ಕೆಕೆಆರ್ ಫ್ಲಾಪ್, ಸಿಎಸ್​ಕೆ ಟಾಪ್!

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್​ಗಳ ಅಬ್ಬರದ ಎದುರು ಮಂಕಾದ ಕೋಲ್ಕತ ನೈಟ್​ರೈಡರ್ಸ್ ತಂಡ ಐಪಿಎಲ್-12ರ ತನ್ನ 6ನೇ ಪಂದ್ಯದಲ್ಲಿ 7 ವಿಕೆಟ್​ಗಳಿಂದ ಶರಣಾಯಿತು. ಇದರೊಂದಿಗೆ ಹ್ಯಾಟ್ರಿಕ್ ಗೆಲುವಿನ ಲೆಕ್ಕಾಚಾರದಲ್ಲಿದ್ದ ದಿನೇಶ್ ಕಾರ್ತಿಕ್ ಪಡೆ ನಿರಾಸೆ ಅನುಭವಿಸಿದರೆ, ಸತತ 2ನೇ ಜಯ ದಾಖಲಿಸಿದ ಆತಿಥೇಯ ಸಿಎಸ್​ಕೆ ತಂಡ ಒಟ್ಟಾರೆ 5ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಎಂಎಸ್ ಧೋನಿ ಪಡೆ ಹಾಲಿ ಆವೃತ್ತಿಯಲ್ಲಿ ತವರಿನಲ್ಲಿ ಆಡಿದ ನಾಲ್ಕೂ ಪಂದ್ಯ ಗೆದ್ದ ಅಜೇಯ ಸಾಧನೆ ಮಾಡಿದೆ.

ಚೆಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ, ಸಿಎಸ್​ಕೆ ಬೌಲರ್​ಗಳ ಬಿಗಿ ಬೌಲಿಂಗ್ ನಡುವೆ ಆಲ್ರೌಂಡರ್ ಆಂಡ್ರೆ ರಸೆಲ್ (50*ರನ್, 44 ಎಸೆತ, 5 ಬೌಂಡರಿ, 3 ಸಿಕ್ಸರ್) ಏಕಾಂಗಿ ಹೋರಾಟದಿಂದ 9 ವಿಕೆಟ್​ಗೆ 108 ರನ್​ಗಳಿಸಿತು. ಪ್ರತಿಯಾಗಿ ಸಿಎಸ್​ಕೆ, ಆರಂಭಿಕ ಫಾಫ್ ಡು ಪ್ಲೆಸಿಸ್ (43*ರನ್, 45 ಎಸೆತ, 3 ಬೌಂಡರಿ) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 17.2 ಓವರ್​ಗಳಲ್ಲಿ 3 ವಿಕೆಟ್​ಗೆ 111 ರನ್​ಗಳಿಸಿ ಜಯದ ನಗೆ ಬೀರಿತು.

ತಿಣುಕಾಡಿ ಗೆದ್ದ ಸಿಎಸ್​ಕೆ: ಕೆಕೆಆರ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಸಿಎಸ್​ಕೆ ತಂಡ ತಿಣುಕಾಡಿ ಗುರಿಮುಟ್ಟಿತು. ಅನುಭವಿ ಬ್ಯಾಟ್ಸ್​ಮನ್ ಶೇನ್ ವ್ಯಾಟ್ಸನ್ (17ರನ್, 9 ಎಸೆತ, 2 ಬೌಂಡರಿ, 1 ಸಿಕ್ಸರ್) ಆರಂಭದಲ್ಲೇ ಅಬ್ಬರಿಸಿ ಡಗ್​ಔಟ್ ಸೇರಿಕೊಂಡರು. ಪೀಯುಷ್ ಚಾವ್ಲಾ ಎಸೆತದ ಮೊದಲ ಓವರ್​ನಲ್ಲೇ 12 ರನ್ ಕಸಿದ ವ್ಯಾಟ್ಸನ್ ಅಬ್ಬರಕ್ಕೆ ಸುನೀಲ್ ನಾರಾಯಣ್ ಲಗಾಮು ಕಟ್ಟಿದರು. ಬಳಿಕ ಬಂದ ಸುರೇಶ್ ರೈನಾ (14 ರನ್, 13 ಎಸೆತ, 1 ಬೌಂಡರಿ, 1 ಸಿಕ್ಸರ್) ಕೆಲಕಾಲ ಅಬ್ಬರಿಸಿ ನಾರಾಯಣ್ ಎಸೆತದಲ್ಲೇ ಬೌಂಡರಿ ಲೈನ್​ನಲ್ಲಿದ್ದ ಪೀಯುಷ್ ಹಿಡಿತ ಅದ್ಭುತ ಕ್ಯಾಚ್​ಗೆ ಬಲಿಯಾದರು. ಇದರೊಂದಿಗೆ ಸಿಎಸ್​ಕೆ ತಂಡ 35 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಬಳಿಕ ಜತೆಯಾದ ಫಾಫ್ ಡು ಪ್ಲೆಸಿಸ್ ಹಾಗೂ ಅಂಬಟಿ ರಾಯುಡು (21 ರನ್, 31 ಎಸೆತ, 2 ಬೌಂಡರಿ) 3ನೇ ವಿಕೆಟ್​ಗೆ 46 ರನ್ ಜತೆಯಾಟವಾಡಿ ತಂಡದ ಗೆಲುವನ್ನು ಸುಲಭವಾಗಿಸಿದರು. ದೊಡ್ಡ ಹೊಡೆತಕ್ಕೆ ಮುಂದಾದ ರಾಯುಡು, ಪೀಯುಷ್ ಚಾವ್ಲಾ ಎಸೆತದಲ್ಲಿ ನಿತೀಶ್ ರಾಣಾಗೆ ಕ್ಯಾಚ್ ನೀಡಿದರು. ಅಂತಿಮವಾಗಿ ಕೇದಾರ್ ಜಾಧವ್ (8*) ಹಾಗೂ ಪ್ಲೆಸಿಸ್ ಜೋಡಿ ಇನ್ನು 16 ಎಸೆತಗಳು ಬಾಕಿ ಇರುವಾಗಲೇ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿತು.

ದೀಪಕ್ ಚಹರ್ ಐಪಿಎಲ್ ಪಂದ್ಯವೊಂದ ರಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಎಸೆತದ ಬೌಲರ್ ಎನಿಸಿಕೊಂಡರು. ಕೆಕೆಆರ್ ವಿರುದ್ಧ 20 ಡಾಟ್ ಬಾಲ್ ಎಸೆದರು. 2009ರಲ್ಲಿ ಡೆಲ್ಲಿ ತಂಡದ ಆಶಿಶ್ ನೆಹ್ರಾ, ಪಂಜಾಬ್ ವಿರುದ್ಧ ಹಾಗೂ ರಾಜಸ್ಥಾನದ ಮುನಾಫ್ ಪಟೇಲ್ ಕೆಕೆಆರ್ ವಿರುದ್ಧ ತಲಾ 19 ಡಾಟ್ ಬಾಲ್ ಎಸೆದಿದ್ದು ಇದುವರೆಗಿನ ದಾಖಲೆಯಾಗಿತ್ತು.

ಚೆನ್ನೈನಲ್ಲಿ ಸಿಎಸ್​ಕೆಗೆ ಕೆಕೆಆರ್ ವಿರುದ್ಧ ಆಡಿದ 9ನೇ ಪಂದ್ಯದಲ್ಲಿ ಇದು 7ನೇ ಗೆಲುವಾಗಿದೆ.

