ಇಂದೇನಾದರೂ ಡೇವಿಡ್​ ವಾರ್ನರ್ ಸ್ಫೋಟಿಸಿದರೆ​ ವೀರೇಂದ್ರ ಸೆಹ್ವಾಗ್​, ಜಾಸ್​​ ಬಟ್ಲರ್​ ದಾಖಲೆ ಉಡೀಸ್​

ಜೈಪುರ: ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷ ನಿಷೇಧಕ್ಕೆ ಒಳಗಾಗಿ ಮತ್ತೆ ಕ್ರಿಕೆಟ್​ಗೆ ಮರಳಿರುವ ಆಸಿಸ್​ ಆಟಗಾರ ಡೇವಿಡ್​ ವಾರ್ನರ್​ ಐಪಿಎಲ್​ನಲ್ಲಿ ಅಬ್ಬರಿಸುತ್ತಿದ್ದಾರೆ. ವಿದೇಶಿ ಆಟಗಾರನೊಬ್ಬನ ಐಪಿಎಲ್​ ಪ್ರದರ್ಶನದಲ್ಲಿ ಮೊದಲ ಸ್ಥಾನವನ್ನು ಕೊಡುವುದಾದರೆ ಅದು ವಾರ್ನರ್​ಗೆ ಸಲ್ಲಬೇಕು. ಸದ್ಯ ಸನ್​ ರೈಸರ್ಸ್​ ಹೈದರಾಬಾದ್​ ತಂಡದ ಪರ ಆಡುತ್ತಿರುವ ವಾರ್ನರ್​ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಐಪಿಎಲ್​ನಲ್ಲಿ ಒಟ್ಟು 124 ಇನ್ನಿಂಗ್ಸ್​ ಆಡಿರುವ ವಾರ್ನರ್​ 4,588 ರನ್​ಗಳನ್ನು ತಮ್ಮ ಬತ್ತಳಿಕೆ ಹಾಕಿಕೊಂಡಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. ಪ್ರಸ್ತುತ ಐಪಿಎಲ್​ ಆವೃತ್ತಿಯಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿರುವ ವಾರ್ನರ್​ ಅಧಿಕ ರನ್ ಸ್ಕೋರರ್​ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಮೂಲಕ ಆರೆಂಜ್​ ಕ್ಯಾಪ್​ ಅನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.​ ವಿಶೇಷವೆಂದರೆ ಮೂರನೇ ಬಾರಿಗೆ ಆರೆಂಜ್​ ಕ್ಯಾಪ್​ ಅನ್ನು ಧರಿಸುವ ಮೂಲಕ ದಾಖಲೆ ಬರೆದಿದ್ದು, ಇದೀಗ ಮತ್ತೊಂದು ದಾಖಲೆಯನ್ನು ತಮ್ಮ ಜೇಬಿಗೆ ಸೇರಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಇಂದು(ಶನಿವಾರ) ಸಂಜೆ 8 ಗಂಟೆಗೆ ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್ ನಡುವೆ ಪಂದ್ಯ ನಡೆಯಲಿದೆ.​ ಇಂದೇನಾದರೂ ವಾರ್ನರ್​ ಅರ್ಧ ಶತಕ ಬಾರಿಸಿದರೆ, ಐಪಿಎಲ್​ ಆವೃತ್ತಿಯೊಂದಲ್ಲಿ ಸತತವಾಗಿ 5 ಅರ್ಧಶತಕ ಬಾರಿಸಿದ ವೀರೇಂದ್ರ ಸೆಹ್ವಾಗ್​ ಹಾಗೂ ಜಾಸ್​ ಬಟ್ಲರ್​ ಅವರ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಈಗಾಗಲೇ ಐದು ಇನ್ನಿಂಗ್ಸ್(ಸಿಎಸ್​ಕೆ 57, ಕೆಕೆಆರ್​​ 67, ಸಿಎಸ್​ಕೆ 50, ಡಿಸಿ 51 ಮತ್ತು ಪಂಜಾಬ್​ 71) ​ನಲ್ಲಿ ಐದು ಅರ್ಧಶತಕ ಬಾರಿಸಿರುವ ವಾರ್ನರ್​, ಸೆಹ್ವಾಗ್​ ಮತ್ತು ಬಟ್ಲರ್​ ಸಮವಾಗಿ ನಿಂತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *