Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಕಾಶ್ಮೀರದಲ್ಲಿ ಸೂಪರ್ ಕಾಪ್

Sunday, 24.06.2018, 3:03 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ದೇಶದ ಜನರ ಗಮನವೆಲ್ಲ ಈಗ ಜಮ್ಮು-ಕಾಶ್ಮೀರದ ಕಡೆಗೆ ನೆಟ್ಟಿದೆ. ಸೈದ್ಧಾಂತಿಕ ಭಿನ್ನಮತ ಹೊಂದಿರುವ ಪಿಡಿಪಿ-ಬಿಜೆಪಿ ಸೇರಿ ರಚಿಸಿದ್ದ ಮೈತ್ರಿ ಸರ್ಕಾರ ಮೂರೂವರೆ ವರ್ಷದ ಆಳ್ವಿಕೆ ಬಳಿಕ ಉಗ್ರ ನಿಗ್ರಹ ವಿಚಾರದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟು ಕಳೆದ ವಾರ ಪತನವಾಗಿದೆ. ಇದರ ಬೆನ್ನಲ್ಲೇ ಅಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂದಿದೆ. ನಕ್ಸಲ್ ನಿಗ್ರಹ ಪರಿಣತ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿಜಯ ಕುಮಾರ್ ರಾಜ್ಯಪಾಲರಿಗೆ ಸಲಹೆಗಾರರಾಗಿ, ಐಎಎಸ್ ಅಧಿಕಾರಿ ಬಿ.ಬಿ.ವ್ಯಾಸ್ ಮುಖ್ಯಕಾರ್ಯದರ್ಶಿಯಾಗಿ ನಿಯೋಜಿತರಾಗಿದ್ದಾರೆ. ಇದರೊಂದಿಗೆ, ಜಮ್ಮು-ಕಾಶ್ಮೀರದಲ್ಲಿ ಸೇನೆಯ ಉಗ್ರ ನಿಗ್ರಹ ಕಾರ್ಯಾಚರಣೆಗೆ ಅಡ್ಡಿಯಾಗಿದ್ದ ರಾಜಕೀಯ ಹಸ್ತಕ್ಷೇಪ ಇಲ್ಲದಂತಾಗಿದೆ. ಎರಡನೇ ಹಂತದ ಆಪರೇಷನ್ ಆಲ್ ಔಟ್ ಕಾರ್ಯಾಚರಣೆಯನ್ನೂ ರಕ್ಷಣಾ ಪಡೆಗಳು ಆರಂಭಿಸಿವೆ. ಇಂತಹ ಸೂಕ್ಷ್ಮ ಸನ್ನಿವೇಶದಲ್ಲಿ ಕೆ. ವಿಜಯ ಕುಮಾರ್ ನೇಮಕ ಮಹತ್ವ ಪಡೆದುಕೊಂಡಿದೆ. ಜಮ್ಮು-ಕಾಶ್ಮೀರದ ಸ್ಥಿತಿಗತಿ ಅರಿವು ಅವರಿಗೆ ಮೊದಲೇ ಇರುವ ಕಾರಣ, ಈ ಹೊಣೆಗಾರಿಕೆ ನಿಭಾಯಿಸುವುದೇನೂ ಕಷ್ಟವಾಗದು.

