ಈ ಸಲವಾದರೂ ಕಪ್ ದಕ್ಕುವುದೇ?

ಬೆಂಗಳೂರು: ವಿಶ್ವ ಶ್ರೇಷ್ಠ ಬ್ಯಾಟ್ಸ್​ಮನ್​ಗಳನ್ನು ಹೊಂದಿರುವ ಬ್ಯಾಟಿಂಗ್ ಪಡೆ, ಎಷ್ಟೇ ನಿರಾಸೆ ಅನುಭವಿಸಿದರೂ ಅಭಿಮಾನಿಗಳ ಪ್ರೀತಿ ಕಳೆದುಕೊಳ್ಳದ, ಸ್ಥಳೀಯ ಆಟಗಾರರನ್ನು ಕಡೆಗಣಿಸಿದ್ದರೂ ಕನ್ನಡಿಗರ ನೆಚ್ಚಿನ ತಂಡವಾಗಿಯೇ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ (ಆರ್​ಸಿಬಿ) ಕಳೆದ 11 ಆವೃತ್ತಿಗಳಿಂದಲೂ ಐಪಿಎಲ್ ಕಿರೀಟ ಮಾತ್ರ ಮರೀಚಿಕೆಯಾಗಿಯೇ ಉಳಿದಿದೆ. ಕಳೆದ ವರ್ಷ ಲೀಗ್ ಆರಂಭಕ್ಕೂ ಮುನ್ನ ‘ಈ ಸಲ ಕಪ್ ನಮ್ದೆ’ ಎಂಬ ಉದ್ಘೋಷದೊಂದಿಗೆ ಅಭಿಮಾನಿಗಳು ತಂಡಕ್ಕೆ ಜೋಶ್ ತುಂಬಿದರೂ ಮೈದಾನದಲ್ಲಿ ಮಾತ್ರ ನಿರಾಸೆಯೇ ಎದುರಾಗಿತ್ತು. ಇದುವರೆಗೆ 3 ಬಾರಿ ಪ್ರಶಸ್ತಿ ಸುತ್ತಿನಲ್ಲಿ ಎಡವಿರುವ ಆರ್​ಸಿಬಿ ಈ ಸಲ ಮತ್ತೊಮ್ಮೆ ಹೊಸ ಹುರುಪಿನೊಂದಿಗೆ 12ನೇ ಆವೃತ್ತಿಯಲ್ಲಿ ಅಭಿಯಾನ ಆರಂಭಿಸಲು ಸಜ್ಜಾಗುತ್ತಿದೆ. ಸತತ 8ನೇ ಬಾರಿ ಆರ್​ಸಿಬಿ ಮುನ್ನಡೆಸುತ್ತಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಂಬರುವ ಏಕದಿನ ವಿಶ್ವಕಪ್​ಗೆ ತೆರಳುವುದಕ್ಕೂ ಮುನ್ನ ಬಹುನಿರೀಕ್ಷಿತ ಟ್ರೋಫಿ ಎತ್ತಿಹಿಡಿಯುವರೇ ಎಂಬುದನ್ನು ಕಾದು ನೋಡಬೇಕಿದೆ.

ಬ್ಯಾಟಿಂಗ್ ವಿಭಾಗವೇ ಆಧಾರ

ರನ್​ಹೊಳೆಗೆ ಹೆಸರಾಗಿರುವ ಐಪಿಎಲ್​ನಲ್ಲಿ ಬ್ಯಾಟ್ಸ್​ಮನ್​ಗಳೇ ಬಹುತೇಕ ಹೀರೋಗಳು. ಅದರಲ್ಲೂ ಆರ್​ಸಿಬಿಗೆ ಈ ವಿಭಾಗವೇ ಆಧಾರ. ಹಿಂದಿನ ಆವೃತ್ತಿಗಳನ್ನು ತಿರುಗಿ ನೋಡಿದಾಗ ಕ್ರೀಸ್ ಗೇಲ್ ಎಂಬ ಮಾಂತ್ರಿಕ ಆರ್​ಸಿಬಿಯ ದೈತ್ಯಶಕ್ತಿಯಾಗಿದ್ದನ್ನು ಮರೆಯುವಂತಿಲ್ಲ. ನಾಯಕ ವಿರಾಟ್ ಕೊಹ್ಲಿ, ಸ್ಪೋಟಕ ಬ್ಯಾಟ್ಸ್​ಮನ್ ಎಬಿ ಡಿವಿಲಿಯರ್ಸ್, ಈ ಬಾರಿ ಹೊಸದಾಗಿ ಸೇರ್ಪಡೆಗೊಂಡಿರುವ ವೆಸ್ಟ್ ಇಂಡೀಸ್​ನ ಶಿಮ್ರೊನ್ ಹೆಟ್ಮೆಯೆರ್, ಮಾರ್ಕಸ್ ಸ್ಟೋಯಿನಿಸ್, ಮೊಯಿನ್ ಅಲಿ ಒಳಗೊಂಡ ಬ್ಯಾಟಿಂಗ್ ವಿಭಾಗವಿದೆ. ಪ್ರಸಕ್ತ ವರ್ಷದ ಟೀಮ್ ಕಾಂಬಿನೇಷನ್ ನೋಡಿದರೆ ತಂಡಕ್ಕೆ ಬ್ಯಾಟಿಂಗ್ ವಿಭಾಗವೇ ಶಕ್ತಿಯಾಗಿದೆ. ಅದರಲ್ಲೂ ಕೊಹ್ಲಿ, ಡಿವಿಲಿಯರ್ಸ್ ಮೇಲೆ ಹಿಂದಿನಂತೆಯೇ ಹೆಚ್ಚಿನ ಒತ್ತಡ ಬೀಳುವುದು ಗ್ಯಾರಂಟಿ. ಹನ್ನೊಂದರ ಬಳಗದಲ್ಲಿ ಕಾಯಂ ಆಗಿ ಕಾಣಿಸಿಕೊಳ್ಳುವ ಈ ಜೋಡಿ ವೈಫಲ್ಯ ಕಂಡರೆ ತಂಡಕ್ಕೆ ಆಘಾತ ಕಟ್ಟಿಟ್ಟ ಬುತ್ತಿ. ಕೊಹ್ಲಿ ಬಿಟ್ಟರೆ ಬೇರಾರೂ ಪ್ರಮುಖ ಭಾರತೀಯ ಬ್ಯಾಟ್ಸ್​ಮನ್​ಗಳ ಬಲ ತಂಡಕ್ಕಿಲ್ಲ. ಸ್ಟೋಯಿನಿಸ್, ಮೊಯಿನ್ ಅಲಿ, ಪವನ್ ನೇಗಿ, ಗುರುಕೀರತ್ ಮಾನ್ ಮಧ್ಯಮ ಕ್ರಮಾಂಕದಲ್ಲಿ ಭರವಸೆ ಮೂಡಿಸಬೇಕಿದೆ. ಕಳೆದ ಬಾರಿ ಮಧ್ಯಮ ಕ್ರಮಾಂಕದಲ್ಲಿ ಅನುಭವಿಸಿದ ದಯನೀಯ ವೈಫಲ್ಯವೇ ತಂಡಕ್ಕೆ ಹಿನ್ನಡೆಯಾಗಿತ್ತು.

ಆರ್​ಸಿಬಿಗೆ ಸತತ 8ನೇ ಬಾರಿ ಕೊಹ್ಲಿ ಸಾರಥ್ಯ

# ಕಳೆದ ವರ್ಷದ ಡಫ್ ಆಂಡ್ ಫೆಲ್ಪ್ ್ಸ ವರದಿಯ ಪ್ರಕಾರ ಆರ್​ಸಿಬಿ ತಂಡದ ಬ್ರಾಂಡ್ ಮೌಲ್ಯ 675 ಕೋಟಿ ರೂ. (98 ದಶಲಕ್ಷ ಅಮೆರಿಕನ್ ಡಾಲರ್).

# ವಾರ್ಷಿಕ 17 ಕೋಟಿ ರೂ. ಸಂಭಾವನೆ ಪಡೆಯುವ ವಿರಾಟ್ ಕೊಹ್ಲಿ ಆರ್​ಸಿಬಿ ಮಾತ್ರವಲ್ಲ ಐಪಿಎಲ್​ನ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ. ಎಬಿ ಡಿವಿಲಿಯರ್ಸ್ (11 ಕೋಟಿ ರೂ.) ತಂಡದ 2ನೇ ದುಬಾರಿ ಆಟಗಾರರಾಗಿದ್ದಾರೆ.

ಬೌಲಿಂಗ್​ನಲ್ಲಿಲ್ಲ ಪ್ರಬಲ ಶಕ್ತಿ!

