VIDEO| ವಿರಾಟ್​ ಕೊಟ್ಟ ಟಾಂಗ್​ಗೆ ಕೋಪಗೊಂಡ ಅಶ್ವಿನ್​ ಮಾಡಿದ್ದೇನು? ಪಂದ್ಯದ ನಂತರ ಹೇಳಿದ್ದೇನು?

ನವದೆಹಲಿ: ಗೆಲುವಿನ ಲಯಕ್ಕೆ ಮರಳಿರುವುದು ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡಕ್ಕೆ ಖುಷಿ ತಂದಿದೆ. ಸೋಲಿನಿಂದ ಕಂಗಾಲಾಗಿದ್ದ ನಾಯಕ ವಿರಾಟ್​ ಕೊಹ್ಲಿ, ನಿನ್ನೆ ಪಂಜಾಬ್​ ವಿರುದ್ಧ ನಡೆದ ಪಂದ್ಯದಲ್ಲಿ ಜಯಸಾಧಿಸಿದ ಖುಷಿಯಲ್ಲಿದ್ದಾರೆ. ಆದರೆ, ನಿನ್ನೆಯ ಪಂದ್ಯದ ವೇಳೆ ಆರ್​ಸಿಬಿ ಮತ್ತು ಪಂಜಾಬ್​ ತಂಡದ ನಾಯಕರಿಬ್ಬರ ನಡುವೆ ನಡೆದ ಕ್ರಿಯೆ ಹಾಗೂ ಪ್ರತಿಕ್ರಿಯೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್​ ಗೆಲುವಿಗೆ ಕೊನೆಯ ಓವರ್​ನಲ್ಲಿ 27 ರನ್​ ಬೇಕಾಗಿದ್ದಾಗ ನಾಯಕ ಅಶ್ವಿನ್​ ಕ್ರೀಸ್​ನಲ್ಲಿದ್ದರು. ಓವರ್​ನ ಮೊದಲ ಎಸೆತದಲ್ಲೇ ಸಿಕ್ಸರ್​ ಬಾರಿಸಲು ಮುಂದಾದಾಗ ಚೆಂಡು ಬೌಂಡರಿ ಗೆರೆಯ ಬಳಿಯಿದ್ದ ನಾಯಕ ವಿರಾಟ್​ ಕೈಗೆ ಸಿಕ್ಕಿ ಅಶ್ವಿನ್​ ಔಟಾದರು. ಕ್ಯಾಚ್​ ಹಿಡಿದ ಖುಷಿಯಲ್ಲಿ ವಿರಾಟ್, ಅಶ್ವಿನ್​ರತ್ತ ​ ಕೈ ಸನ್ನೆ ಮೂಲಕ ಫೆವಲಿಯನ್​ಗೆ ಮರಳು ಎಂದು ಕಿಚಾಯಿಸಿದರು. ಇದರಿಂದ ಕೋಪಗೊಂಡ ಅಶ್ವಿನ್​ ಡಗ್​ಔಟ್​ ಬಳಿ ಹೋಗುತ್ತಿದ್ದಂತೆ ತಮ್ಮ ಎರಡು ಕೈನಲ್ಲಿದ್ದ ಪ್ಯಾಡ್​ಗಳನ್ನು ತೆಗೆದು ಜೋರಾಗಿ ಎಸೆದರು.

ಪಂದ್ಯದ ಬಳಿಕ ಈ ಬಗ್ಗೆ ಮಾತನಾಡಿದ ಅಶ್ವಿನ್​ ಆಟ ಆಡುವ ಉತ್ಸಾಹದಲ್ಲಿ ಇದೆಲ್ಲ ಸಾಮಾನ್ಯ. ನಮ್ಮಿಬ್ಬರ ಘಟನೆ ಒಂದು ಸ್ಯಾಂಪಲ್​ ಅಷ್ಟೇ ಎಂದು ಹೇಳುವ ಮೂಲಕ ವಿವಾದದ ಅಲೆ ಏಳುವ ಮುನ್ನ ತೆರೆ ಎಳೆದರು.

ನಿನ್ನೆ ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ ತಂಡ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 202 ರನ್​ಗಳ ಬೃಹತ್​ ಗುರಿಯನ್ನು ನೀಡಿತ್ತು. ಗುರಿ ಬೆನ್ನತ್ತಿದ್ದ ಪಂಜಾಬ್​ ತಂಡ 20 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 185 ರನ್​ ಮಾತ್ರ ಗಳಿಸಿತ್ತು. (ಏಜೆನ್ಸೀಸ್​)