ಸಿಎಸ್​ಕೆ ಸ್ಪಿನ್ ಮೋಡಿಗೆ ಆರ್​ಸಿಬಿ ಸ್ಟನ್

ಚೆನ್ನೈ: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಪಿನ್ ಬೌಲರ್​ಗಳ ಪ್ರಬಲ ಅಸ್ತ್ರದ ಎದುರು ಸಂಪೂರ್ಣ ನೆಲಕಚ್ಚಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-12ರ ಉದ್ಘಾಟನಾ ಪಂದ್ಯದಲ್ಲೇ ನಿರಾಸೆ ಕಂಡಿತು. ಚೆಪಾಕ್​ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್​ಸಿಬಿ 7 ವಿಕೆಟ್​ಗಳಿಂದ ಆತಿಥೇಯ ತಂಡಕ್ಕೆ ಶರಣಾಯಿತು. ಪ್ರಸಕ್ತ ಆವೃತ್ತಿಯಲ್ಲಿ ಉತ್ತಮ ಆರಂಭ ಕಾಣುವ ಹಂಬಲದಲ್ಲಿದ್ದ ಆರ್​ಸಿಬಿ, ಡ್ಯಾಡ್ಸ್ ಆರ್ವಿು ಖ್ಯಾತಿಯ ಆತಿಥೇಯ ತಂಡದೆದುರು ನೀರಸ ಪ್ರದರ್ಶನ ನೀಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ, ಅನುಭವಿ ಹರ್ಭಜನ್ ಸಿಂಗ್ (20ಕ್ಕೆ 3) ಹಾಗೂ ಇಮ್ರಾನ್ ತಾಹಿರ್ (9ಕ್ಕೆ 3) ಜೋಡಿಯ ಮಾರಕ ಸ್ಪಿನ್ ದಾಳಿ ಎದುರಿಸಿದ ಆರ್​ಸಿಬಿ 17.1 ಓವರ್​ಗಳಲ್ಲಿ 70 ರನ್​ಗಳಿಗೆ ಸರ್ವಪತನ ಕಂಡಿತು. ಈ ಅಲ್ಪಮೊತ್ತ ಬೆನ್ನಟ್ಟಿದ ಸಿಎಸ್​ಕೆ 17.4 ಓವರ್​ಗಳಲ್ಲಿ 3 ವಿಕೆಟ್​ಗೆ 71 ರನ್​ಗಳಿಸಿ ಗೆಲುವಿನ ಗುರಿ ತಲುಪಿತು.

ಪ್ರಯಾಸಕರವಾಗಿ ಗೆದ್ದ ಸಿಎಸ್​ಕೆ: ಆರ್​ಸಿಬಿ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಸಿಎಸ್​ಕೆ ಪ್ರಯಾಸಕರವಾಗಿ ಗುರಿ ತಲುಪಿತು. 10 ಎಸೆತ ಎದುರಿಸಿದ ಶೇನ್ ವ್ಯಾಟ್ಸನ್ (0) ಖಾತೆ ತೆರೆಯುವ ಮುನ್ನವೇ ಚಾಹಲ್​ಗೆ ವಿಕೆಟ್ ನೀಡಿದರು. ಬಳಿಕ ಅಂಬಟಿ ರಾಯುಡುಗೆ (28) ಜತೆಯಾದ ಸುರೇಶ್ ರೈನಾ (19) 2ನೇ ವಿಕೆಟ್​ಗೆ 32 ರನ್ ಪೇರಿಸಿ ಮೊಯಿನ್ ಎಸೆತದಲ್ಲಿ ಶಿವಂ ದುಬೇಗೆ ಕ್ಯಾಚ್ ನೀಡಿದರು. ಬಳಿಕ ರಾಯುಡು ಗೆಲುವಿನಿಂದ 12 ರನ್ ದೂರವಿದ್ದಾಗ ಔಟಾದರೆ, ಕೇದಾರ್ ಜಾಧವ್ (13*) ಮತ್ತು ರವೀಂದ್ರ ಜಡೇಜಾ (6*) ಗೆಲುವಿನ ದಡ ಸೇರಿಸಿದರು.

