ವಿವಾದಿತ ಔಟ್​ ಮಾಡಿದ ಅಶ್ವಿನ್​ ನಡೆಗೆ ಭಾರಿ ವಿರೋಧ: ಪಂಜಾಬ್​ ನಾಯಕ ಕೊಟ್ಟ ಪಂಚ್​ ಹೀಗಿದೆ…

ಜೈಪುರ: ಸೋಮವಾರ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಮತ್ತು ರಾಜಸ್ಥಾನ ರಾಯಲ್ಸ್​ ನಡುವೆ ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಗೆದ್ದರೂ ಕೂಡ ನಾಯಕ ಅಶ್ವಿನ್​ ನಡೆಗೆ ಹಿರಿಯ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಾದಿತ ರೀತಿಯಲ್ಲಿ ಬಟ್ಲರ್ ವಿಕೆಟ್ ಉರುಳಿಸಿದ್ದು, ಸೋಲುವ ಪಂದ್ಯವೂ ಪಂಜಾಬ್​ ಕಡೆ ವಾಲುವಂತೆ ಮಾಡಿತು. ಆದರೆ, ನಾಯಕನಾಗಿ ಗೇಮ್​ ಸ್ಪಿರಿಟ್​ ಮೆರೆಯದ ಅಶ್ವಿನ್​ ನಡೆಯನ್ನು ಟ್ವೀಟರ್​​ನಲ್ಲಿ ಟೀಕಿಸಿದ್ದಾರೆ.

ಅಷ್ಟಕ್ಕೂ ನಿನ್ನೆ ಪಂದ್ಯದಲ್ಲಿ ನಡೆದಿದ್ದೇನು?
ಟಾಸ್​ ಸೋತು ಬ್ಯಾಟಿಂಗ್​​ ಆರಂಭಿಸಿದ ಪಂಜಾಬ್​ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 184ರನ್​ ಕಲೆಹಾಕಿತ್ತು. ಇದನ್ನು ಬೆನ್ನತ್ತಿದ ರಾಜಸ್ಥಾನ ತಂಡ ಉತ್ತಮ ಆರಂಭವನ್ನೇ ಕಂಡಿತು. ಬಿರುಸಿನ ಆಟವಾಡುತ್ತಿದ್ದ ಜಾಸ್​​ ಬಟ್ಲರ್​ (69 ರನ್, 43 ಎಸೆತ, 10 ಬೌಂಡರಿ, 2 ಸಿಕ್ಸರ್) ಪಂಜಾಬ್ ತಂಡದಿಂದ ಗೆಲುವನ್ನು ಕಸಿದುಕೊಳ್ಳುತ್ತಿದ್ದ ಹಂತದಲ್ಲಿ ಆರ್.ಅಶ್ವಿನ್ ಮಾಡಿದ ಐಪಿಎಲ್ ಇತಿಹಾಸದ ಮೊಟ್ಟಮೊದಲ ವಿವಾದಿತ ಮಂಕಡಿಂಗ್ ರನೌಟ್ ತಂಡದ ಗೆಲುವಿನ ಟರ್ನಿಂಗ್ ಪಾಯಿಂಟ್ ಎನಿಸಿತು. ಕೊನೆಯಲ್ಲಿ ಎರ್ರಾಬಿರ್ರಿ ಆಡಲು ಹೋಗಿ ಬೇಗ ವಿಕೆಟ್​ ಕಳೆದುಕೊಂಡು ರಾಜಸ್ಥಾನ ಸೋಲನ್ನು ಅನುಭವಿಸಿತು.

