ಮರೆಯಾದ ಮಧುಕರ ಶೆಟ್ಟಿ| ಕರ್ನಾಟಕದ ದಕ್ಷ, ನಿಷ್ಠ, ಪ್ರಾಮಾಣಿಕ ಪೊಲೀಸ್​ ಅಧಿಕಾರಿ ಪಂಚಭೂತಗಳಲ್ಲಿ ಲೀನ

ಉಡುಪಿ: ವೃತ್ತಿ ಮತ್ತು ಸಾರ್ವಜನಿಕ ಬದುಕಿನಲ್ಲಿ ದಕ್ಷ, ನಿಷ್ಠ, ಪ್ರಾಮಾಣಿಕರೆನಿಸಿಕೊಂಡಿದ್ದ ರಾಜ್ಯದ ಐಪಿಎಸ್​ ಅಧಿಕಾರಿ ಮಧುಕರ ಶೆಟ್ಟಿ ಅವರ ಚಿತೆಗೆ ಭಾನುವಾರ ಮಧ್ಯಾಹ್ನ 12.15 ಹೊತ್ತಿಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಈ ಮೂಲಕ ಮಧುಕರ್​ ಶೆಟ್ಟಿ ಪಂಚಭೂತಗಳಲ್ಲಿ ಲೀನವಾದರು.

ಹುಟ್ಟೂರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿಯಲ್ಲಿ ಬಂಟ ಸಂಪ್ರದಾಯದಂತೆ ನಡೆದ ಅಂತಿಮ ವಿಧಿ ವಿಧಾನದಲ್ಲಿ ಸೋದರರಾದ ಮುರಳಿ ಶೆಟ್ಟಿ, ಸುಧಾಕರ್​ ಶೆಟ್ಟಿ, ಮಗಳು ಸಮ್ಯ, ಅಣ್ಣನ ಮಗ ಸಾರಂಗ್​ ಮಧುಕರ ಶೆಟ್ಟಿ ಅವರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಅಂತಿಮ ಸಂಸ್ಕಾರಕ್ಕೆ ಆಗಮಿಸಿದ್ದ ಪೊಲೀಸ್​ ಅಧಿಕಾರಿಗಳು ಮತ್ತು ಜನತೆ ಮರೆಯಾದ ಮಧುಕರ ಶೆಟ್ಟಿ ಅವರಿಗೆ ಕಣ್ಣೀರ ವಿದಾಯ ಹೇಳಿದರು.

ಮಧುಕರ ಶೆಟ್ಟಿ ಅವರ ಪತ್ನಿ ಮತ್ತು ಪುತ್ರಿಯ ನೋವಿನ ಕ್ಷಣಗಳು

ಮಧುಕರ ಶೆಟ್ಟಿ ಅವರ ತಂದೆ, ನಾಡಿನ ಹಿರಿಯ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟರು ಮತ್ತು ತಾಯಿಯ ಸಮಾಧಿ ಪಕ್ಕದಲ್ಲೇ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಇದಕ್ಕೂ ಮೊದಲು ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ ಸಚಿವ ಯು.ಟಿ ಖಾದರ್​ ಅವರು ಮಧುಕರ ಶೆಟ್ಟಿ ಅವರಿಗೆ ಗೌರವ ಸಮರ್ಪಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್​ ಅಂತಿಮ ನಮನ ಸಲ್ಲಿಸಿದರು.
ಸರ್ಕಾರದಿಂದ ಸ್ಮಾರಕ ನಿರ್ಮಾಣದ ಚಿಂತನೆ

ಮಧುಕರ ಶೆಟ್ಟಿ ಅವರ ಹೆಸರನ್ನು ರಾಜ್ಯದ ಯಾವುದಾದರೂ ಒಂದು ಪೊಲೀಸ್​ ತರಬೇತಿ ಕೇಂದ್ರಕ್ಕೆ ಇರಿಸಬೇಕು ಮತ್ತು ಅವರ ಸ್ಮಾರಕ ನಿರ್ಮಿಸಬೇಕು ಎಂಬ ಒತ್ತಾಯದ ಕುರಿತು ಮಾತನಾಡಿದ ಸಚಿವ ಯು.ಟಿ ಖಾದರ್ “ಸ್ಮಾರಕ ನಿರ್ಮಿಸಬೇಕು ಎಂಬ ಜನರ ಭಾವನೆಗಳನ್ನು ಸರ್ಕಾರ ಗೌರವಿಸುತ್ತದೆ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ,” ಎಂದು ಅವರು ತಿಳಿಸಿದರು.