ರಾಜಸ್ಥಾನಕ್ಕೆ ಪಂತ್ ಸೋಲಿನ ಪಂಚ್: ಅಗ್ರಸ್ಥಾನಕ್ಕೇರಿದ ಕ್ಯಾಪಿಟಲ್ಸ್, ಪ್ಲೇಆಫ್ ಸನಿಹ

ಜೈಪುರ: ವಿಕೆಟ್ ಕೀಪರ್-ಬ್ಯಾಟ್ಸ್​ಮನ್ ರಿಷಭ್ ಪಂತ್ (78*ರನ್, 36 ಎಸೆತ, 6 ಬೌಂಡರಿ, 4 ಸಿಕ್ಸರ್) ಹಾಗೂ ಅನುಭವಿ ಆರಂಭಿಕ ಶಿಖರ್ ಧವನ್ (54 ರನ್, 27 ಎಸೆತ, 8 ಬೌಂಡರಿ, 2 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್-12ರಲ್ಲಿ 7ನೇ ಜಯ ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸವಾಯಿ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ 6 ವಿಕೆಟ್​ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿ ಪ್ಲೇಆಫ್ ಹಂತಕ್ಕೆ ಸನಿಹವಾಯಿತು. ಟೂರ್ನಿಯಲ್ಲಿ 7ನೇ ಸೋಲು ಕಂಡ ರಾಜಸ್ಥಾನ ತಂಡದ ಮುಂದಿನ ಹಾದಿ ದುರ್ಗಮಗೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ, ಮಾಜಿ ನಾಯಕ ಅಜಿಂಕ್ಯ ರಹಾನೆ (105* ರನ್, 63 ಎಸೆತ, 11 ಬೌಂಡರಿ, 3 ಸಿಕ್ಸರ್) ಅಜೇಯ ಶತಕ ಹಾಗೂ ನಾಯಕ ಸ್ಟೀವನ್ ಸ್ಮಿತ್ (50 ರನ್, 32 ಎಸೆತ, 8 ಬೌಂಡರಿ) ಅರ್ಧಶತಕದ ನೆರವಿನಿಂದ 6 ವಿಕೆಟ್​ಗೆ 191 ರನ್ ಗಳಿಸಿತು. ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 19.2 ಓವರ್​ಗಳಲ್ಲಿ 4 ವಿಕೆಟ್​ಗೆ 193 ರನ್​ಗಳಿಸಿ ಜಯದ ನಗೆ ಬೀರಿತು.

ಧವನ್ ಬಿರುಸಿನ ಆರಂಭ: ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಶಿಖರ್ ಧವನ್ ಎಂದಿನ ಶೈಲಿಯಲ್ಲಿ ಬಿರುಸಿನ ಆರಂಭ ನೀಡಿದರು. ಯುವ ಬ್ಯಾಟ್ಸ್​ಮನ್ ಪೃಥ್ವಿ ಷಾ (42 ರನ್, 39 ಎಸೆತ, 4 ಬೌಂಡರಿ, 1 ಸಿಕ್ಸರ್) ಜತೆಗೂಡಿ ರಾಜಸ್ಥಾನ ಬೌಲರ್​ಗಳನ್ನು ಹಿಗ್ಗಾಮುಗ್ಗಾ ಥಳಿಸಿದರು. ಪ್ರತಿ ಓವರ್​ಗೆ ಸರಾಸರಿ 10ರಂತೆ ರನ್ ಕಲೆಹಾಕಿದ ಈ ಜೋಡಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗೆಲುವಿನ ಆಸೆ ಚಿಗುರಿಸಿತು. ಮೊದಲ ವಿಕೆಟ್​ಗೆ 45 ಎಸೆತಗಳಲ್ಲಿ 72 ರನ್ ಪೇರಿಸಿ ಈ ಜೋಡಿ ಬೇರ್ಪಟ್ಟಿತು. ಕನ್ನಡಿಗ ಶ್ರೇಯಸ್ ಗೋಪಾಲ್ ಎಸೆತದಲ್ಲಿ ಮುನ್ನುಗ್ಗಿ ಹೊಡೆಯಲು ಯತ್ನಿಸಿದ ಧವನ್ ಸ್ಟಂಪ್ ಔಟಾದರು. ಬಳಿಕ ಬಂದ ನಾಯಕ ಶ್ರೇಯಸ್ ಅಯ್ಯರ್ (4) ಯುವ ಬೌಲರ್ ರಿಯಾನ್ ಪರಾಗ್​ಗೆ ವಿಕೆಟ್ ನೀಡಿದರು. -ಏಜೆನ್ಸೀಸ್

ರಾಯಲ್ಸ್ ಇನಿಂಗ್ಸ್ ಆಧರಿಸಿದ ರಹಾನೆ-ಸ್ಮಿತ್ ಜೋಡಿ

ಅನುಭವಿ ಬ್ಯಾಟ್ಸ್​ಮನ್​ಗಳಾದ ಅಜಿಂಕ್ಯ ರಹಾನೆ ಹಾಗೂ ಸ್ಟೀವನ್ ಸ್ಮಿತ್ ಜೋಡಿ ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಇನಿಂಗ್ಸ್ ಕಟ್ಟಿತು. 2ನೇ ಓವರ್​ನಲ್ಲೇ ಆರಂಭಿಕ ಸಂಜು ಸ್ಯಾಮ್ಸನ್, ರಹಾನೆ ಕರೆಯಿಂದ ಗೊಂದಲಕ್ಕೊಳಗಾಗಿ ರನ್ ಕದಿಯಲು ಯತ್ನಿಸಿ ರನೌಟ್ ಬಲೆಗೆ ಬಿದ್ದರು. ಒಂದೂ ಎಸೆತ ಎದುರಿಸದೆ ಸ್ಯಾಮ್ಸನ್ ಡಗೌಟ್ ಸೇರಿಕೊಂಡರು. ಬಳಿಕ ಜತೆಯಾದ ರಹಾನೆ-ಸ್ಮಿತ್ ಜೋಡಿ ತಂಡಕ್ಕೆ ಚೇತರಿಕೆ ನೀಡಿದ್ದಲ್ಲದೆ ರನ್​ವೇಗ ಹೆಚ್ಚಿಸಿತು. ಈ ಜೋಡಿ 2ನೇ ವಿಕೆಟ್​ಗೆ 130 ರನ್ ಜತೆಯಾಟವಾಡಿ ಬೇರ್ಪಟ್ಟಿತು. ಅಕ್ಷರ್ ಪಟೇಲ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಸ್ಮಿತ್ ಮಿಡ್​ಆಫ್​ನಲ್ಲಿದ್ದ ಕ್ರಿಸ್ ಮಾರಿಸ್​ಗೆ ಕ್ಯಾಚ್ ನೀಡಿದರು. ಸ್ಮಿತ್ ಬೆನ್ನಹಿಂದೆಯೇ ಬೆನ್ ಸ್ಟೋಕ್ಸ್ (8) ಕೂಡ ನಿರ್ಗಮಿಸಿದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಮಾಜಿ ನಾಯಕ ರಹಾನೆ ಐಪಿಎಲ್​ನಲ್ಲಿ 2ನೇ ಶತಕ ಪೂರೈಸಿಕೊಂಡರು. ಬಳಿಕ ಬಂದ ಆಶ್ಟನ್ ಟರ್ನರ್ ಎಂದಿನ ವೈಫಲ್ಯ ಮುಂದುವರಿಸಿದರೆ, 5ನೇ ವಿಕೆಟ್​ಗೆ ಕನ್ನಡಿಗ ಸ್ಟುವರ್ಟ್ ಬಿನ್ನಿ (19) ಹಾಗೂ ರಹಾನೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತವನ್ನು 190ರ ಗಡಿದಾಟಿಸಲು ನೆರವಾದರು.

ಗೆಲುವು ತಂದ ರಿಷಭ್ ಬಿರುಸಿನ ಆಟ

ಧವನ್-ಶ್ರೇಯಸ್ ಅಯ್ಯರ್ ದಿಢೀರ್ ನಿರ್ಗಮನದಿಂದಾಗಿ ಕೆಲಕಾಲ ಆತಂಕ ಎದುರಿಸಿದ್ದ ಡೆಲ್ಲಿ ತಂಡಕ್ಕೆ ಯುವ ಬ್ಯಾಟ್ಸ್ ಮನ್​ಗಳಾದ ರಿಷಭ್ ಪಂತ್ ಹಾಗೂ ಪೃಥ್ವಿ ಷಾ ಜೋಡಿ ಆಸರೆಯಾಯಿತು. ಒಂದೆಡೆ ರಿಷಭ್ ಪಂತ್ ಸಿಡಿಯುತ್ತಿದ್ದರೆ, ಮತ್ತೊಂದೆಡೆ ಅವರಿಗೆ ಪೃಥ್ವಿ ಷಾ ಅಗತ್ಯ ಸಾಥ್ ನೀಡಿದರು. ಈ ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ ತಂಡದ ಗೆಲುವಿನ ಆಸೆ ಚಿಗುರಿತು. 3ನೇ ವಿಕೆಟ್​ಗೆ ಉಪಯುಕ್ತ 84 ರನ್ ಪೇರಿಸಿ ಬೇರ್ಪಟ್ಟಿತು. ತಂಡ ಬಹುತೇಕ ಗೆಲುವಿನ ಹಾದಿಯಲ್ಲಿದ್ದ ವೇಳೆ ಪೃಥ್ವಿ ಷಾ, ಶ್ರೇಯಸ್ ಗೋಪಾಲ್​ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶೆರ್ಫಾನ್ ರುದರ್​ಫೋರ್ಡ್ (11 ರನ್, 5 ಎಸೆತ, 1 ಬೌಂಡರಿ, 1 ಸಿಕ್ಸರ್) ಕೆಲಕಾಲ ಅಬ್ಬರಿಸಿ ಹೊರನಡೆದರು. ರಿಷಭ್ ಪಂತ್ ಅಂತಿಮ ಹಂತದಲ್ಲಿ ಸ್ಪೋಟಿಸಿ ಇನ್ನೂ 4 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.

