ಇಂದು ಮುಂಬೈ-ಸಿಎಸ್​ಕೆ ಸೆಮಿಫೈನಲ್: ಗೆದ್ದ ತಂಡ ಪ್ರಶಸ್ತಿ ಹೋರಾಟಕ್ಕೆ ನೇರಪ್ರವೇಶ

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಆವೃತ್ತಿಯ ಫೈನಲ್ ಪಂದ್ಯ ಆಡುವ ಮೊದಲ ತಂಡ ಮಂಗಳವಾರ ನಿರ್ಧಾರವಾಗಲಿದೆ.

ಮೂರು ಬಾರಿಯ ಚಾಂಪಿಯನ್ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಎಂಎ ಚಿದಂಬರಂ ಮೈದಾನದಲ್ಲಿ ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಗೆದ್ದ ತಂಡ ಫೈನಲ್ ಸ್ಥಾನವನ್ನು ಖಚಿತ ಮಾಡಿಕೊಳ್ಳಲಿದೆ. ಚೆನ್ನೈ ತಂಡಕ್ಕೆ ಹಾಲಿ ಐಪಿಎಲ್​ನಲ್ಲಿ ತವರಿನಲ್ಲಿ ಇನ್ನೊಂದು ಪಂದ್ಯ ಆಡುವ ಅವಕಾಶ ಸಿಕ್ಕಿದೆ. ಅಲ್ಲದೆ ಮುಂಬೈ ವಿರುದ್ಧ ಹಾಲಿ ಋತುವಿನಲ್ಲಿ ಮೊದಲ ಗೆಲುವು ಸಾಧಿಸುವ ಅವಕಾಶವೂ ಇದೆ. ಸಿಎಸ್​ಕೆ ಲೀಗ್ ಹಂತದಲ್ಲಿ ರೋಹಿತ್ ಶರ್ಮ ನೇತೃತ್ವದ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 37 ಹಾಗೂ 46 ರನ್​ಗಳಿಂದ ಸೋಲು ಕಂಡಿತ್ತು.

ಎರಡೂ ತಂಡಗಳು ತನ್ನ ಅಂತಿಮ ಲೀಗ್ ಪಂದ್ಯ ಗಳಲ್ಲಿ ಭಿನ್ನ ಫಲಿತಾಂಶ ಪಡೆದುಕೊಂಡಿವೆ. ಕೆಕೆಆರ್ ವಿರುದ್ಧ 9 ವಿಕೆಟ್​ಗಳ ಅಧಿಕಾರಯುತ ಜಯದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮುಂಬೈ ಇಂಡಿಯನ್ಸ್ ತಂಡ ಕ್ವಾಲಿಫೈಯರ್ ಪಂದ್ಯ ಆಡಲು ಅಣಿಯಾಗಿದ್ದರೆ, ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 6 ವಿಕೆಟ್​ಗಳ ಸೋಲಿಗೆ ಶರಣಾಗಿತ್ತು. ಸೋಲಿಗಿಂತ ಹೆಚ್ಚಾಗಿ ಮೊಹಾಲಿಯಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಚೆನ್ನೈ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹಾಗೂ ಬೌಲಿಂಗ್ ಬಹಳ ಕಳವಳಕಾರಿಯಾಗಿದ್ದು ನಾಯಕ ಎಂಎಸ್ ಧೋನಿಗೆ ಆತಂಕ ನೀಡಿದೆ.

ಮುಂಬೈ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದಂತೆ ತೋರುತ್ತಿದೆ. ಡಿಕಾಕ್ ಹಾಗೂ ರೋಹಿತ್ ಶರ್ಮ ಹಾಲಿ ಐಪಿಎಲ್​ನ ಅತ್ಯುತ್ತಮ ಆರಂಭಿಕ ಜೋಡಿ ಎನಿಸಿದೆ. ಅದರೊಂದಿಗೆ ಹಾರ್ದಿಕ್ ಪಾಂಡ್ಯ ಹಾಗೂ ಪೊಲ್ಲಾರ್ಡ್​ರಂಥ ಬಿಗ್​ಹಿಟ್ಟರ್​ಗಳನ್ನು ತಂಡ ಹೊಂದಿದೆ. ಬೌಲಿಂಗ್ ವಿಭಾಗದಲ್ಲಿ ಬುಮ್ರಾ, ಮಾಲಿಂಗರಂಥ ಅಸ್ತ್ರಗಳಿವೆ. ಮುಂಬೈ ವಿರುದ್ಧ ಹಾಲಿ ಋತುವಿನ ದಾಖಲೆ ಹಾಗೂ