ಇದಕ್ಕೂ ಮುನ್ನ ವಿಜಯಕುಮಾರ್ ಕೇಂದ್ರ ಗೃಹ ಸಚಿವಾಲಯದ ಹಿರಿಯ ಸುರಕ್ಷಾ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ದಕ್ಷಿಣ ಭಾರತದ ಅದರಲ್ಲೂ ಕರ್ನಾಟಕ, ತಮಿಳುನಾಡು, ಕೇರಳದ ಜನರಿಗೆ ವಿಜಯ ಕುಮಾರ್ ಹೆಸರು ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ‘ಆಪರೇಷನ್ ಕೊಕೂನ್’ ಮೂಲಕ ಚಿರಪರಿಚಿತವಾದುದು. ಅದೇ ರೀತಿ ನಕ್ಸಲ್ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಅವರ ಪರಿಣತಿ ಕೂಡ ಗಮನಾರ್ಹ. ಜಮ್ಮು-ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಹಾವಳಿ ಹೆಚ್ಚಾಗಿದ್ದು, ಅವರನ್ನು ನಿಗ್ರಹಿಸುವ ನಿಟ್ಟಿನಲ್ಲಿ ವಿಜಯ ಕುಮಾರ್ ನೈಪುಣ್ಯ ಪ್ರಯೋಜನಕ್ಕೆ ಬರಲಿದೆ. ಇಂಥ ವಿಜಯಕುಮಾರ್ 1975ರ ಬ್ಯಾಚಿನ ತಮಿಳುನಾಡು ಕೆಡರ್​ನ ಐಪಿಎಸ್ ಅಧಿಕಾರಿ. ‘ಒಮ್ಮೆ ಪೊಲೀಸ್ ಆದ ಮೇಲೆ, ಯಾವತ್ತಿಗೂ ಪೊಲೀಸ್’ ಎಂಬ ಹೇಳಿಕೆಗೆ ಅನ್ವರ್ಥ ಅವರು. ಈಗಲೂ ಅರವತ್ತರ ನಾಲ್ಕು ಸೆಟ್ ಪುಷ್​ಅಪ್ಸ್ ಮಾಡ್ತಾರೆ. ಅಷ್ಟರ ಮಟ್ಟಿಗೆ ಫಿಟ್​ನೆಸ್ ಕೂಡ ಉಳಿಸಿಕೊಂಡಿದ್ದಾರೆ.

