ಜೈಪುರ: ಅಂತಿಮ ಕ್ಷಣದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದ ಕೊನೇ ಎಸೆತದಲ್ಲಿ ವಿಜಯಲಕ್ಷ್ಮೀ ಒಲಿಸಿಕೊಳ್ಳಲು ಯಶಸ್ವಿಯಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆತಿಥೇಯ ರಾಜಸ್ಥಾನ ರಾಯಲ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಜಯ ದಾಖಲಿಸಿತು. ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಐಪಿಎಲ್-12ರ ಪಂದ್ಯದಲ್ಲಿ ಅಂತಿಮ 2 ಓವರ್ಗಳಲ್ಲಿ ಜಯ ಸಾಧಿಸಲು ಅವಶ್ಯಕತೆ ಇದ್ದ 30 ರನ್ ಕಸಿದ ಧೋನಿ ಬಳಗ ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು. ರಾಜಸ್ಥಾನ ರಾಯಲ್ಸ್ಗೆ ಇದು 5ನೇ ಸೋಲಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ತಂಡ 7 ವಿಕೆಟ್ಗೆ 151 ರನ್ ಗಳಿಸಿದರೆ, ಪ್ರತಿಯಾಗಿ ಆರಂಭಿಕ ವೈಫಲ್ಯದ ನಡುವೆಯೂ ನಾಯಕ ಎಂಎಸ್ ಧೋನಿ (58 ರನ್, 43 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ಅಂಬಟಿ ರಾಯುಡು (57 ರನ್, 47 ಎಸೆತ, 2 ಬೌಂಡರಿ, 3 ಸಿಕ್ಸರ್) ಜೋಡಿ 5ನೇ ವಿಕೆಟ್ಗೆ ಪೇರಿಸಿದ 95 ರನ್ ಫಲವಾಗಿ ಸಿಎಸ್ಕೆ ತಂಡ, 20 ಓವರ್ಗಳಲ್ಲಿ 6 ವಿಕೆಟ್ಗೆ 155 ರನ್ಗಳಿಸಿ ಜಯದ ನಗೆ ಬೀರಿತು. ಇದರೊಂದಿಗೆ ಪ್ರಸಕ್ತ ಟೂರ್ನಿಯಲ್ಲಿ ರಾಜಸ್ಥಾನ ವಿರುದ್ಧ ಆಡಿದ ಎರಡೂ ಮುಖಾಮುಖಿಯಲ್ಲೂ ಸಿಎಸ್ಕೆ ಜಯ ದಾಖಲಿಸಿತು.
ಸಿಎಸ್ಕೆಗೆ ಆರಂಭಿಕ ಶಾಕ್: ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಸಿಎಸ್ಕೆ ತಂಡ ಆರಂಭಿಕ ಆಘಾತದಿಂದ ತತ್ತರಿಸಿತು. ಇನಿಂಗ್ಸ್ನ ಮೊದಲ ಓವರ್ನಲ್ಲೇ ಅನುಭವಿ ಶೇನ್ ವ್ಯಾಟ್ಸನ್ ವೇಗಿ ಧವಳ್ ಕುಲಕರ್ಣಿಗೆ ವಿಕೆಟ್ ನೀಡಿದರು. ಖಾತೆ ತೆರೆಯುವ ಮುನ್ನವೇ ವಿಕೆಟ್ ಕಳೆದುಕೊಂಡ ಸಿಎಸ್ಕೆ ಪಾಳಯದಲ್ಲಿ ಆತಂಕ ಮನೆಮಾಡಿತು. ಬಳಿಕ ಸುರೇಶ್ ರೈನಾ (4), ಫಾಫ್ ಡು ಪ್ಲೆಸಿಸ್ (7) ಹಾಗೂ ಕೇದಾರ್ ಜಾಧವ್ (1) ವಿಕೆಟ್ ಕಳೆದುಕೊಂಡ ಸಿಎಸ್ಕೆ ಸಂಕಷ್ಟಕ್ಕೆ ಸಿಲುಕಿತು.
ಇನಿಂಗ್ಸ್ ಕಟ್ಟಿದ ರಾಯುಡು-ಧೋನಿ: ಸಿಎಸ್ಕೆ 4 ವಿಕೆಟ್ಗೆ 24 ರನ್ಗಳಿಸಿದ್ದ ವೇಳೆ ಜತೆಯಾದ ರಾಯುಡು ಹಾಗೂ ಧೋನಿ ಜೋಡಿ ಪಂದ್ಯದ ದಿಕ್ಕನ್ನೇ ಬದಲಿಸಿತು. ನಿಧಾನಗತಿಯ ಬ್ಯಾಟಿಂಗ್ ಮೊರೆ ಹೋದ ಈ ಜೋಡಿ ಕ್ರೀಸ್ ಬದಲಿಸುತ್ತಾ ವಿಕೆಟ್ ಕಾಯ್ದುಕೊಂಡಿತು. ಇನಿಂಗ್ಸ್ ಮುಂದುವರಿದಂತೆ ರನ್ವೇಗ ಹೆಚ್ಚಿಸಿಕೊಂಡ ಈ ಜೋಡಿ ರಾಜಸ್ಥಾನ ಬೌಲರ್ಗಳ ಪಾಲಿಗೆ ತಡೆಗೋಡೆ ಆಯಿತು. 5ನೇ ವಿಕೆಟ್ಗೆ 95 ರನ್ ಕಲೆಹಾಕಿದ ರಾಯುಡು-ಧೋನಿ ಜೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಟೂರ್ನಿಯುದ್ದಕ್ಕೂ ವೈಫಲ್ಯ ಅನುಭವಿಸಿದ್ದ ರಾಯುಡು ಪ್ರಸಕ್ತ ಐಪಿಎಲ್ನಲ್ಲಿ ಮೊದಲ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಬೆನ್ ಸ್ಟೋಕ್ಸ್ ಎಸೆತದಲ್ಲಿ ರಾಯುಡು, ಶ್ರೇಯಸ್ ಗೋಪಾಲ್ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು.
ರೋಚಕ ಕೊನೇ ಓವರ್!
ಚೆನ್ನೈ ತಂಡ ಜಯ ದಾಖಲಿಸಲು ಕೊನೇ 2 ಓವರ್ಗಳಲ್ಲಿ 30 ರನ್ಗಳ ಅಗತ್ಯವಿತ್ತು. ಜೋಫ್ರಾ ಆರ್ಚರ್ ಎಸೆದ 19ನೇ ಓವರ್ನಲ್ಲಿ ಧೋನಿ ಹಾಗೂ ಜಡೇಜಾ ಜೋಡಿ 12 ರನ್ ಗಳಿಸಿತು. ಅಂತಿಮ ಓವರ್ನಲ್ಲಿ ಅಗತ್ಯವಿದ್ದ 18 ರನ್ ಸಿಡಿಸಲು ಚೆನ್ನೈ ಯಶಸ್ವಿಯಾಯಿತು. ಬೆನ್ ಸ್ಟೋಕ್ಸ್ ಎಸೆದ ಅಂತಿಮ ಓವರ್ನ ಮೊದಲ ಎಸೆತವನ್ನೇ ಜಡೇಜಾ ಸಿಕ್ಸರ್ಗೆ ಅಟ್ಟಿದರೆ, 2ನೇ ಎಸೆತದಲ್ಲಿ ಸಿಂಗಲ್ ತಂದರು. ಈ ಎಸೆತ ನೋಬಾಲ್ ಆಗಿದ್ದ ಕಾರಣ ಫ್ರೀಹಿಟ್ ಎಸೆತದಲ್ಲಿ ಧೋನಿ 2 ರನ್ ತಂದರು. 3ನೇ ಎಸೆತದಲ್ಲಿ ಧೋನಿ ಬೌಲ್ಡ್ ಆದ ಕಾರಣ ಪಂದ್ಯ ರೋಚಕತೆ ಕಾಯ್ದುಕೊಂಡಿತು. 4ನೇ ಹಾಗೂ 5ನೇ ಎಸೆತದಲ್ಲಿ ತಲಾ 2 ರನ್ ತಂದ ಸ್ಯಾಂಟ್ನರ್, ಕೊನೇ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಶ್ರೇಯಸ್ ಗೋಪಾಲ್ ಬಿರುಸಿನ ಆಟ
