ಇಂದು ಚೆನ್ನೈ-ಡೆಲ್ಲಿ ಸೆಮಿಫೈನಲ್: ಫೈನಲ್ ಸ್ಥಾನಕ್ಕಾಗಿ ವಿಶಾಖಪಟ್ಟಣದಲ್ಲಿ ಹೋರಾಟ

ವಿಶಾಖಪಟ್ಟಣ: ಕೊನೆಗೂ ನಾಕೌಟ್ ಪಂದ್ಯದಲ್ಲಿ ಡೇರ್​ಡೆವಿಲ್ ರೀತಿಯಲ್ಲಿ ಆಡಿ ಕ್ವಾಲಿಫೈಯರ್-2 ಪಂದ್ಯಕ್ಕೆ ಪ್ರವೇಶ ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೊಚ್ಚಲ ಬಾರಿಗೆ ಐಪಿಎಲ್ ಫೈನಲ್​ಗೇರುವ ಸಲುವಾಗಿ ಶುಕ್ರವಾರ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಚೆನ್ನೈ ವಿರುದ್ಧ ಲೀಗ್ ಹಂತದಲ್ಲಿ ಎರಡೂ ಪಂದ್ಯ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್, ಸೆಮಿಫೈನಲ್​ನಂತಿರುವ ಪಂದ್ಯದಲ್ಲಿ ಸ್ಪೆಷಲ್ ನಿರ್ವಹಣೆಯೊಂದಿಗೆ ಎಂಎಸ್ ಧೋನಿ ಸಾರಥ್ಯದ ಚೆನ್ನೈ ತಂಡವನ್ನು ಮಣಿಸುವ ಗುರಿಯಲ್ಲಿದೆ. ಐಪಿಎಲ್​ನ ಪ್ಲೇಆಫ್ ಪಂದ್ಯಗಳ ವಿಚಾರಕ್ಕೆ ಬಂದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿರುವಷ್ಟು ಅನುಭವ ಬೇರೆ ಯಾವುದೇ ತಂಡಗಳಿಗಿಲ್ಲ. ಆದರೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿಸ್ತೇಜವಾಗಿ ಸೋಲು ಕಂಡಿರುವ ಚೆನ್ನೈ, ಫೈನಲ್​ಗೇರಲು 2ನೇ ಅವಕಾಶಕ್ಕಾಗಿ ಯುವ ಡೆಲ್ಲಿಯ ಸವಾಲನ್ನು ಹೇಗೆ ನಿಭಾಯಿಸಲಿದೆ ಎನ್ನುವ ಕುತೂಹಲವಿದೆ.

ಫಾಮ್ರ್ ಗಮನಿಸುವುದಾದರೆ ಡೆಲ್ಲಿ ಕ್ಯಾಪಿಟಲ್ಸ್ ಫೇವರಿಟ್. ಸತತ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸೆಮಿಫೈನಲ್ ಪಂದ್ಯಕ್ಕೆ ಅಣಿಯಾಗಿದೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಕೊನೇ ಲೀಗ್ ಪಂದ್ಯ ಸಹಿತ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಅದಲ್ಲದೆ, ವಿಶಾಖಪಟ್ಟಣದ ಮೈದಾನದಲ್ಲಿ ಒಂದು ಪಂದ್ಯವನ್ನು ಆಡಿದ ಅನುಭವವೂ ಡೆಲ್ಲಿ ತಂಡಕ್ಕಿದೆ.

ಪಿಚ್ ರಿಪೋರ್ಟ್

ಎಸಿಎ-ವಿಡಿಸಿಎ ಮೈದಾನ ಪಿಚ್ ನಿಧಾನಗತಿ ಯದ್ದಾಗಿದೆ. ಟಿ20ಯಲ್ಲಿ ದೊಡ್ಡ ಮೊತ್ತ ಈ ಮೈದಾನದಲ್ಲಿ ಬಂದಿಲ್ಲ. ಅಹರ್ನಿಶಿ ಟಿ20 ಪಂದ್ಯದಲ್ಲಿ ಇಲ್ಲಿನ ಸರಾಸರಿ ಮೊತ್ತ 147 ರನ್. ಎಲಿಮಿನೇಟರ್ ಪಂದ್ಯದಲ್ಲೂ ಎರಡೂ ತಂಡಗಳು ಸೇರಿ 320 ರನ್ ಕಲೆಹಾಕಿದ್ದವು. 2ನೇ ಇನಿಂಗ್ಸ್​ನಲ್ಲಿ ಇಬ್ಬನಿ ಸಮಸ್ಯೆ ಪ್ರಮುಖವಾಗಿರಲಿದ್ದು, ಸ್ಪಿನ್ನರ್​ಗಳು ಮುಖ್ಯ ಪಾತ್ರ ವಹಿಸಲಿದ್ದಾರೆ.

