ಮುಂಬೈ ಇಂಡಿಯನ್ಸ್​ ಪಾಲಾದ ಯುವಿ ತಂಡ ಹಾಗೂ ರೋಹಿತ್​ ಕುರಿತು ಹೇಳಿದ್ದೇನು?

ಮುಂಬೈ: 2019ರ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಮೊದಲ ಸುತ್ತಿನಲ್ಲಿ ಬಿಕರಿಯಾಗದೆ, ಎರಡನೇ ಸುತ್ತಿನಲ್ಲಿ ಒಂದು ಕೋಟಿ ರೂ. ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್​ ಪಾಲಾದ ಸ್ಫೋಟಕ ಆಟಗಾರ ಯುವರಾಜ್​ ಸಿಂಗ್ ಅವರು ತಮ್ಮ ತಂಡಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿರುವ ಯುವರಾಜ್​ ಸಿಂಗ್,​ ಮುಂಬೈ ಇಂಡಿಯನ್ಸ್​ ಕುಟುಂಬದ ಒಂದು ಭಾಗವಾಗಿರಲು ನನಗೆ ಖುಷಿಯಾಗಿದೆ. 2019ರ ಐಪಿಎಲ್​ ಆವೃತ್ತಿ ಆರಂಭವಾಗುವುದನ್ನು ಎದುರು ನೋಡುತ್ತಿದ್ದೇನೆ. ಆದಷ್ಟು ಬೇಗ ನಿನ್ನನ್ನು ಭೇಟಿಯಾಗುತ್ತೇನೆ ಎಂದು ಮುಂಬೈ ಇಂಡಿಯನ್ಸ್​ ನಾವಿಕ ರೋಹಿತ್​ಗೆ ಯುವಿ ಸಂದೇಶ ಕಳುಹಿಸಿದ್ದಾರೆ.

37 ವರ್ಷದ ಎಡಗೈ ದಾಂಡಿಗ ಯುವರಾಜ್​ ಸಿಂಗ್ 2017ರ ಜೂನ್​ನಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ತಂಡದಲ್ಲಿ ಆಡಿದರು. ಆನಂತರ ಅವರಿಗೆ ಅವಕಾಶವೇ ಒದಗಿಬಂದಿಲ್ಲ. ಕಳೆದ ಐಪಿಎಲ್​ ಆವೃತ್ತಿಯಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡದಲ್ಲಿ ಆಡಿದ್ದರು. ನಿರೀಕ್ಷಿತ ಪ್ರದರ್ಶನ ತೋರದಿದ್ದರಿಂದ ಯುವಿಯನ್ನು ಫ್ರಾಂಚೈಸಿಯಿಂದ ಕೈಬಿಡಲಾಗಿತ್ತು.​

ಮುಂಬೈ ಇಂಡಿಯನ್ಸ್​ ತಂಡ ಶ್ರೀಲಂಕಾ ವೇಗಿ ಲಸಿತ್​ ಮಲಿಂಗಾ ಅವರನ್ನು ಕೂಡ 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದ್ದಾರೆ. (ಏಜೆನ್ಸೀಸ್​)