ನವದೆಹಲಿ: ಯುವ ಬ್ಯಾಟರ್ ರಿಯಾನ್ ಪರಾಗ್ ಮುಂಬರುವ ಐಪಿಎಲ್ 18ನೇ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೊದಲ ಮೂರು ಪಂದ್ಯಗಳಿಗೆ ಹಂಗಾಮಿ ನಾಯಕರಾಗಿ ನೇಮಕಗೊಂಡಿದ್ದಾರೆ. ಕಾಯಂ ನಾಯಕ ಸಂಜು ಸ್ಯಾಮ್ಸನ್ ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಫಿಟ್ ಆಗದ ಕಾರಣ ಕೇವಲ ಬ್ಯಾಟರ್ ಆಗಿ ಆಡಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ಸ್ಯಾಮ್ಸನ್ ನಂತರ ಸಣ್ಣ ಪ್ರಮಾಣದ ಶಸ ಚಿಕಿತ್ಸೆಗೆ ಒಳಪಟ್ಟಿದ್ದರು. ಇದರಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಜವಾಬ್ದಾರಿಯಿಂದ ಕೆಲ ಸಮಯ ದೂರವುಳಿಯುವುದರ ಜತೆಗೆ ಬೆರಳುಗಳಿಗೆ ವಿಶ್ರಾಂತಿ ನೀಡುವಂತೆ ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಸೂಚಿಸಿದ್ದಾರೆ. ರಾಜಸ್ಥಾನ ತಂಡದ ಮೊದಲ 3 ಪಂದ್ಯಗಳ ಬಳಿಕ ಬೆಂಗಳೂರಿನಲ್ಲಿರುವ ಬಿಸಿಸಿಐನ ಕ್ರೀಡಾ ಶ್ರೇಷ್ಠತಾ ಕೇಂದ್ರದಲ್ಲಿ (ಸಿಒಇ) ಸ್ಯಾಮ್ಸನ್ ವಿಕೆಟ್ ಕೀಪಿಂಗ್ ಹಾಗೂ ಫೀಲ್ಡಿಂಗ್ ಸಾಮರ್ಥ್ಯದ ಫಿಟ್ನೆಸ್ ಟೆಸ್ಟ್ ನಡೆಯಲಿದ್ದು, ವೈದ್ಯಕೀಯ ತಂಡದಿಂದ ಗ್ರೀನ್ ಸಿಗ್ನಲ್ ಸಿಕ್ಕ ಬಳಿಕವಷ್ಟೇ ನಾಯಕನಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸ್ಯಾಮ್ಸನ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆಗಳಿದ್ದು, ಧ್ರುವ ಜುರೆಲ್ ವಿಕೆಟ್ ಕೀಪಿಂಗ್ ನಿರ್ವಹಿಸಲಿದ್ದಾರೆ.
23 ವರ್ಷದ ಪರಾಗ್ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿಕೊಳ್ಳಲಿರುವ 2ನೇ ಕಿರಿಯ ಆಟಗಾರ ಎನಿಸಲಿದ್ದು, ದೇಶೀಯ ಟೂರ್ನಿಯಲ್ಲಿ ಅಸ್ಸಾಂ ತಂಡವನ್ನು ಮುನ್ನಡೆಸಿರುವ ಅನುಭವ ಹೊಂದಿದ್ದಾರೆ. ರಾಜಸ್ಥಾನ ತಂಡ ಮಾ.23ರಂದು ಸನ್‌ರೈಸರ್ಸ್ ಎದುರು ತನ್ನ ಅಭಿಯಾನ ಆರಂಭಿಸಲಿದೆ.