ಬ್ಯಾಟಿಂಗ್ ವಿಭಾಗದಲ್ಲಿ ಎಷ್ಟೇ ಬಲಶಾಲಿಯಾದರೂ ಆರ್​ಸಿಬಿ ನೆರವಿಗೆ ಬೌಲರ್​ಗಳು ಬರುತ್ತಿಲ್ಲ ಎನ್ನುವ ಕೊರಗು ಈ ಬಾರಿಯೂ ಮುಂದುವರಿಯುವ ಸಾಧ್ಯತೆಗಳಿವೆ. ರಾಷ್ಟ್ರೀಯ ತಂಡದಲ್ಲಿ ಮಿಂಚಿರುವ ಯಜುವೇಂದ್ರ ಚಾಹಲ್ ಸ್ಪಿನ್ ವಿಭಾಗದಲ್ಲಿ ಹೊರತುಪಡಿಸಿದರೆ, ವಾಷಿಂಗ್ಟನ್ ಸುಂದರ್, ಗುರುಕೀರತ್ ಮಾನ್ ಸಿಂಗ್​ರಂಥ ಎರಡನೇ ಲೈನ್ ಸ್ವದೇಶಿ ಸ್ಪಿನ್ನರ್​ಗಳನ್ನೇ ನಂಬಬೇಕಿದೆ. ಸ್ಥಳೀಯರ ಪಾಲಿನ ಹೀರೋ ಎನಿಸಿರುವ ಡಿವಿಲಿಯರ್ಸ್ ಹಾಗೂ ಹೆಟ್ಮೆಯೆರ್ ಬ್ಯಾಟಿಂಗ್ ಕೋಟಾದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರೆ, ಆಲ್ರೌಂಡರ್ ಕೋಟಾದಲ್ಲಿ ಆಸ್ಟ್ರೇಲಿಯಾ ಮಾರ್ಕಸ್ ಸ್ಟೋಯಿನಿಸ್ ಅಥವಾ ಮೊಯಿನ್ ಅಲಿ ಮೇಲೆ ಹೆಚ್ಚಿನ ನಿರೀಕ್ಷೆ ಇಡಬೇಕಿದೆ. ಉಳಿದಿರುವ ಒಂದು ವಿದೇಶಿ ಕೋಟಾಗೆ ನಾಥನ್ ಕೌಲ್ಟರ್ ನಿಲ್ ಅಥವಾ ಟಿಮ್ ಸೌಥಿ ಚೆಂಡು ಹಂಚಿಕೊಳ್ಳಬಹುದು.

ಈ ಸಲ ಸತತ ಕಪ್ ನಮ್ದೆ!

ಪ್ರಸಕ್ತ ವರ್ಷ ಬೆಂಗಳೂರು ನಗರದ ಪಾಲಿಗೆ ಪ್ರಶಸ್ತಿ ಮೇಲೆ ಪ್ರಶಸ್ತಿ ದಕ್ಕುತ್ತಿವೆ. ವರ್ಷದ ಆರಂಭದಲ್ಲೇ ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್ ಚಾಂಪಿಯನ್ ಆದರೆ, ಅದೇ ತಿಂಗಳು ನಡೆದ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಲ್ಲಿ ಬೆಂಗಳೂರು ರ್ಯಾಪ್ಟರ್ಸ್ ತಂಡ ಪ್ರಶಸ್ತಿ ಗೆದ್ದಿತ್ತು. ಕಳೆದ ವಾರ ಮುಂಬೈನಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್​ನಲ್ಲಿ ಬೆಂಗಳೂರು ಫುಟ್​ಬಾಲ್ ಕ್ಲಬ್ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೀಗ ಕಳೆದ 11 ಆವೃತ್ತಿಗಳಿಂದಲೂ ಬೆಂಗಳೂರು ಪಾಲಿಗೆ ಮರೀಚಿಕೆಯಾಗಿರುವ ಐಪಿಎಲ್ ಟ್ರೋಫಿ ಕನಸು ಈ ಬಾರಿಯಾದರೂ ನನಸಾಗುವುದೇ ಎಂಬುದು ಅಭಿಮಾನಿಗಳ ಕನವರಿಕೆಯಾಗಿದೆ.

# ವಿರಾಟ್ ಕೊಹ್ಲಿ ಆರ್​ಸಿಬಿ ಪರ 163 ಪಂದ್ಯಗಳಲ್ಲಿ 4,948 ರನ್ ಬಾರಿಸಿದ್ದಾರೆ.

# ಯಜುವೇಂದ್ರ ಚಾಹಲ್ ಆರ್​ಸಿಬಿ ಪರ ಆಡಿರುವ 69 ಪಂದ್ಯಗಳಲ್ಲಿ ಗರಿಷ್ಠ 82 ವಿಕೆಟ್ ಕಬಳಿಸಿದ್ದಾರೆ.

# ವಿರಾಟ್ ಕೊಹ್ಲಿ 2011ರಿಂದ 96 ಪಂದ್ಯಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದು, 44 ಜಯ, 47 ಸೋಲು, 2 ಟೈ ಕಂಡಿದ್ದಾರೆ. 3 ಪಂದ್ಯ ರದ್ದುಗೊಂಡಿವೆ.