12ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಆರ್​ಸಿಬಿ ಆಲೌಟ್​: ಸಿಎಸ್​ಕೆಗೆ ವರವಾದ ಸ್ಪಿನ್ನರ್ಸ್​

ಚೆನ್ನೈ: ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್​ 12ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಆಲೌಟ್​ ಆಗಿದೆ.

ಟಾಸ್​ ಸೋತು ಬ್ಯಾಟಿಂಗ್​ ಆರಂಭಿಸಿದ ಆರ್​ಸಿಬಿ ತಂಡ 17.1 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂದು 70 ರನ್​ ಕಲೆಹಾಕುವ ಮೂಲಕ ಅಲ್ಪಮೊತ್ತಕ್ಕೆ ಕುಸಿಯಿತು. ಪಾರ್ಥಿವ್​ ಪಟೇಲ್​ರೊಂದಿಗೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ವಿರಾಟ್​ ಕೊಹ್ಲಿ(6) ಉತ್ತಮ ಅಡಿಪಾಯ ಹಾಕುವಲ್ಲಿ ವಿಫಲರಾದರು. ನಂತರ ಬಂದ ಸ್ಟಾರ್​ ಆಟಗಾರರಾದ ಮೋಯಿನ್​ ಆಲಿ(9), ಎಬಿ ಡಿವಿಲಿಯರ್ಸ್​ ಕೂಡ ಕ್ರೀಸ್​(9)ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಫೆವಲಿಯನ್​ಗೆ ಮರಳಿದರು.

ಇದೇ ಮೊದಲ ಬಾರಿಗೆ ಆರ್​ಸಿಬಿ ತಂಡವನ್ನು ಸೇರಿಕೊಂಡಿರುವ ವೆಸ್ಟ್​ ಇಂಡೀಸ್​ ಅಪಾಯಕಾರಿ ಬ್ಯಾಟ್ಸ್​ಮನ್​ ಶಿಮ್ರೋನ್​ ಹೆಟ್ಮಯರ್​ ಮೊದಲ ಪಂದ್ಯದಲ್ಲೇ ಡಕ್​ ಔಟ್​ ಆಗುವ ಮೂಲಕ ನಿರೀಕ್ಷೆಯನ್ನು ಹುಸಿ ಮಾಡಿದರು. ಪಾರ್ಥೀವ್​ ಪಟೇಲ್​(29*) ಬಿಟ್ಟರೆ ಉಳಿದ ಯಾವೋಬ್ಬ ಬ್ಯಾಟ್ಸ್​ಮನ್​ಗಳೂ ಕೂಡ ಎರಡಂಕಿಯನ್ನು ದಾಟುವಲ್ಲಿ ವಿಫಲರಾದರು.

ಚೆನ್ನೈ ಪರ ಸ್ಪಿನ್​ ಬೌಲಿಂಗ್​ ಮೂಲಕ ಜಾದೂ ಮಾಡಿದ ಹರ್ಭಜನ್​ ಸಿಂಗ್​ ಹಾಗೂ ಇಮ್ರಾನ್​ ತಾಹೀರ್​ ತಲಾ ಮೂರು ವಿಕೆಟ್​ ಕಬಳಿಸಿ ಆರ್​ಸಿಬಿ ಪಾಲಿಗೆ ಖಳನಾಯಕರಾದರು. ಉಳಿದಂತೆ ರವೀಂದ್ರ ಜಡೇಜಾ ಅವರು 2 ವಿಕೆಟ್​ ಪಡೆದು ಗಮನ ಸೆಳೆದರೆ, ಡ್ವೈನ್​ ಬ್ರಾವೋ 1 ವಿಕೆಟ್​ ಪಡೆದರು, ಶಿಮ್ರೋನ್​ ಹೆಟ್ಮಯರ್​ ರನೌಟ್​ ಬಲೆಗೆ ಬಿದ್ದರು. (ಏಜೆನ್ಸೀಸ್​​​)