01 ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯದಲ್ಲಿ ಸೋಲು ಕಂಡರೆ, 100 ಟಿ20 ಪಂದ್ಯಗಳಲ್ಲಿ ಸೋಲು ಕಂಡ ಅನಪೇಕ್ಷಿತ ದಾಖಲೆಗೆ ಪಾತ್ರವಾಗಲಿದೆ. ಪ್ರಸ್ತುತ ಆಡಿರುವ 184 ಟಿ20 ಪಂದ್ಯಗಳಿಂದ 80 ಗೆಲುವು 99 ಸೋಲು ಕಂಡಿದೆ.

25 ಸುರೇಶ್ ರೈನಾ ಹಾಗೂ ರವೀಂದ್ರ ಜಡೇಜಾ ಈ ಪಂದ್ಯದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 25 ಪಂದ್ಯವಾಡಿದ ಸಾಧನೆ ಮಾಡಲಿದ್ದಾರೆ. ಡೆಲ್ಲಿ ವಿರುದ್ಧ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ರಾಬಿನ್ ಉತ್ತಪ್ಪ ಮಾತ್ರವೇ 25 ಪಂದ್ಯವಾಡಿದ್ದಾರೆ.

# ಚೆನ್ನೈ ಸೂಪರ್ ಕಿಂಗ್ಸ್: ಪವರ್ ಪ್ಲೇ ಅವಧಿಯಲ್ಲಿ ಚೆನ್ನೈ ತಂಡದ ಬ್ಯಾಟಿಂಗ್ ಈ ಬಾರಿ ಕಳವಳಕಾರಿಯಾಗಿದೆ. ನಾಯಕ ಧೋನಿ ಮೇಲೆ ಬ್ಯಾಟಿಂಗ್​ನ ಅತಿಯಾದ ಭಾರವಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಉತ್ತಮ ದಾಖಲೆ ಹೊಂದಿರುವ ಸುರೇಶ್ ರೈನಾ ಮತ್ತೊಮ್ಮೆ ಚೆನ್ನೈನ ಟ್ರಂಪ್ ಕಾರ್ಡ್ ಎನಿಸಲಿದ್ದಾರೆ. ರೈನಾ ಹಾಗೂ ಧೋನಿ ಸಿಡಿದರೆ, ವೈಜಾಗ್​ನ ನಿಧಾನಗತಿಯ ಪಿಚ್​ನಲ್ಲಿ ದೊಡ್ಡ ಮೊತ್ತ ಪೇರಿಸುವುದು ಸವಾಲೆನಿಸದು. ಡೆಲ್ಲಿಯ ಆರಂಭಿಕರನ್ನು ಇವರು ಶೀಘ್ರವಾಗಿ ಡಗೌಟ್​ಗೆ ಅಟ್ಟಿದರೆ, ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವುದು ಸುಲಭವಾಗಲಿದೆ.

  • ಬಲ: ಅನುಭವಿ ಆಟಗಾರರು; ಡೆಲ್ಲಿ ವಿರುದ್ಧ ಉತ್ತಮ ದಾಖಲೆ; ಬಲಿಷ್ಠ ಬೌಲಿಂಗ್ ವಿಭಾಗ.
  • ದೌರ್ಬಲ್ಯ: ಬ್ಯಾಟಿಂಗ್ ವಿಭಾಗದ ನಿರ್ವಹಣೆ; ಪವರ್ ಪ್ಲೇಯಲ್ಲಿ ನಿಸ್ತೇಜ ಬ್ಯಾಟಿಂಗ್; ಶೇನ್ ವ್ಯಾಟ್ಸನ್ ಫಾಮ್ರ್.
  • ಕಳೆದ ಪಂದ್ಯ: ಮುಂಬೈ ಇಂಡಿಯನ್ಸ್ ವಿರುದ್ಧ ಕ್ವಾಲಿಫೈಯರ್ -1 ಪಂದ್ಯದಲ್ಲಿ 6 ವಿಕೆಟ್ ಸೋಲು ?ಸಂಭಾವ್ಯ
  • ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ರೈನಾ, ಮುರಳಿ ವಿಜಯ್, ಅಂಬಟಿ ರಾಯುಡು, ಧೋನಿ (ನಾಯಕ/ವಿ.ಕೀ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೊ, ದೀಪಕ್ ಚಹರ್, ಹರ್ಭಜನ್ ಸಿಂಗ್, ಇಮ್ರಾನ್ ತಾಹಿರ್.