ಇತಿಹಾಸವನ್ನು ಪರಿಗಣನೆ ಮಾಡಿದರೆ, ಚೆನ್ನೈ ತಂಡ ದುರ್ಬಲ ಎನಿಸಬಹು ದಾದರೂ, ಧೋನಿ ಸಾರಥ್ಯದ ತಂಡಕ್ಕೆ ಅನುಭವವೇ ಪ್ಲಸ್ ಪಾಯಿಂಟ್. ಪ್ಲೇಆಫ್ ಪಂದ್ಯಗಳನ್ನು ನಿರಂತರವಾಗಿ ಆಡಿದ ಅನುಭವ, ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ತಂಡ ದೊಡ್ಡ ಮಟ್ಟದ ಯಶಸ್ಸು ಕಂಡಿದೆ.

ಹಾರ್ದಿಕ್ ಟ್ರಂಪ್​ಕಾರ್ಡ್

ಎರಡೂ ತಂಡಗಳು ಒಂದೇ ರೀತಿಯ ಬಲಾಬಲ ಹೊಂದಿದ್ದರೂ, ಮುಂಬೈ ತಂಡ ಮೇಲುಗೈ ಕಂಡಿರುವುದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಉಪಸ್ಥಿತಿಯಿಂದ. ಆಡಿರುವ 14 ಪಂದ್ಯಗಳಿಂದ 197ರ ಸ್ಟ್ರೈಕ್​ರೇಟ್​ನಲ್ಲಿ 373 ರನ್ ಬಾರಿಸಿರುವ ಹಾರ್ದಿಕ್, ಬೌಲಿಂಗ್​ನಲ್ಲೂ 14 ವಿಕೆಟ್ ಉರುಳಿಸುವ ಮೂಲಕ ಮುಂಬೈನ ಟ್ರಂಪ್​ಕಾರ್ಡ್ ಎನಿಸಿದ್ದಾರೆ.

ಉಭಯ ತಂಡಗಳು ಚೆನ್ನೈನಲ್ಲಿ ಈವರೆಗೂ 7 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ ಇಂಡಿಯನ್ಸ್ ತಂಡ 5ರಲ್ಲಿ ಗೆದ್ದಿದ್ದರೆ, ಚೆನ್ನೈ ತಂಡ 2ರಲ್ಲಿ ಜಯಿಸಿದೆ. 2010ರಲ್ಲಿ ಕೊನೆಯ ಬಾರಿಗೆ ಮುಂಬೈ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚೆನ್ನೈನಲ್ಲಿ ಗೆಲುವು ಸಾಧಿಸಿತ್ತು.

ಮುಂಬೈ ಇಂಡಿಯನ್ಸ್ ಈ ಪಂದ್ಯ ಗೆದ್ದರೆ 5ನೇ ಬಾರಿ ಐಪಿಎಲ್ ಫೈನಲ್​ಗೇರಲಿದೆ. ಈ ಹಿಂದೆ 2010, 2013, 2015 ಮತ್ತು 2017ರಲ್ಲಿ ಫೈನಲ್​ಗೇರಿದ್ದು, ಕೊನೇ 3 ಬಾರಿ ಚಾಂಪಿಯನ್ ಆಗಿತ್ತು.

ಚೆನ್ನೈ ಸೂಪರ್ಕಿಂಗ್ಸ್ ಈ ಪಂದ್ಯ ಗೆದ್ದರೆ 8ನೇ ಬಾರಿ ಫೈನಲ್​ಗೇರಲಿದೆ. ಈ ಹಿಂದೆ 2008, 2010, 2011, 2012, 2013, 2015, 2018ರಲ್ಲಿ ಫೈನಲ್​ಗೇರಿ, 3 ಬಾರಿ ಚಾಂಪಿಯನ್ ಆಗಿದೆ.