ಬ್ಯಾಟ್ಸ್​ಮನ್​ಗಳ ಡಗೌಟ್ ಪರೇಡ್

ಸಿಎಸ್​ಕೆ ಸ್ಪಿನ್ನರ್​ಗಳು ಹೆಣೆದ ಬಲೆಗೆ ಆರ್​ಸಿಬಿ ಬ್ಯಾಟ್ಸ್​ಮನ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರು. ನಾಯಕ ವಿರಾಟ್ ಕೊಹ್ಲಿ (6) ತಂಡಕ್ಕೆ ಉತ್ತಮ ಆರಂಭ ನೀಡಲು ವಿಫಲರಾದರು. ಅನುಭವಿ ಹರ್ಭಜನ್ ಸಿಂಗ್ ಎಸೆತದಲ್ಲಿ ತಾಳ್ಮೆ ಕಳೆದುಕೊಂಡಂತೆ ಕಂಡ ಕೊಹ್ಲಿ ಮಿಡ್ ವಿಕೆಟ್​ನಲ್ಲಿದ್ದ ರವೀಂದ್ರ ಜಡೇಜಾ ಹಿಡಿತ ಅದ್ಭುತ ಕ್ಯಾಚ್​ಗೆ ಬಲಿಯಾದರು. ನಂತರ ವಿದೇಶಿ ಆಟಗಾರರಾದ ಮೊಯಿನ್ ಅಲಿ (9), ಭರವಸೆಯ ಎಬಿ ಡಿವಿಲಿಯರ್ಸ್​ಗೆ (9) ಹರ್ಭಜನ್ ಸಿಂಗ್ ಡಗೌಟ್ ದಾರಿ ತೋರಿದರು. ಬೆನ್ನಲ್ಲೇ ವೆಸ್ಟ್ ಇಂಡೀಸ್​ನ ಶಿಮ್ರೊನ್ ಹೆಟ್ಮೆಯೆರ್ ಖಾತೆ ತೆರೆಯುವ ಮುನ್ನವೇ ಇಲ್ಲದ ರನ್​ಕದಿಯಲು ಹೋಗಿ ರನೌಟ್ ಬಲೆಗೆ ಬಿದ್ದರು. ಇದರೊಂದಿಗೆ 39 ರನ್​ಗಳಿಗೆ 4 ವಿಕೆಟ್ ಕಳೆದುಕೊಂಡ ಆರ್​ಸಿಬಿ ಹೀನಾಯ ಸ್ಥಿತಿಗೆ ತಲುಪಿತು. ಆರ್​ಸಿಬಿಗೆ ಎರಡನೇ ಹಂತದಲ್ಲಿ ಇಮ್ರಾನ್ ತಾಹಿರ್ ಆಘಾತ ನೀಡಿದರು. ಆಲ್ರೌಂಡರ್ ಶಿವಂ ದುಬೇ (2) ತಾಹಿರ್ ಎಸೆತದಲ್ಲಿ ಸ್ಲಿಪ್​ನಲ್ಲಿದ್ದ ವ್ಯಾಟ್ಸನ್​ಗೆ ಕ್ಯಾಚ್ ನೀಡಿದರು. ಕಾಲಿನ್ ಗ್ರಾಂಡ್​ಹೋಮ್ (4) ಜಡೇಜಾಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದವರೆಗೂ ಕ್ರೀಸ್​ನಲ್ಲಿ ಅಂಟಿಕೊಂಡು ನಿಂತಿದ್ದ ಪಾರ್ಥಿವ್ ಪಟೇಲ್ (29) ಬ್ರಾವೊ ಎಸೆತದಲ್ಲಿ ಕೇದಾರ್ ಜಾಧವ್​ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಆರ್​ಸಿಬಿ ತಂಡ ಕನಿಷ್ಠ 100ರ ಗಡಿ ದಾಟಲು ವಿಫಲವಾಯಿತು. ಪಾರ್ಥಿವ್ ಪಟೇಲ್ ಹೊರತುಪಡಿಸಿದರೆ ಯಾವುದೇ ಬ್ಯಾಟ್ಸ್​ಮನ್​ಗಳು ಕನಿಷ್ಠ 10ರನ್ ಮುಟ್ಟಲಿಲ್ಲ.

