ಕನ್ನಡಿಗರಿಗೆ ಐಪಿಎಲ್​-11 ಜಾಕ್​ಪಾಟ್

ಬೆಂಗಳೂರು: ದೊಡ್ಡ ಮೊತ್ತದ ನಿರೀಕ್ಷೆ ಮೂಡಿಸಿದ್ದ ಸ್ಟಾರ್ ಆಟಗಾರರು ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಮಾರಾಟವಾದರೆ, ಐವರು ಕನ್ನಡಿಗರು ಮೊದಲ ದಿನವೇ ಕೋಟಿವೀರರಾದರು. ಇದು ಐಪಿಎಲ್​ನ 11ನೇ ಆವೃತ್ತಿಯ ಮೊದಲ ದಿನದ ಹರಾಜಿನ ಹೈಲೈಟ್ಸ್. ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್ 12.5 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮಾರಾಟವಾಗಿದ್ದು ದಿನದ ದುಬಾರಿ ಖರೀದಿ ಎನಿಸಿತು. ಕರ್ನಾಟಕದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ 2ನೇ ಗರಿಷ್ಠ ಮೊತ್ತ 11 ಕೋಟಿ ರೂಪಾಯಿಗೆ ಕ್ರಮವಾಗಿ ಸನ್​ರೈಸರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್​ಗೆ ಮಾರಾಟವಾದರು. ರಾಬಿನ್ ಉತ್ತಪ್ಪ, ಕರುಣ್ ನಾಯರ್ ಹಾಗೂ ಮಯಾಂಕ್ ಅಗರ್ವಾಲ್ ಕೂಡ ಕೋಟಿಗಳಲ್ಲಿ ಸೇಲ್ ಆದರು.

ಕ್ರಿಸ್ ಗೇಲ್, ಲಸಿತ್ ಮಾಲಿಂಗ ಕನಿಷ್ಠಪಕ್ಷ ತಂಡಕ್ಕೆ ಆಯ್ಕೆಯಾಗುವಲ್ಲಿಯೂ ವಿಫಲರಾದರೆ, ದೊಡ್ಡ ಮೊತ್ತದ ಬಿಡ್ಡಿಂಗ್​ನ ನಿರೀಕ್ಷೆ ಮೂಡಿಸಿದ್ದ ಗೌತಮ್ ಗಂಭೀರ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್ ತೀರಾ ಕಡಿಮೆ ಮೊತ್ತಕ್ಕೆ ವಿವಿಧ ಫ್ರಾಂಚೈಸಿಗಳನ್ನು ಕೂಡಿಕೊಂಡರು.

ಕೋಟಿವೀರ ಕನ್ನಡಿಗರು

# ಮನೀಷ್ ಪಾಂಡೆ (ಸನ್​ರೈಸರ್ಸ್ ಹೈದರಾಬಾದ್) : 11 ಕೋಟಿ ರೂ.

# ಕೆಎಲ್ ರಾಹುಲ್ (ಕಿಂಗ್ಸ್ ಇಲೆವೆನ್ ಪಂಜಾಬ್) : 11 ಕೋಟಿ ರೂ.

# ರಾಬಿನ್ ಉತ್ತಪ್ಪ (ಕೋಲ್ಕತ ನೈಟ್​ರೈಡರ್ಸ್) : 6.4 ಕೋಟಿ ರೂ.

# ಕರುಣ್ ನಾಯರ್ (ಕಿಂಗ್ಸ್ ಇಲೆವೆನ್ ಪಂಜಾಬ್) : 5.6 ಕೋಟಿ ರೂ.

# ಮಯಾಂಕ್ ಅಗರ್ವಾಲ್ (ಕಿಂಗ್ಸ್ ಇಲೆವೆನ್ ಪಂಜಾಬ್): 1 ಕೋಟಿ ರೂ.

ದುಬಾರಿ ಆಟಗಾರರು

# ಬೆನ್ ಸ್ಟೋಕ್ಸ್ (ರಾಜಸ್ಥಾನ ರಾಯಲ್ಸ್) : 12.5 ಕೋಟಿ ರೂ.

# ಕ್ರಿಸ್ ಲ್ಯಾನ್ (ಕೋಲ್ಕತ ನೈಟ್​ರೈಡರ್ಸ್): 9.6 ಕೋಟಿ ರೂ.

# ಮಿಚೆಲ್ ಸ್ಟಾರ್ಕ್ (ಕೋಲ್ಕತ ನೈಟ್​ರೈಡರ್ಸ್) : 9.4 ಕೋಟಿ ರೂ.

# ಗ್ಲೆನ್ ಮ್ಯಾಕ್ಸ್​ವೆಲ್ (ಡೆಲ್ಲಿ ಡೇರ್​ಡೆವಿಲ್ಸ್) : 9 ಕೋಟಿ ರೂ.

# ರಶೀದ್ ಖಾನ್ (ಸನ್​ರೈಸರ್ಸ್ ಹೈದರಾಬಾದ್) : 9 ಕೋಟಿ ರೂ.

ಗೇಲ್, ಮಾಲಿಂಗ ಮಾರಾಟವಿಲ್ಲ!

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹೆಸರು ಮಾಡಿದ ಆಟಗಾರರು ಮೊದಲ ದಿನ ಮಾರಾಟವಾಗದೇ ಉಳಿದಿದ್ದು ಅಚ್ಚರಿ ತಂದಿತು. ತಂಡದ ವಿಧ್ವಂಸಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್​ರನ್ನು ಮೂಲಬೆಲೆ 2 ಕೋಟಿಗೂ ಖರೀದಿಸಲು ಆರ್​ಸಿಬಿ ಮನಸ್ಸು ಮಾಡಲಿಲ್ಲ. ಅದರೊಂದಿಗೆ ಲಸಿತ್ ಮಾಲಿಂಗ, ಹಾಶಿಂ ಆಮ್ಲ, ಟಿ20 ಕ್ರಿಕೆಟ್​ನ ನಂ.1 ಬೌಲರ್ ಇಶ್ ಸೋಧಿ, ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ವಿಕೆಟ್ ಕೀಪರ್ ಜಾನಿ ಬೇರ್ ಸ್ಟೋ, ಟೀಮ್ ಇಂಡಿಯಾ ವೇಗಿ ಇಶಾಂತ್ ಶರ್ಮರನ್ನು ಯಾವ ತಂಡವೂ ಆಯ್ಕೆ ಮಾಡಲಿಲ್ಲ. ಹಾಗಿದ್ದರೂ, 2ನೇ ದಿನ ಈ ಎಲ್ಲ ಆಟಗಾರರು ಮತ್ತೊಮ್ಮೆ ಹರಾಜಿಗೆ ಒಳಪಡಲಿದ್ದಾರೆ.

ಮೊದಲ ದಿನ ಒಟ್ಟು 110 ಆಟಗಾರರ ಹರಾಜು ನಡೆದಿದ್ದು, 78 ಆಟಗಾರರು ವಿವಿಧ ತಂಡ ಸೇರಿದ್ದಾರೆ. ಇದರಲ್ಲಿ 49 ಮಂದಿ ಭಾರತೀಯರಾಗಿದ್ದರೆ, 29 ಮಂದಿ ವಿದೇಶಿ ಆಟಗಾರರು.


ಸ್ಟೋಕ್ಸ್ ದುಬಾರಿ, ಕೋಟಿವೀರರಾದ ಕನ್ನಡಿಗರು

ಸಂತೋಷ್ ನಾಯ್ಕ ಬೆಂಗಳೂರು

ಮತ್ತಷ್ಟು ಆಕರ್ಷಣೆಯೊಂದಿಗೆ ಬರಲು ಸಿದ್ಧವಾಗುತ್ತಿರುವ 11ನೇ ಆವೃತ್ತಿಯ ಐಪಿಎಲ್ ಹರಾಜಿನ ಅತ್ಯಂತ ದುಬಾರಿ ಆಟಗಾರ ಎನ್ನುವ ಗೌರವ ಇಂಗ್ಲೆಂಡ್​ನ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್​ಗೆ ಒಲಿದಿದೆ. ಐಪಿಎಲ್ ಇತಿಹಾಸದ ಹರಾಜಿನ ನಾಲ್ಕನೇ ಅತ್ಯಧಿಕ ಮೊತ್ತವಾದ 12.5 ಕೋಟಿ ರೂಪಾಯಿಗೆ ಅವರು ರಾಜಸ್ಥಾನ ರಾಯಲ್ಸ್ ತಂಡ ಸೇರಿಕೊಂಡರು. ಕಳೆದ ವರ್ಷ ಬೆನ್ ಸ್ಟೋಕ್ಸ್ 14.5 ಕೋಟಿಗೆ ಪುಣೆ ಸೂಪರ್​ಜೈಂಟ್ಸ್ ತಂಡದ ಪರ ಆಡಿದ್ದರು. ಉಳಿದಂತೆ ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ 2ನೇ ಗರಿಷ್ಠ 11 ಕೋಟಿ ರೂ. ಮೊತ್ತಕ್ಕೆ ಮಾರಾಟವಾದರು. ಮೊದಲ ದಿನ ನಡೆದ ಒಟ್ಟು 110 ಆಟಗಾರರ ಹರಾಜಿನಲ್ಲಿ 78 ಆಟಗಾರರು ವಿವಿಧ ತಂಡಗಳಿಗೆ ಸೇರ್ಪಡೆಯಾದರು.

ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ನಡೆದ ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಗರಿಷ್ಠ 14 ಆಟಗಾರರನ್ನು ಖರೀದಿಸಿದರೆ, ಮುಂಬೈ ಇಂಡಿಯನ್ಸ್ ತಂಡ ಕನಿಷ್ಠ 6 ಆಟಗಾರರನ್ನು ಖರೀದಿಸಿತು. ಇಡೀ ದಿನ ಕೇವಲ 6 ಆಟಗಾರರನ್ನು ಖರೀದಿಸಲು ಸಾಧ್ಯವಾಗಿದ್ದಕ್ಕೆ ತಮಗೇನೂ ಬೇಸರವಾಗಿಲ್ಲ ಎಂದು ಮುಂಬೈ ತಂಡದ ಮಾಲೀಕ ಆಕಾಶ್ ಅಂಬಾನಿ ಹರಾಜಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿವೃತ್ತಿಯ ಸನಿಹದಲ್ಲಿರುವ ಹೆಚ್ಚಿನ ಆಟಗಾರರನ್ನು ಖರೀದಿಸಿದ್ದು ಅಚ್ಚರಿ ತಂದಿದ್ದು, ಈವರೆಗೂ ತಂಡಕ್ಕೆ ವಿಶೇಷಜ್ಞ ಆರಂಭಿಕರನ್ನಾಗಲಿ, ವೇಗದ ಬೌಲರ್​ಗಳನ್ನಾಗಲಿ ಖರೀದಿ ಮಾಡಿಲ್ಲ. ಆರ್​ಸಿಬಿ ತಂಡ ನಿಧಾನಗತಿಯಲ್ಲಿ ಹರಾಜಿನ ಪ್ರಕ್ರಿಯೆ ಆರಂಭಿಸಿತು. ಐಕಾನ್ ಆಟಗಾರರ ಲಿಸ್ಟ್​ನಲ್ಲಿದ್ದ ಕೊನೆಯ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್​ಗೆ 6.20 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಮೊದಲ ಬಾರಿಗೆ ಕಾಣಿಸಿಕೊಂಡಿತು. ಬಳಿಕ ಕೇನ್ ವಿಲಿಯಮ್ಸನ್​ಗೆ 2.80 ಕೋಟಿ, ಮನೀಷ್ ಪಾಂಡೆಗೆ 8 ಕೋಟಿ ರೂ ಹಾಗೂ ಮೊಹಮದ್ ಶಮಿಗೆ 1 ಕೋಟಿ ರೂ. ವಿಫಲ ಬಿಡ್ ಮಾಡಿತು.

ಮಿಂಚಿದ ಜೂಹಿ ಪುತ್ರಿ ಜಾನ್ವಿ ಮೆಹ್ತಾ!

