ಸಹೋದ್ಯೋಗಿಗಳು, ಸ್ನೇಹಿತರು, ಶ್ರೀಸಾಮಾನ್ಯರಿಂದ ಅಶ್ರುತರ್ಪಣ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪಾರ್ಥಿವ ಶರೀರವನ್ನು ಹೊತ್ತ ವಿಮಾನ ಈಗಾಗಲೇ ಬೆಂಗಳೂರಿಗೆ ಹೊರಟಿದ್ದು ಅದಕ್ಕೂ ಮೊದಲು ಹೈದರಾಬಾದ್​ನ ಅವರ ನಿವಾಸಕ್ಕೆ ಹಲವು ಜನ ಆಗಮಿಸಿ ಅಂತಿಮ ದರ್ಶನ ಪಡೆದರು.

ಮನೆಗೆ ಭೇಟಿ ಕೊಟ್ಟಿದ್ದ ಅಸಿಸ್ಟಂಟ್​ ಡೈರೆಕ್ಟರ್​ ಪವನ್​ ಕುಮಾರ್ ಅವರು ಮಧುಕರ್​ ಶೆಟ್ಟಿಯವರ ಇಷ್ಟವಾದ ಹಾಡು ಹಾಡುವ ಮೂಲಕ ಅಂತಿಮ ನಮನ ಸಲ್ಲಿಸಿದರು. ಪವನ್​ ಕುಮಾರ್​ 2009ರ ಬ್ಯಾಚ್​ನ ಐಪಿಎಸ್​ ಅಧಿಕಾರಿ.

ಅಣ್ಣಾಮಲೈ ಸಂತಾಪ

ಖಡಕ್​ ಅಧಿಕಾರಿ ಮಧುಕರ್​ ಶೆಟ್ಟಿ ನಿಧನಕ್ಕೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಧುಕರ್​ ಶೆಟ್ಟಿ ನಿಧನದಿಂದ ತುಂಬ ನೋವಾಗಿದೆ. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಈ ಹಿಂದೆ ಉಡುಪಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಅವರ ಕುಟುಂಬ ಹಾಗೂ ಸ್ನೇಹಿತರ ಪರಿಚಯವಾಗಿತ್ತು ಎಂದು ಕಂಬನಿ ಮಿಡಿದಿದ್ದಾರೆ.

ಬೀದಿಬದಿ ವ್ಯಾಪಾರಿಗಳಿಂದ ಶ್ರದ್ಧಾಂಜಲಿ

ಮೃತ ಮಧುಕರ್​ ಶೆಟ್ಟಿಯವರಿಗೆ ರಾಮನಗರ ಜಿಲ್ಲೆ ಚನ್ನಪಟ್ಟ ತಾಲೂಕಿನ ಕನ್ನಡಪರ ಹೋರಾಟಗಾರರು, ರಾಜಕೀಯ ಮುಖಂಡರು, ಬೀದಿಬದಿ ವ್ಯಾಪಾರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಮಧುಕರ ಶೆಟ್ಟಿಯವರು 2001ರಲ್ಲಿ ಚನ್ನಪಟ್ಟಣ ಎಸಿಪಿಯಾಗಿದ್ದರು. ಅಲ್ಲಿ 8 ತಿಂಗಳ ಕಾಲ ಕಾರ್ಯನಿರ್ವಹಿಸಿದ್ದ ಅವರು ಖಡಕ್​ ಅಧಿಕಾರಿಯಾಗಿ ಫೇಮಸ್​ ಆಗಿದ್ದರು.

ಮಧ್ಯಾಹ್ನ ಬೆಂಗಳೂರಿಗೆ ಪಾರ್ಥಿವ ಶರೀರ
ಮಧುಕರ್​ ಶೆಟ್ಟಿ ಪಾರ್ಥಿವ ಶರೀರ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಗಳೂರಿಗೆ ಆಗಮಿಸಲಿದೆ. ರಾತ್ರಿ 8.15ರ ವರೆಗೆ ಯಲಹಂಕ ಪೊಲೀಸ್​ ತರಬೇತಿ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.