ದಕ್ಷ ಅಧಿಕಾರಿಯ ಗಟ್ಟಿ ವ್ಯಕ್ತಿತ್ವ…

| ಗಿರೀಶ್ ಮಟ್ಟೆಣ್ಣವರ

‘ಸರ್, ತಮಗೆ ನಿನ್ನೆಯಿಂದ ತುಂಬ ಜ್ವರ ಇದೆ. ತಾವು ಇಲ್ಲೇ ಕ್ಯಾಂಪ್​ನಲ್ಲಿ ರೆಸ್ಟ್ ತಗೊಳ್ಳಿ. ನಾವು ಕೂಂಬಿಂಗ್ ಮುಗಿಸಿಕೊಂಡು ಬರ್ತೀವಿ’ ಎಂದು ಮಧುಕರ ಶೆಟ್ಟಿಯವರಿಗೆ ಹೇಳಿದೆ. ಅದಕ್ಕವರು- ‘ಇದೆಂಥ ಜ್ವರ ಕಣೋ, ಕೈಯಲ್ಲಿ ಎಸ್.ಎಲ್.ಆರ್ (ರೈಫಲ್) ಹಿಡಿದು ಆ ಬೆಟ್ಟ ಹತ್ತಿ ಇಳಿದರೆ ಮೈಯಿಂದ ಸುರಿಯೋ ಬೆವರಿಗೆ ಜ್ವರ ಹೆದರಿ ಓಡಿ ಹೋಗುತ್ತೆ’ ಅಂತ ಹೇಳಿ ನಮ್ಮ ಜತೆಗೇ ಕೂಂಬಿಂಗ್​ಗೆ ಬಂದ್ರು. ದಕ್ಷ ಅಧಿಕಾರಿ ಮಧುಕರ ಶೆಟ್ಟಿಯವರಿಗೆ ಅಂತಿಮ ನಮನ ಸಲ್ಲಿಸಿ ಬಂದ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಯೊಬ್ಬರು, ಶೃಂಗೇರಿಯ ಕಿಗ್ಗಾದಲ್ಲಿನ ತಮ್ಮ ಅನುಭವ ಹಂಚಿಕೊಂಡು ಕಂಬನಿ ಮಿಡಿಯುತ್ತಿದ್ದರು. ಅಪರೂಪದ ವ್ಯಕ್ತಿತ್ವದ ಮಧುಕರ ಶೆಟ್ಟಿ ಅಗಲಿಕೆ ಅರಗಿಸಿಕೊಳ್ಳಲಾಗದ ನೋವಾಗಿ ಕಾಡುತ್ತಿದೆ.

ಮಧುಕರ ಶೆಟ್ಟಿ 2002ರಲ್ಲಿ ಕಲಬುರ್ಗಿ ಜಿಲ್ಲೆಯ ಮಹಾರಾಷ್ಟ್ರ ಗಡಿಗೆ ತಾಗಿರುವ ಆಳಂದ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಪ್ರೋಬೆೆಶನರ್ ಆಗಿದ್ದರು. ಅದು ಅವರ ಸೇವಾವವಧಿಯ ಮೊದಲ ಠಾಣೆಯಾಗಿತ್ತು. ಅವರು ಅಲ್ಲಿಂದ ವರ್ಗವಾಗಿ ಹೋದ ಕೆಲವೇ ದಿನಗಳಲ್ಲಿ ನಾನು ಅದೇ ಠಾಣೆಯಲ್ಲಿ ಪಿಎಸ್​ಐ ಪೋ›ಬೆೆಶನರ್ ಆಗಿ ನನ್ನ ವೃತ್ತಿಜೀವನ ಪ್ರಾರಂಭಿಸಿದ್ದೆ. ಆಳಂದ ಠಾಣೆಯ ಸಿಬ್ಬಂದಿ ಮತ್ತು ಅಲ್ಲಿಯ ಜನಸಾಮಾನ್ಯರ ಮಾತಿನಲ್ಲಿ ಮಧುಕರಶೆಟ್ಟಿಯವರ ಕಾರ್ಯಶೈಲಿ, ದಕ್ಷತೆಯ ಗುಣಗಾನ ತುಂಬಿ ತುಳುಕುತ್ತಿತ್ತು. ಮಟ್ಕಾ, ಜೂಜು, ಕಳ್ಳಭಟ್ಟಿ ದಂಧೆಕೋರರನ್ನು ಊರು ಬಿಡಿಸಿದ್ದರು. ಹಫ್ತಾ ವಸೂಲಿ, ರೌಡಿಸಂ ಮಾಡುವವರನ್ನು ಜೈಲಿಗೆ ತಳ್ಳಿದ್ದರು. ತಾವು ಲಂಚ ಮುಟ್ಟುವುದು ದೂರದ ಮಾತು, ಠಾಣೆಯ ಸಿಬ್ಬಂದಿಗೂ ಲಂಚ ಮುಟ್ಟದಂತೆ ತಾಕೀತು ಮಾಡಿದ್ದರು.