100ರ ಗಡಿ ದಾಟಿಸಿದ ಆಂಡ್ರೆ ರಸೆಲ್

ಮಧ್ಯಮ ಕ್ರಮಾಂಕದಲ್ಲಿ ಕೆಕೆಆರ್ ತಂಡದ ಶಕ್ತಿಯಾಗಿರುವ ಆಂಡ್ರೆ ರಸೆಲ್ ಮತ್ತೊಮ್ಮೆ ಏಕಾಂಗಿ ಹೋರಾಟದ ಮೂಲಕ ತಂಡಕ್ಕೆ ಆಸರೆಯಾದರು. ಆಂಡ್ರೆ ರಸೆಲ್ ಇನಿಂಗ್ಸ್​ಗೆ ಮರುಜೀವ ತುಂಬಲು ಯತ್ನಿಸಿದರು. 7ನೇ ವಿಕೆಟ್​ಗೆ ಪೀಯುಷ್ ಚಾವ್ಲಾ (8) ಜತೆಗೂಡಿ 29 ರನ್ ಪೇರಿಸಿದರು. ಹರ್ಭಜನ್ ಈ ಜೋಡಿಯನ್ನು ಮುರಿಯುವ ಮೂಲಕ ಕೆಕೆಆರ್​ಗೆ ಮತ್ತೊಮ್ಮೆ ಆಘಾತ ನೀಡಿದರು. ಬಳಿಕ ಬಂದ ಕುಲದೀಪ್ ಯಾದವ್ ಹಾಗೂ ಪ್ರಸಿದ್ಧ ಕೃಷ್ಣ ಖಾತೆ ತೆರೆಯದೆ ವಾಪಸಾದರು. ಅಂತಿಮ ವಿಕೆಟ್​ಗೆ ಹ್ಯಾರಿ ಗುರ್ನಿ (1) ಜತೆಗೂಡಿ ಬಿರುಸಿನ 29 ರನ್ ಕಲೆಹಾಕಿದ ರಸೆಲ್, ತಂಡದ ಮೊತ್ತವನ್ನು 100ರ ಗಡಿ ದಾಟಿಸಲು ಯಶಸ್ವಿಯಾದರು.

ಐಪಿಎಲ್​ನಲ್ಲಿ ಕೆಕೆಆರ್ ತಂಡ 5ನೇ ಕನಿಷ್ಠ ಮೊತ್ತ ದಾಖಲಿಸಿತು. 2008ರಲ್ಲಿ 67 ರನ್ ಗಳಿಸಿರುವುದು ಕನಿಷ್ಠ ಮೊತ್ತವಾಗಿದೆ.