ವಿಜಯಕುಮಾರ್ ಮೂಲತಃ ಕೇರಳದವರು. 1952ರ ಸೆಪ್ಟೆಂಬರ್ 15ರಂದು ಜನಿಸಿದ ಅವರಿಗೆ ತಂದೆ ವಿ.ಕೃಷ್ಣನ್ ನಾಯರ್ ಬಾಲ್ಯದ ಹೀರೋ. ವೃತ್ತಿಯಲ್ಲಿ ಪೊಲೀಸ್ ಸಬ್ ಇನ್​ಸ್ಪೆಕ್ಟರ್. ತಾಯಿ ಕೌಸಲ್ಯಾ ನಾಯರ್. ಐದು ವರ್ಷದವನಿದ್ದಾಗಲೇ ವಿಜಯ ಕುಮಾರ್ ತಂದೆ ಹಾಕುತ್ತಿದ್ದ ಪೊಲೀಸ್ ಬೂಟ್ಸ್ ನಲ್ಲಿ ಕಾಲು ಹಾಕಿದವರು. ಹಾಗೆಯೇ ‘ಮೈ ಡ್ಯಾಡಿ ಸ್ಟ್ರಾಂಗೆಸ್ಟ್’ ಎನ್ನುತ್ತ ಬಾಲ್ಯವನ್ನು ಅನುಭವಿಸಿದವರು. ಹಾಗೆ ಬೆಳೆಯುತ್ತಿದ್ದವರಿಗೆ ಪೊಲೀಸ್ ವೃತ್ತಿಯ ಸೆಳೆತ ಹೆಚ್ಚಿಸಿದ್ದು ಅಂದು ಇನ್​ಸ್ಪೆಕ್ಟರ್ ಜನರಲ್ ಆಗಿದ್ದ ಫ್ರೆಡ್ರಿಕ್ ವಿಕ್ಟರ್ ಅರುಲ್. ಹಾಗೆ, ಶಿಕ್ಷಣ ಪೂರ್ತಿಯಾಗುತ್ತಲೇ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 1975ರ ನವೆಂಬರ್ 10ರಂದು ಭಾರತೀಯ ಪೊಲೀಸ್ ಸೇವೆಗೆ ಸೇರ್ಪಡೆಗೊಂಡರು. ಆರಂಭದಲ್ಲಿ ಸೆಂಬಿಯಂ, ತಿರುಚ್ಚಿ, ಪಟ್ಟುಕೋಟೈನ ಸಹಾಯಕ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬಳಿಕ 1982-83ರಲ್ಲಿ ಧರ್ಮಪುರಿಯಲ್ಲಿ, 1983-85ರ ತನಕ ಸೇಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. 1985ರಿಂದ 90 ಅವಧಿಯಲ್ಲಿ ಅಂದಿನ ಪ್ರಧಾನಮಂತ್ರಿ ರಾಜೀವ್ ಗಾಂಧಿ ಅವರ ವಿಶೇಷ ರಕ್ಷಣಾ ಗುಂಪಿ(ಎಸ್​ಪಿಜಿ)ನಲ್ಲಿ ಕೆಲಸ ಮಾಡಿದ್ದರು. ‘ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಲವಲವಿಕೆ, ಜೀವನೋತ್ಸಾಹ ಕಂಡು ಅಚ್ಚರಿ ಪಟ್ಟಿದ್ದೆ. ಕಡಿಮೆ ಆಹಾರ ಸೇವಿಸುತ್ತಿದ್ದ ಅವರು, ಬಹಳ ಪ್ರವಾಸ ಮಾಡಿದ್ದರು. ಅವರ ಜತೆ 52 ರಾಷ್ಟ್ರಗಳನ್ನು ಸುತ್ತಾಡಿದ್ದೇನೆ. ಎಷ್ಟೇ ಪ್ರಯಾಣಿಸಿದರೂ ಅವರು ಯಾವಾಗಲೂ ಫ್ರೆಶ್ ಆಗಿಯೇ ಇರುತ್ತಿದ್ದರು’ ಎಂದು ವಿಜಯ ಕುಮಾರ್ ಹೇಳಿದ್ದನ್ನು ಲೇಖಕ ಸಂಜಯ್ ಪಿಂಟೋ ಒಂದೆಡೆ ದಾಖಲಿಸಿದ್ದಾರೆ.

ಐದು ವರ್ಷ ಎಸ್​ಪಿಜಿಯಲ್ಲಿ ಕೆಲಸ ಮಾಡಿ ಬಳಿಕ ಚೆನ್ನೈಗೆ ಮರಳಿದ ವಿಜಯ ಕುಮಾರ್​ಗೆ ಅಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಜೆ. ಜಯಲಲಿತಾರ ಸ್ಪೆಷಲ್ ಸೆಕ್ಯುರಿಟಿ ಗ್ರೂಪ್(ಎಸ್​ಎಸ್​ಜಿ)ನ ಮುಖ್ಯಸ್ಥರ ಹೊಣೆಗಾರಿಕೆ ಹೆಗಲೇರಿತು. ಈ ನಡುವೆ, 1990ರಲ್ಲಿ ದಿಂಡಿಗಲ್ ಜಿಲ್ಲೆ, 91ರಲ್ಲಿ ವೆಲ್ಲೂರು ಜಿಲ್ಲೆಯ ವರಿಷ್ಠಾಧಿಕಾರಿ ಹೊಣೆಗಾರಿಕೆ ನಿಭಾಯಿಸಿದರು. ಇದಾಗಿ, 1997ರಲ್ಲಿ ತಮಿಳುನಾಡು ದಕ್ಷಿಣ ವಲಯದ ಮೊದಲ ಇನ್​ಸ್ಪೆಕ್ಟರ್ ಜನರಲ್ ಆಗಿ ನಿಯೋಜಿತರಾದರು. ದಕ್ಷಿಣ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಜಾತಿ ಸಂಘರ್ಷವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ ಕಾರಣ ಒಲಿದ ಹೊಣೆಗಾರಿಕೆ ಇದು. ತರುವಾಯ 1998ರಿಂದ 2000ನೇ ಇಸವಿ ತನಕ ಗಡಿ ಭದ್ರತಾ ದಳ(ಬಿಎಸ್​ಎಫ್)ದ ಇನ್​ಸ್ಪೆಕ್ಟರ್ ಜನರಲ್ ಆಗಿ ಕರ್ತವ್ಯ ನಿಭಾಯಿಸಿದರು. ಆ ಸಂದರ್ಭದಲ್ಲಿ ಬಂಡುಕೋರರ, ಪ್ರತ್ಯೇಕತಾವಾದಿಗಳ ಚಟುವಟಿಕೆ ತೀವ್ರವಾಗಿತ್ತು. ಬಿಎಸ್​ಎಫ್​ನ ಆಪರೇಷನ್ ವಿಭಾಗದ ಐಜಿಯಾಗಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲೂ ಭಾಗಿಯಾದ ಅನುಭವ ಅವರದ್ದು. ಕುಖ್ಯಾತ ನರಹಂತಕ ವೀರಪ್ಪನ್ ಎನ್​ಕೌಂಟರ್​ಗೆ