ಮಾರ್ಚ್ 2005ರಲ್ಲಿ ನಾನು ಪಿಎಸ್​ಐ ಹುದ್ದೆಗೆ ರಾಜೀನಾಮೆ ಕೊಟ್ಟ ನಂತರ ಮಾಹಿತಿ ಹಕ್ಕು ಆಧರಿಸಿದ ‘ಲೆಕ್ಕಕೊಡಿ ಚಳವಳಿ’ಯ ಸಿದ್ಧತೆಯಲ್ಲಿದ್ದೆ. ಪತ್ರಿಕೆಯ ಮೂಲಕ ಈ ವಿಷಯ ತಿಳಿದ ಮಧುಕರ ಶೆಟ್ಟಿಯವರು ರಾಜಭವನದಲ್ಲಿದ್ದ ತಮ್ಮ ಚೇಂಬರಿಗೆ ನನ್ನನ್ನು ಕರೆಸಿಕೊಂಡರು. ಆಗ ಅವರು ಕರ್ನಾಟಕ ರಾಜಭವನದ ಸುರಕ್ಷತಾ ಮುಖ್ಯಾಧಿಕಾರಿಯಾಗಿದ್ದರು.

‘ಗಿರೀಶ್ ನಿಮ್ಮಮಾಹಿತಿ ಹಕ್ಕು ಆಂದೋಲನ ಸರಿಯಾದ ದಿಕ್ಕಿನಲ್ಲಿ ಸಾಗಲಿ. ಹಿಂಸೆಗೆ ಪ್ರಚೋದನೆ ನೀಡುವ ಯಾವುದೇ ಮಾತನ್ನು ಆಡಬೇಡಿ. ಇದು, 2,200 ರೂಪಾಯಿ. ಪ್ರತಿ ತಿಂಗಳು ನನಗೆ ಸಿಗುವ ಸಂಬಳದಲ್ಲಿ ಸ್ವಲ್ಪ ಹಣವನ್ನು ಯಾವುದಾದರೂ ಸಾಮಾಜಿಕ ಕಾರ್ಯಕ್ಕೆ ಕೊಡುತ್ತೇನೆ. ಇದು ಲಂಚ ಪಡೆದ ಹಣವಲ್ಲ. ನನ್ನ ಸಂಬಳದ ಒಂದು ಭಾಗ. ದುರುಪಯೋಗವಾಗದಂತೆ ಎಚ್ಚರವಹಿಸಿ. ಆಲ್ ದಿ ಬೆಸ್ಟ್’ ಎಂದು ಹೇಳಿ ಬಿಳಿಬಣ್ಣದ ಕವರ್​ನಲ್ಲಿ ಅವರೇ ಹಣ ಇಟ್ಟು ಕೊಟ್ಟರು. ಅವರ ಆ ಮಾತು ಕೇಳಿ ಒಂದು ಕ್ಷಣ ಮೈ ಜುಮ್ಮೆಂದಿತು. ಸ್ವಲ್ಪ ಹೊತ್ತು ಪೊಲೀಸ್ ಇಲಾಖೆ ಕುರಿತಾದ ಮಾತುಗಳು ಮುಂದುವರಿದವು. ಕೆಲ ತಿಂಗಳ ಹಿಂದಷ್ಟೇ ಕಾಡುಗಳ್ಳ ವೀರಪ್ಪನ್ ಹತನಾಗಿದ್ದ. ಮಧುಕರ ಶೆಟ್ಟಿಯವರು ಆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕರ್ನಾಟಕದ ಅಧಿಕಾರಿಯಾಗಿದ್ದರು.

ಕಾರ್ಯಚರಣೆಯ ಸಂಪೂರ್ಣ ಶ್ರೇಯವನ್ನು ಮಾಧ್ಯಮಗಳಲ್ಲಿ ತಮಿಳುನಾಡಿನ ಪೊಲೀಸರೇ ಪಡೆದಿದ್ದರು. ಎಲ್ಲೂ ಕೂಡ ಮಧುಕರ ಶೆಟ್ಟಿಯವರ ಪಾತ್ರದ ಕುರಿತು ಪ್ರಸ್ತಾಪವೇ ಆಗಿರಲಿಲ್ಲ. ಅವರ ಜತೆ ಹರಟುವಾಗ ಈ ಮಾತನ್ನು ಅವರಿಗೆ ಕೇಳಿದೆ. ಅದಕ್ಕೆ ಅವರು, ‘ವೀರಪ್ಪನ್ ಎನ್​ಕೌಂಟರ್ ಮಾಡುವುದು ಪೊಲೀಸ್ ಉದ್ದೇಶವಾಗಿರಲಿಲ್ಲ. ಆದರೆ ಆತನ ಹಿಂಸಾಕೃತ್ಯವನ್ನು ಅಂತ್ಯಗೊಳಿಸುವುದು ನಮ್ಮ ಉದ್ದೇಶವಾಗಿತ್ತು. ಅದನ್ನು ನಾವು ಮಾಡಿದ್ದೇವೆ. ಒಬ್ಬ ಸತ್ತುಹೋದ ನರಹಂತಕನ ಪಕ್ಕ ನಿಂತುಕೊಂಡು ಪ್ರಚಾರ ಪಡೆಯುವುದು ನನಗೆ ಇಷ್ಟವಿರಲಿಲ್ಲ. ಅದು ನಮ್ಮ ಇಲಾಖೆಯ ಪ್ರಿನ್ಸಿಪಲ್ ಅಲ್ಲ’ ಎಂದು ಚುಟುಕಾಗಿ ಹೇಳಿದರು. ಹೀಗಿತ್ತು ಮಧುಕರ ಶೆಟ್ಟಿಯವರ ವ್ಯಕ್ತಿತ್ವ.