130 ರಹಾನೆ-ಸ್ಮಿತ್ ಜೋಡಿ ರಾಜಸ್ಥಾನ ಪರ 2ನೇ ವಿಕೆಟ್​ಗೆ ಗರಿಷ್ಠ (130 ರನ್) ಜತೆಯಾಟವಾಡಿತು. ಇದಕ್ಕೂ ಮೊದಲು ರಹಾನೆ ಹಾಗೂ ಓವೈಸ್ ಷಾ ಜೋಡಿ 2012ರಲ್ಲಿ ಆರ್​ಸಿಬಿ ವಿರುದ್ಧ 121 ರನ್ ಗಳಿಸಿದ್ದು ಗರಿಷ್ಠವಾಗಿತ್ತು.

ಕ್ರಿಸ್ ಮಾರಿಸ್ ಇನ್, ಲಮಿಚನ್ನೆ ಔಟ್

ಡೆಲ್ಲಿ ತಂಡ ಏಕೈಕ ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಆಲ್ರೌಂಡರ್ ಕ್ರಿಸ್ ಮಾರಿಸ್ ತಂಡಕ್ಕೆ ವಾಪಸಾದರೆ, ಯುವ ಸ್ಪಿನ್ನರ್ ಸಂದೀಪ್ ಲಮಿಚನ್ನೆ ಹೊರಗುಳಿದರು.

ಆಶ್ಟನ್ ಟರ್ನರ್ ಹ್ಯಾಟ್ರಿಕ್ ಗೋಲ್ಡನ್ ಡಕ್!

ಆಸ್ಟ್ರೇಲಿಯಾದ ಬಿಗ್ ಬಾಷ್ ಲೀಗ್ ಸ್ಟಾರ್ ಆಶ್ಟನ್ ಟರ್ನರ್ ಐಪಿಎಲ್​ನಲ್ಲಿ ಸತತ 3ನೇ ಪಂದ್ಯದಲ್ಲೂ ಗೋಲ್ಡನ್ ಡಕ್ ಔಟ್ ಆದರು. ಜತೆಗೆ ಟಿ20 ಕ್ರಿಕೆಟ್​ನಲ್ಲಿ ಸತತ 5ನೇ ಡಕ್ ಔಟ್ ಆದ ಮೊದಲ ಬ್ಯಾಟ್ಸ್​ಮನ್ ಎಂಬ ಅನಪೇಕ್ಷಿತ ದಾಖಲೆ ಬರೆದರು.

02 ಐಪಿಎಲ್​ನಲ್ಲಿ ರಹಾನೆ 2ನೇ ಶತಕ ಸಿಡಿಸಿದರು. 2012ರಲ್ಲಿ ಆರ್​ಸಿಬಿ ವಿರುದ್ಧ ಮೊದಲ ಶತಕ ಬಾರಿಸಿದ್ದರು. ಜತೆಗೆ ರಾಜಸ್ಥಾನ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್​ಮನ್ ಎನಿಸಿಕೊಂಡರು. ಶೇನ್ ವ್ಯಾಟ್ಸನ್ 104 ರನ್ ಗಳಿಸಿದ್ದು ಹಿಂದಿನ ಗರಿಷ್ಠ.

12 ರಹಾನೆ ಐಪಿಎಲ್​ನಲ್ಲಿ ಒಂದ ಕ್ಕಿಂತ ಹೆಚ್ಚು ಶತಕ ಸಿಡಿಸಿದ 12ನೇ ಬ್ಯಾಟ್ಸ್​ಮನ್ ಎನಿಸಿದರು.