮಾಡಿಲ್ಲ ಎಂದರೆ ನಾನೇಕೆ ಅವರನ್ನು ವಿರೋಧಿಸಲಿ? ಮುಸಲ್ಮಾನರಿಗೆ ಕೆಟ್ಟದ್ದೆನಿಸುವ ಕೆಲಸವನ್ನು ಕೇಂದ್ರ, ರಾಜ್ಯ ಸರ್ಕಾರ ಮಾಡುತ್ತಿಲ್ಲ. ದೂರದೃಷ್ಟಿಯಿಂದ ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂಬುದನ್ನು ನೀವೇ ನೋಡುತ್ತಿದ್ದೀರಿ.

# ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?

ಯಾವ ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆಯೋ ಅದೇ ಮುಂದುವರಿಯಬೇಕು. ಅವರನ್ನೇ ನಾವು ಬೆಂಬಲಿಸುತ್ತೇವೆ.

# ಮೋದಿಯವರ ಯಾವ ಕೆಲಸ ನಿಮಗಿಷ್ಟವಾಯಿತು?

ಎಲ್ಲ ಕಾರ್ಯಗಳನ್ನು ನಾನು ಮೆಚ್ಚಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಅವರು ಪ್ರಧಾನಿಯಾದ ಬಳಿಕ ಹಿಂದು-ಮುಸ್ಲಿಂ ಕೋಮು ಸಂಘರ್ಷ ಕಡಿವಾಣ ಬಿದ್ದಿದೆ. ಹಿಂದು-ಮುಸ್ಲಿಮರು ಸೋದರರಂತೆ ಬದುಕುತ್ತಿದ್ದಾರೆ. ಮೋದಿ-ಯೋಗಿಯಿಂದಾಗಿ ದುಷ್ಕರ್ವಿುಗಳ ಅಟ್ಟಹಾಸ ತಗ್ಗಿದೆ. ಒಂದು ಸರ್ಕಾರದಿಂದ ನೀವು ಇನ್ನೇನು ತಾನೆ ನಿರೀಕ್ಷಿಸುತ್ತೀರಿ?

# ಮೋದಿ ಮತ್ತೆ ಪ್ರಧಾನಿಯಾಗಬೇಕೇ?

ಮೋದಿಯವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಜನರೆಲ್ಲರ ಭಾವನೆಯಾಗಿದ್ದರೆ ಅವರೇ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ.