ಐಪಿಎಲ್-ಪಿಎಸ್​ಎಲ್ ನಡುವೆ ಒಂದೇ ಆಯ್ಕೆ!

ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ಬಳಿಕ ಕ್ರಿಕೆಟ್ ಜಗತ್ತಿನಿಂದ ಪಾಕಿಸ್ತಾನವನ್ನು ಹೊರಗಿಡಲು ಬಿಸಿಸಿಐ ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಅಂಗವಾಗಿ, ವಿದೇಶಿ ಕ್ರಿಕೆಟಿಗರಿಗೆ ಐಪಿಎಲ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್​ಎಲ್) ನಡುವೆ ಒಂದು ಟೂರ್ನಿಯಲ್ಲಿ ಮಾತ್ರ ಆಡಲು ಸೂಚಿಸುವ ಮೂಲಕ ಪಾಕ್ ಟಿ20 ಲೀಗ್​ಗೆ ಹೊಡೆತ ನೀಡಲು ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ನಂತರದಲ್ಲಿ ಕೆಲ ಕಾರಣಗಳಿಂದಾಗಿ ಈ ಚಿಂತನೆಯನ್ನು ಕೈಬಿಡಲಾಗಿದೆ.

ಮುಂಬರುವ ವಿಶ್ವಕಪ್​ನಲ್ಲಿ ಪಾಕ್ ವಿರುದ್ಧದ ಪಂದ್ಯ ಬಹಿಷ್ಕರಿಸುವ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಳ್ಳಲಿರುವ ಬಿಸಿಸಿಐ, ಪಾಕಿಸ್ತಾನದ ಜತೆಗಿನ ಕ್ರಿಕೆಟ್ ಸಂಬಂಧ ಕಡಿದುಕೊಳ್ಳುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಲು ಐಸಿಸಿಗೆ ಪತ್ರ ಬರೆದಿದೆ. ಇದರ ನಡುವೆ ಪಿಎಸ್​ಎಲ್​ನಲ್ಲಿ ಆಡುವ ವಿದೇಶದ ಕೆಲ ಟಿ20 ತಜ್ಞ ಕ್ರಿಕೆಟಿಗರಿಗೆ, ಶ್ರೀಮಂತ ಟಿ20 ಲೀಗ್ ಐಪಿಎಲ್​ನಲ್ಲಿ ಆಡಬೇಕಾದರೆ ಪಿಎಸ್​ಎಲ್​ನಲ್ಲಿ ಆಡಬೇಡಿ ಎಂದು ಸೂಚಿಸಲು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಚಿಂತನೆ ನಡೆಸಿತ್ತು. ಇದರಿಂದ ವಿದೇಶಿ ಆಟಗಾರರು ಪಿಎಸ್​ಎಲ್​ನಲ್ಲಿ ಆಡದೆ ಐಪಿಎಲ್ ಅನ್ನೇ ಆಯ್ದುಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದರೆ ವಿದೇಶಿ ಆಟಗಾರರನ್ನು ಬಿಸಿಸಿಐಗೆ ಬದಲಾಗಿ ಐಪಿಎಲ್ ಫ್ರಾಂಚೈಸಿಗಳು ಭಾರಿ ಮೊತ್ತ ವ್ಯಯಿಸಿ ಖರೀದಿಸಿರು ವುದರಿಂದ ಇಂಥ ಆಯ್ಕೆ ನೀಡುವುದು ಸರಿಯಲ್ಲ ಎಂದು ಬಳಿಕ ನಿರ್ಧರಿಸಲಾಗಿದೆ. ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್, ವೆಸ್ಟ್ ಇಂಡೀಸ್​ನ ಡ್ವೇನ್ ಬ್ರಾವೊ, ಸುನೀಲ್ ನಾರಾಯಣ್, ಕಾಲೋಸ್ ಬ್ರಾಥ್​ವೇಟ್, ಆಂಡ್ರೆ ರಸೆಲ್, ನ್ಯೂಜಿಲೆಂಡ್​ನ ಕಾಲಿನ್ ಇನ್​ಗ್ರಾಮ್ ಸಹಿತ ಕೆಲ ಸ್ಟಾರ್ ಕ್ರಿಕೆಟಿಗರು ಪಿಎಸ್​ಎಲ್ ನಲ್ಲಿ ಆಡುತ್ತಿದ್ದಾರೆ. ಈ ಮುನ್ನ ಭಾರತದ ಐಎಂಜಿ ರಿಲಯನ್ಸ್ ಸಂಸ್ಥೆ, ಪಿಎಸ್​ಎಲ್ ಪಂದ್ಯಗಳ ಬ್ರಾಡ್​ಕಾಸ್ಟಿಂಗ್ ಪ್ರೊಡಕ್ಷನ್​ನಿಂದ ಹಿಂದೆ ಸರಿದಿತ್ತು ಮತ್ತು ಡಿಸ್ಪೋರ್ಟ್ಸ್ ಚಾನಲ್ ಭಾರತದಲ್ಲಿ ಪಿಎಸ್​ಎಲ್ ನೇರಪ್ರಸಾರವನ್ನು ರದ್ದುಗೊಳಿಸಿತ್ತು. -ಏಜೆನ್ಸೀಸ್