# ಚೆನ್ನೈ ಸೂಪರ್ ಕಿಂಗ್ಸ್: ಮೂರು ಬಾರಿಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅನುಭವಿ ಆಟಗಾರರೇ ಬಲ. ಕಠಿಣ ಪರಿಸ್ಥಿತಿಯಲ್ಲಿ ಜವಾಬ್ದಾರಿ ನಿರ್ವಹಿಸಿ ಆಡುವ ಕಲೆ ತಂಡದ ಆಟಗಾರರಲ್ಲಿದೆ. ಆದರೆ, ಕೇದಾರ್ ಜಾಧವ್ ಗಾಯಗೊಂಡು ಲೀಗ್​ನಿಂದ ಹೊರಬಿದ್ದಿರುವ ಕಾರಣ ತಂಡದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಯಲ್ಲಿದೆ. ರಾಯುಡು, ವ್ಯಾಟ್ಸನ್​ರ ನಿರ್ವಹಣೆಯೂ ಕಳಪೆಯಾಗಿದ್ದು ಬದಲಾವಣೆ ನಿರೀಕ್ಷೆ ಮಾಡಬಹುದು.

ಬಲ: ಅನುಭವಿ ತಂಡ; ಧೋನಿ ನಾಯಕತ್ವ; ತವರಿನ ಮುಖಾಮುಖಿ.

ದೌರ್ಬಲ್ಯ: ಮುಂಬೈ ವಿರುದ್ಧ ಕಳಪೆ ದಾಖಲೆ; ಹಾಲಿ ಋತುವಿನಲ್ಲಿ ಮುಂಬೈ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋಲು.

ಸಂಭಾವ್ಯ ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಟಿ ರಾಯುಡು, ಮುರಳಿ ವಿಜಯ್, ಎಂಎಸ್ ಧೋನಿ (ನಾಯಕ/ವಿ.ಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ದೀಪಕ್ ಚಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್. ?ಕಳೆದ ಪಂದ್ಯ: ಪಂಜಾಬ್ ವಿರುದ್ಧ 6 ವಿಕೆಟ್ ಸೋಲು ?ಲೀಗ್ ಹಂತ: 14 ಪಂದ್ಯ, 9 ಗೆಲುವು, 5 ಸೋಲು

# ಮುಂಬೈ ಇಂಡಿಯನ್ಸ್: ಲೀಗ್​ನ ಆರಂಭದಲ್ಲಿ ಲಯ ಕಂಡುಕೊಳ್ಳಲು ಸ್ವಲ್ಪ ಮಟ್ಟಿಗೆ ಒದ್ದಾಡಿದ್ದ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್​ಗೇರುವ ಹೊತ್ತಿಗೆ ಟ್ರೋಫಿ ಗೆಲುವಿನ ಫೇವರಿಟ್ ಆಗಿ ಗುರುತಿಸಿಕೊಂಡಿದೆ. ಐಪಿಎಲ್​ನಲ್ಲಿ ಚೆನ್ನೈ ತಂಡದ ಮೇಲೆ ಪಾರಮ್ಯ ಸಾಧಿಸಿರುವ ಏಕೈಕ ತಂಡ ಎನ್ನುವ ಹೆಮ್ಮೆ ಮುಂಬೈ ಇಂಡಿಯನ್ಸ್​ಗಿದೆ. ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಮುಂಬೈ ತಂಡದಲ್ಲಿ ಬದಲಾವಣೆ ಮಾಡಬೇಕಾದ ಯಾವ ಅನಿವಾರ್ಯತೆಯೂ ಕಾಣುತ್ತಿಲ್ಲ.

# ಬಲ: ಸಂಘಟಿತ ನಿರ್ವಹಣೆ; ಆಲ್ರೌಂಡರ್ ಹಾರ್ದಿಕ್ ಪಾಂಡ್ಯ; ವೇಗದ ಬೌಲಿಂಗ್ ವಿಭಾಗ.

# ದೌರ್ಬಲ್ಯ: ದಿಢೀರ್ ಕುಸಿಯುವ ತಂಡ; ದುರ್ಬಲ ಸ್ಪಿನ್ ಬೌಲಿಂಗ್ ವಿಭಾಗ.

# ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಕ್ವಿಂಟನ್ ಡಿ ಕಾಕ್ (ವಿ.ಕೀ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್, ರಾಹುಲ್ ಚಹರ್, ಮೆಕ್ಲೀನಘನ್, ಲಸಿತ್ ಮಾಲಿಂಗ, ಬುಮ್ರಾ. ?ಕಳೆದ ಪಂದ್ಯ: ಕೆಕೆಆರ್ ವಿರುದ್ಧ 9 ವಿಕೆಟ್ ಜಯ ?ಲೀಗ್ ಹಂತ: 14 ಪಂದ್ಯ, 9 ಗೆಲುವು, 5 ಸೋಲು