ಸ್ಟೋಕ್ಸ್ ಔಟಾದ ಬಳಿಕ ಕ್ರೀಸ್ಗಿಳಿದ ಕನ್ನಡಿಗ ಶ್ರೇಯಸ್ ಗೋಪಾಲ್ (19* ರನ್, 7 ಎಸೆತ, 2 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ನಡೆಸಿ ರಾಯಲ್ಸ್ ಮೊತ್ತವನ್ನು 150ರ ಗಡಿ ದಾಟಿಸಿದರು. ಶ್ರೇಯಸ್- ಜೋಫ್ರಾ ಆರ್ಚರ್ (13) ಜೋಡಿ ಕೊನೇ ಓವರ್ನಲ್ಲಿ 18 ರನ್ ಕಲೆಹಾಕಿತು.
100
ಸಿಎಸ್ಕೆ ಐಪಿಎಲ್ ಇತಿಹಾಸದಲ್ಲಿ 100 ಗೆಲುವು ದಾಖಲಿಸಿದ 2ನೇ ತಂಡವೆನಿಸಿತು. ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿದೆ.
ರಾಜಸ್ಥಾನ ರಾಯಲ್ಸ್ಗೆ ಚಹರ್, ಜಡೇಜಾ ಆಘಾತ
ಸಿಎಸ್ಕೆ ಬೌಲರ್ಗಳ ಸಂಘಟಿತ ಹೋರಾಟಕ್ಕೆ ರಾಜಸ್ಥಾನ ತಂಡ ಆರಂಭಿಕ ಆಘಾತದಿಂದ ತತ್ತರಿಸಿತು. ಆರಂಭಿಕರಾದ ನಾಯಕ ಅಜಿಂಕ್ಯ ರಹಾನೆ (14 ರನ್, 11 ಎಸೆತ, 3 ಬೌಂಡರಿ) ಹಾಗೂ ಜೋಸ್ ಬಟ್ಲರ್ (23 ರನ್, 10ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿ 3ನೇ ಓವರ್ನಲ್ಲೇ ಬೇರ್ಪಟ್ಟಿತು. ಮೊದಲ ಹಾಗೂ 2ನೇ ಓವರ್ನಲ್ಲಿ ಕ್ರಮವಾಗಿ 11 ಹಾಗೂ 14 ರನ್ ಗಳಿಸಿದ ಈ ಜೋಡಿಯ ಅಬ್ಬರಕ್ಕೆ ಮರು ಓವರ್ನಲ್ಲೇ ದೀಪಕ್ ಚಹರ್ ಬ್ರೇಕ್ ಹಾಕಿದರು. ಇದರೊಂದಿಗೆ ಆತಿಥೇಯ ತಂಡದ ಕುಸಿತ ಕೂಡ ಆರಂಭಗೊಂಡಿತು. ಈ ಜೋಡಿ ಮೊದಲ ವಿಕೆಟ್ಗೆ ಎದುರಿಸಿದ 17 ಎಸೆತಗಳಲ್ಲಿ 31 ರನ್ ಕಲೆಹಾಕಿತು. ಗಾಯದಿಂದ ಚೇತರಿಕೆ ಕಂಡು 2 ಪಂದ್ಯಗಳ ಬಳಿಕ ಕಣಕ್ಕಿಳಿದ ಸಂಜು ಸ್ಯಾಮ್ಸನ್ (6), ಬಟ್ಲರ್ ಜತೆಗೂಡಿ ಇನಿಂಗ್ಸ್ ಕಟ್ಟಲು ಯತ್ನಿಸಿದರು. ಆದರೆ, ಶಾರ್ದೂಲ್ ಠಾಕೂರ್ ಎಸೆತದಲ್ಲಿ ರಾಯುಡುಗೆ ಕ್ಯಾಚ್ ನೀಡಿ ಬಟ್ಲರ್ ನಿರ್ಗಮಿಸಿದರೆ, ಇದಾದ ಬಳಿಕ ಸ್ಯಾಂಟ್ನರ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿದ್ದ ಬದಲಿ ಆಟಗಾರ ಧ್ರುವ ಶೋರೆ ಹಿಡಿದ ಕ್ಯಾಚ್ಗೆ ಸ್ಯಾಮ್ಸನ್ ಬಲಿಯಾದರು. ನಂತರ ದಾಳಿಗಿಳಿದ ರವೀಂದ್ರ ಜಡೇಜಾ (20ಕ್ಕೆ 2) ತಮ್ಮ ಕೋಟಾದ ಮೊದಲ 2 ಓವರ್ಗಳಲ್ಲಿ ರಾಹುಲ್ ತ್ರಿಪಾಠಿ, ಸ್ಟೀವನ್ ಸ್ಮಿತ್ ವಿಕೆಟ್ ಕಬಳಿಸುವ ಮೂಲಕ ರಾಜಸ್ಥಾನದ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರು.
100ರ ಗಡಿ ದಾಟಿಸಿದ ಸ್ಟೋಕ್ಸ್
ರಾಜಸ್ಥಾನ ತಂಡ 78 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ವೇಳೆ ಜತೆಯಾದ ಅನುಭವಿ ಬೆನ್ ಸ್ಟೋಕ್ಸ್ (28ರನ್, 26ಎಸೆತ, 1 ಬೌಂಡರಿ) ಹಾಗೂ ಯುವ ಆಲ್ರೌಂಡರ್ ರಿಯಾನ್ ಪರಾಗ್ (16) ಜೋಡಿ ಕೆಲಕಾಲ ಆಧರಿಸಿತು. 6ನೇ ವಿಕೆಟ್ಗೆ ಉಪಯುಕ್ತ 25 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು.
ಕೂಲ್ ಕ್ಯಾಪ್ಟನ್ ಕೋಪ!
ಸಿಎಸ್ಕೆ ಇನಿಂಗ್ಸ್ನ ಕೊನೇ ಓವರ್ನ 4ನೇ ಎಸೆತ ಬ್ಯಾಟ್ಸ್ ಮನ್ (ಸ್ಯಾಂಟ್ನರ್) ಭುಜದ ನೇರವಾಗಿ ಬಂದ ಕಾರಣ ಅಂಪೈರ್ ಉಲ್ಹಾಸ್ ನೋಬಾಲ್ ಎಂದು ಸನ್ನೆ ಮಾಡಿದರೂ, ಲೆಗ್ ಅಂಪೈರ್ ಬ್ರೂಸ್ ಅಕ್ಸೆನ್ಪೋರ್ಡ್ ನೋಬಾಲ್ ಅಲ್ಲ ಎಂದು ಹೇಳಿದ ಬಳಿಕ ಉಲ್ಹಾಸ್ ‘ನೋಬಾಲ್’ ತೀರ್ಪು ನೀಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಧೋನಿ ಮೈದಾನಕ್ಕಿಳಿದು ಅಂಪೈರ್ ಜತೆಗೆ ವಾಗ್ವಾದಕ್ಕಿಳಿದರು. ಆದರೆ, ಅಂಪೈರ್ ತೀರ್ಪು ಬದಲಿಸಲಿಲ್ಲ. ಇದರಿಂದ ಧೋನಿ ಬೇಸರದಿಂದಲೇ ಡಗ್ಔಟ್ಗೆ ವಾಪಸಾದರು.