ಆರ್​ಸಿಬಿ ಟ್ರೋಲ್!

ಆರ್​ಸಿಬಿ ನಿರ್ವಹಣೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ಗೆ ಆಹಾರವಾಯಿತು. ನಟ ಹಾಗೂ ಆರ್​ಸಿಬಿಯ ಇನ್​ಸೈಡರ್ ಆಗಿದ್ದ ನೊಗ್​ರಾಜ್ ಖ್ಯಾತಿಯ ಡ್ಯಾನಿಶ್ ಸೇಠ್​ರ ಟ್ವೀಟ್ ಈ ವೇಳೆ ಗಮನಸೆಳೆಯಿತು. ‘ನಮ್ಮ ಹುಡುಗರಿಂದ ತೀರಾ ಮಿತವ್ಯಯದ ನಿರ್ವಹಣೆ ಬಂದಿದೆ! ಬೆಂಗಳೂರಿನ ಪೆಟ್ರೋಲ್ ಬೆಲೆಯನ್ನೂ ನಾವು ತಲುಪಿಲ್ಲ’ ಎಂದು ಆರ್​ಸಿಬಿ ನಿರ್ವಹಣೆಯನ್ನು ಕಾಲೆಳೆದಿದ್ದಾರೆ. ಆರ್​ಸಿಬಿ ಗಳಿಸಿದ ರನ್​ಗಿಂತ ಹೆಚ್ಚಿನ ಪರ್ಸಂಟೇಜ್​ಅನ್ನು ನಾನು ಶಾಲೆಯಲ್ಲೇ ಪಡೆದಿದ್ದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ‘ಚಕ್​ದೇ ಚಿತ್ರದ 70 ನಿಮಿಷ ಹಾಗೂ ಆರ್​ಸಿಬಿಯ 70 ರನ್​ಗಳ ವ್ಯತ್ಯಾಸ ನನಗೀಗ ಅರ್ಥವಾಗಿದೆ’ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ತಂಡವೊಂದು ದಾಖಲಿಸಿದ 6ನೇ ಕಡಿಮೆ ಮೊತ್ತ ಇದಾಗಿದೆ. ಆರ್​ಸಿಬಿ ತಂಡ 2ನೇ ಬಾರಿಗೆ 70 ರನ್​ಗಳಿಗೆ ಆಲೌಟ್ ಆಯಿತು. ಇದಕ್ಕೂ ಮೊದಲು 2014ರಲ್ಲಿ ಅಬುಧಾಬಿಯಲ್ಲಿ ರಾಜಸ್ಥಾನ ವಿರುದ್ಧ 70 ರನ್​ಗಳಿಗೆ ಸರ್ವಪತನ ಕಂಡಿತ್ತು. 2017ರಲ್ಲಿ ಆರ್​ಸಿಬಿ ತಂಡ ಕೆಕೆಆರ್ ವಿರುದ್ಧ ಕೋಲ್ಕತದಲ್ಲಿ 49 ರನ್​ಗಳಿಗೆ ಆಲೌಟ್ ಆಗಿದ್ದು, ಐಪಿಎಲ್​ನ ಕನಿಷ್ಠ ಮೊತ್ತವಾಗಿದೆ.