ನಡೆಸಿದ ‘ಆಪರೇಷನ್ ಕೊಕೂನ್’ ಕುತೂಹಲಕಾರಿ. ತಮಿಳುನಾಡಿನ ಸ್ಪೆಷಲ್ ಟಾಸ್ಕ್ ಫೋರ್ಸ್ ಆರಂಭಿಸಿದ್ದ ಈ ಕಾರ್ಯಾಚರಣೆ ನೇತೃತ್ವ ವಹಿಸಿದ್ದು ಕೆ.ವಿಜಯಕುಮಾರ್ ಮತ್ತು ಎನ್.ಕೆ.ಸೆಂತಾಮರೈ ಕಣ್ಣನ್. ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ನಡೆದ ಈ ಕಾರ್ಯಾಚರಣೆಯ ಅಂತ್ಯಕ್ಕೆ 2004ರ ಅಕ್ಟೋಬರ್ 18ರಂದು ವೀರಪ್ಪನ್ ಮತ್ತು ಆತನ ಮೂವರು ಸಹಚರರು ಪೊಲೀಸ್ ಗುಂಡಿಗೆ ಬಲಿಯಾದರು. ಈ ಆಪರೇಷನ್ ನಂತರದಲ್ಲಿ ವಿಜಯ ಕುಮಾರ್ ಹೆಸರು ಪ್ರಸಿದ್ಧಿಗೆ ಬಂತು.

ತರುವಾಯ 2008ರಲ್ಲಿ ಅವರನ್ನು ಹೈದರಾಬಾದ್​ನ ಸರ್ದಾರ್ ವಲ್ಲಭ ಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡಮಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಇದಾಗಿ 2010ರಿಂದ 2012ರ ತನಕ ಕೇಂದ್ರೀಯ ಮೀಸಲು ಪೊಲೀಸ್ ದಳದ (ಸಿಆರ್​ಪಿಎಫ್) ಡೈರೆಕ್ಟರ್ ಜನರಲ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದರು.