ಮಂಕಡಿಂಗ್ ರನೌಟ್ ಅಂದರೆ ಏನು?
ಬೌಲರ್ ಚೆಂಡು ಎಸೆಯುವ ಮುನ್ನವೇ, ನಾನ್​ಸ್ಟ್ರೈಕರ್​ಎಂಡ್​ನಲ್ಲಿದ್ದ ಬ್ಯಾಟ್ಸ್​ಮನ್ ಕ್ರೀಸ್ ಬಿಟ್ಟಾಗ, ಬೌಲರ್ ಚೆಂಡನ್ನು ಎಸೆಯದೇ ಬೇಲ್ಸ್​ಅನ್ನು ಎಗರಿಸಿ ಔಟ್​ಗೆ ಅಪೀಲ್ ಮಾಡುವುದನ್ನು ಮಂಕಡಿಂಗ್ ಎನ್ನಲಾಗುತ್ತದೆ. ಎಂಸಿಸಿಯ ಕ್ರಿಕೆಟ್ ನಿಯಮದಲ್ಲೂ ಮಂಕಡಿಂಗ್ ಔಟ್ ಮಾನ್ಯತೆ ಪಡೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಈವರೆಗೂ 10 ಬಾರಿ ಮಂಕಡಿಂಗ್ ರನೌಟ್​ಗಳು ನಡೆದಿದ್ದು, ಟಿ20 ಮಾದರಿಯಲ್ಲಿ ಇದು 2ನೇ ಬಾರಿ. 2014ರಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಬಟ್ಲರ್​ರನ್ನು ಸಚಿತ್ರ ಸೇನನಾಯಕೆ ಮಂಕಡಿಂಗ್ ಮಾಡಿದ್ದರು.

ಅಶ್ವಿನ್ ವಿರುದ್ಧ​ ಟ್ವಿಟರ್​ನಲ್ಲಿ ಆಕ್ರೋಶ
ಅಶ್ವಿನ್​ ನಡೆಯನ್ನು ವಂಚನೆ ಎಂದು ಕರೆಯಲಾಗಿದೆ. ಕ್ರೀಸ್​ ಬಿಡುವ ಮುನ್ನ ಒಂದು ಬಾರಿ ಅಶ್ವಿನ್​ ಎಚ್ಚರಿಕೆ ನೀಡಬೇಕಾಗಿತ್ತು. ಆದರೆ, ಹಾಗೆ ಮಾಡದೇ ಮಂಕಡಿಂಗ್​ ಮಾಡಿದ್ದು ಸರಿಯಲ್ಲ. ಇದು ಗೇಮ್​ ಸ್ಟಿರಿಟ್​ ಅಲ್ಲ. ಬಿಸಿಸಿಐ ಕೂಡ ಇದನ್ನು ಔಟ್​ ಎಂದು ನಿರ್ಣಯಿಸಿದ್ದು ಐಪಿಎಲ್​ ದೃಷ್ಟಿಯಿಂದ ಸರಿಯಲ್ಲ. ಈ ಬಗ್ಗೆ ಅಶ್ವಿನ್​ ಪಶ್ಚಾತಾಪ ಪಡಬೇಕಾಗುತ್ತದೆ ಎಂದೆಲ್ಲಾ ಟ್ವೀಟ್​ನಲ್ಲಿ ಹಿರಿಯ ಆಟಗಾರರು ಹಾಗೂ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ.

ಅಶ್ವಿನ್​ ಹೇಳಿದ್ದೇನು?
ಇದು ಬಹಳ ಸಹಜವಾದ ಘಟನೆ. ಅದು ಪೂರ್ವ ನಿರ್ಧಾರಿತ ಯೋಜನೆಯಲ್ಲ. ಆಟದ ನಿಯಮದಲ್ಲಿ ಮಂಕಡಿಂಗ್​ ಬಗ್ಗೆ ಉಲ್ಲೇಖವಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಗೇಮ್​ ಸ್ಪಿರಿಟ್​ ಬಗ್ಗೆ ಮಾತನಾಡಿರುವ ಅಶ್ವಿನ್​ ಆಟದ ನಿಯಮದಲ್ಲೇ ಇರುವಾಗ ಗೇಮ್​ ಸ್ಪಿರಿಟ್​ಗೆ​ ಅರ್ಥ ಎಲ್ಲಿ ಬರುತ್ತದೆ ಎಂದು ನನಗೆ ಗೊತ್ತಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​)