ಸೇನೆಗೆ ಬಿಸಿಸಿಐನಿಂದ -ಠಿ;20 ಕೋಟಿ ದೇಣಿಗೆ

ಐಪಿಎಲ್ 12ನೇ ಆವೃತ್ತಿಯ ಉದ್ಘಾಟನಾ ಸಮಾರಂಭಕ್ಕೆ ನಿಗದಿಪಡಿಸಲಾಗಿದ್ದ 20 ಕೋಟಿ ರೂಪಾಯಿ ಮೊತ್ತವನ್ನು ಸಿಆರ್​ಪಿಎಫ್ ಹಾಗೂ ಭಾರತೀಯ ಸೇನೆಗೆ ಬಿಸಿಸಿಐ ವತಿಯಿಂದ ದೇಣಿಗೆ ರೂಪದಲ್ಲಿ ಹಸ್ತಾಂತರಿಸಲಾಯಿತು. ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಿಂದಾಗಿ 40 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲು ಕ್ರಿಕೆಟ್ ಆಡಳಿತಗಾರರ ಸಮಿತಿ (ಸಿಒಎ) ತೀರ್ಮಾನ ಕೈಗೊಂಡಿತ್ತು. ಜತೆಗೆ ಸಮಾರಂಭಕ್ಕೆ ನಿಗದಿಪಡಿಸಲಾಗಿದ್ದ ಹಣವನ್ನು ಸೇನೆಗೆ ನೀಡಲು ನಿರ್ಧರಿಸಿತ್ತು. ಭಾರತೀಯ ಸೇನೆಗೆ 11 ಕೋಟಿ ರೂ., ಸಿಆರ್​ಪಿಎಫ್​ಗೆ 7 ಕೋಟಿ ರೂ., ನೌಕಾ ಹಾಗೂ ವಾಯು ಸೇನೆಗಳಿಗೆ ತಲಾ ಒಂದು ಕೋಟಿ ರೂ. ನೀಡಲಾಯಿತು. ಲೀಗ್​ನ ಉದ್ಘಾಟನಾ ಪಂದ್ಯದ ಆತಿಥ್ಯ ವಹಿಸಿದ್ದ ಸಿಎಸ್​ಕೆ ತಂಡದ ವತಿಯಿಂದ ಭಾರತೀಯ ಸೇನೆಗೆ 2 ಕೋಟಿ ರೂ. ಚೆಕ್​ಅನ್ನು ಧೋನಿ ಹಸ್ತಾಂತರಿಸಿದರು. ಉದ್ಘಾಟನಾ ಪಂದ್ಯಕ್ಕೆ ಮುನ್ನ ಕ್ರೀಡಾಂಗಣದಲ್ಲಿ ಯೋಧರ ಗೌರವಾರ್ಥ ಮದ್ರಾಸ್ ರೆಜಿಮೆಂಟ್​ನ ಮಿಲಿಟರ್ ಬ್ಯಾಂಡ್ ಪಥಸಂಚಲನ ನಡೆಯಿತು.

4ನೇ ಬಾರಿ ಇನಿಂಗ್ಸ್ ವೊಂದರಲ್ಲಿ ಅತ್ಯಧಿಕ ಆಟ ಗಾರರು ಒಂದಂಕಿಗೆ ಔಟಾದ ಅಪಖ್ಯಾತಿ ಆರ್​ಸಿಬಿ ತಂಡದ್ದಾಯಿತು. 2017ರಲ್ಲಿ ಕೆಕೆಆರ್ ವಿರುದ್ಧ 11 ಬ್ಯಾಟ್ಸ್ ಮನ್​ಗಳು ಒಂದಂಕಿಗೆ ಔಟಾಗಿದ್ದರೆ, 2008ರಲ್ಲಿ ಕೆಕೆಆರ್ ವಿರುದ್ಧ, 2017ರಲ್ಲಿ ಪುಣೆ ವಿರುದ್ಧ ಹಾಗೂ 2019ರಲ್ಲಿ ಚೆನ್ನೈ ವಿರುದ್ಧ 10 ಮಂದಿ ಒಂದಂಕಿಗೆ ಔಟಾಗಿದ್ದರು.

ಸಿಎಸ್​ಕೆ ತಂಡ ನಾಲ್ಕರ ಬದಲಿಗೆ ಮೂವರು ವಿದೇಶಿ ಆಟಗಾರರೊಂದಿಗೆ ಕಣಕ್ಕಿಳಿಯಿತು. ಶೇನ್ ವ್ಯಾಟ್ಸನ್, ಡ್ವೇನ್ ಬ್ರಾವೊ ಹಾಗೂ ಇಮ್ರಾನ್ ತಾಹಿರ್ ಹನ್ನೊಂದರ ಬಳಗದಲ್ಲಿ ಆಡಿದ ವಿದೇಶಿಗರು.