ಮಧುಕರ ಶೆಟ್ಟಿಯವರು ಪ್ರಾಮಾಣಿಕರಾಗಿದ್ದರೂ, ಎಲ್ಲೂ ಕೂಡ ತಮ್ಮ ಪ್ರಾಮಾಣಿಕತೆ ಕುರಿತು ಭಾಷಣ ಬಿಗಿಯಲಿಲ್ಲ. ಶೌರ್ಯದ ಬಗ್ಗೆ ಪ್ರಚಾರ ಪಡೆಯಲಿಲ್ಲ. ಮಾಧ್ಯಮಗಳ ಪ್ರಚಾರದಿಂದ ದೂರವಿದ್ದುಕೊಂಡೇ ಭ್ರಷ್ಟವ್ಯವಸ್ಥೆಯ ವಿರುದ್ಧ ಸೆಣಸಿದರು. ಆ ಕಾರಣಕ್ಕಾಗಿಯೇ ಅವರಿಗೆ ಹೆಚ್ಚು ಪ್ರಮುಖ ಹುದ್ದೆಗಳು ಸಿಗಲಿಲ್ಲ. Punishment post ಎಂದು ಕರೆಯಲಾಗುವ ರಾಜಭವನದ ರಕ್ಷಣಾಧಿಕಾರಿ, ನಕ್ಸಲ್ ನಿಗ್ರಹ ದಳ, ಎಸ್​ಟಿಎಫ್, ಪೊಲೀಸ್ ತರಬೇತಿ ಕೇಂದ್ರದಂತಹ ಜಾಗಗಳಿಗೆ ವರ್ಗಾಯಿಸಲಾಗುತ್ತಿತ್ತು. ಇಂಥ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಮುಂದಿಟ್ಟು ರಾಜ್ಯದ ಭ್ರಷ್ಟತೆ, ಅಕ್ರಮಗಳನ್ನು ಬಗ್ಗುಬಡಿಯುವ ಇಚ್ಛಾಶಕ್ತಿಯನ್ನು ಯಾವುದೇ ರಾಜಕೀಯ ಪಕ್ಷವೂ ತೋರಲಿಲ್ಲ. ಪೊಲೀಸ್ ಇಲಾಖೆಯೇ ಒಂದು ವಿಚಿತ್ರ. ಇಲ್ಲಿ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಭ್ರಷ್ಟ ಅಧಿಕಾರಿ ದ್ವೇಷಿಸುತ್ತಾನೆ. ಅದು ಸಹಜ. ಆದರೆ ಒಬ್ಬ ಪ್ರಾಮಾಣಿಕ ಅಧಿಕಾರಿಯನ್ನು ಇನ್ನೊಬ್ಬ ಪ್ರಾಮಾಣಿಕ ಅಧಿಕಾರಿ ವಿಪರೀತವಾಗಿ ದ್ವೇಷಿಸುತ್ತಾನೆ. ಹೀಗಾಗಿ ಹಿರಿಯ ಅಧಿಕಾರಿ ವರ್ಗದವರೂ ರಾಜಕಾರಣಿಗಳಂತೆ ಮಧುಕರ ಶೆಟ್ಟಿಯವರನ್ನು ದೂರವಿಟ್ಟರು.

ಒಂದು ಕುರುಡ ವ್ಯವಸ್ಥೆ ದಕ್ಷ ಅಧಿಕಾರಿಯನ್ನು ದೂರ ಮಾಡಿದಂತೆ, ಪ್ರಕೃತಿಯೂ ಅವರನ್ನು (ಹೆಚ್1ಎನ್1 ವೈರಸ್ ಸೋಂಕಿನ ಪರಿಣಾಮ) ಜಗತ್ತಿನಿಂದಲೇ ದೂರ ಮಾಡಿದೆ. ವಿಪರೀತ ಪ್ರಾಮಾಣಿಕತೆಯನ್ನು ಪ್ರಕೃತಿಯೂ ಸಹಿಸಿಕೊಳ್ಳಲಿಲ್ಲವೇ?

(ಲೇಖಕರು ಮಾಜಿ ಪೊಲೀಸ್ ಅಧಿಕಾರಿ)

(ಪ್ರತಿಕ್ರಿಯಿಸಿ:[email protected], [email protected])