ನಿವೃತ್ತಿ ಬಳಿಕ ಅವರು ವೀರಪ್ಪನ್ ಕಾರ್ಯಾಚರಣೆ ಕುರಿತ ‘ವೀರಪ್ಪನ್ ಚೇಸಿಂಗ್ ದ ಬ್ರಿಗೇಡ್’ ಎಂಬ ಪುಸ್ತಕವನ್ನೂ ಬರೆದರು. ಇದಾಗಿ, 2013ರಲ್ಲಿ ವೀರಪ್ಪನ್ ಕುರಿತ ಕನ್ನಡ ಸಿನಿಮಾ ‘ಅಟ್ಟಹಾಸ’, ತಮಿಳಿನಲ್ಲಿ ‘ವನ ಯುದ್ಧಂ’ ಚಿತ್ರಗಳಲ್ಲಿ ವಿಜಯ ಕುಮಾರ್ ಪಾತ್ರ ಇತ್ತು. ತಮಿಳಿನಲ್ಲಿ ಅರ್ಜುನ್ ಸರ್ಜಾ ಈ ಪಾತ್ರದಲ್ಲಿ ಅಭಿನಯಿಸಿದ್ದರು. 2016ರಲ್ಲಿ ಕೆ.ಎಸ್.ಶ್ರೀಧರ್ ಬರೆದ ಪುಸ್ತಕದಲ್ಲೂ ವಿಜಯ ಕುಮಾರ್ ಪಾತ್ರ ನಿರೂಪಿಸಲ್ಪಟ್ಟಿದೆ.

ನಿವೃತ್ತಿ ಬಳಿಕ 2012ರ ಡಿಸೆಂಬರ್​ನಲ್ಲಿ ಅಂದಿನ ಕೇಂದ್ರ ಸರ್ಕಾರ (ಯುಪಿಎ ಸರ್ಕಾರ) ವಿಜಯ ಕುಮಾರ್ ಅವರನ್ನು ಗೃಹ ಸಚಿವಾಲಯದ ಹಿರಿಯ ಸುರಕ್ಷಾ ಸಲಹೆಗಾರರನ್ನಾಗಿ ನೇಮಿಸಿತ್ತು. ಈಗ, ಬಿಜೆಪಿ ಸರ್ಕಾರ ಅವರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿದೆ. ಅವರ ಕರ್ತವ್ಯನಿಷ್ಠೆಗೆ ಮಹತ್ವದ ಹೊಣೆಗಾರಿಕೆಗಳು ಹೆಗಲೇರುತ್ತಿವೆ.

ವ್ಯಕ್ತಿಗತ ಬದುಕಿನೆಡೆ ಗಮನಹರಿಸಿದರೆ, ಪತ್ನಿ ಮೀನಾ ವಿಜಯಕುಮಾರ್. ಮಗ ಅರ್ಜುನ್ ಚೆನ್ನೈನಲ್ಲಿ ಪ್ರಸಿದ್ಧ ಆರ್ಕಿಟೆಕ್ಟ್ ಮತ್ತು ಬಿಲ್ಡರ್. ಮಗಳು ಅಶ್ವಿನಿ ಕ್ಲಿನಿಕಲ್ ಸೈಕಾಲಜಿಸ್ಟ್. ಉತ್ತಮ ಓದುಗರಾದ ಅವರು ಫಿಕ್ಷನ್ ಮತ್ತು ನಾನ್ ಫಿಕ್ಷನ್ ಪುಸ್ತಕಗಳನ್ನು ಓದುತ್ತಿರುತ್ತಾರೆ. ವಾರಾಂತ್ಯದಲ್ಲಿ ಬಿರಿಯಾನಿ ತಿನ್ನುವುದು ಬಹುಪ್ರಿಯ. ಸದ್ಯ, ಜಮ್ಮು-ಕಾಶ್ಮೀರದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಸುರಕ್ಷಾ ಸಲಹೆ ನೀಡುವ ಮಹತ್ವದ ಹೊಣೆಗಾರಿಕೆ ವಿಜಯ ಕುಮಾರ್ ಮೇಲಿದೆ. ಸೇನೆಯ ಕಾರ್ಯಾಚರಣೆ ಒಂದೆಡೆಯಾದರೆ, ಆಡಳಿತಾತ್ಮಕವಾಗಿ ಅದಕ್ಕೆ ಪೂರಕ ಕೆಲಸ ಮಾಡುವ ಜವಾಬ್ದಾರಿಯನ್ನು ಅವರು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

Leave a Reply

Your email address will not be published. Required fields are marked *

Back To Top