ಕೆಕೆಆರ್​ಗೆ ಚಹರ್ ಕಡಿವಾಣ

ಪ್ರಸಕ್ತ ಲೀಗ್​ನಲ್ಲಿ ಚೆನ್ನೈ ಪರ ಭರ್ಜರಿ ನಿರ್ವಹಣೆ ತೋರುತ್ತಿರುವ ದೀಪಕ್ ಚಹರ್ (20ಕ್ಕೆ 3), ಹರ್ಭಜನ್ ಸಿಂಗ್ (15ಕ್ಕೆ 2) ಹಾಗೂ ಇಮ್ರಾನ್ ತಾಹಿರ್ (21ಕ್ಕೆ 2) ಕೆಕೆಆರ್ ಕುಸಿತದಲ್ಲಿ ಪ್ರಮುಖ ಪಾತ್ರವಹಿಸಿದರು. ರಾಜಸ್ಥಾನ ವಿರುದ್ಧದ ಹಿಂದಿನ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ ಲ್ಯಾನ್ (0) ಹಾಗೂ ಸುನೀಲ್ ನಾರಾಯಣ್ (6) ಜೋಡಿ ಉತ್ತಮ ಆರಂಭ ನೀಡಲು ವಿಫಲವಾಯಿತು. ದೀಪಕ್ ಚಹರ್ ಇನಿಂಗ್ಸ್​ನ ಮೊದಲ ಓವರ್​ನಲ್ಲೇ ಕ್ರಿಸ್ ಲ್ಯಾನ್ ವಿಕೆಟ್ ಉರುಳಿಸಿ ತಂಡಕ್ಕೆ ಮೇಲುಗೈ ತಂದುಕೊಟ್ಟರು. ಮರು ಓವರ್​ನಲ್ಲೇ ಸುನೀಲ್ ನಾರಾಯಣ್ ಕೂಡ ಹರ್ಭಜನ್ ಎಸೆತದಲ್ಲಿ ಚಹರ್​ಗೆ ಕ್ಯಾಚ್ ನೀಡಿದರು. ಬಳಿಕ ದೀಪಕ್ ಚಹರ್ ತಾನೆಸೆದ 2ನೇ ಹಾಗೂ 3ನೇ ಓವರ್​ನಲ್ಲಿ ಕ್ರಮವಾಗಿ ನಿತೇಶ್ ರಾಣಾ (0) ಹಾಗೂ ರಾಬಿನ್ ಉತ್ತಪ್ಪ (11) ಅವರನ್ನು ಡಗ್​ಔಟ್​ಗೆ ಕಳುಹಿಸಿದರು. 24 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡ ಕೆಕೆಆರ್ ಅಲ್ಪಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಸ್ಟಾರ್ ಬ್ಯಾಟ್ಸ್​ಮನ್​ಗಳ ವೈಫಲ್ಯದಿಂದ ಕೆಕೆಆರ್ ತಂಡ ತತ್ತರಿಸಿದಾಗ, ನಾಯಕ ದಿನೇಶ್ ಕಾರ್ತಿಕ್ (19 ರನ್, 21 ಎಸೆತ, 3 ಬೌಂಡರಿ) ಹಾಗೂ ಯುವ ಬ್ಯಾಟ್ಸ್​ಮನ್ ಶುಭಮಾನ್ ಗಿಲ್ (9) ಜೋಡಿ ಕೆಲಕಾಲ ವಿಕೆಟ್ ಕಾಯ್ದುಕೊಳ್ಳಲು ಯತ್ನಿಸಿತು. ಆದರೆ, ತಾಹಿರ್ ಎಸೆತದಲ್ಲಿ ತಾಳ್ಮೆ ಕಳೆದುಕೊಂಡ ದಿನೇಶ್ ಕಾರ್ತಿಕ್ ಮಿಡ್​ವಿಕೆಟ್​ನಲ್ಲಿದ್ದ ಹರ್ಭಜನ್ ಸಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಈ ಜೋಡಿ 5ನೇ ವಿಕೆಟ್ 20 ರನ್ ಜತೆಯಾಟವಾಡಿತು. ತಾಹಿರ್ ಎಸೆದ ಮರು ಓವರ್​ನಲ್ಲೇ ಶುಭಮಾನ್ ಗಿಲ್ ಕೂಡ ಸ್ಟಂಪ್ ಆದರು. ಇದರಿಂದ ಕೆಕೆಆರ್ ತಂಡ 47 ರನ್​ಗಳಿಗೆ 6 ವಿಕೆಟ್ ಕಳೆದುಕೊಂಡು 100ರ ಗಡಿ ದಾಟುವುದು ದುಸ್ತರ ಎನಿಸಿತು.

ಸಿಎಸ್​ಕೆ ತಂಡ ಚೆಪಾಕ್ ಅಂಗಳದಲ್ಲಿ ಆಡಿದ ಕಳೆದ 17 ಪಂದ್ಯಗಳಲ್ಲಿ 16ನೇ ಗೆಲುವು ಇದಾಗಿದೆ. ಕೇವಲ ಒಂದು ಪಂದ್ಯದಲ್ಲಷ್ಟೇ ಸಿಎಸ್​ಕೆ ಸೋತಿದೆ.

ಕೆಕೆಆರ್ ತಂಡ 2016ರ ನಂತರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ 21 ಪಂದ್ಯಗಳಲ್ಲಿ ಕೇವಲ 8ರಲ್ಲಿ ಗೆದ್ದಿದೆ. ಎರಡನೇ ಸರದಿಯಲ್ಲಿ ಬ್ಯಾಟಿಂಗ್ ಮಾಡಿದ ನಾಲ್ಕು ಪಂದ್ಯಗಳಲ್ಲೂ ಗೆದ್ದಿದೆ.

Leave a Reply

Your email address will not be published. Required fields are marked *