ಹರಾಜಿನ ವೇಳೆ ಕೆಕೆಆರ್ ಫ್ರಾಂಚೈಸಿಯ ಟೇಬಲ್​ನಲ್ಲಿ ಕಾಣಿಸಿಕೊಂಡ ಬಾಲಕಿ ಎಲ್ಲರ ಗಮನ ಸೆಳೆದರು. ಇವರು ಬಾಲಿವುಡ್ ನಟಿ ಹಾಗೂ ಕೆಕೆಆರ್ ತಂಡದ ಸಹ-ಮಾಲಕಿ ಜೂಹಿ ಚಾವ್ಲಾ ಅವರ ಪುತ್ರಿ ಜಾನ್ವಿ ಮೆಹ್ತಾ. 17 ವರ್ಷದ ಜಾನ್ವಿ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಚುರುಕಿನಿಂದ ಪಾಲ್ಗೊಂಡರು. ಮುಂಬೈ ತಂಡದ ಒಡತಿ ನೀತಾ ಅಂಬಾನಿ ಪುತ್ರ ಆಕಾಶ್ ಅಂಬಾನಿ (26 ವರ್ಷ) ಬಳಿಕ ಐಪಿಎಲ್ ಹರಾಜಿನಲ್ಲಿ ಬಿಡ್ ಸಲ್ಲಿಸಿದ ಕಿರಿಯರೆಂಬ ಹೆಗ್ಗಳಿಕೆ ಜಾನ್ವಿ ಅವರದಾಯಿತು. ಜಾನ್ವಿ ತಂದೆ ಜಯ್ಮೆಹ್ತಾರಂತೆ ಉದ್ಯಮಿಯಾಗಿ ಹೆಸರು ಮಾಡುವ ಹುರುಪಿನಲ್ಲಿದ್ದಾರೆ.

ಆಲ್ರೌಂಡರ್ ಕೃನಾಲ್ ಪಾಂಡ್ಯ ದಾಖಲೆ

ಮುಂಬೈ ಇಂಡಿಯನ್ಸ್ ತಂಡ ಆಲ್ರೌಂಡರ್ ಕೃನಾಲ್ ಪಾಂಡ್ಯರನ್ನು 8.80 ಕೋಟಿಗೆ ಆರ್​ಟಿಎಂ ಮಾಡಿಕೊಳ್ಳುವ ಮೂಲಕ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಮಾರಾಟವಾದ ಅಂತಾರಾಷ್ಟ್ರೀಯ ಪಂದ್ಯವಾಡದ ಆಟಗಾರ ಎನಿಸಿದರು. ಇದಕ್ಕೂ ಮುನ್ನ 2016ರ ಹರಾಜಿನಲ್ಲಿ ಡೆಲ್ಲಿ ತಂಡ 8.50 ಕೋಟಿಗೆ ಪವನ್ ನೇಗಿಯನ್ನು ಖರೀದಿಸಿದ್ದು ದಾಖಲೆಯಾಗಿತ್ತು. ಹಾರ್ದಿಕ್​ರನ್ನು ಮುಂಬೈ 11 ಕೋಟಿಗೆ ರಿಟೇನ್ ಮಾಡಿಕೊಂಡಿರುವ ಕಾರಣ, ಪಾಂಡ್ಯ ಕುಟುಂಬ ಬರೀ ಐಪಿಎಲ್​ನಿಂದಲೇ 19.8 ಕೋಟಿ ರೂ. ಆದಾಯ ಪಡೆದುಕೊಂಡಿದೆ..!

ಉಳಿದಿರುವ ಮೊತ್ತ?

ಎಲ್ಲ ತಂಡಗಳಲ್ಲಿ ಕನಿಷ್ಠ 18 ಆಟಗಾರರು ಇರಬೇಕು. ಸದ್ಯ ಕೆಕೆಆರ್ ತಂಡ 12 ಆಟಗಾರರನ್ನು ಹೊಂದಿದ್ದು, 7.60 ಕೋಟಿ ಮೊತ್ತ ಹೊಂದಿದೆ. ಅದೇ ರೀತಿ ಸನ್​ರೈಸರ್ಸ್ 16 (7.95 ಕೋಟಿ), ಡೆಲ್ಲಿ ಡೇರ್​ಡೆವಿಲ್ಸ್ 15 (12.30 ಕೋಟಿ), ಮುಂಬೈ ಇಂಡಿಯನ್ಸ್ 9 (15.80 ಕೋಟಿ), ಆರ್​ಸಿಬಿ 14 (15.85 ಕೋಟಿ), ಸಿಎಸ್​ಕೆ 11 (17 ಕೋಟಿ), ಕಿಂಗ್ಸ್ ಇಲೆವೆನ್ ಪಂಜಾಬ್ 10 (21.90 ಕೋಟಿ) ಹಾಗೂ ರಾಜಸ್ಥಾನ ರಾಯಲ್ಸ್ 9 (23.50 ಕೋಟಿ) ಆಟಗಾರರನ್ನು ಹೊಂದಿದೆ. ಐಪಿಎಲ್ 11ನೇ ಆವೃತ್ತಿ ಏ.7ರಂದು ಆರಂಭವಾಗಲಿದೆ.

ಆಫ್ಘನ್ ಸ್ಪಿನ್ನರ್ ರಶೀದ್​ಗೆ – 9 ಕೋಟಿ ರೂ

ಟಿ20 ಮಾದರಿಯ ಕ್ರಿಕೆಟ್​ನಲ್ಲಿ ಪ್ರಮುಖ ಅಸ್ತ್ರವಾಗಿರುವ ‘ಲೆಗ್​ಸ್ಪಿನ್’ ಐಪಿಎಲ್ ಹರಾಜಿನಲ್ಲೂ ದೊಡ್ಡ ಮೊತ್ತ ಕಂಡುಕೊಂಡಿತು. ಅಫ್ಘಾನಿಸ್ತಾನದ ಸೂಪರ್​ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ 9 ಕೋಟಿ ರೂ. ಮೊತ್ತಕ್ಕೆ ಸನ್​ರೈಸರ್ಸ್ ತಂಡ ಆರ್​ಟಿಎಂ ಮಾಡಿಕೊಂಡಿತು. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ 30 ಲಕ್ಷದಿಂದ 4 ಕೋಟಿ ರೂ. ಏರಿಕೆ ಕಂಡು ಸನ್​ರೈಸರ್ಸ್ ತಂಡ ಪಾಲಾಗಿದ್ದ ರಶೀದ್​ರನ್ನು ಈ ಬಾರಿಯೂ ಸನ್​ರೈಸರ್ಸ್ ತಂಡದಲ್ಲೇ ಉಳಿಸಿಕೊಳ್ಳಬೇಕು ಎಂದು ನಿಶ್ಚಯ ಮಾಡಿತ್ತು. ಪಂಜಾಬ್ ತಂಡ ದೊಡ್ಡ ಬಿಡ್ ಮಾಡಿದರೂ, ಕೊನೆಗೆ ಆರ್​ಟಿಎಂ ಬಳಸಿ ರಶೀದ್​ರನ್ನು ಉಳಿಸಿಕೊಂಡಿತು. ವೆಸ್ಟ್ ಇಂಡೀಸ್​ನ ಜೊಫ್ರಾ ಆರ್ಚರ್ ದಿನದ ಕೊನೆಯಲ್ಲಿ ತಮ್ಮ ಮೂಲಬೆಲೆಗಿಂತ 36 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾದರು. 20 ಲಕ್ಷ ರೂ. ಮೂಲಬೆಲೆ ಹೊಂದಿದ್ದ ಆರ್ಚರ್ 7.20 ಕೋಟಿ ರೂ.ಗೆ ರಾಜಸ್ಥಾನ ತಂಡ ಸೇರಿದರು. ಇಂಗ್ಲೆಂಡ್​ನ ಸಸೆಕ್ಸ್ ಕೌಂಟಿ ತಂಡದ 22 ವರ್ಷದ ಆರ್ಚರ್ ವೇಗದ ಬೌಲರ್ ಆಗಿದ್ದಾರೆ.

ಧವನ್ ಮೊದಲ ಬಿಡ್, ಆರ್​ಟಿಎಂ

ಶಿಖರ್ ಧವನ್ ಮೂಲಕ ಹರಾಜಿಗೆ ಆರಂಭ ಸಿಕ್ಕಿತು. ಧವನ್​ಗೆ 2 ಕೋಟಿ ಬಿಡ್ ಮಾಡುವ ಮೂಲಕ ಕಿಂಗ್ಸ್ ಇಲೆವೆನ್ ತಂಡ ಬಿಡ್​ಗೆ ಚಾಲನೆ ನೀಡಿತು. ಬಳಿಕ ಮುಂಬೈ ಕೂಡ ಧವನ್​ಗೆ ಬಿಡ್ ಮಾಡಲು ಆರಂಭಿಸಿತು. ಕೊನೆಗೆ 5.2 ಕೋಟಿಗೆ ಪಂಜಾಬ್ ತಂಡ ಧವನ್​ಗೆ ಬಿಡ್ ಮಾಡಿದರೂ, ಸನ್​ರೈಸರ್ಸ್ ಹೈದರಾಬಾದ್ ತಂಡ ಆರ್​ಟಿಎಂ ಬಳಸಿ ಧವನ್​ರನ್ನು ಉಳಿಸಿಕೊಂಡಿತು.

 

Leave a Reply

Your email address will not be published. Required fields are marked *