# ಡೆಲ್ಲಿ ಕ್ಯಾಪಿಟಲ್ಸ್: ಐಪಿಎಲ್ ಇತಿಹಾಸದಲ್ಲಿ ಮೊಟ್ಟಮೊದಲ ನಾಕೌಟ್ ಪಂದ್ಯ ಗೆದ್ದ ಖುಷಿಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆತ್ವವಿಶ್ವಾಸವೇ ದೊಡ್ಡ ಬಲ. ಚೆನ್ನೈ ವಿರುದ್ಧ ಲೀಗ್ ಪಂದ್ಯಗಳಲ್ಲಿ ಸೋಲು ಕಂಡಿದ್ದರೂ, ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಲೈನ್​ಅಪ್ ಗಮನಿಸಿದರೆ, ಮೂರು ಬಾರಿಯ ಚಾಂಪಿಯನ್ ತಂಡವನ್ನು ಮಣಿಸುವ ಎಲ್ಲ ಶಕ್ತಿ ತಂಡದಲ್ಲಿದೆ. ಬ್ಯಾಟಿಂಗ್​ನಲ್ಲಿ ಶಿಖರ್ ಧವನ್, ಪೃಥ್ವಿ ಷಾ ಹಾಗೂ ರಿಷಭ್ ಪಂತ್ ಮಿಂಚಿದರೆ ಗೆಲುವು ಕಷ್ಟವೇನಲ್ಲ. ಬೌಲಿಂಗ್ ಹಾಗೂ ಅನನುಭವಿ ಮಧ್ಯಮ ಕ್ರಮಾಂಕವೇ ತಂಡದ ದುರ್ಬಲ ಕೊಂಡಿಯಾಗಿದೆ. ಕಗಿಸೋ ರಬಾಡ ಅನುಪಸ್ಥಿತಿ ಈ ಪಂದ್ಯದಲ್ಲಿ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಕಾಡಲಿದೆ.

  • ಬಲ: ರಿಷಭ್ ಪಂತ್ ಬ್ಯಾಟಿಂಗ್; ಆರಂಭಿಕರ ನಿರ್ವಹಣೆ; ಇಶಾಂತ್ -ಮಿಶ್ರಾ ಬೌಲಿಂಗ್.
  • ದೌರ್ಬಲ್ಯ: ಚೆನ್ನೈ ವಿರುದ್ಧ ತಂಡದ ಕಳಪೆ ದಾಖಲೆ; ಆಲ್ರೌಂಡರ್​ಗಳ ಕಳಪೆ ನಿರ್ವಹಣೆ.
  • ಕಳೆದ ಪಂದ್ಯ: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ 2 ವಿಕೆಟ್ ಜಯ.
  • ಸಂಭಾವ್ಯ ತಂಡ: ಪೃಥ್ವಿ ಷಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್ (ನಾಯಕ), ರಿಷಭ್ ಪಂತ್ (ವಿ.ಕೀ), ಮನ್ರೊ/ಕಾಲಿನ್ ಇನ್​ಗ್ರಾಂ, ರುದರ್​ಫೋರ್ಡ್, ಕೀಮೊ ಪೌಲ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಟ್ರೆಂಟ್ ಬೌಲ್ಟ್, ಇಶಾಂತ್ ಶರ್ಮ.

ಆರಂಭ: ಸಂಜೆ 7.30

ನೇರಪ್ರಸಾರ: ಸ್ಟಾರ್​ಸ್ಪೋರ್ಟ್ಸ್